ಗುರುವಾರ , ಆಗಸ್ಟ್ 5, 2021
21 °C

ಆಳ–ಅಗಲ | ಅಡುಗೆ ಎಣ್ಣೆ ಬೆಲೆ: ಬಾಣಲೆಯಿಂದ ಬೆಂಕಿಗೆ

ಜಯಸಿಂಹ ಆರ್‌., ಅಮೃತ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

ದೇಶದಲ್ಲಿ ಅಡುಗೆ ಎಣ್ಣೆಯ ಬೆಲೆ ಈಗ ವಿಪರೀತ ಏರಿಕೆಯಾಗಿದೆ. ಕಳೆದ 15 ದಿನಗಳಲ್ಲಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದರೂ, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಪ್ರತಿ ಲೀಟರ್‌ ಅಡುಗೆ ಎಣ್ಣೆ ಖರೀದಿಸಲು
ಶೇ 50-70ರಷ್ಟು ಹೆಚ್ಚು ಹಣ ನೀಡಬೇಕಿದೆ. ದೇಶದಲ್ಲಿ ಅಡುಗೆಗೆ ಬಳಸುವ ಎಲ್ಲಾ ಎಣ್ಣೆಯ ಬೆಲೆಯಲ್ಲೂ ಒಂದೇ ತರಹದ ಏರಿಕೆಯಾಗಿದೆ.

ದೇಶದಲ್ಲಿ ಅಡುಗೆಗೆ ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಯನ್ನು ಪ್ರಧಾನವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನೂ ಬಳಸಲಾಗುತ್ತದೆ. ಆದರೆ ಇವುಗಳ ಬಳಕೆ ಪ್ರಮಾಣ ಅತ್ಯಂತ ಕಡಿಮೆ. ದೇಶದಲ್ಲಿ ಅಡುಗೆಗೆ ಬಳಸುವ ಎಣ್ಣೆಗಳಲ್ಲಿ ತಾಳೆ ಎಣ್ಣೆಯದ್ದೇ ಸಿಂಹಪಾಲು. ವರ್ಷವೊಂದರಲ್ಲಿ ಬಿಕರಿಯಾಗುವ ಅಡುಗೆ ಎಣ್ಣೆಗಳಲ್ಲಿ ತಾಳೆ ಎಣ್ಣೆಯ ಪ್ರಮಾಣ ಶೇ 65ಕ್ಕಿಂತಲೂ ಹೆಚ್ಚು. ಆದರೆ ತಾಳೆ ಎಣ್ಣೆಯ ಬೆಲೆ ವಿಪರೀತ ಏರಿಕೆಯಾಗಿದೆ. ಅತಿಹೆಚ್ಚು ಬಳಕೆಯಾಗುವ ಎಣ್ಣೆಯಾದ ಕಾರಣ, ಬೆಲೆ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದವರಿಗೆ ಭಾರಿ ಹೊರೆಯಾಗಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಮತ್ತು ತೆರಿಗೆಯಲ್ಲಿ ಸ್ವಲ್ಪ ಇಳಿಕೆ ಮಾಡಿದ್ದರಿಂದ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಆದರೆ 2020ರ ಜೂನ್-ಜುಲೈಗೆ ಹೋಲಿಸಿದರೆ ಬೆಲೆ ಈಗಲೂ ಬಹಳ ಹೆಚ್ಚೇ ಇದೆ. 

ತಾಳೆ ಎಣ್ಣೆಯ ನಂತರ ದೇಶದಲ್ಲಿ ಹೆಚ್ಚು ಬಳಕೆಯಾಗುವುದು ಸೋಯಾ ಎಣ್ಣೆ. ಇದನ್ನೂ ಸಹ ಬ್ರೆಜಿಲ್‌ ಮತ್ತು ದಕ್ಷಿಣ ಅಮೆರಿಕದ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸೋಯಾ ಎಣ್ಣೆಯ ಬೆಲೆಯಲ್ಲೂ ಭಾರಿ ಪ್ರಮಾಣದ ಏರಿಕೆಯಾಗಿದೆ. ಇದರ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಮತ್ತೆ ಏರಿಕೆ ಮಾಡಿದೆ.

ಚಿಲ್ಲರೆ ಮಾರಾಟ ಬೆಲೆಯಲ್ಲಿ ಸುಂಕದ ಹೊರೆಯೇ ಹೆಚ್ಚು

ಅಡುಗೆ ಎಣ್ಣೆ ಬೆಲೆ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಆಗಿರುವುದು ಮತ್ತು ಪೂರೈಕೆ ಕಡಿಮೆ ಆಗಿರುವುದೇ ಕಾರಣ ಎಂದು ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಆದರೆ, ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಯ ಮೇಲೆ ಸರ್ಕಾರ ವಿಧಿಸುತ್ತಿರುವ ಆಮದು ಸುಂಕ ಬೇರೆಯದ್ದೇ ಮಾಹಿತಿ ನೀಡುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗ, ಆಮದು ಮಾಡಿಕೊಳ್ಳುತ್ತಿದ್ದ ಬಹುತೇಕ ಎಲ್ಲಾ ಅಡುಗೆ ಎಣ್ಣೆಯಮೇಲೆ ವಿಧಿಸಲಾಗುತ್ತಿದ್ದ ಆಮದು ಸುಂಕದ ಪ್ರಮಾಣ ಶೇ 2.5ರಿಂದ ಶೇ 7.5ರವರೆಗೆ ಇತ್ತು. ಆದರೆ ಈಗ ಅದೇ ಎಣ್ಣೆಗಳ ಮೇಲೆ ಶೇ 31ರಿಂದ ಶೇ 49ರಷ್ಟು ಆಮದು ಸುಂಕ ವಿಧಿಸಲಾಗುತ್ತಿದೆ. ಈಗಿನ ಬೆಲೆ ಏರಿಕೆಯಲ್ಲಿ ಈ ಸುಂಕದ ಹೊರೆಯದ್ದೇ ಸಿಂಹ ಪಾಲು.

ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆ ಇಳಿಕೆಯಾಗಿತ್ತು. ಬೆಲೆ ಇಳಿಕೆಯ ಕಾರಣ, ಆಮದು ಸುಂಕದ ಆದಾಯವನ್ನು ಸರಿದೂಗಿಸಲು ಸರ್ಕಾರವು ಆಮದು ಸುಂಕವನ್ನು ಏರಿಕೆ ಮಾಡಿತು. ನಂತರದ ವರ್ಷಗಳಲ್ಲಿ ಬೆಲೆ ಇಳಿಯುತ್ತಲೇ ಹೋಯಿತು, ಆದರೆ ಸರ್ಕಾರ ಆಮದು ಸುಂಕವನ್ನು ಏರಿಕೆ ಮಾಡುತ್ತಲೇ ಹೋಯಿತು. ಹೀಗಾಗಿ ಇಷ್ಟೂ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾದರೂ, ದೇಶದ ಗ್ರಾಹಕರಿಗೆ ಅದರ ಲಾಭ ದೊರೆತಿಲ್ಲ. ಆದರೆ ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿದೆ. ಅದರ ಮೇಲೆ ತೆರಿಗೆ ಹೊರೆಯೂ ಸೇರಿ, ಅಡುಗೆ ಎಣ್ಣೆಯ ಚಿಲ್ಲರೆ ಮಾರಾಟ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಾರಣಗಳು

2021ರ ಮೇ ತಿಂಗಳಿನಲ್ಲಿ ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ಮಾರಾಟ ಬೆಲೆಯು 11 ವರ್ಷಗಳಲ್ಲೇ ಗರಿಷ್ಠ ಮಟ್ಟದ ಏರಿಕೆ ದಾಖಲಿಸಿದೆ. ಕೋವಿಡ್ ಕಾರಣದಿಂದ ಸೃಷ್ಟಿಯಾದ ಸಂಕಷ್ಟಗಳಿಂದ ಕುಟುಂಬ ನಿರ್ವಹಣೆಯೇ ಕಷ್ಟಕರವಾದ ಸನ್ನಿವೇಶದಲ್ಲೇ ಅಡುಗೆ ಎಣ್ಣೆಯ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಇದಕ್ಕೆ ಹಲವು ಕಾರಣಗಳಿವೆ.

ಬಳಕೆ ಹೆಚ್ಚಳ: ಖಾದ್ಯ ತೈಲ ಬಳಕೆಯಲ್ಲಿ ಕಳೆದ ಒಂದು ವರ್ಷದಿಂದ ಏರಿಕೆ ಕಂಡುಬಂದಿದೆ. ಆಹಾರ ಪದ್ಧತಿಯಲ್ಲಿ ಆದ ಬದಲಾವಣೆ ಮತ್ತು ಆದಾಯದಲ್ಲಿ ಆಗಿರುವ ಹೆಚ್ಚಳವು ಅಡುಗೆ ಎಣ್ಣೆ ಬಳಕೆ ಅಧಿಕವಾಗಲು ಕಾರಣವಾಗಿವೆ. ನಗರ ಭಾಗದಲ್ಲಿ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯು ಅತಿಹೆಚ್ಚಾಗಿ ಬಳಕೆಯಾಗುತ್ತದೆ.

l ಆಮದಿನ ಮೇಲೆ ಅವಲಂಬನೆ: ದೇಶೀಯ ಬೆಲೆಯಲ್ಲಿ ಆಗಿರುವ ಹೆಚ್ಚಳವು ಮೂಲತಃ ಅಂತರರಾಷ್ಟ್ರೀಯ ಬೆಲೆಯ ಪ್ರತಿಬಿಂಬವಾಗಿದೆ. ಏಕೆಂದರೆ ಭಾರತವು ತನ್ನ ದೇಶೀಯ ಬೇಡಿಕೆಯ ಶೇ 56ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. 2019–20ರ ಅವಧಿಯಲ್ಲಿ ₹75,000 ಕೋಟಿ ಮೌಲ್ಯದ 1.34 ಕೋಟಿ ಟನ್ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿದೆ.

l ಆದ್ಯತೆ ಬದಲಾವಣೆ: ಖಾದ್ಯ ತೈಲಗಳನ್ನು ಆಹಾರ ಬುಟ್ಟಿಯಿಂದ ಇಂಧನ ಬುಟ್ಟಿಗೆ ವರ್ಗಾಯಿಸಿರುವುದು ಬೆಲೆ ಏರಿಕೆಗೆ ಮತ್ತೊಂದು ಕಾರಣ ಎಂದು ಗುರುತಿಸಲಾಗಿದೆ. ಅಮೆರಿಕ, ಬ್ರೆಜಿಲ್ ಮತ್ತು ಇತರ ದೇಶಗಳಲ್ಲಿ ಸೋಯಾಬೀನ್ ಎಣ್ಣೆಯಿಂದ ನವೀಕರಿಸಬಹುದಾದ ಇಂಧನವನ್ನು ತಯಾರಿಸಲು ಹೆಚ್ಚಿನ ಒತ್ತಡವಿದೆ. ಕೋವಿಡ್ -19 ಸಾಂಕ್ರಾಮಿಕದ ನಡುವೆಯೂ, ಖಾದ್ಯ ತೈಲಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾಗಿರುವುದಕ್ಕೆ ಇದೂ ಒಂದು ಕಾರಣ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಇತ್ತೀಚಿನ ತಿಂಗಳುಗಳಲ್ಲಿ ಖಾದ್ಯ ತೈಲಗಳ ಬೆಲೆ ತೀವ್ರವಾಗಿ ಏರಿದೆ. ಉದಾಹರಣೆಗೆ, ಮಲೇಷ್ಯಾದ ಉತ್ಪನ್ನಗಳ ವಿನಿಮಯ ಕೇಂದ್ರದಲ್ಲಿ ಕಚ್ಚಾ ತಾಳೆ ಎಣ್ಣೆಯ ಬೆಲೆಯನ್ನು ಮೇ 25ರಂದು ಪ್ರತಿ ಟನ್‌ಗೆ ₹69 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. ಇದೇ ತೈಲವು ಸರಿಯಾಗಿ ಒಂದು ವರ್ಷದ ಹಿಂದೆ ₹40 ಸಾವಿರಕ್ಕೆ ಲಭ್ಯವಿತ್ತು.

ಚೀನಾದ ಖರೀದಿ, ಮಲೇಷ್ಯಾದಲ್ಲಿನ ಕಾರ್ಮಿಕ ಸಮಸ್ಯೆಗಳು, ತಾಳೆ ಮತ್ತು ಸೋಯಾ ಉತ್ಪಾದಿಸುವ ಪ್ರದೇಶಗಳ ಮೇಲೆ ಎಲ್‌ ನಿನೊ ಪರಿಣಾಮ ಮತ್ತು ಇಂಡೊನೇಷ್ಯಾ ಮತ್ತು ಮಲೇಷ್ಯಾದಲ್ಲಿ ಕಚ್ಚಾ ತಾಳೆ ಎಣ್ಣೆಯ ಮೇಲೆ ಹೇರಿರುವ ರಫ್ತು ಸುಂಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. 

ಅಮೆರಿಕದಲ್ಲಿ ನಿರೀಕ್ಷೆಗೆ ತಕ್ಕಷ್ಟು ಪ್ರದೇಶದಲ್ಲಿ ನಾಟಿ ಆಗದಿರುವುದು, ಶುಷ್ಕ ವಾತಾವರಣ ಕಂಡುಬಂದಿರುವುದು ಎಣ್ಣೆಬೀಜ ಉತ್ಪಾದನೆಗೆ ತೊಡಕಾಗಿವೆ. ದೀರ್ಘಕಾಲೀನ ಶುಷ್ಕತೆಯಿಂದಾಗಿ ಅರ್ಜೆಂಟೀನಾದಲ್ಲೂ ಉತ್ಪಾದನೆ ನಿರೀಕ್ಷೆ ಮಟ್ಟದಲ್ಲಿ ಆಗುತ್ತಿಲ್ಲ.

ಮಾರಕವಾದ ಕ್ರಮ

ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಅಡುಗೆ ಎಣ್ಣೆಯೂ ಇತ್ತು. ಆದರೆ 2020ರ ಸೆಪ್ಟೆಂಬರ್‌ನಲ್ಲಿ ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದುಹಾಕಲಾಯಿತು. ಇದಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಸಂಸತ್ತಿನಲ್ಲಿ ಪಾಸು ಮಾಡಲಾಗಿದೆ. ಸರ್ಕಾರದ ಈ ಕ್ರಮದಿಂದ ಗ್ರಾಹಕರ ಮೇಲೆ ಹೊರೆ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರಗೆ ಇಟ್ಟ ಕಾರಣ, ಅಡುಗೆ ಎಣ್ಣೆಯ ದಾಸ್ತಾನು, ಸಾಗಣೆ ಮತ್ತು ಬೆಲೆಯ ಮೇಲೆ ಸರ್ಕಾರ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿಯೇ ದೇಶೀಯವಾಗಿ ಉತ್ಪಾದಿಸಿದ ಅಡುಗೆ ಎಣ್ಣೆ ಸಹ ಭಾರಿ ಬೆಲೆಗೆ ಮಾರಾಟವಾಗುತ್ತಿದೆ.

ಆಧಾರ: ಕೇಂದ್ರ ನಾಗರಿಕ ಸರಬರಾಜು ಇಲಾಖೆ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ದಿ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು