ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು
ಮಹಿಳಾ ಮತ | ಮುಟ್ಟು–ಗುಟ್ಟು: ಮೌಢ್ಯ, ತಪ್ಪುಗ್ರಹಿಕೆ ಹತ್ತು ಹಲವು
Published 31 ಜುಲೈ 2023, 0:27 IST
Last Updated 31 ಜುಲೈ 2023, 0:27 IST
ಅಕ್ಷರ ಗಾತ್ರ

ದೇಶದಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಮಾಹಿತಿ ಬಗ್ಗೆ ತೀವ್ರ ಕೊರತೆ ಇದೆ. ಭಾರತದ ಶೇ 71ರಷ್ಟು ಹೆಣ್ಣುಮಕ್ಕಳಿಗೆ ತಾವು ಮೊದಲ ಬಾರಿ ಮುಟ್ಟಾಗುವುದಕ್ಕೂ ಮುಂಚೆ, ಆ ಬಗ್ಗೆ ಅರಿವೇ ಇರುವುದಿಲ್ಲ ಎನ್ನುತ್ತದೆ ಯುನೆಸ್ಕೊ ವರದಿ. ದೇಶದ ಹಲವು ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಯುನೆಸ್ಕೊ ಈ ವರದಿ ಸಿದ್ಧಪಡಿಸಿದೆ. ಈ ಅರಿವಿನ ಕೊರತೆಯನ್ನು ನೀಗಿಸಲು ಸರ್ಕಾರ ಮತ್ತಷ್ಟು ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತದೆ ಈ ವರದಿ. ಈ ಬಗ್ಗೆ ಅರಿವು ಮೂಡಿಸಲು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಕರೂ ಇಂಥದ್ದೇ ಪರಿಸ್ಥಿತಿಯನ್ನು ಕಂಡಿದ್ದಾರೆ

ಪ್ರಕರಣ 1:

ಮೊದಲ ಬಾರಿಗೆ ರಕ್ತಸ್ರಾವ ಕಂಡ ಆಕೆಗೆ ಭಯ ಆವರಿಸಿತು. ತನಗೇನಾಗಿದೆ. ಯಾಕಾಗಿ ತನ್ನೊಳಗಿಂದ ಈ ರೀತಿ ರಕ್ತ ಹರಿಯುತ್ತಿದೆ. //ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್‌// ಅವರಿಗೆ ಆದ ಹಾಗೆಯೇ ನನಗೇನಾದರೂ ಕ್ಯಾನ್ಸರ್‌ ಆಗಿದೆಯೇ. ಯಾರಲ್ಲಿ ಹೇಳಿಕೊಳ್ಳುವುದು. ಅಮ್ಮ, ಅಪ್ಪ, ಟೀಚರ್‌, ಸ್ನೇಹಿತರು? ನನ್ನ ಸ್ನೇಹಿತರಿಗೂ ಇದೇ ರೀತಿ ಆಗಿದೆಯೇ? ಕೇಳುವುದು ಹೇಗೆ? ತನಗೆ ಕ್ಯಾನ್ಸರ್‌ ಇದೆ ಎಂದು ಆಕೆಗೆ ಆಕೆಯೇ ನಿರ್ಧರಿಸಿಬಿಟ್ಟಳು

ಪ್ರಕರಣ 2:

ಇದೇನು ಹೀಗೆ ರಕ್ತ ಹರಿತಾ ಇದೆ. ಗಾಯವಾಗಿ ಹೀಗೆ ಆಗಿರಬೇಕು ಎಂದು ತಿಳಿದ ಆಕೆ ಮರ್ಮಾಂಗಕ್ಕೆ ಅರಿಶಿನ ಮೆತ್ತಿಕೊಂಡಳು. ಆದರೆ, ರಕ್ತಸ್ರಾವ ಕಡಿಮೆ ಆಗಲಿಲ್ಲ. ನಂತರ ಅದು ಬೇರೆಯದೇ ಆರೋಗ್ಯ ಸಮಸ್ಯೆಗೆ ಎಡೆಮಾಡಿಕೊಟ್ಟಿತು. ನಂತರ, ಆಕೆಯನ್ನು ಆಸ್ಪತ್ರೆಗೂ ಸೇರಿಸಲಾಯಿತು

ತಾವು ಮುಟ್ಟಾಗಿದ್ದೇವೆ ಎಂದು ಗೊತ್ತಾಗದ ಮತ್ತು ಹಾಗೆ ಆದಾಗ ಏನು ಮಾಡಬೇಕು ಎಂದು ಗೊತ್ತಾಗದೆ ಕೆಲವು ಬಾಲಕಿಯರು ಎದುರಿಸಿದ ಸಂದರ್ಭಗಳು ಇವು. ಬಾಲಕಿಯರು ಮುಟ್ಟಾಗುವ ಮುನ್ನವೇ ಆ ಬಗ್ಗೆ ಅವರಲ್ಲಿ ಅರಿವು ಇದ್ದಿದ್ದರೆ ಇಂತಹ ಸಂದರ್ಭಗಳನ್ನು ತಡೆಯಬಹುದಿತ್ತು. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಮಕ್ಕಳಲ್ಲಿ ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಬಗ್ಗೆ ಅರಿವು ಮೂಡಿಸಲು ದುಡಿಯುತ್ತಿರುವ ಸಾಮಾಜಿಕ ಕಾರ್ಯಕರ್ತರು ಹೇಳುವ ಮಾತಿದು.

ಕರ್ನಾಟಕದ ಹೆಣ್ಣುಮಕ್ಕಳಿಗೆ ಮುಟ್ಟಿನ ಕುರಿತು ಹಲವು ತಪ್ಪು ಕಲ್ಪನೆಗಳಿವೆ. ಸಮಾಜದಲ್ಲಿ ಮುಟ್ಟಿನ ಕುರಿತು ಹಲವು ಮೌಢ್ಯಗಳೂ ಇವೆ. ಮುಟ್ಟು ಎನ್ನುವುದು ಗುಟ್ಟಿನ ವಿಷಯವಾಗಿದೆ. ಜಾತಿಯಿಂದ ಜಾತಿಗೆ, ಪ್ರದೇಶದಿಂದ ಪ್ರದೇಶಕ್ಕೆ ಈ ತಪ್ಪು ಕಲ್ಪನೆಗಳು, ಮೌಢ್ಯದ ಆಚರಣೆಗಳ ಬದಲಾಗುತ್ತವೆ. ಮುಟ್ಟಿನ ಕುರಿತು ರಾಜ್ಯದಲ್ಲಿ ಅತಿಹೆಚ್ಚು ಮೌಢ್ಯಾಚರಣೆಗಳಿವೆ ಹಾಗೂ ಶಾಲೆಗಳಲ್ಲಿ ಜಾಗೃತಿಯ ಕೊರತೆಯೂ ಇದೆ ಎಂದು ಯುನೆಸ್ಕೊ ಇತ್ತೀಚಿನ ತನ್ನ ವರದಿಯೊಂದರಲ್ಲಿ ಹೇಳಿದೆ.

‘ಮುಟ್ಟಿನ ಆರೋಗ್ಯ ಮತ್ತು ಶುಚಿತ್ವ ನಿರ್ವಹಣೆ’ ಸಮೀಕ್ಷಾ ವರದಿಯನ್ನು ಯುನೆಸ್ಕೊ ಬಿಡುಗಡೆ ಮಾಡಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ, ತುಲನಾತ್ಮಕ ಅಧ್ಯಯನದ ವರದಿ ನೀಡಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿಯೇ ಹೆಚ್ಚು ಮೌಢ್ಯಗಳಿವೆ ಎಂದೂ ಹೇಳಿದೆ.

ಮುಟ್ಟು: ಶಾಲೆಯಲ್ಲಿ ಇಲ್ಲ ಪಾಠ

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ಪ್ರತಿ ಐವರಲ್ಲಿ ಒಬ್ಬ ವಿದ್ಯಾರ್ಥಿನಿ ಮಾತ್ರವೇ ‘ಮುಟ್ಟಿನ ಕುರಿತ ಪಾಠವು ನಮ್ಮ ಪಠ್ಯದಲ್ಲಿದೆ’ ಎಂದು ಹೇಳಿದ್ದಾಳೆ. ಎಂಟನೇ ಹಾಗೂ ಹತ್ತನೇ ತರಗತಿಗಳಲ್ಲಿ ಪಠ್ಯದಲ್ಲಿ ಸಂತಾನೋತ್ಪತ್ತಿ, ಮುಟ್ಟಿನ ಕುರಿತ ಪಠ್ಯಗಳು ಇವೆ. ಆದರೆ, ಶಿಕ್ಷಕರು ಈ ಪಾಠಗಳನ್ನು ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ. ಹಲವು ಶಾಲೆಗಳಲ್ಲಿ ಶಿಕ್ಷಕರು ಈ ಪಾಠಗಳನ್ನು  ಓದಿಕೊಳ್ಳುವಂತೆ ಮಕ್ಕಳಿಗೇ ಹೇಳುತ್ತಿದ್ದಾರೆ.

ಮುಜುಗರ: ‘ಶಾಲೆಗಳಲ್ಲಿ ಮುಟ್ಟಿನ ಕುರಿತ ಪಾಠ ಮಾಡುವುದಕ್ಕೆ ಶಿಕ್ಷಕರಿಗೆ ಮುಜುಗರ ಅಡ್ಡಿಬರುತ್ತದೆ. ಯುವ ಶಿಕ್ಷಕರಂತೂ ಈ ಪಾಠ ಮಾಡುವುದಕ್ಕೆ ಹೆಚ್ಚು ಹಿಂಜರಿಕೆ ತೋರುತ್ತಾರೆ. ಪುರುಷ ಶಿಕ್ಷಕರಂತೂ ಭಾರಿ ಹಿಂಜರಿಕೆ ವ್ಯಕ್ತಪಡಿಸುತ್ತಾರೆ’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆಯ ಸಾಗರದ ವಿಜ್ಞಾನ ಶಿಕ್ಷಕ ಪ್ರವೀಣ್‌ ಡಿಸೋಜಾ ಅವರು.

‘ನಾವಾಗೇ ಪಾಠ ಮಾಡಿ ಮುಗಿಸುವುದಕ್ಕೆ ಸಮಸ್ಯೆ ಇಲ್ಲ. ಮಕ್ಕಳು ತಿರುಗಿ ಪ್ರಶ್ನೆ ಕೇಳುತ್ತಾರೆ. ಆಗ ಕಸಿವಿಸಿ ಆಗುತ್ತದೆ. ಗಂಡು ಮಕ್ಕಳು, ಹೆಣ್ಣುಮಕ್ಕಳು ಇಬ್ಬರೂ ಒಟ್ಟಿಗೆ ಇರುತ್ತಾರೆ. ಆಶಾ ಕಾರ್ಯಕರ್ತೆಯರು ಶಾಲೆಗೆ ಬಂದು ಮುಟ್ಟಿನ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡುತ್ತಾರೆ. ಹಾಗಾಗಿ ಸ್ವಲ್ಪ ಮಟ್ಟಿನ ಮುಜುಗರ ಕಮ್ಮಿ ಆಗುತ್ತದೆ’ ಎನ್ನುತ್ತಾರೆ.

‘ಶಾಲೆಗೆ ಬರಬೇಡಿ’

‘ಮುಟ್ಟಿನ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 50–60 ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶಾಲೆಗಳಿಗೆ ಹೋಗಿ ಹೀಗೆ ಒಂದು ಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದರೆ, ಶಾಲೆಗಳ ಮುಖ್ಯೋಪಾಧ್ಯಾಯರು ಶಾಲೆಗೆ ಬರಬೇಡಿ ಎನ್ನುತ್ತಾರೆ. ನಾವು ಜಾಗೃತಿ ಮೂಡಿಸಿದ ಸುಮಾರು 60 ಶಾಲೆಗಳ ಪೈಕಿ ಹತ್ತು ಶಿಕ್ಷಕರು ಮಾತ್ರವೇ ಈ ಕುರಿತ ಪಾಠಗಳನ್ನು ಸೂಕ್ತ ರೀತಿಯಲ್ಲಿ ಮಾಡಿದ್ದರು’ ಎಂದರು ದೊಡ್ಡಬಳ್ಳಾಪುರದ ‘ಯುವ ಸಂಚಲನ’ದ ಅಧ್ಯಕ್ಷ ಚಿದಾನಂದ್‌.

ಚಿದಾನಂದ್‌ ಅವರು ಬೆಂಗಳೂರಿನ ‘ಮಿಟು ಪೌಂಡೇಶನ್’ ಸಂಸ್ಥೆಯ ಸಹಯೋಗದೊಂದಿಗೆ ‘ತಡೆ ನಡೆ ಅಭಿಯಾನ: ಮುಟ್ಟಿನ ಮೌಢ್ಯವನ್ನು ತಡೆಯುವ //ವೈಜ್ಞಾನಿಕದ// ಕಡೆಗೆ ನಡೆ’ ಎನ್ನುವ ಅಭಿಯಾನವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

‘ಮುಟ್ಟಿನ ಕುರಿತು ಶಿಕ್ಷಕರಿಗೆ ಮೌಢ್ಯಗಳಿವೆ. ನಮ್ಮ ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಕೂತುಕೊಳ್ಳಲೂ ಅವರು ಮುಜುಗರ ಪಡುತ್ತಾರೆ. ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಮಕ್ಕಳು ನಮ್ಮ ಬಳಿ ಬಂದು, ಶಿಕ್ಷಕರು ಏನೂ ಹೇಳಿಕೊಡುವುದಿಲ್ಲ. ನಮಗೆ ಈ ಯಾವ ಮಾಹಿತಿಯೂ ಗೊತ್ತಿರಲಿಲ್ಲ ಎಂದು ಹೇಳಿಕೊಳ್ಳುತ್ತಾರೆ’ ಎಂದರು.

‘ಮುಟ್ಟಾದರೆ ಶಿಕ್ಷಕಿಯರೇ ಶಾಲೆಗೆ ಹೋಗುವುದಿಲ್ಲ’

‘ಮುಟ್ಟಾದ ದಿನಗಳಲ್ಲಿ ಶಿಕ್ಷಕಿಯರೇ ಶಾಲೆಗೆ ಹೋಗುವುದಿಲ್ಲ. ಯಾಕೆ ಹೀಗೆ ಎಂದು ಕೇಳಿದರೆ, ಶಾಲೆಯಲ್ಲಿ ಸರಸ್ವತಿ ನೆಲೆಸಿದ್ದಾಳೆ ಎನ್ನುತ್ತಾರೆ’ ಎಂದು ತಮ್ಮ ಅನುಭವ ಹಂಚಿಕೊಂಡರು ಜ್ಯೋತಿ ಹಿಟ್ನಾಳ್‌ ಅವರು. ಕೊಪ್ಪಳ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮುಟ್ಟಿನ ಕುರಿತು ಇರುವ ಮೌಢ್ಯಗಳು ಕುರಿತು ಇವರು ಪಿಎಚ್‌.ಡಿ ಮಾಡುತ್ತಿದ್ದಾರೆ. ಸಮುದಾಯದಲ್ಲಿ ಮುಟ್ಟಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಇವರು ಮಾಡುತ್ತಾರೆ.

‘ಸಮಾಜದಲ್ಲಿಯೇ ಮುಟ್ಟಿನ ಬಗ್ಗೆ ಹಲವು ಮೌಢಗಳಿವೆ. ಶಿಕ್ಷಕರೂ ಸಮಾಜದ ಭಾಗವೇ ಅಲ್ಲವೆ. ಇದು ಶಿಕ್ಷಕರ ತಪ್ಪು ಅಂತಲೂ ಹೇಳಲು ಬರುವುದಿಲ್ಲ. ಶಿಕ್ಷಕರಿಗೆ ತರಬೇತಿ ನೀಡುವ ಸಂದರ್ಭದಲ್ಲೇ ಇಂಥ ಮುಜುಗರವನ್ನು, ಅವರಲ್ಲೇ ಇರುವ ಮೌಢ್ಯವನ್ನು ಹೋಗಲಾಡಿಸುವ ಕೆಲಸವಾಗಬೇಕು’ ಎನ್ನುವುದು ಜ್ಯೋತಿ ಅವರ ಅಭಿಪ್ರಾಯ.

ಮುಟ್ಟು ಮತ್ತು ಮುಟ್ಟಿನ ಶುಚಿತ್ವದ ಅರಿವಿನ ಪರಿ (ಈ ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ) 71% ತಾವು ಮೊದಲ ಬಾರಿ ಮುಟ್ಟಾಗುವವರೆಗೆ ಆ ಬಗ್ಗೆ ತಮಗೆ ಏನೂ ಗೊತ್ತಿರಲಿಲ್ಲ ಎಂದ ಬಾಲಕಿಯರ ಪ್ರಮಾಣ 70% ಮುಟ್ಟು ಎಂಬುದು ಕೊಳಕು ಎಂದು ಭಾವಿಸಿರುವ ತಾಯಂದಿರ ಪ್ರಮಾಣ 88% ಮುಟ್ಟಿನ ಸಂದರ್ಭದಲ್ಲಿ ತಾವು ಹಳೆಯ ಬಟ್ಟೆ ಬೂದಿ ಮೆತ್ತಿದ ಬಟ್ಟೆ ಹಿಟ್ಟು ಮೆತ್ತಿದ ಬಟ್ಟೆ ಬಳಸುತ್ತೇವೆ ಎಂದವರ ಪ್ರಮಾಣ 6.3 ಕೋಟಿ  ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಹೇಳಿದ ಬಾಲಕಿಯರ ಪ್ರಮಾಣ

ಮುಟ್ಟಿನ ವೇಳೆ ಹೀಯಾಳಿಕೆ

ಸಮೀಕ್ಷೆಯಲ್ಲಿ ಭಾಗಿಯಾದವರಲ್ಲಿ ಶೇ 15ಕ್ಕೂ ಹೆಚ್ಚು ಹೆಣ್ಣುಮಕ್ಕಳು ಮುಟ್ಟಿನ ದಿನಗಳಲ್ಲಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ‘ಮುಟ್ಟಿನ ದಿನಗಳಲ್ಲಿ ಗೆಳೆತಿಯರೂ ನಮ್ಮನ್ನು ಹೀಯಾಳಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಬಾಲಕರೂ ಹೀಯಾಳಿಸುತ್ತಾರೆ. ಮುಟ್ಟಿನ ದಿನಗಳಲ್ಲಿ ನಾವು ತಲೆಸ್ನಾನ //ಮಾಡಿರುತ್ತೇವೆ// ಮತ್ತು ಹೂ ಮುಡಿದಿರುವುದಿಲ್ಲ. ಇದನ್ನು ಗುರಿ ಮಾಡಿಕೊಂಡು ಬಾಲಕರು ಕೆಲವೊಮ್ಮೆ ಶಿಕ್ಷಕರೂ ಹೀಯಾಳಿಸುತ್ತಾರೆ. ಹೀಗಾಗಿ ನಾವು ಶಾಲೆಗೆ ಹೋಗುವುದಿಲ್ಲ’ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಹಲವು ಬಾಲಕಿಯರು ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

* ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ರೀತಿಯ ಹೀಯಾಳಿಕೆ ಹೆಚ್ಚು

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮುಸ್ಲಿಂ ಬಾಲಕಿಯರು ಈ ರೀತಿಯ ಹೀಯಾಳಿಕೆಗೆ ಗುರಿಯಾಗುವ ಸಾಧ್ಯತೆ ಅತ್ಯಧಿಕ

* ಅಂಗವಿಕಲ ಬಾಲಕಿಯರು ಈ ರೀತಿಯ ಹೀಯಾಳಿಕೆಗೆ ಹೆಚ್ಚು ಗುರಿಯಾಗುತ್ತಾರೆ ‌

33% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ಉತ್ತರ ಪ್ರದೇಶದ ಬಾಲಕಿಯರ ಪ್ರಮಾಣ

23.3% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ತಮಿಳುನಾಡಿನ ಬಾಲಕಿಯರ ಪ್ರಮಾಣ

22.34% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ಪಶ್ಚಿಮ ಬಂಗಾಳದ ಬಾಲಕಿಯರ ಪ್ರಮಾಣ

21.59% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ದೆಹಲಿಯ ಬಾಲಕಿಯರ ಪ್ರಮಾಣ

15.89% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ಕರ್ನಾಟಕದ ಬಾಲಕಿಯರ ಪ್ರಮಾಣ

3.1% ಮುಟ್ಟಿನ ವೇಳೆ ಶಾಲೆಗೆ ಹೋಗುವುದಿಲ್ಲ ಎಂದ ಮಹಾರಾಷ್ಟ್ರದ ಬಾಲಕಿಯರ ಪ್ರಮಾಣ

ಮುಟ್ಟಿನ ಆರೋಗ್ಯದ ಬಗ್ಗೆ ಅರಿವಿನ ಮೂಲ

57.58% ತಾಯಿ

12.08% ಸಹೋದರಿ

20.05% ಸ್ನೇಹಿತೆ

5.4% ಸಂಬಂಧಿಕರು

28.02% ಶಿಕ್ಷಕರು

3.34% ಮಾಧ್ಯಮ

11.83% ಪಾಠ

5.4% ಆಶಾ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT