ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ: ಮೊಗೆದಷ್ಟೂ ಮುಗಿಯದ ಡ್ರಗ್ಸ್‌ ಲೋಕ

Last Updated 3 ಅಕ್ಟೋಬರ್ 2021, 21:00 IST
ಅಕ್ಷರ ಗಾತ್ರ

ವಿಶ್ವದ ಅತ್ಯಂತ ದೊಡ್ಡ ಮಾದಕವಸ್ತು ಮಾರುಕಟ್ಟೆಗಳಲ್ಲಿ ಭಾರತವೂ ಒಂದು. ಇಲ್ಲಿ ಮಾದಕವಸ್ತುಗಳ ಬಳಕೆಯು ದೊಡ್ಡ ಪ್ರಮಾಣದಲ್ಲಿದೆ, ಉತ್ಪಾದನೆಯೂ ದೊಡ್ಡ ಪ್ರಮಾಣದಲ್ಲಿ ಇದೆ. ಭಾರತದಲ್ಲಿ ಪ್ರತಿ ವರ್ಷ ಮಾರಾಟವಾಗುವ ಮಾದಕವಸ್ತುಗಳ ಮೊತ್ತ ₹35,000-₹40,000 ಕೋಟಿಯಷ್ಟಾಗುತ್ತದೆ. ಭಾರತದಲ್ಲಿ ಬಳಕೆಯಾಗುವ ಮಾದಕವಸ್ತುಗಳಲ್ಲಿ ಗಾಂಜಾದ್ದೇ ಸಿಂಹಪಾಲು. ಇಲ್ಲಿ ಬಳಕೆಯಾಗುವ ಗಾಂಜಾವನ್ನು ಸಂಪೂರ್ಣವಾಗಿ ಇಲ್ಲಿಯೇ ಉತ್ಪಾದಿಸಲಾಗುತ್ತದೆ. ಕೆಲವು ಮಾದಕವಸ್ತುಗಳನ್ನು ಮಾತ್ರ ವಿದೇಶಗಳಿಂದ ಕಳ್ಳಸಾಗಣೆ ಮಾಡಲಾಗುತ್ತದೆ. ಭಾರತದಲ್ಲಿ ಮಾದಕವಸ್ತುಗಳ ಬಳಕೆ ಕುರಿತು ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ 2018ನೇ ಸಾಲಿನ ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ.

ಗಾಂಜಾ, ಅಫೀಮು ಮತ್ತು ಗಸಗಸೆಯನ್ನು ಭಾರತದಲ್ಲಿ ಅಕ್ರಮವಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಬೆಳೆಯುವ ಮಾದಕವಸ್ತುಗಳಲ್ಲಿ ಗಾಂಜಾದ ಪ್ರಮಾಣ ಅತ್ಯಂತ ಹೆಚ್ಚು.ಇಲ್ಲಿನ ಬಯಲುಸೀಮೆ ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಗಾಂಜಾವನ್ನು ಬೆಳೆಯಲಾಗುತ್ತದೆ. ಗಾಂಜಾವನ್ನು ಒಣ ಗಿಡ, ಸೊಪ್ಪು ಮತ್ತು ಪುಡಿಯ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಗಡಿಗಳಲ್ಲಿ, ಬೀದಿ ಬದಿಯಲ್ಲಿ, ನಿಗದಿತ ವಿತರಣಾ ಜಾಲದ ಮೂಲಕ ಗಾಂಜಾವನ್ನು ಮಾರಾಟ ಮಾಡಲಾಗುತ್ತದೆ. ದೇಶದಲ್ಲಿ 2015ರಿಂದ 2018ರ ನಡುವೆ ಒಟ್ಟು 10.7 ಟನ್‌ನಷ್ಟು ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಪತ್ತೆಯಾಗದೇ, ಬಳಕೆಯಾಗಿರುವ ಗಾಂಜಾದ ಪ್ರಮಾಣ ಎಷ್ಟಿರಬಹುದು ಎಂಬುದನ್ನು ಊಹಿಸಲಸಾಧ್ಯ ಎಂದು ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ ವರದಿಯಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಗಾಂಜಾ, ಅಫೀಮು, ಕೊಕೇನ್ ಮತ್ತು ಹೆರಾಯಿನ್‌ ಬಳಕೆ ಹೆಚ್ಚು. ಮಾದಕ ಪದಾರ್ಥ ಬಳಕೆದಾರರಲ್ಲಿ 10–75 ವರ್ಷದವರೆಗಿನ ವಯೋಮಾನದವರು ಇದ್ದಾರೆ. ಮಾದಕ ವಸ್ತು ಬಳಕೆಯಲ್ಲಿ ಮಹಿಳೆಯರು ಮತ್ತು ಪುರುಷರು ಎಂಬ ಭೇದವೇನೂ ಇಲ್ಲ. ಮೇಲೆ ಹೇಳಿದ ಮಾದಕವಸ್ತುಗಳು ಮಾತ್ರವಲ್ಲದೆ, ಕೆಲವು ನಿಷೇಧಿತ ಔಷಧಗಳನ್ನೂ ನಶೆ ಏರಿಸಿಕೊಳ್ಳಲು ಬಳಸಲಾಗುತ್ತದೆ. ಮಾತ್ರೆಗಳು ಮತ್ತು ಲಸಿಕೆ ರೂಪದಲ್ಲಿ ಇವುಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಇವುಗಳ ಬಳಕೆಯೂ ವ್ಯಾಪಕವಾಗಿ ಇದೆ. ನೋವು ನಿವಾರಕಗಳ ಹೆಸರಿನಲ್ಲಿ ಇವುಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ. ಔಷಧದ ಅಂಗಡಿಗಳಲ್ಲೂ ಇವುಗಳನ್ನು ಮಾರಾಟ ಮಾಡಲಾಗುತ್ತದೆ ಎನ್ನುತ್ತದೆ ವರದಿ.

ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಿಂದ ಕೊಕೇನ್ ಮತ್ತು ಹೆರಾಯಿನ್ ಭಾರತಕ್ಕೆ ಕಳ್ಳಸಾಗಣೆಯಾಗುತ್ತದೆ. ಭಾರತಕ್ಕೆ ಅಫ್ಘಾನಿಸ್ತಾನದ ಮೂಲಕ ಬರುತ್ತದೆ. ಇರಾನ್ ಮೂಲಕ ಹಡಗುಗಳಲ್ಲಿ ಭಾರತದ ಮಂಗಳೂರು, ಕೊಚ್ಚಿ, ಮುಂಬೈ, ಕಛ್‌ ಬಂದರುಗಳಿಗೆ ಇವನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಹೀಗಾಗಿ ಈ ಬಂದರುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಮಾದಕವಸ್ತುಗಳನ್ನು ಜಫ್ತಿಮಾಡಲಾಗಿದೆ. ವಿಮಾನದ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಭಾರತಕ್ಕೆ ಅಫ್ಗಾನಿಸ್ತಾನ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡಲಾಗುತ್ತದೆ. ಕಳೆದ ವಾರವಷ್ಟೇ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸುಮಾರು ₹21 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಅಫ್ಗಾನಿಸ್ತಾನದಿಂದ ಇರಾನ್ ಮೂಲಕ ಅದನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು.

ಭಾರತದಲ್ಲಿ ಬಳಕೆಯಾಗುವ ಗಾಂಜಾಕ್ಕಿಂತ ಮೂರುಪಟ್ಟು ಹೆಚ್ಚು ಗಾಂಜಾವನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ. ಉತ್ತರ ಅಮೆರಿಕ, ಯುರೋಪ್‌, ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಿಗೆ ಭಾರತದಿಂದ ವಿಪರೀತ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಾಗುತ್ತದೆ. ಈ ದೇಶಗಳಿಗೆ ನೇಪಾಳ ಮತ್ತು ಮ್ಯಾನ್ಮಾರ್‌ ಮೂಲಕ ಭಾರತದಿಂದ ಗಾಂಜಾವನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಮಧ್ಯಪ್ರಾಚ್ಯ ದೇಶಗಳೂ ಭಾರತದ ಗಾಂಜಾಗೆ ದೊಡ್ಡ ಮಾರುಕಟ್ಟೆಯಾಗಿವೆ ಎಂದುಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಯ ವರದಿಯಲ್ಲಿ ವಿವರಿಸಲಾಗಿದೆ.

ಮಾದಕ ಪದಾರ್ಥ: ಏರುತ್ತಿದೆ ಪ್ರಕರಣಗಳ ಸಂಖ್ಯೆ

ದೇಶದಲ್ಲಿ ಮಾದಕ ಪದಾರ್ಥ ಬಳಕೆ ಬಗ್ಗೆ ರಾಷ್ಟ್ರೀಯ ಅಪರಾಧ ಬ್ಯೂರೊ (ಎನ್‌ಸಿಆರ್‌ಬಿ) ದತ್ತಾಂಶಗಳನ್ನು ಒದಗಿಸುತ್ತದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆಯಡಿ (ಎನ್‌ಡಿಪಿಎಸ್) ಮಾದಕವಸ್ತು ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅಂಕಿ ಅಂಶಗಳ ಪ್ರಕಾರ 2020ನ್ನು ಹೊರತುಪಡಿಸಿದರೆ, ಹಿಂದಿನ ಎಲ್ಲ ವರ್ಷಗಳಲ್ಲಿ ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಸತತವಾಗಿ ಏರಿಕೆ ಕಂಡಿವೆ.

2014ರಲ್ಲಿ 59,098 ಇದ್ದ ಪ್ರಕರಣಗಳ ಸಂಖ್ಯೆ 2019ರಲ್ಲಿ 72,779ಕ್ಕೆ ಏರಿಕೆಯಾಯಿತು. ಕೋವಿಡ್ ಕಾರಣದಿಂದ 2020ರಲ್ಲಿ ಇವುಗಳ ಸಂಖ್ಯೆ59,806ಕ್ಕೆ ಇಳಿಕೆಯಾಗಿದೆ.

2020ರಲ್ಲಿ ದಾಖಲಾದ ಒಟ್ಟು 59,806 ಪ್ರಕರಣಗಳಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚು (10,852) ಪ್ರಕರಣ ಕಂಡುಬಂದಿವೆ. ನಂತರದ ಸ್ಥಾನದಲ್ಲಿ ಪಂಜಾಬ್ (6,909) ಹಾಗೂ ತಮಿಳುನಾಡು (5,403) ಇವೆ. ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 4,054 ಪ್ರಕರಣಗಳು ವರದಿಯಾಗಿವೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ. 2019ರಲ್ಲಿ 11,536 ಪ್ರಕರಣ ವರದಿಯಾಗಿದ್ದ ಪಂಜಾಬ್‌ನಲ್ಲಿ ಈ ವರ್ಷ ಸುಮಾರು ಅರ್ಧದಷ್ಟು ಪ್ರಕರಣಗಳು ಕುಸಿತ ಕಂಡಿವೆ.

ಬಾಲಿವುಡ್‌: ಬಿಡಲಾಗದ ನಂಟು

ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನ ನಂತರ, ಬಾಲಿವುಡ್‌ ಹಾಗೂ ಮನರಂಜನಾ ಕ್ಷೇತ್ರದ ಖ್ಯಾತನಾಮರಲ್ಲಿ ಹಲವರಿಗೆ ಡ್ರಗ್‌ ಮಾಫಿಯಾದ ಜತೆ ನಂಟಿದೆ ಎಂಬುದು ಆಗಾಗ ಬಹಿರಂಗವಾಗುತ್ತಲೇ ಇದೆ. ಇದೀಗ, ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಜೂನ್‌ 14ರಂದು, ಸುಶಾಂತ್‌ಸಿಂಗ್‌ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದ ತನಿಖೆಯನ್ನು ಸಿಬಿಐ, ಎನ್‌ಸಿಬಿ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿವೆ. ಈ ತನಿಖೆಯೇ ಬಾಲಿವುಡ್‌ ಮತ್ತು ಡ್ರಗ್ಸ್‌ ಮಾಫಿಯಾ ನಂಟಿನ ಹಲವು ಆಯಾಮಗಳನ್ನು ತೆರೆದಿಟ್ಟಿದೆ.ಮಾದಕ ವಸ್ತುಗಳ ಸೇವನೆ, ಡ್ರಗ್ಸ್‌ ಪೂರೈಸುವವರ ಜೊತೆಗಿನ ನಂಟು ಪ್ರಕರಣಗಳಲ್ಲಿ ಸಿನಿಮಾ ಕ್ಷೇತ್ರರ ಹೆಸರಾಂತ ಕಲಾವಿದರು– ನಿರ್ಮಾಪಕ–ನಿರ್ದೇಶಕರು ತನಿಖೆ ಎದುರಿಸುತ್ತಿದ್ದಾರೆ.

ಸುಶಾಂತ್‌ ಸಾವಿನ ಪ್ರಕರಣದಿಂದ ಬಾಲಿವುಡ್‌ನ ಡ್ರಗ್‌ ವ್ಯವಹಾರದ ತನಿಖೆ ಆರಂಭಿಸಿದ್ದ ಎನ್‌ಸಿಬಿ, ಸುಶಾಂತ್‌ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್‌ ಚಕ್ರವರ್ತಿ ಹಾಗೂ ಸುಶಾಂತ್‌ ಕಚೇರಿಯ ಸಿಬ್ಬಂದಿಯಾದ ದೀಪೇಶ್‌ ಸಾವಂತ್‌ ಹಾಗೂ ಸಾಮ್ಯುವೆಲ್‌ ಮಿರಾಂಡಾ ಅವರನ್ನು ಬಂಧಿಸಿತ್ತು.

ರಿಯಾ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ , ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್‌ ಹಾಗೂ ಶ್ರದ್ಧಾ ಕಪೂರ್‌ ಅವರ ಹೆಸರನ್ನು ರಿಯಾ ಹೇಳಿದ್ದರು.

ದೀಪಿಕಾ ಪಡುಕೋಣೆ, ರಕುಲ್‌ ಪ್ರೀತ್‌ ಸಿಂಗ್‌, ಸಾರಾ ಅಲಿಖಾನ್‌, ಶ್ರದ್ಧಾ ಕಪೂರ್‌, ಸ್ಯಾಮುವೆಲ್‌ ಮಿರಾಂಡಾ, ಶ್ರುತಿ ಮೋದಿ,
ಜಯಾ ಶಾ, ದೀಪೇಶ್ ಸಾವಂತ್‌, ದಿಯಾ ಮಿರ್ಜಾ, ರಿಯಾ ಸ್ನೇಹಿತೆಯಾದ ಫ್ಯಾಷನ್‌ ಡಿಸೈನರ್‌ ಸೀಮನ್‌, ದೀಪಿಕಾ ಪಡುಕೋಣೆಯ ಮ್ಯಾನೇಜರ್‌ ಕರಿಷ್ಮಾ ಪ್ರಕಾಶ್‌, ‘ಕಲೆಕ್ಟಿವ್‌ ಆರ್ಟಿಸ್ಟ್‌’ನ ಸಹ ಸಂಸ್ಥಾ‍‍‍ಪಕ ಧ್ರುವ ಚಿಟಗೋಪೇಕರ್‌ ಹೀಗೆ ಒಂದೊಂದೇ ಹೆಸರುಗಳು ಮಾದಕ ದ್ರವ್ಯದ ಮಾರಾಟ ಜಾಲದೊಂದಿಗೆ ಕೇಳಿಬಂದಿದ್ದು, ಇವರೆಲ್ಲರೂ ಎನ್‌ಸಿಬಿ ವಿಚಾರಣೆ ಎದುರಿಸಿದ್ದಾರೆ.

ನಿರ್ಮಾಪಕ ಕರಣ್‌ ಜೋಹರ್‌, ಎರಡು ವರ್ಷಗಳ ಹಿಂದೆ ಆಯೋಜಿಸಿದ್ದ ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ನಡೆದಿತ್ತು ಎಂದು ಆರೋಪಿಸಲಾಗಿದ್ದು, ಅದರಲ್ಲಿ ಅರ್ಜುನ್‌ ಕಪೂರ್‌, ಶಾಹಿದ್‌ ಕಪೂರ್‌, ರಣಬೀರ್‌ ಕಪೂರ್‌, ದೀಪಿಕಾ ಪಡುಕೋಣೆ ಮುಂತಾದವರು ಭಾಗವಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ.

ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್, ಚಾರ್ಮಿ ಕೌರ್, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ನಟರು ಹಾಗೂ ನಿರ್ದೇಶಕರು ಕಳೆದ ತಿಂಗಳು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸಿದ್ದಾರೆ.

ಡ್ರಗ್ಸ್‌ ಸಂಗ್ರಹಿಸಿಟ್ಟುಕೊಂಡ ಪ್ರಕರಣಗಳಲ್ಲಿ, ನಟರಾದ ಗೌರವ್ ದೀಕ್ಷಿತ್ ಹಾಗೂ ಅರ್ಮಾನ್‌ ಕೊಹ್ಲಿ ಅವರನ್ನು ತಿಂಗಳ ಹಿಂದಷ್ಟೇ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಸುಶಾಂತ್‌ ಮೃತಪಟ್ಟ ದಿನದಿಂದ ಕಾಣೆಯಾಗಿದ್ದ ಅವರ ಸ್ನೇಹಿತ, ಹೋಟೆಲ್‌ ಉದ್ಯಮಿ ಕುನಾಲ್‌ ಜಾನಿಯನ್ನು ಮೂರು ದಿನಗಳ ಹಿಂದಷ್ಟೇ ಎನ್‌ಸಿಬಿ ಬಂಧಿಸಿದೆ.

ಇದೀಗ ಮತ್ತೊಂದು ರೇವ್‌ ಪಾರ್ಟಿ ಮೇಲೆ ದಾಳಿ ನಡೆಸಿರುವ ಎನ್‌ಸಿಬಿ, ಆರ್ಯನ್‌ ಖಾನ್‌ ಸೇರಿದಂತೆ ಹಲವರನ್ನು ಬಂಧಿಸಿದೆ. ಇದರೊಂದಿಗೆ ಡ್ರಗ್ಸ್‌ ಮಾಫಿಯಾ ಜತೆ ನಂಟಿರುವ ಮನರಂಜನಾ ಕ್ಷೇತ್ರದ ಖ್ಯಾತನಾಮರ ಪಟ್ಟಿ ಇನ್ನಷ್ಟು ಉದ್ದವಾಗುವ ಸಾಧ್ಯತೆ ಇದೆ.

ಕಾರ್ಯಾಚರಣೆ ಕರ್ನಾಟಕ ಮುಂದೆ

ಕರ್ನಾಟಕದಲ್ಲಿಯೂ ಡ್ರಗ್ಸ್‌ ಮಾರುವ ಜಾಲದ ಬೇರು ದಿನಕಳೆದಂತೆ ಬೆಳೆಯುತ್ತಲೇ ಇದೆ.ಪೊಲೀಸರು, ಸಿಸಿಬಿ, ಎನ್‌ಸಿಬಿ ಅಧಿಕಾರಿಗಳು ಮೇಲಿಂದ ಮೇಲೆ ಕಾರ್ಯಾಚರಣೆ ನಡೆಸಿದರೂ ಡ್ರಗ್ಸ್ ಜಾಲದ ಬೇರು ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ.ಗಾಂಜಾ ಸಾಗಣೆ ಹಾಗೂ‌ ಮಾರಾಟದ ಮೂಲಕ ಆರಂಭವಾದ ದಂಧೆ, ಸಿಂಥೆಟಿಕ್ ಡ್ರಗ್ಸ್‌ಗೆ ಬಂದು ನಿಂತಿದೆ.ಮಾತ್ರೆಗಳ ರೂಪದಲ್ಲಿ ಸಿಗುವ ಎಂಡಿಎಂಎ, ಕಾಗದ ರೂಪದಲ್ಲಿ ಸಿಗುವ ಎಲ್‌ಎಸ್‌ಡಿ, ಅಫೀಮು, ಹಶೀಷ್... ಹೀಗೆ ಡ್ರಗ್ಸ್‌ಗಳ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ.

ವಿದ್ಯಾಭ್ಯಾಸ, ಉದ್ಯೋಗದ‌ ಸೋಗಿನಲ್ಲಿ ರಾಜ್ಯಕ್ಕೆ ‌ಬರುವ‌ ವಿದೇಶಿಗರು, ಡ್ರಗ್ಸ್ ಜಾಲ‌ದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು, ಹಣ ಗಳಿಕೆಗಾಗಿ ನಮ್ಮವರು ಕೂಡ ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದಾರೆ.ಸುಳಿವು ಸಿಗದ ಡಾರ್ಕ್‌ನೆಟ್ ಜಾಲತಾಣದ‌ ಮೂಲಕ ಡ್ರಗ್ಸ್ ಮಾರಾಟ ಜೋರಾಗಿದ್ದು, ರಾಜ್ಯದಲ್ಲೂ ಅದರ ಬೇರುಗಳು ಇವೆ.
ಇಂಥ ಜಾಲತಾಣಗಳ ಮೂಲಕ‌ ವಿದೇಶಗಳಿಂದ ಕೊರಿಯರ್ ಮೂಲಕ ಡ್ರಗ್ಸ್ ತರಿಸಿಕೊಂಡು‌ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ.

ನಟ-ನಟಿಯರು, ಉದ್ಯಮಿಗಳು, ಗಣ್ಯರು, ಶ್ರೀಮಂತರ ಮಕ್ಕಳು ಡ್ರಗ್ಸ್ ಪಾರ್ಟಿ‌ ನಡೆಸುತ್ತಿದ್ದ ಪ್ರಕರಣ ಭೇದಿಸಿದ್ದ ಬೆಂಗಳೂರಿನ ಸಿಸಿಬಿ, ಹಲವರನ್ನು‌ ಬಂಧಿಸಿ ಜೈಲಿಗಟ್ಟಿತ್ತು. ಇದೀಗ ಅವರೆಲ್ಲರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ‌ ಪಟ್ಟಿಯನ್ನು‌ ಸಲ್ಲಿಸಿದೆ. ಮಂಗಳೂರು ಸಿಸಿಬಿಯೂ ಕಡಲತೀರದ ಡ್ರಗ್ಸ್ ಜಾಲವನ್ನು ಬಯಲಿಗೆ ಎಳೆದಿತ್ತು.

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಹೆಸರಿ‌ನಲ್ಲೂ ಡ್ರಗ್ಸ್ ಮಾರುತ್ತಿದ್ದ ಸಂಗತಿ ಎನ್‌ಸಿಬಿ ಅಧಿಕಾರಿಗಳು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ಬಂಧಿಸಿದ್ದಾರೆ.ಬಿಡದಿ ಬಳಿಯ ವಿಲ್ಲಾದಲ್ಲೇ ಹೈಬ್ರಿಡ್ ಗಾಂಜಾ‌ ಬೆಳೆಯುತ್ತಿದ್ದ ಇರಾನ್ ಪ್ರಜೆಗಳಿಬ್ಬರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಂಬಿಎ ಕಲಿಯಲು ಬಂದಿದ್ದ ಪ್ರಜೆಗಳು, ಡ್ರಗ್ಸ್ ಮಾರಾಟಕ್ಕೆ ಇಳಿದು ಜಾಲ ವೃದ್ಧಿಸಿದ್ದರು. ಬೆಂಗಳೂರಿನಲ್ಲಿ ಇದ್ದರೆ, ಪೊಲೀಸರು ಬಂಧಿಸಬಹುದೆಂದು ತಿಳಿದು ತಮ್ಮ ವಾಸ್ತವ್ಯವನ್ನು ಹೊರವಲಯದ ಬಿಡದಿಗೆ ಬದಲಿಸಿದ್ದರು. ವಿಲ್ಲಾ‌ ಮೇಲೆ ದಾಳಿ‌ಮಾಡಿದಾಗ, ಗಾಂಜಾ ಗಿಡ ಬೆಳೆಯುತ್ತಿದ್ದ ಪದ್ಧತಿ ನೋಡಿ ಪೊಲೀಸರೇ ಆಶ್ಚರ್ಯಗೊಂಡಿದ್ದರು.

ಇದರ‌ ನಡುವೆಯೂ ರಾಜ್ಯದ ಬೆಂಗಳೂರು ಹಾಗೂ ಇತರೆ ನಗರಗಳಲ್ಲಿ ಡ್ರಗ್ಸ್ ಮಾರಾಟ ನಿರಂತರವಾಗಿದ್ದು, ತನಿಖಾ ಸಂಸ್ಥೆಗಳ ನಿದ್ದೆಗೆಡಿಸಿದೆ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಬೇರೆ ರಾಜ್ಯಗಳಿಗೆ‌ ಹೋಲಿಸಿದರೆ ಕರ್ನಾಟಕವೇ ಮುಂದಿದೆ.ಬೆಂಗಳೂರು ಪೂರ್ವ ವಿಭಾಗದ ‌ಗೋವಿಂದಪುರ‌ ಪೊಲೀಸರು ಡ್ರಗ್ಸ್ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ‌ಮಾಡುತ್ತಿದ್ದಾರೆ. ಕೆಂಪೇಗೌಡ ಸಿನಿಮಾ‌ ನಿರ್ಮಾಪಕ ಶಂಕರಗೌಡ, ಮಹಿಳಾ‌ ಉದ್ಯಮಿ‌ ಸೋನಿಯಾ ಹಾಗೂ‌ ಹಲವರನ್ನು‌ ಬಂಧಿಸಿ‌ ಜೈಲಿಗೆ‌ ಕಳುಹಿಸಿದ್ದಾರೆ. ಕೋಟಿಗಟ್ಟಲೇ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT