ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ: ಅತ್ಯಾಚಾರವೂ ಆಯುಧ

Last Updated 19 ಜೂನ್ 2022, 19:30 IST
ಅಕ್ಷರ ಗಾತ್ರ

‘ಯಾವುದೇ ಪುರುಷನೊಂದಿಗೆ ನಿಮಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ಇನ್ನು ಮುಂದೆ ಅನ್ನಿಸಲೇಬಾರದು. ಆ ರೀತಿಯಲ್ಲಿ ನಿಮ್ಮ ಮೇಲೆ ಅತ್ಯಾಚಾರ ಎಸಗುತ್ತೇವೆ. ಉಕ್ರೇನ್‌ ರಕ್ತವನ್ನು ಹಂಚಿಕೊಂಡ ಮಗು ಇನ್ನು ಮುಂದೆ ಜನಿಸಲೇಬಾರದು’– ಇದು ಅತ್ಯಾಚಾರ ಎಸಗಿದ ರಷ್ಯಾ ಸೈನಿಕರ ಮಾತು. ಬುಚಾದಲ್ಲಿರುವ ಕಟ್ಟಡವೊಂದರ ನೆಲಮಹಡಿಯಲ್ಲಿದ್ದ 14ರಿಂದ 24 ವಯಸ್ಸಿನ 25 ಮಹಿಳೆಯರ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ಮಾಡಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಗರ್ಭಿಣಿಯರಾಗಿದ್ದಾರೆ.

ಸರ್ಕಾರಿ ಅಧಿಕಾರಿಗಳ ವಿರುದ್ಧದ ದೂರುಗಳ ತನಿಖಾಧಿಕಾರಿ ಡೆನಿಸೋವಾ ಈ ವಿವರಗಳನ್ನು ಬಿಬಿಸಿಗೆ ನೀಡಿದ್ದಾರೆ. ‘ಉಕ್ರೇನ್‌ ನಿರ್ನಾಮವಾಗಬೇಕು. ದೇಶದ ಪುರುಷರನ್ನು ಕೊಂದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ, ಮುಂದಿನ ಜನಾಂಗದಲ್ಲಿ ಉಕ್ರೇನ್‌ ರಕ್ತ ಹರಿಯುವ ಜನರೇ ಇರಬಾರದು ಎಂಬುದುರಷ್ಯಾ ಸೈನಿಕರ ಕಾರ್ಯತಂತ್ರ’ ಎಂದು ಅವರು ವಿವರಿಸಿದ್ದಾರೆ.

ಉಕ್ರೇನ್‌ನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ‘ಅವಕಾಶವಾದಿ ಲೈಂಗಿಕ ದೌರ್ಜನ್ಯ’ ಎಂದುಅಲ್ಲಿನ ಮಾನವಹಕ್ಕು ಹೋರಾಟಗಾರರು ಕರೆದಿದ್ದಾರೆ.

ರಷ್ಯಾ ಸೈನಿಕರು ಬುಚಾ ಪ್ರಾಂತ್ಯದಿಂದ ಹೊರಹೋದ ಬಳಿಕವಷ್ಟೇ ಅಲ್ಲಿನ ಮಹಿಳೆಯರು ಅನುಭವಿಸಿದ ಯಾತನೆಯು ಹೊರ ಜಗತ್ತಿಗೆ ತಿಳಿಯಿತು. ಇಲ್ಲಿನ ರಸ್ತೆಯ ಮೇಲೆ ಅರೆ ನಗ್ನ, ಅರೆ ಬೆಂದ ಸ್ಥಿತಿಯಲ್ಲಿ ಸಿಕ್ಕ ನಾಲ್ವರು ಹೆಣ್ಣುಮಕ್ಕಳ ಹೆಣಗಳ ವಿಡಿಯೊವನ್ನು ಉಕ್ರೇನ್‌ನ ರಕ್ಷಣಾ ಸಚಿವಾಲಯವು ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಇದಾದ ಬಳಿಕ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರತೊಡಗಿದವು.

‘ಅತ್ಯಾಚಾರದ ಬಳಿಕ ಹತ್ಯೆಗೊಳಗಾದ ಮಹಿಳೆಯರು, ಪದೇ ಪದೇ ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು, ಲೈಂಗಿಕ ಗುಲಾಮಗಿರಿಗೆ ಒಳಪಟ್ಟವರು ಮತ್ತು ಅತ್ಯಾಚಾರದಿಂದ ಗರ್ಭಿಣಿಯರಾದ ಮಹಿಳೆಯರ ಫೋಟೊಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಎಲ್ಲಾ ಚಿತ್ರಗಳೂ‘ಅವಕಾಶವಾದಿ ಲೈಂಗಿಕ ದೌರ್ಜನ್ಯ’ದ ಕತೆಯನ್ನೇ ಹೇಳುತ್ತಿವೆ’ ಎನ್ನುತ್ತಾರೆ ಹಾರ್ವರ್ಡ್‌ ಕೆನಡಿ ಸ್ಕೂಲ್‌ನ ಸಾರ್ವಜನಿಕ ನೀತಿ ವಿಷಯದ ಪ್ರಾಧ್ಯಾಪಕಿಡಾರಾ ಕೆ ಕೊಹೆನ್‌.

ಹೆಂಡತಿ ಎದುರೇ ಗಂಡನನ್ನು ಕೊಂದು, ಅಲ್ಲೇ ಅತ್ಯಾಚಾರ ಮಾಡುವುದು, ಪುಟ್ಟ ಮಕ್ಕಳ ಮುಂದೆಯೇ ತಾಯಂದಿರ ಮೇಲೆ ಅತ್ಯಾಚಾರ ಮಾಡುವುದು, ಕುಟುಂಬದವರ ಮುಂದೆಯೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು, ಒಂದು ಬೀದಿಯ ನಾಲ್ಕಾರು ಮನೆಗಳಿಗೆ ನುಗ್ಗಿ ಅತ್ಯಾಚಾರ ನಡೆಸುವುದು ಉಕ್ರೇನ್‌ನ ನಗರಗಳಲ್ಲಿ ಸಾಮಾನ್ಯವಾಗಿದೆ ಎನ್ನುತ್ತಾರೆ ಅಲ್ಲಿನ ಮಾನವಹಕ್ಕುಗಳ ಹೋರಾಟಗಾರರು.

ಕೈಗೆಟುಕದ ಆರೋಗ್ಯ ಸೇವೆ

ಯುದ್ಧ ಪ್ರಾರಂಭವಾದಾಗಿನಿಂದ ಈವರೆಗೆ ರಷ್ಯಾ ಪಡೆಗಳು ಉಕ್ರೇನ್‌ನ 31 ಆರೋಗ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಈ ಎಲ್ಲದರ ಪರಿಣಾಮವು ನೇರವಾಗಿ ಮಹಿಳೆಯರ ಮೇಲಾಗಿದೆ. ಸರಿಯಾದ ಆರೋಗ್ಯ ಸೇವೆ ಸಿಗದೆ, ಗರ್ಭಿಣಿಯರಿಗೆ, ತಾಯಂದಿರಿಗೆ ಹೆಚ್ಚಿನ ನಷ್ಟವಾಗಿದೆ.

ಫೆಬ್ರುವರಿಯಿಂದ ಈಚೆಗೆ 4,300 ಹೆರಿಗೆಗಳಾಗಿವೆ. ಇನ್ನೂ 80,000 ಮಹಿಳೆಯರಿಗೆ ಮುಂದಿನ ಮೂರು ತಿಂಗಳಲ್ಲಿ ಹೆರಿಗೆ ಆಗಲಿದೆ. ಆಸ್ಪತ್ರೆಯಲ್ಲಿ, ಚೊಕ್ಕಟವಾದ ಜಾಗದಲ್ಲಿ ಆಗಬೇಕಾಗಿದ್ದ ಹೆರಿಗೆಗಳು, ಕನಿಷ್ಠ ಆರೋಗ್ಯ ಸೇವೆಯೊಂದಿಗೆ ನೆಲಮಹಡಿಗಳಲ್ಲಿ ಆಗುತ್ತಿವೆ. ಯುದ್ಧದಿಂದ ಉಂಟಾದ ಭಯ ದಿಂದಾಗಿ, ಅಪೌಷ್ಟಿಕತೆಯಿಂದಾಗಿ ಅವಧಿಪೂರ್ವ ಜನನಗಳು ಮೂರು ಪಟ್ಟು ಹೆಚ್ಚಾಗಿವೆ ಎಂದು ವಿಶ್ವ ಸಂಸ್ಥೆ ಹೇಳಿದೆ.

ಯುದ್ಧದ ಕಾರಣದಿಂದಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದೆ. ಗರ್ಭಿಣಿಯರು, ತಾಯಂದಿರು ವೈದ್ಯರನ್ನು ಸಂಪರ್ಕಿಸಲು ಇರುವುದು ಮೊಬೈಲ್‌ ವಿಡಿಯೊ ಸಂವಾದ ಮಾತ್ರ. ಆದರೆ, ಹೆಚ್ಚಿನ ಜನರು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದರಿಂದ ನೆಟ್‌ವರ್ಕ್‌ ಸಮಸ್ಯೆ ಎದುರಾಗಿದೆ. ಇದರಿಂದ ವೈದ್ಯರ ಸಂಪರ್ಕವೂ ಕಷ್ಟಸಾಧ್ಯವಾಗಿದೆ.

ಋತುಮತಿಯರಾದ ಹೆಣ್ಣಮಕ್ಕಳಿಗೆ ತೊಂದರೆಯಾಗಿದೆ. ಉಕ್ರೇನ್‌ನಲ್ಲಿ ವಿದ್ಯುತ್‌ ಪೂರೈಕೆ ಸಮಸ್ಯೆಯಿಂದಾಗಿ ಶಿಬಿರಗಳಲ್ಲಿ ನೀರು ಸರಬರಾಜು ಅಸ್ತವ್ಯಸ್ತವಾಗಿದೆ. ‘ನಾವು ಉಳಿದ್ದುಕೊಂಡಿದ್ದ ಶಿಬಿರದಲ್ಲಿ ಮೂರು ದಿನ ನೀರು ಇರಲಿಲ್ಲ. ನಾನು ಋತುಮತಿಯಾಗಿದ್ದೆ. ಕುಡಿಯಲೂ ನೀರು ಸಿಗದ ಸಮಯದಲ್ಲಿ ಇದಕ್ಕಾಗಿ ಎಲ್ಲಿಂದ ನೀರು ತರುವುದು. ಮೂರು ದಿನವು ವೆಟ್‌ವೈಪ್ಸ್‌ಗಳನ್ನು ಬಳಸಿದೆ’ ಎನ್ನುತ್ತಾರೆ ಹಾರ್ಕಿವ್‌ನ ಮಹಿಳೆ.

ವಸತಿಗಾಗಿ ಹುಡುಕಾಟ

ಸ್ಥಳಾಂತರಗೊಂಡ ಮಹಿಳೆಯರಲ್ಲಿ ಶೇ 60ರಷ್ಟು ಮಂದಿ ಈಗಲೂ ಸುರಕ್ಷಿತ ವಸತಿಗಾಗಿ ಹುಡುಕಾಟದಲ್ಲಿಯೇ ಇದ್ದಾರೆ. ಸುರಕ್ಷಿತ ವಸತಿ ಇಲ್ಲದ ಕಾರಣಕ್ಕೆ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ನಡೆಯುವ ಅಪಾಯ ಹೆಚ್ಚಾಗಿದೆ.‌

ಸ್ಥಳಾಂತರಗೊಂಡವರಿಗೆ ಬಾಡಿಗೆ ಮನೆ ಪಡೆಯುವುದು ಸುಲಭವಲ್ಲ.ಪರಿಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿರುವ ಮನೆ ಮಾಲೀಕರು ವಲಸೆ ಬಂದವರಿಂದ ಹೆಚ್ಚಿನ ಬಾಡಿಗೆಗೆ ಬೇಡಿಕೆ ಇಡುತ್ತಿದ್ದಾರೆ. ಅಪರಿಚಿತ ಊರುಗಳಲ್ಲಿ, ಅಪರಿಚಿತರ ಮಧ್ಯೆ ವಾಸಿಸುವ ಸ್ಥಿತಿಯು ಮಹಿಳೆಯರಲ್ಲಿ ಭೀತಿ ಮೂಡಿಸಿದೆ. ರೈಲು ನಿಲ್ದಾಣಗಳಲ್ಲಿಯೇ ಉಳಿದುಕೊಂಡಿರುವ ಮಹಿಳೆಯರೂ ಇದ್ದಾರೆ.

ವಲಸಿಗ ಕುಟುಂಬಗಳಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಸ್ಥಿತಿಯಲ್ಲಿ ಇಲ್ಲದ ಮಹಿಳೆಯರು ಏನೇ ಆದರೂ ಹೊಂದಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣ ಆಗಿದೆ.

ಶಿಕ್ಷೆ ಆಗಲಿದೆಯೆ?

ಯುದ್ಧಾಪರಾಧಗಳ ವಿಚಾರಣೆ ನಡೆಸಲು ಅಂತರರಾಷ್ಟ್ರೀಯ ಅಪರಾಧ ವಿಚಾರಣಾ ನ್ಯಾಯಾಲಯ (ಐಸಿಸಿ) ಹಾಗೂಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಇವೆ. ಆದರೆ, ಇವುಗಳಿಗೆ ಇವುಗಳದ್ದೇ ಆದ ಮಿತಿಗಳೂ ಇವೆ.

ಉಕ್ರೇನ್‌ ಆರೋಪಿಸುತ್ತಿರುವ ಯುದ್ಧಾಪರಾಧಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಐಸಿಸಿಯು ಸಮಿತಿಯೊಂದನ್ನು ರಚಿಸಿದೆ. ಆರೋಪಗಳು ಸಾಬೀತಾದರೆ ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬಹುದು. ಆದರೆ, ಈ ನ್ಯಾಯಾಲಯಕ್ಕೆ ದೇಶವನ್ನು ಶಿಕ್ಷಿಸುವ ಹಕ್ಕಿಲ್ಲ. ಜತೆಗೆ, ತನ್ನದೇ ಪೊಲೀಸ್‌ ವ್ಯವಸ್ಥೆಯೂ ಇಲ್ಲ. ಆರೋಪಿಗಳ ಬಂಧನಕ್ಕೆ ಆ ದೇಶದ ಪೊಲೀಸರ ಸಹಾಯವನ್ನೇ ಇದು ಪಡೆಯಬೇಕಾಗುತ್ತದೆ.

ಅಪರಾಧ ಎಸಗಿದೆ ಎಂಬುದು ಸಾಬೀತಾದರೆ ಯಾವುದೇ ದೇಶವನ್ನು ಐಸಿಜೆ ಶಿಕ್ಷಿಸಬಹುದು. ಆದರೆ, ವ್ಯಕ್ತಿಗಳನ್ನು ಶಿಕ್ಷಿಸುವ ಹಕ್ಕು ಈ ನ್ಯಾಯಾಲಯಕ್ಕೆ ಇಲ್ಲ.ಅದರ ಜತೆಗೆ ಇನ್ನೂ ಒಂದು ಸಮಸ್ಯೆ ಇದೆ. ದೇಶ–ದೇಶಗಳ ನಡುವಣ ವಿವಾದದ ವಿಚಾರಣೆ ನಡೆಸಬೇಕಾದರೆ ಎರಡೂ ದೇಶಗಳು ಒಪ್ಪಿಗೆ ನೀಡಬೇಕಾಗುತ್ತದೆ. ಯಾವುದೇ ವಿಷಯದಲ್ಲಿ ಐಸಿಜೆ ವಿಚಾರಣೆ ನಡೆಸಬಹುದು ಎಂಬ ಸಾರ್ವತ್ರಿಕ ಒಪ್ಪಿಗೆ ಅಥವಾ ನಿರ್ದಿಷ್ಟ ಪ್ರಕರಣದ ವಿಚಾರಣೆಗೆ ಒಪ್ಪಿಗೆ ನೀಡಬಹುದು. ರಷ್ಯಾ ಈ ಎರಡರಲ್ಲಿ ಯಾವುದೇ ರೀತಿಯ ಒಪ್ಪಿಗೆಯನ್ನೂ ನೀಡಿಲ್ಲ. ಹಾಗಾಗಿ, ಐಸಿಜೆ ವಿಚಾರಣೆ ನಡೆಸುವ ಸಾಧ್ಯತೆ ಕ್ಷೀಣವಾಗಿದೆ.

15,000 ಯುದ್ಧಾಪರಾಧಗಳ ಪಟ್ಟಿಯನ್ನು ಉಕ್ರೇನ್‌ಈಗಾಗಲೇ ಸಿದ್ಧಪಡಿಸಿಕೊಂಡಿದೆ. ಒಂದೊಮ್ಮೆ ಅಂತರರಾಷ್ಟ್ರೀಯ ನ್ಯಾಯಾಲಯವು ರಷ್ಯಾವನ್ನು ಶಿಕ್ಷಿಸಿದರೂ, ವಿಶ್ವ ಸಂಸ್ಥೆ ಈ ಶಿಕ್ಷೆಯನ್ನು ಜಾರಿ ಮಾಡಬೇಕು. ಆದರೆ, ರಷ್ಯಾವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರ. ಆದ್ದರಿಂದ ತನ್ನ ವಿರುದ್ಧದ ವಿಶ್ವ ಸಂಸ್ಥೆಯ ತೀರ್ಮಾನವನ್ನು ತನ್ನ ಪರಮಾಧಿಕಾರ ಬಳಸಿ ರಷ್ಯಾವು ತಡೆಯಬಹುದಾಗಿದೆ.

ಜೀವಾವಧಿ ಶಿಕ್ಷೆ

ಉಕ್ರೇನ್‌ನ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ರಷ್ಯಾದ 21 ವರ್ಷದ ಸೈನಿಕನಿಗೆ ಉಕ್ರೇನ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಯುದ್ಧ ಪ್ರಾರಂಭವಾದ ಮೇಲೆ ರಷ್ಯಾ ಸೈನಿಕನಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದು.

ವ್ಯಕ್ತಿಯೊಬ್ಬನನ್ನು ಕೊಂದು, ಆತನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತ ರಷ್ಯಾ ಸೈನಿಕನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಉಕ್ರೇನ್‌ ನ್ಯಾಯಾಲಯವು ವಿಚಾರಣೆ ಮುಂದುವರಿಸಿದೆ.

ರೋಮಾ:ತಾರತಮ್ಯ

ಉಕ್ರೇನ್‌ನಲ್ಲಿರುವ ರೋಮಾ ಜನಾಂಗದ ಜನರ ಸ್ಥಿತಿ ಹೀನಾಯವಾಗಿದೆ. ಒಂದೆಡೆ ಇವರು ರಷ್ಯಾ ಸೈನಿಕರಿಂದ ತಪ್ಪಿಸಿಕೊಳ್ಳಬೇಕಿದೆ. ಮತ್ತೊಂದೆಡೆ, ಉಕ್ರೇನ್‌ ನಾಗರಿಕರಿಂದಲೇ ತಮಗೆ ಆಗುತ್ತಿರುವ ತಾರತಮ್ಯದ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಈ ಜನಾಂಗದ ಮಹಿಳೆಯರ ಸ್ಥಿತಿಯು ಉಕ್ರೇನ್‌ನ ಸಾಮಾನ್ಯ ಮಹಿಳೆಯರ ಸ್ಥಿತಿಗಿಂತ ಹೀನಾಯವಾಗಿದೆ. ಈ ತಾರತಮ್ಯ ಕೇವಲ ಅವರ ಜನಾಂಗದ ಕಾರಣಕ್ಕಾಗಿಯೇ ನಡೆಯುತ್ತಿದೆ.

ಊಟ, ವಸತಿ, ರಕ್ಷಣೆ, ಪರಿಹಾರ ಹಂಚಿಕೆ, ಯುದ್ಧದಿಂದ ಕಂಗೆಟ್ಟವರಿಗೆ ನೀಡಲಾಗುವ ನೆರವು ಹೀಗೆ ಎಲ್ಲದರಿಂದಲೂ ಈ ಜನಾಂಗವು ಮತ್ತು ಮುಖ್ಯವಾಗಿ ಮಹಿಳೆಯರು ವಂಚಿತರಾಗಿದ್ದಾರೆ. ಈ ಜನಾಂಗವನ್ನು ಕೇಳುವವರೇ ಇಲ್ಲ ಎನ್ನುವಂತಾಗಿದೆ.

ಹಿನ್ನೆಲೆ: ಇದೊಂದು ಅಲೆಮಾರಿ ಜನಾಂಗವಾಗಿದೆ. ಈ ಜನಾಂಗದ ಮೂಲ ಉತ್ತರ ಭಾರತ. ಇವರು 11ನೇ ಶತಮಾನದಲ್ಲಿ ಪರ್ಷಿಯಾಗೆ ವಲಸೆ ಹೋಗುತ್ತಾರೆ. 14ನೇ ಶತಮಾನದ ಹೊತ್ತಿಗೆ ಯುರೋಪಿನ ಹಲವು ದೇಶಗಳಲ್ಲಿ ನೆಲೆ ಕಂಡುಕೊಳ್ಳುತ್ತಾರೆ. 20ನೇ ಶತಮಾನದ ಮಧ್ಯ ಭಾಗದಲ್ಲಿ ಜಗತ್ತಿನ ಎಲ್ಲಾ ದೇಶಗಳಲ್ಲೂ ಈ ಜನಾಂಗದ ಜನರು ಕಾಣಸಿಗುತ್ತಾರೆ. ಉಕ್ರೇನ್‌ನಲ್ಲಿ ಸದ್ಯ
4 ಲಕ್ಷ ರೋಮಾ ಜನಾಂಗದವರಿದ್ದಾರೆ ಎಂದು ಅಂದಾಜಿಸಲಾಗಿದೆ.

ಯುದ್ಧಾಪರಾಧ ಎಂದರೇನು?

ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ನಾಗರಿಕರ ಮೇಲೂ ಭೀಕರವಾದ ಕ್ರೌರ್ಯ ಎಸಗಲಾಗಿದೆ. ಅಣ್ವಸ್ತ್ರ ಬಳಸಿ ಅಪಾರ ವಿನಾಶ ಮಾಡಲಾಗಿದೆ. ಸೊತ್ತುಗಳನ್ನು ನಾಶ ಮಾಡಲಾಗಿದೆ. ಇದು ಆಗ ಜಗತ್ತಿನ ಕಣ್ಣು ತೆರೆಸಿತು. ಹಾಗಾಗಿಯೇ 1949ರಲ್ಲಿ ಜಿನೀವಾದಲ್ಲಿ ನಡೆದ ಸಮಾವೇಶದಲ್ಲಿ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ಅದರ ಪ್ರಕಾರ,ಯುದ್ಧದಲ್ಲಿ ನಾಗರಿಕರ ಹತ್ಯೆ ಮಾಡುವಂತಿಲ್ಲ. ಸಾರ್ವಜನಿಕ ವ್ಯವಸ್ಥೆಗೆ ಯಾವುದೇ ಧಕ್ಕೆ ತರುವಂತಿಲ್ಲ. ಜೈವಿಕ ಆಯುಧ ಬಳಸುವಂತಿಲ್ಲ. ಕೊಲೆ, ಅತ್ಯಾಚಾರ, ಕಳ್ಳತನ, ಗುಂಪು ಹತ್ಯೆ ಮುಂತಾದ ಅನೈತಿಕ ಕೃತ್ಯಗಳನ್ನು ಮಾಡುವಂತಿಲ್ಲ.

ಆದರೆ, ರಷ್ಯಾವು ಉಕ್ರೇನ್‌ನಲ್ಲಿ 15 ಸಾವಿರಕ್ಕೂ ಹೆಚ್ಚು ಯುದ್ಧಾಪರಾಧ ಎಸಗಿದೆ ಎಂದು ಉಕ್ರೇನ್‌ ಹೇಳಿದೆ. ಉಕ್ರೇನ್‌ನಲ್ಲಿ ರಷ್ಯಾ ಸೈನಿಕರು ಎಸಗಿದ ಎಲ್ಲ ಕೃತ್ಯಗಳಿಗೆ ರಷ್ಯಾ ನೇರ ಹೊಣೆ ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಆಧಾರ: ಬಿಬಿಸಿ, ಎನ್‌ಆರ್‌ಪಿ ನ್ಯೂಸ್‌, ರ್‍ಯಾಪಿಡ್‌ ಜೆಂಡರ್‌ ಅನಾಲಿಸಿಸ್‌ ಆಫ್‌ ಉಕ್ರೇನ್‌ (ವಿಶ್ವ ಸಂಸ್ಥೆ ವರದಿ),
ವಿಶ್ವ ಆರೋಗ್ಯ ಸಂಸ್ಥೆ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT