ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಲಸಿಕೆ ರಾಜಕಾರಣ ಮುಂಚೂಣಿಗೆ ಭಾರತ

Last Updated 10 ಮಾರ್ಚ್ 2021, 20:13 IST
ಅಕ್ಷರ ಗಾತ್ರ

ಈಗ, ಕೋವಿಡ್‌–19 ತಡೆ ಲಸಿಕೆ ಎಂಬುದು ಜಗತ್ತಿನಲ್ಲಿ ಅತ್ಯಂತ ಬೇಡಿಕೆಯ ವಸ್ತು. ಲಸಿಕೆ ತಯಾರಿಸಿ ಪೂರೈಸುವ ಸಾಮರ್ಥ್ಯ ಯಾವ ದೇಶಕ್ಕೆ ಹೆಚ್ಚು ಇದೆಯೋ ಆ ದೇಶಕ್ಕೆ ಜಾಗತಿಕ ಮನ್ನಣೆ ದೊರೆಯುವ ಅವಕಾಶ. ಲಸಿಕೆ ತಯಾರಿಕೆ ಸಾಮರ್ಥ್ಯದಲ್ಲಿ ಜಗತ್ತಿನಲ್ಲಿಯೇ ಅದ್ವಿತೀಯ ಎನಿಸಿರುವ ಭಾರತಕ್ಕೆ ಈ ಗೌರವವನ್ನು ಪಡೆದುಕೊಳ್ಳುವ ಅವಕಾಶ ತನ್ನಿಂತಾನೆ ದೊರೆತಿದೆ. ಭಾರತ ಮಾತ್ರವಲ್ಲದೆ ಇತರ ದೇಶಗಳು ಕೂಡ ಲಸಿಕೆ ರಾಜತಾಂತ್ರಿಕತೆಯ ಲಾಭ ಪಡೆದುಕೊಳ್ಳಲು ಮುಂದಾಗಿವೆ. ಹಾಗಾಗಿ, ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯೂ ಇದೆ. ವಿವಿಧ ದೇಶಗಳಿಗೆ ಲಸಿಕೆ ಪೂರೈಸುವುದಾಗಿ ಚೀನಾ ಭರವಸೆ ಕೊಟ್ಟಿದೆ. ನೆರೆಯ ದೇಶಗಳು ಮತ್ತು ಮಿತ್ರರಾಷ್ಟ್ರಗಳಿಗಾಗಿ ಅರಬ್‌ ಸಂಯುಕ್ತ ಸಂಸ್ಥಾನ ಕೂಡ ಲಸಿಕೆ ಖರೀದಿಸಿ ವಿತರಿಸುವ ಕೆಲಸಕ್ಕೆ ಮುಂದಾಗಿದೆ.

ವಿವಿಧ ದೇಶಗಳಿಗೆ ಲಸಿಕೆ ಪೂರೈಸುವ ವಿಚಾರದಲ್ಲಿ ಭಾರತವು ಮುಂಚೂಣಿಯಲ್ಲಿ ಇದೆ.ಲಸಿಕೆ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಅತಿ ಹೆಚ್ಚಿನ ಪೈಪೋಟಿ ಒಡ್ಡುವ ಸಾಧ್ಯತೆ ಇದ್ದದ್ದು ಚೀನಾಕ್ಕೆ ಮಾತ್ರ. ಕೋವಿಡ್‌ ಪಿಡುಗಿನ ಮೂಲವಾದ ಚೀನಾವು ಆರಂಭದಲ್ಲಿಯೇ ಆ ಸಾಂಕ್ರಾಮಿಕವನ್ನು ನಿಯಂತ್ರಿಸಿತು. ಹಾಗಾಗಿ, ಬೇಗನೆ ಲಸಿಕೆ ಅಭಿವೃದ್ಧಿಪಡಿಸಿ, ಅದನ್ನು ದೊಡ್ಡ ಮಟ್ಟದಲ್ಲಿ ತಯಾರಿಸಿ ವಿವಿಧ ದೇಶಗಳಿಗೆ ಪೂರೈಸಬಹುದು ಎಂಬ ಚಿಂತನೆ ಆ ದೇಶಕ್ಕೆ ಇತ್ತು. ಆದರೆ, ಕೋವಿಡ್‌ನ ಎರಡನೇ ಅಲೆಯಿಂದಾಗಿ, ದೇಶದಲ್ಲಿರುವ 140 ಕೋಟಿ ಜನರಿಗೆ ಮೊದಲಿಗೆ ಲಸಿಕೆ ಹಾಕಿಸಬೇಕಾದ ಬೃಹತ್ ಹೊಣೆಗಾರಿಕೆಯನ್ನು ಪೂರೈಸಲೇಬೇಕಾದ ಅನಿವಾರ್ಯಕ್ಕೆ ಆ ದೇಶ ಸಿಲುಕಿತು. ಹಾಗಾಗಿ, ಜಗತ್ತಿನ ಇತರ ದೇಶಗಳಿಗೆ ಲಸಿಕೆ ಪೂರೈಸುವುದು ಸ್ವಲ್ಪ ವಿಳಂಬವಾಯಿತು. ‌

ಹೀಗಿದ್ದರೂ ಲಸಿಕೆ ಮೂಲಕ ಇತರ ದೇಶಗಳ ಮೇಲೆ ತನ್ನ ಪ್ರಭಾವ ಹೆಚ್ಚಿಸುವ ಉಮೇದನ್ನು ಚೀನಾ ತೋರಿದೆ. ಯುರೋಪ್‌, ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕದ ವಿವಿಧ ದೇಶಗಳಿಗೆ 46 ಕೋಟಿಗೂ ಹೆಚ್ಚು ಡೋಸ್‌ ಲಸಿಕೆಗಳನ್ನು ಪೂರೈಸುವುದಾಗಿ ಚೀನಾ ಭರವಸೆ ಕೊಟ್ಟಿದೆ. ಶ್ರೀಲಂಕಾ, ಭೂತಾನ್‌, ಬಾಂಗ್ಲಾದೇಶ, ಮಾಲ್ಡೀವ್ಸ್‌, ಸೀಷೆಲ್ಸ್‌ ಸೇರಿ ಹಲವು ದೇಶಗಳಿಗೆ 5.81 ಕೋಟಿ ಡೋಸ್‌ ಲಸಿಕೆಯನ್ನು ಭಾರತ ಈಗಾಗಲೇ ಪೂರೈಸಿದೆ. ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಎರಡು ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ.

ಶ್ರೀಲಂಕಾ ಮತ್ತು ಏಷ್ಯಾದ ಕೆಲವು ದೇಶಗಳಿಗೆ ಲಸಿಕೆ ಒದಗಿಸುವುದಾಗಿ ಚೀನಾ ಮಾತು ಕೊಟ್ಟಿತ್ತು. ಆದರೆ, ಅದಕ್ಕೂ ಮುಂಚೆಯೇ ಭಾರತ ಲಸಿಕೆ ಒದಗಿಸಿ ಮುನ್ನಡೆ ಸಾಧಿಸಿದೆ. ಈ ಎಲ್ಲ ಕಾರಣಗಳಿಂದಾಗಿಯೇ, ಲಸಿಕೆಯ ವಿಚಾರದಲ್ಲಿ ಭಾರತವು ಇತರೆಲ್ಲ ದೇಶಗಳಿಗಿಂತ ಮೇಲೆ ನಿಲ್ಲುತ್ತದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ ಹೇಳಿದ್ದಾರೆ. ಭಾರತದ ನಡೆಗೆ ವಿಶ್ವ ಸಂಸ್ಥೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಾ ಇರುವ ‘ಕ್ವಾಡ್‌ ಕೂಟ’ವು ಲಸಿಕೆ ರಾಜತಾಂತ್ರಿಕತೆಯಲ್ಲಿ ಚೀನಾವನ್ನು ಹಿಮ್ಮೆಟ್ಟಿಸಲು ಕೈಜೋಡಿಸುವ ಸಾಧ್ಯತೆ ಈಗ ನಿಚ್ಚಳವಾಗಿದೆ. ಹಿಂದೂ ಮಹಾಸಾಗರ–ಫೆಸಿಪಿಕ್‌ ಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ಕಡಿವಾಣ ಹಾಕುವುದೇ ಕ್ವಾಡ್‌ ಕೂಟದ ಪ್ರಧಾನ ಉದ್ದೇಶ. ಹಾಗಾಗಿಯೇ, ಭಾರತದ ಲಸಿಕೆ ತಯಾರಿಕೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಕ್ವಾಡ್ ಕೂಟದ ಇತರ ರಾಷ್ಟ್ರಗಳು ಸಜ್ಜಾಗಿವೆ. ಕ್ವಾಡ್‌ ನಾಯಕರ ನಡುವೆ ಶುಕ್ರವಾರ ನಡೆಯಲಿರುವ ಮಾತುಕತೆಯಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬೀಳುವ ನಿರೀಕ್ಷೆ ಇದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರಿ ಸಂಖ್ಯೆಯ ಲಸಿಕೆಯು ಭಾರತಕ್ಕೆ ಬೇಕಾಗಿದೆ. ಹಾಗಿದ್ದರೂ ರಫ್ತು ನಿಷೇಧದಂತಹ ಕ್ರಮಗಳನ್ನು ಭಾರತ ಕೈಗೊಂಡಿಲ್ಲ. ಮಾರಾಟ ಮಾತ್ರವಲ್ಲದೆ, ನೆರವಿನ ರೂಪದಲ್ಲಿಯೂ ದೊಡ್ಡ ಸಂಖ್ಯೆಯ ಡೋಸ್‌ಗಳು ವಿವಿಧ ದೇಶಗಳಿಗೆ ರವಾನೆ ಆಗಿದೆ. ಕೆನಡಾದಂತಹ ದೇಶ ಕೂಡ ಭಾರತದ ಲಸಿಕೆಗೆ ಕೈಯೊಡ್ಡಿದೆ. ಲಸಿಕೆ ರಾಜತಾಂತ್ರಿಕತೆಯಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಮಾತ್ರವಲ್ಲದೆ, ಬಡ ರಾಷ್ಟ್ರಗಳಿಗೂ ಲಸಿಕೆ ಬೇಗನೆ ದೊರೆತಿದೆ. ಜೀವ ಉಳಿಸುವ ಲಸಿಕೆ ಪೂರೈಕೆಯಿಂದಾಗಿ ಭಾರತಕ್ಕೆ ಜಾಗತಿಕವಾಗಿ ದೊರೆಯುವ ಮಹತ್ವವು ಒಂದಷ್ಟು ಕಾಲ ಹಸಿರಾಗಿ ಉಳಿಯಬಹುದು.

‘ಗವಿ’ ಮೂಲಕ ಲಸಿಕೆ ಪೂರೈಕೆ
‘ಗವಿ’ ಎಂಬುದು ಒಂದು ಅಂತರರಾಷ್ಟ್ರೀಯ ಲಸಿಕೆ ಮೈತ್ರಿಕೂಟ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಗವಿ ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆಯಜತೆಗೆ ಕಾರ್ಯನಿರ್ವಹಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್, ಯುನಿಸೆಫ್, ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಗವಿ ಕಾರ್ಯನಿರ್ವಹಿಸುತ್ತಿದೆ. ಗವಿ ಸಂಸ್ಥೆಯು ಈವರೆಗೆ ವಿಶ್ವದಾದ್ಯಂತ ವಿವಿಧ ಕಾಯಿಲೆಗಳನ್ನು ತಡೆಯುವ ಲಸಿಕೆಗಳನ್ನು 82.2 ಕೋಟಿ ಮಕ್ಕಳಿಗೆ ನೀಡಿದೆ.

ವಿಶ್ವದಎಲ್ಲಾ ರಾಷ್ಟ್ರಗಳಿಗೂ ಕೋವಿಡ್‌ ಲಸಿಕೆ ಸಮಾನ ಆದ್ಯತೆಯಲ್ಲಿ ಲಭ್ಯವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಶಯ. ಇದಕ್ಕಾಗಿ ಲಸಿಕೆ ಹಂಚಿಕೆ ಬದ್ಧತೆ ಒಪ್ಪಂದವನ್ನೂ ಡಬ್ಲ್ಯುಎಚ್‌ಒ ಪ್ರಕಟಿಸಿದೆ. ಲಸಿಕೆ ಅಭಿವೃದ್ಧಿಯಾದ ನಂತರ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳು, ಅವುಗಳಿಗೆ ಅಗತ್ಯವಿರುವಷ್ಟು ಲಸಿಕೆಗಳನ್ನು ಖರೀದಿಸಬಹುದು. ಲಸಿಕೆ ಖರೀದಿಸಲು ಶಕ್ತವಲ್ಲದ ರಾಷ್ಟ್ರಗಳಿಗೆ, ಲಸಿಕೆ ಖರೀದಿಸಲು ನೆರವು ನೀಡಬಹುದು ಎಂದು ಈ ಒಪ್ಪಂದ ಹೇಳುತ್ತದೆ.ಲಸಿಕೆ ಖರೀದಿಸಲು ಶಕ್ತವಲ್ಲದ 92 ದೇಶಗಳನ್ನು ಡಬ್ಲ್ಯುಎಚ್‌ಒ ಈಗಾಗಲೇ ಗುರುತಿಸಿದೆ. ಈ ದೇಶಗಳಿಗಾಗಿ ಲಸಿಕೆ ಖರೀದಿ ಮತ್ತು ವಿತರಣೆಗಾಗಿ ಒಂದು ನಿಧಿಯನ್ನು ಸ್ಥಾಪಿಸಿದೆ. ಈ ನಿಧಿಯು ದೇಣಿಗೆಗಳನ್ನು ಆಧರಿಸಿದೆ. ಗೇಟ್ಸ್‌ ಪ್ರತಿಷ್ಠಾನವು ಈಗಾಗಲೇ ಈ ನಿಧಿಗೆ ದೇಣಿಗೆ ನೀಡಿದೆ. ಈ ದೇಣಿಗೆಯನ್ನು ನಿರ್ವಹಿಸುವ ಮತ್ತು ಲಸಿಕೆ ಬದ್ಧತೆ ಒಪ್ಪಂದವನ್ನು ಅನುಷ್ಠಾನಕ್ಕೆ ತರುವ ಹೊಣೆಯನ್ನು ಗವಿ ಲಸಿಕೆ ಮೈತ್ರಿಕೂಟವು ಹೊತ್ತುಕೊಂಡಿದೆ.

ಲಸಿಕೆ ಅಭಿವೃದ್ಧಿಯಾಗುವ ಮುನ್ನವೇ ಮಾಡಿಕೊಂಡಿದ್ದ ಈ ಒಪ್ಪಂದದ ಪರಿಣಾಮವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಗಳು ದೊರೆಯುತ್ತಿವೆ. ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯನ್ನು ಭಾರತದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತದಲ್ಲೇ ತಯಾರಿಸುತ್ತಿದೆ. ಭಾರತದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲೂ ಈ ಲಸಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಗವಿ ಪ್ರತಿಷ್ಠಾನದ ಒಪ್ಪಂದದ ಭಾಗವಾಗಿ ಭಾರತಕ್ಕೆ ಕೋವಿಶೀಲ್ಡ್‌ನ 4.1 ಕೋಟಿ ಡೋಸ್‌ಗಳು ಮೊದಲ ಹಂತದಲ್ಲಿಯೇ ದೊರೆತಿವೆ. ಭಾರತದ ಕಂಪನಿಗಳೂ ಗವಿ ಜತೆಗೆ ಒಪ್ಪಂದ ಮಾಡಿಕೊಂಡಿರುವ ಕಾರಣ, ಲಸಿಕೆ ತಯಾರಿಕೆ ವೆಚ್ಚವೂ ಕಡಿಮೆಯಾಗಿದೆ. ಕಡಿಮೆ ಬೆಲೆಯಲ್ಲಿ ಲಸಿಕೆ ದೊರೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ಲಸಿಕೆ ತಯಾರಾಗುತ್ತಿರುವ ಕಾರಣಕ್ಕೇ ವಿಶ್ವದ ಹಲವು ರಾಷ್ಟ್ರಗಳಿಗೆ ಕೋವಿಡ್‌-19 ಲಸಿಕೆಯನ್ನು ಪೂರೈಕೆ ಮಾಡಲು ಭಾರತಕ್ಕೆ ಸಾಧ್ಯವಾಗುತ್ತಿದೆ.

ಪಾಕಿಸ್ತಾನಕ್ಕೂ ಭಾರತದ ಲಸಿಕೆ
ಗವಿ ಅಂತರರಾಷ್ಟ್ರೀಯ ಲಸಿಕೆ ಬದ್ಧತೆ ಒಪ್ಪಂದದ ಭಾಗವಾಗಿ ಪಾಕಿಸ್ತಾನಕ್ಕೆ 4.5 ಕೋಟಿ ಕೋವಿಶೀಲ್ಡ್‌ ಲಸಿಕೆಗಳು ದೊರೆಯುತ್ತಿವೆ. ಇಷ್ಟೂ ಲಸಿಕೆಗಳನ್ನು ಸೀರಂ ಇನ್‌ಸ್ಟಿಟ್ಯೂಟ್ ಭಾರತದಲ್ಲೇ ತಯಾರಿಸಿದೆ. ಗವಿ ಒಪ್ಪಂದದ ಭಾಗವಾಗಿಯೇ ಭಾರತವು ಈ ಲಸಿಕೆಗಳನ್ನು ಪೂರೈಸುತ್ತಿದೆ.

ಚೀನಾ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ಒಂದು ಡೋಸ್‌ಗೆ 2,000 ಪಾಕಿಸ್ತಾನ ರೂಪಾಯಿ ಪಾವತಿಸಬೇಕಿದೆ. ಹೀಗಾಗಿ ಗವಿ ನೀಡುವ ಲಸಿಕೆಗಳನ್ನೇ ಆಶ್ರಯಿಸಿದ್ದೇವೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವಾಲಯವು ಸಂಸತ್ತಿನ ಸಮಿತಿಗೆ ಮಾಹಿತಿ ನೀಡಿದೆ.

ಉತ್ತುಂಗದಲ್ಲಿ ಭಾರತ
ಭಾರತವು ಈವರೆಗೆ ಸುಮಾರು 5.8 ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿತರಣೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ದೇಶಗಳಿಗೆ ಉಚಿತವಾಗಿ ನೆರವಿನ ರೂಪದಲ್ಲಿ ನೀಡಿದರೆ, ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟಕ್ಕೆ ಒಂದಿಷ್ಟು ಲಸಿಕೆ ನೀಡಲಾಗುತ್ತಿದೆ. ಉಳಿದವನ್ನು ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ.

ದೇಶೀಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶ ಗಳಿಗೆ ಹಂತಹಂತವಾಗಿ ರಫ್ತು ಮಾಡಲಾಗುತ್ತಿದೆ ಎಂದು ವಿದೇಶಾಂಗ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿ ದ್ದಾರೆ. ಭಾರತದಲ್ಲಿ ನೆಲೆಸಿರುವ ವಿವಿಧ ದೇಶಗಳ ರಾಜತಾಂತ್ರಿಕರಿಗೆ ಲಸಿಕೆ ಪೂರೈಸಲೂ ಭಾರತ ಮುಂದಾಗಿದೆ. ಇಷ್ಟಲ್ಲದೇ, ಭಾರತದಲ್ಲಿ ನೆಲೆಸಿರುವ ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳು ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳ ಸಿಬ್ಬಂದಿಗೂ ಲಸಿಕೆ ನೀಡುವ ಪ್ರಸ್ತಾವ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 350 ಕೋಟಿ ಡೋಸ್‌ ತಯಾರಿಕೆ
ಕೋವಿಡ್ ಲಸಿಕೆ ಉತ್ಪಾದನೆಯಲ್ಲಿಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಇದೆ. 2021ರಲ್ಲಿ ಭಾರತದಲ್ಲಿ ಸುಮಾರು 350 ಕೋಟಿ ಡೋಸ್ ಲಸಿಕೆ ತಯಾರಿ ಆಗಬಹುದು ಎಂದು ಸಲಹಾ ಸಂಸ್ಥೆ ಡೆಲಾಯ್ಟ್ ಅಭಿಪ್ರಾಯಪಟ್ಟಿದೆ. ಅಮೆರಿಕ ಸುಮಾರು 400 ಕೋಟಿ ಡೋಸ್ ತಯಾರಿಸಬಹುದು ಎಂದು ಅಂದಾಜಿಸಿದೆ. ಜಾಗತಿಕ ಬೇಡಿಕೆ ಪೂರೈಸಲು ಭಾರತದ ಕಂಪನಿಗಳು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ತಯಾರಿ ನಡೆಸುತ್ತಿವೆ.

ಯಾವ ದೇಶಗಳಿಗೆ ನೆರವಿನ ಲಸಿಕೆ
ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ಸೀಷೆಲ್ಸ್, ಶ್ರೀಲಂಕಾ, ಬಹರೇನ್, ಒಮಾನ್, ಅಫ್ಗಾನಿಸ್ತಾನ, ಬಾರ್ಬಡೋಸ್ ಮತ್ತು ಡೊಮೊನಿಕಾ

ಯಾವ ದೇಶಗಳಿಗೆ ಲಸಿಕೆ ಮಾರಾಟ
ಬ್ರೆಜಿಲ್, ಮೊರಾಕ್ಕೊ, ಬಾಂಗ್ಲಾದೇಶ, ಮ್ಯಾನ್ಮಾರ್, ಈಜಿಪ್ಟ್, ಅಲ್ಜೀರಿಯಾ, ದಕ್ಷಿಣ ಆಫ್ರಿಕಾ, ಕುವೈತ್, ಯುಎಇ ಹಾಗೂ ಇತರೆ ದೇಶಗಳು

ಲಸಿಕೆ ತಯಾರಿಕಾ ಸಾಮರ್ಥ್ಯ

ಕೋವಿಶೀಲ್ಡ್: 7–10 ಕೋಟಿ ಡೋಸ್/ತಿಂಗಳಿಗೆ

ಕೋವ್ಯಾಕ್ಸಿನ್: 15 ಕೋಟಿ ಡೋಸ್/ವರ್ಷಕ್ಕೆ

(ಕೇಂದ್ರ ಸರ್ಕಾರದ ಬಯೊಟೆಕ್ನಾಲಜಿ ಇಲಾಖೆಯು ರಾಜ್ಯಸಭೆಗೆ ನೀಡಿದ ಮಾಹಿತಿ)

* ಭಾರತದಲ್ಲಿ ಎರಡು ಕಂಪನಿಗಳು ಸದ್ಯ ಲಸಿಕೆಯ ಉತ್ಪಾದನೆ ಮತ್ತು ಪೂರೈಕೆ ಮಾಡುತ್ತಿವೆ.

*ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿವೆ.

*ಕೋವ್ಯಾಕ್ಸಿನ್ ಲಸಿಕೆ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಭಾರತ್ ಬಯೊಟೆಕ್ ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಅಭಿವೃದ್ಧಿಯಾಗಿದೆ.

ಆಧಾರ: ವಿದೇಶಾಂಗ ಸಚಿವಾಲಯ ವೆಬ್‌ಸೈಟ್, ರಾಯಿಟರ್ಸ್‌, ಗವಿ, ಪಿಟಿಐ, ದಿ ಡಾನ್

ವರದಿ: ಹಮೀದ್ ಕೆ., ಜಯಸಿಂಹ ಆರ್., ಅಮೃತಕಿರಣ್ ಬಿ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT