ನೇಪಾಳದಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಿದ್ದೇ ವಿದ್ಯಾರ್ಥಿಗಳು ಬೀದಿಗಿಳಿಯಲು ಕಾರಣ ಎನ್ನುವುದು ತಕ್ಷಣದ ಕಾರಣ. ಆದರೆ ಭ್ರಷ್ಟಾಚಾರ ಹಗರಣಗಳು, ಯುವಜನರಲ್ಲಿ ಹೆಚ್ಚಿದ ನಿರುದ್ಯೋಗ, ಆಳುವವರ ಸ್ವಜನಪಕ್ಷಪಾತ, ವಿದೇಶಗಳನ್ನು ಅವಲಂಬಿಸಿದ ಆರ್ಥಿಕತೆ, ಸರ್ಕಾರದ ನೀತಿಗಳ ಬಗೆಗಿನ ಅಸಮಾಧಾನ ಮುಂತಾದ ಕಾರಣಗಳು ಕ್ರಾಂತಿಯ ಹಿಂದೆ ಇವೆ.

ನೇಪಾಳದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಹಿಮಾಲಯದ ರಾಷ್ಟ್ರವಾದ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಸರ್ಕಾರ ಹಾಕಿದ್ದ ತಡೆಬೇಲಿ, ವಿಧಿಸಿದ್ದ ಕರ್ಫ್ಯೂ ಅನ್ನು ಯುವಜನರು ಧಿಕ್ಕರಿಸಿ ಸರಹದ್ದುಗಳನ್ನು ದಾಟಿದ್ದಾರೆ. ಅವರ ಆಕ್ರೋಶಕ್ಕೆ ನೇಪಾಳ ಕಮ್ಯುನಿಸ್ಟ್ ಪಕ್ಷದ (ಸಿಪಿಎನ್–ಯುಎಂಎಲ್) ಅಧ್ಯಕ್ಷರೂ ಆದ ಪ್ರಧಾನಿ ಶರ್ಮಾ ಅವರು ಹುದ್ದೆ ತೊರೆದಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯಿಂದ ರಾಷ್ಟ್ರಪತಿಯೂ ರಾಜೀನಾಮೆ ನೀಡಿದರೆ, ಸರ್ಕಾರ ಉರುಳುವುದು ನಿಶ್ಚಿತ ಎನ್ನುವಂತಾಗಿದೆ.

ಮೇಲ್ನೋಟಕ್ಕೆ ಇದು ಸಾಮಾಜಿಕ ಜಾಲತಾಣಗಳ ನಿರ್ಬಂಧದಿಂದ ಪ್ರೇರಿತವಾದ ‘ಜೆನ್ ಝೀ’ (ಸಾಮಾನ್ಯವಾಗಿ 1997ರಿಂದ 2012ರ ನಡುವೆ ಹುಟ್ಟಿದ ತಲೆಮಾರು) ಹೋರಾಟ ಎಂದು ಅನ್ನಿಸುತ್ತದೆಯಾದರೂ, ಈ ಪ್ರತಿಭಟನೆಗಳು, ಆಕ್ರೋಶದ ಹಿಂದೆ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಆರ್ಥಿಕ ಕುಸಿತ, ಸ್ಥಜನಪಕ್ಷಪಾತದಂತಹ ಗಂಭೀರ ಸಮಸ್ಯೆಗಳಿವೆ ಎನ್ನಲಾಗುತ್ತಿದೆ.

ದೇಶದಲ್ಲಿ ಬಡತನ ಹೆಚ್ಚಾಗಿದ್ದು, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ವರದಿಯೊಂದರ ಪ್ರಕಾರ, 15–29 ವರ್ಷದ ನಡುವಿನ ಯುವಜನರಲ್ಲಿ ಶೇ 19ರಷ್ಟು ನಿರುದ್ಯೋಗ ಇದೆ. ದೇಶದಲ್ಲಿ ಕೆಲಸ ಸಿಗದೇ ಅನೇಕರು ವಿದೇಶಗಳಿಗೆ ಹೋಗಿ ಸಣ್ಣಪುಟ್ಟ ಕೆಲಸ ಮಾಡಿ ಕುಟುಂಬಸ್ಥರಿಗೆ ಹಣ ಕಳುಹಿಸುತ್ತಿದ್ದಾರೆ. ಕೆಲವರು ಉಕ್ರೇನ್–ರಷ್ಯಾ ಯುದ್ಧದಲ್ಲಿ ಬಾಡಿಗೆ ಸೈನಿಕರೂ ಆಗಿದ್ದಾರೆ. ವಿದೇಶಗಳಿಂದ ಬರುವ ಹಣವೇ ದೇಶದ ಆರ್ಥಿಕತೆಗೆ ಮೂಲವಾಗಿದೆ (ಶೇ 33ರಷ್ಟು). ಇವೆಲ್ಲವೂ ಯುವ ಸಮುದಾಯದ ಸಿಟ್ಟಿಗೆ ಕಾರಣಗಳಾಗಿದ್ದವು.

ಮಾಜಿ ಪ್ರಧಾನಿ ಪ್ರಚಂಡ ಅವರು ದಶಕಗಳ ಕಾಲ ರಾಜಪ್ರಭುತ್ವದ ಶೋಷಣೆ, ಅಸಮಾನತೆಯ ವಿರುದ್ಧ ಪ್ರತಿಭಟನೆ ಮಾಡಿ, ದೇಶದ ಅತ್ಯುನ್ನತ ಪದವಿಗೆ ಏರಿದ್ದವರು. ಅವರು ಮತ್ತು ಅವರ ಪಕ್ಷದವರು ಅಸಮಾನತೆ ಹೆಚ್ಚಿಸುವಂಥ, ಅನ್ಯಾಯದ ಕೃತ್ಯಗಳಲ್ಲಿ ತೊಡಗಿದ್ದಾರೆ ಎನ್ನುವುದು ಯುವಜನರ ಅಭಿಪ್ರಾಯವಾಗಿತ್ತು. ಟೀ ಎಸ್ಟೇಟ್ ಅನ್ನು ವಾಣಿಜ್ಯ ಭೂಮಿಯನ್ನಾಗಿ ಬದಲಿಸಿದ ಆರೋಪವೂ ಸೇರಿದಂತೆ ಹಲವು ಆರೋಪಗಳು ಓಲಿ ವಿರುದ್ಧ ಕೇಳಿಬಂದಿದ್ದವು. ಮಾಜಿ ಪ್ರಧಾನಿಗಳಾದ ಮಾಧವ ನೇಪಾಳ್, ಬಾಬೂರಾಮ್ ಭಟ್ಟರಾಯ್, ಮತ್ತು ಖಿಲ್ ರೆಗ್ಮಿ ಅವರು ಸರ್ಕಾರದ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದರು; ಶೇರ್ ಬಹದ್ದೂರ್ ದೇವುಬಾ ವಿರುದ್ಧ ಕಮಿಷನ್ ಪಡೆದ ಆರೋಪವಿದ್ದರೆ, ಪ್ರಚಂಡ ವಿರುದ್ಧ ಹಣ ದುರುಪಯೋಗದ ಆರೋಪವಿತ್ತು.

ಸಾಮಾಜಿಕ ಜಾಲತಾಣವೇ ಮಾಧ್ಯಮ:

ದೇಶದಲ್ಲಿ ನಡೆದ ಭ್ರಷ್ಟ ಹಗರಣಗಳ ಬಗ್ಗೆ ಯುವ ಸಮುದಾಯದಲ್ಲಿ ಭಾರಿ ಅಸಮಾಧಾನ ಇತ್ತು. 2017ರಲ್ಲಿ ಏರ್ಬಸ್ ಖರೀದಿಯಲ್ಲಿ ಅವ್ಯವಹಾರ ನಡೆದು, ಅದರ ಬಗ್ಗೆ ತನಿಖೆಯಾಗಿ ಭ್ರಷ್ಟಾಚಾರ ಸಾಬೀತಾಗಿತ್ತು. ರಾಜಕಾರಣಿಗಳು ಭ್ರಷ್ಟಾಚಾರದಿಂದ ಅಪಾರ ಹಣ ಗಳಿಸುತ್ತಿದ್ದಾರೆ ಎನ್ನುವ ಭಾವನೆ ವ್ಯಾಪಕವಾಗಿತ್ತು. ಮತ್ತೊಂದೆಡೆ, ಹಾಲಿ ಪ್ರಧಾನಿ ಓಲಿ ಮತ್ತು ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯರ ಐಷಾರಾಮಿ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದವು. ನಾಯಕರ ಮಕ್ಕಳು ವಿದೇಶಗಳಿಂದ ದುಬಾರಿ ಬ್ಯಾಗ್ ಹೊತ್ತು ವಿಮಾನ ಇಳಿದರೆ, ಬಡವರ ಮಕ್ಕಳ ಮೃತದೇಹಗಳು ದೇಶಕ್ಕೆ ವಾಪಸ್ ಬರುತ್ತಿವೆ ಎನ್ನುವಂಥ ವಿಚಾರಗಳು ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದವು. ಬಡವರ ಬದುಕು ದುರ್ಭರವಾಗುತ್ತಿದ್ದರೆ, ರಾಜಕಾರಣಿಗಳು ಮತ್ತು ಅವರ ಮಕ್ಕಳ ಸಂಪತ್ತು ಹೆಚ್ಚುತ್ತಿರುವ ಬಗ್ಗೆ ಅನೇಕರು ಹೋಲಿಕೆ ಮಾಡಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ‘ನೆಪೋ ಕಿಡ್ಸ್’, ‘ನೆಪೊ ಬೇಬೀಸ್’ (ಸ್ವಜನಪಕ್ಷಪಾತದ ಶಿಶುಗಳು) ಎನ್ನುವ ಹ್ಯಾಷ್ಟ್ಯಾಗ್ ಮತ್ತು ಘೋಷಣೆಗಳು ಮಾರ್ದನಿಸುತ್ತಿದ್ದವು.

ಇಂಥ ಸ್ಥಿತಿಯಲ್ಲಿ ಓಲಿ ಸರ್ಕಾರವು ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು ಮುಂದಾಯಿತು. ಸೈಬರ್ ಅಪರಾಧಗಳು, ಸುಳ್ಳು ಸುದ್ದಿ, ದಾರಿ ತಪ್ಪಿಸುವ ವಿಚಾರಗಳನ್ನು ಹರಡುತ್ತಿರುವ ನೆಪ ಒಡ್ಡಿ ವರ್ಷದ ಹಿಂದೆಯೇ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಪ್ರಯತ್ನ ಆರಂಭಿಸಿತು. ನೇಪಾಳದ ಅತ್ಯುನ್ನತ ನ್ಯಾಯಾಲಯದ ಆದೇಶ ಪಾಲನೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಕಂಪನಿಗಳು ನೋಂದಣಿ ಮಾಡಿಕೊಳ್ಳಲು ಇತ್ತೀಚೆಗೆ ಗಡುವು ನೀಡಿತು. ಇಲ್ಲದಿದ್ದರೆ ಅವುಗಳನ್ನು ನಿರ್ಬಂಧಿಸುವುದಾಗಿ ಎಚ್ಚರಿಸಿತು. ಅದರಂತೆ, ಸೆಪ್ಟೆಂಬರ್ 4ರಂದು 26 ಆ್ಯಪ್ಗಳನ್ನು ನಿಷೇಧಿಸಿತು. ಸಾಮಾಜಿಕ ಜಾಲತಾಣಗಳು ಯುವಜನರ ಪ್ರಮುಖ ಸಂವಹನ ಸಾಧನವಾಗಿ ಬಳಕೆಯಾಗುತ್ತಿದ್ದವು ಮತ್ತು ನೇಪಾಳದ ಆರ್ಥಿಕತೆಯ ಬೆನ್ನೆಲುಬಾದ ಪ್ರವಾಸೋದ್ಯಮಕ್ಕೆ ಮುಖ್ಯ ಆಧಾರವೂ ಆಗಿದ್ದವು. ತಮ್ಮ ಅಭಿವ್ಯಕ್ತಿಯ ಮಾಧ್ಯಮ ನಿರ್ಬಂಧವಾಗಿದ್ದರಿಂದ ಯುವಜನರು ಕನಲಿಹೋದರು. ಸರ್ಕಾರವನ್ನು ತೊಲಗಿಸಬೇಕು ಎನ್ನುವ ನಿಶ್ಚಯದೊಂದಿಗೆ ಬೀದಿಗಿಳಿದರು. ಸದ್ಯ ಪ್ರಧಾನಿ ಮತ್ತು ಕೆಲವು ಸಚಿವರು ರಾಜೀನಾಮೆ ನೀಡಿದ್ದಾರೆ. ಭಾರತವು ನೆರೆಯ ರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.

ಯುವ ಕ್ರಾಂತಿ:

ನೇಪಾಳದಲ್ಲಿ ಪ್ರತಿಭಟನೆ ಮಾಡುತ್ತಿರುವವರ ಪೈಕಿ ಬಹುತೇಕರು 30 ವರ್ಷದ ಒಳಗಿನವರಾಗಿದ್ದು, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ. ಅನೇಕರು ತಮ್ಮ ಸಮವಸ್ತ್ರಗಳಲ್ಲಿಯೇ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಯುವಘಟಕಗಳು ಪ್ರತಿಭಟನೆಯಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ಚುನಾವಣೆಯಲ್ಲಿ ಜಯ ಗಳಿಸಿ ಕಠ್ಮಂಡು ಮೇಯರ್ ಆಗಿರುವ ಬಾಲೇಂದ್ರ ಶಾ, ಮಾಜಿ ಉಪಪ್ರಧಾನಿ ಹಾಗೂ ಟಿವಿ ನಿರೂಪಕ ರಬಿ ಲಮಿಚ್ಚಾನೆ ಅವರಂಥ ಕೆಲವು ಯುವ ಮುಖಂಡರು ಮಾತ್ರ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದಾರೆ.

ರಾಜಕೀಯ ಅಸ್ಥಿರತೆ

ನೇಪಾಳದಲ್ಲಿ 2008ರಲ್ಲಿ ರಾಜರ ಆಡಳಿತ ಕೊನೆಯಾಗಿ, ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿತು. ಆದರೆ, ಅಂದಿನಿಂದ ಇಂದಿನವರೆಗೂ ಅಲ್ಲಿ ರಾಜಕೀಯ ಸ್ಥಿರತೆ ಕಂಡು ಬರಲೇ ಇಲ್ಲ. ಈ ಪುಟ್ಟ ರಾಷ್ಟ್ರವು 17 ವರ್ಷಗಳಲ್ಲಿ 14 ಸರ್ಕಾರಗಳನ್ನು ಕಂಡಿದೆ. ಈಗ ರಾಜೀನಾಮೆ ನೀಡಿರುವ ಕೆ.ಪಿ.ಶರ್ಮಾ ಓಲಿ ಅವರು ನಾಲ್ಕು ಬಾರಿ ಪ್ರಧಾನಿಯಾಗಿದ್ದರು.

‘ಹಮಿ ನೇಪಾಳ’

ನೇಪಾಳದಲ್ಲಿ ಪ್ರತಿಭಟನೆಗಳನ್ನು ಆಯೋಜಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಘಟನೆ ‘ಹಮಿ ನೇಪಾಳ’ ಎಂಬ ಎನ್ಜಿಒ. 36 ವರ್ಷದ ಸುಧಾನ್ ಗುರುಂಗ್ ನೇತೃತ್ವದ ಈ ಸಂಘಟನೆಯನ್ನು 2015ರಲ್ಲಿ ಸ್ಥಾಪಿಸಲಾಗಿತ್ತು. ಆದರೆ, ಅಧಿಕೃತವಾಗಿ ನೋಂದಣಿಯಾಗಿದ್ದು 2020ರಲ್ಲಿ.

ಶ್ರೀಲಂಕಾ, ಬಾಂಗ್ಲಾದೇಶ, ಈಗ ನೇಪಾಳ

ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲೂ ಯುವ ಜನರು ಸರ್ಕಾರದ ವಿರುದ್ಧ ದಂಗೆ ಎದ್ದು ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸಿದ್ದರು. ಈಗ ನೇಪಾಳದಲ್ಲೂ ಅದೇ ರೀತಿ ಆಗಿದೆ. ‘ಜೆನ್–ಝೀ’ ಪೀಳಿಗೆಯವರು ಸರ್ಕಾರದ ಭ್ರಷ್ಟಾಚಾರ, ಅಧಿಕಾರದಲ್ಲಿರುವವರ ಸ್ವಜನಪಕ್ಷಪಾತಕ್ಕೆ ರೋಸಿ ಹೋಗಿ ದೇಶದಾದ್ಯಂತ ದಂಗೆ ಎದ್ದು ಓಲಿ ಅವರು ರಾಜೀನಾಮೆ ನೀಡುವಂತೆ ಮಾಡಿದ್ದಾರೆ.

2022ರ ಜುಲೈ ತಿಂಗಳಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದವರು ಯುವ ಸಮುದಾಯದವರು. ಅಧ್ಯಕ್ಷ ಗೊಟಬಯ ರಾಜಪಕ್ಸನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಹಣದುಬ್ಬರ ಹೆಚ್ಚಳದಿಂದಾಗಿ ಉಂಟಾದ ಆಹಾರದ ಕೊರತೆ, ಪೆಟ್ರೋಲ್, ಡೀಸೆಲ್ನಂತಹ ಇಂಧನ ಪೂರೈಕೆಯಲ್ಲಿನ ವ್ಯತ್ಯಯವು ಜನರನ್ನು ವಿಶೇಷವಾಗಿ ಯುವಜನರನ್ನು ಕೆರಳಿಸಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟನೆಗೊಂಡ ಯುವಜನರು ಬೀದಿಗಿಳಿದು ಪ್ರತಿಭಟಿಸಿದರು. ಅದು ಹಿಂಸಾಚಾರಕ್ಕೆ ತಿರುಗಿ ದಂಗೆಯಾಗಿ ಪರಿವರ್ತನೆಯಾಯಿತು. ಅಧ್ಯಕ್ಷರ ನಿವಾಸ, ಪ್ರಧಾನಿಯವರ ನಿವಾಸಗಳಿಗೆ ನುಗ್ಗಿದ ಆಕ್ರೋಶಿತ ಜನರು ದಾಂದಲೆ ನಡೆಸಿ ಕೈಗೆ ಸಿಕ್ಕಿದ್ದನ್ನೆಲ್ಲ ಹೊತ್ತೊಯ್ದರು. ಆಸ್ತಿಯನ್ನು ಧ್ವಂಸ ಮಾಡಿದರು. ಪರಿಣಾಮವಾಗಿ ಸರ್ಕಾರ ಪತನವಾಯಿತು. ಗೊಟಬಯ ರಾಜಪಕ್ಸ ಅವರು ಮಾಲ್ದೀವ್ಸ್ಗೆ ಪಲಾಯನ ಮಾಡಿದರು. ಕಳೆದ ವರ್ಷ ಅಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಅನುರಕುಮಾರ ದಿಸ್ಸೆನಾಯಕೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಕಳೆದ ವರ್ಷ (2024) ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರದ ಮೀಸಲಾತಿ ನೀತಿಯನ್ನು ವಿರೋಧಿಸಿ ಯುವಜನರು ಆರಂಭಿಸಿದ ಆಂದೋಲನ ತೀವ್ರ ಸ್ವರೂಪ ಪಡೆದು, ಅದು ದಂಗೆಯಾಗಿ ರೂಪಾಂತರಗೊಂಡಿತ್ತು. ತಿಂಗಳ ಕಾಲ ನಡೆದ ಹೋರಾಟದಲ್ಲಿ 300 ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಹಸೀನಾ ಸರ್ಕಾರ ಬಲ ಪ್ರಯೋಗ ಮಾಡಿದ್ದು, ಹೋರಾಟಗಾರರನ್ನು ಕೆರಳಿಸಿತ್ತು. ಹೋರಾಟವು ಹಸೀನಾ ವಿರೋಧಿ ಚಳವಳಿಯಾಗಿ ಪರಿವರ್ತನೆಯಾಯಿತು. ಆಗಸ್ಟ್ 5ರಂದು ಢಾಕಾಗೆ ನುಗ್ಗಿದ ಜನರು ಶೇಖ್ ಹಸೀನಾ ಅವರ ಮನೆಯನ್ನು ಧ್ವಂಸಗೊಳಿಸಿದರು. ಅವರು ರಾಜೀನಾಮೆ ನೀಡಿ, ಭಾರತಕ್ಕೆ ಓಡಿ ಬಂದರು. ಈಗ ಅಲ್ಲಿ ಆರ್ಥಿಕ ತಜ್ಞ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಜಾರಿಯಲ್ಲಿದೆ. ಅಲ್ಲಿ ಸಾರ್ವತ್ರಿಕ ಚುನಾವಣೆ ಇನ್ನಷ್ಟೇ ನಡೆಯಬೇಕಿದೆ.

ವಿದೇಶಿ ಕೈವಾಡದ ಚರ್ಚೆ

ಬಾಂಗ್ಲಾದೇಶದಲ್ಲಿ ದಂಗೆ ಉಂಟಾದಾಗ, ಅದರ ಹಿಂದೆ ಚೀನಾ ಇಲ್ಲವೇ ಅಮೆರಿಕದ ಕೈವಾಡ ಇದೆ ಎಂದು ಚರ್ಚೆಯಾಗಿತ್ತು. ಶೇಖ್ ಹಸೀನಾ ಅವರು, ನೇರವಾಗಿ ಅಮೆರಿಕದ ವಿರುದ್ಧ ಆರೋಪ ಮಾಡಿದ್ದರು. ನೇಪಾಳದ ವಿಷಯದಲ್ಲೂ ಅಂತಹುದೇ ಚರ್ಚೆ ನಡೆಯುತ್ತಿದೆ. ಪ್ರಧಾನಿಯಾಗಿದ್ದ ಓಲಿ ಅವರು ಚೀನಾ ಪರ ಒಲವು ಹೊಂದಿದ್ದವರು. ಇತ್ತೀಚೆಗೆ ಚೀನಾದಲ್ಲಿ ನಡೆದಿದ್ದ ಸೇನಾ ಪರೇಡ್ನಲ್ಲೂ ಭಾಗವಹಿಸಿದ್ದರು. ಚೀನಾ ಪ್ರಾಬಲ್ಯವನ್ನು ತಗ್ಗಿಸಲು ಏಷ್ಯಾದಲ್ಲಿ ತನ್ನ ಬಲವನ್ನು ಹೆಚ್ಚಿಸಲು ಬಯಸುತ್ತಿರುವ ಅಮೆರಿಕವು, ನೇಪಾಳದಲ್ಲಿ ತನ್ನ ಪರವಾಗಿರುವ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡಲು, ಚಳವಳಿಗೆ ಪ್ರೋತ್ಸಾಹ ನೀಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದೊಂದಿಗೆ ಸಂಬಂಧ ಹಳಸಿರುವ ಈ ಹೊತ್ತಿನಲ್ಲಿ ಅಮೆರಿಕದ ಕಣ್ಣು ಭಾರತದ ನೆರೆರಾಷ್ಟ್ರಗಳ ಮೇಲೂ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.

ಆಧಾರ: ಪಿಟಿಐ, ರಾಯಿಟರ್ಸ್, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.