ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಸಿಲಿಕಾನ್‌ ವ್ಯಾಲಿಯಲ್ಲಿ ಬಿರುಗಾಳಿ: ನೌಕರಿಗೆ ಕತ್ತರಿ

Last Updated 13 ನವೆಂಬರ್ 2022, 19:53 IST
ಅಕ್ಷರ ಗಾತ್ರ

‘ಮೆಟಾಕ್ಕೆ ಸೇರಿಕೊಳ್ಳುವುದಕ್ಕಾಗಿ ಎರಡು ದಿನಗಳ ಹಿಂದೆ ನಾನು ಕೆನಡಾಕ್ಕೆ ಸ್ಥಳಾಂತರಗೊಂಡೆ. ಕೆಲಸಕ್ಕೆ ಸೇರಿದ ಎರಡೇ ದಿನಗಳಲ್ಲಿ ನನ್ನ ಪಯಣ ಕೊನೆಗೊಂಡಿತು. ಭಾರಿ ಉದ್ಯೋಗ ಕಡಿತವು ನನ್ನನ್ನೂ ಬಾಧಿಸಿದೆ. ಈಗ, ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿರುವ ಎಲ್ಲರ ಬಗ್ಗೆಯೂ ನನಗೆ ಮರುಕ ಇದೆ. ನನ್ನ ಭವಿಷ್ಯ ಏನು? ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಏನೂ ಗೊತ್ತಿಲ್ಲ. ಮುಂದೆ ಏನಾಗಲಿದೆ ಎಂಬುದನ್ನಷ್ಟೇ ಎದುರು ನೋಡುತ್ತಿದ್ದೇನೆ. ಯಾವುದೇ ಹುದ್ದೆ ಅಥವಾ ಸಾಫ್ಟ್‌ವೇರ್‌ ಎಂಜಿನಿಯರ್‌ ನೇಮಕಾತಿ ಕುರಿತು ತಿಳಿದರೆ ನನಗೆ ಮಾಹಿತಿ ಕೊಡಿ (ಭಾರತ ಅಥವಾ ಕೆನಡಾ)’. ಹಿಮಾಂಶು ವಿ. ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡ ಮಾತು ಇದು. ಇದು ಇವರೊಬ್ಬರ ಕತೆಯಲ್ಲ, ಇಂತಹ ನೋವನ್ನು ಸಿಲಿಕಾನ್‌ ವ್ಯಾಲಿಯ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿ, ಈಗ ಕೆಲಸ ಕಳೆದುಕೊಂಡ ಹಲವರು ತೋಡಿಕೊಂಡಿದ್ದಾರೆ.

ತಂತ್ರಜ್ಞಾನ ಕ್ಷೇತ್ರ ಎಂಬುದು ಅಕ್ಷಯ ಪಾತ್ರೆ ಎಂಬ ಮಿಥ್ಯೆ ಒಡೆದು ಹೋಗಿದೆ. ಅಮೆರಿಕದ ಸಿಲಿಕಾನ್‌ ವ್ಯಾಲಿಯ ಪ್ರತಿಷ್ಠಿತ ಕಂಪನಿಗಳೆಲ್ಲವೂ ತಮ್ಮ ನೌಕರರನ್ನು ಹೊರಗಟ್ಟುತ್ತಿವೆ. ನೇಮಕಾತಿಯನ್ನು ಸ್ಥಗಿತಗೊಳಿಸಿವೆ. ಯುವ ವೃತ್ತಿಪರರು ತತ್ತರಿಸಿದ್ದಾರೆ.

ಫೇಸ್‌ಬುಕ್‌ನ ಮಾತೃಸಂಸ್ಥೆ ‘ಮೆಟಾ ಫ್ಲಾಟ್‌ಪಾರ್ಮ್ಸ್‌’ ತನ್ನ ನೌಕರರಲ್ಲಿ ಶೇ 13ರಷ್ಟು ಮಂದಿಯನ್ನು ಮನೆಗೆ ಕಳುಹಿಸಿದೆ. 11 ಸಾವಿರಕ್ಕೂ ಹೆಚ್ಚು ಮಂದಿ ನೌಕರಿ ಕಳೆದುಕೊಂಡು ಅತಂತ್ರರಾಗಿದ್ದಾರೆ. ಮೆಟಾ ಪ್ಲಾಟ್‌ಫಾರ್ಮ್ಸ್‌ನ ಅಧ್ಯಕ್ಷ ಮಾರ್ಕ್ ಜುಕರ್‌ಬರ್ಗ್‌ ಅವರು ಕಳೆದ ಬುಧವಾರ ಕಂಪನಿಯ ನೌಕರರಿಗೆ ಕಳುಹಿಸಿದ ಸಂದೇಶ ಹೀಗಿತ್ತು:

‘ಮೆಟಾದ ಇತಿಹಾಸದಲ್ಲಿಯೇ ಅತ್ಯಂತ ಕಷ್ಟಕರವಾದ ಕೆಲವು ಬದಲಾವಣೆಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಂಪನಿಯ ನೌಕರ ಬಲವನ್ನು ಶೇ 13ರಷ್ಟು ಕುಗ್ಗಿಸಲು ತೀರ್ಮಾನಿಸಿದ್ದೇನೆ. ಕೆಲವು ಖರ್ಚು ವೆಚ್ಚಗಳನ್ನು ಕಡಿತ ಮತ್ತು ಇತರ ಹೆಚ್ಚುವರಿ ಕ್ರಮಗಳ ಮೂಲಕ ಕಂಪನಿಯು ಇನ್ನಷ್ಟು ದಕ್ಷವಾಗಲಿದೆ. ನೇಮಕಾತಿ ಸ್ಥಗಿತವು ಈ ತ್ರೈಮಾಸಿಕದಲ್ಲಿಯೂ ಮುಂದುವರಿಯಲಿದೆ. ಕಂಪನಿಯು ಈಗಿನ ಸ್ಥಿತಿಗೆ ಬಂದಿರುವುದರ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಇದು ಎಲ್ಲರಿಗೂ ಕಷ್ಟದ ಸಂದರ್ಭ ಎಂಬುದು ನನಗೆ ಗೊತ್ತಿದೆ. ಬಾಧಿತರಾದ ಎಲ್ಲರ ಕ್ಷಮೆ ಯಾಚಿಸುತ್ತೇನೆ’ ಎಂಬ ಸಂದೇಶವು ಹಲವರ ಬಾಳಿಗೆ ಕತ್ತಲೆ ಕವಿಯುವಂತೆ ಮಾಡಿದೆ.

ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಈಗಿನ ಸ್ಥಿತಿಗೆ ಪರೋಕ್ಷವಾಗಿ ಕೋವಿಡ್‌ ಕಾರಣ ಎಂದು ಹೇಳಲಾಗುತ್ತಿದೆ. ಕೋವಿಡ್‌ನಿಂದಾದ ಲಾಕ್‌ಡೌನ್‌ ಮತ್ತು ಸಂಚಾರ ನಿರ್ಬಂಧ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಹೆಚ್ಚಿಸಿದವು. ‘ಮನೆಯಿಂದಲೇ ಕೆಲಸ’ ಎಂಬ ಪರಿಕಲ್ಪನೆ ಕೂಡ ತಂತ್ರಜ್ಞಾನ ಕಂಪನಿಗಳ ವಿಸ್ತರಣೆಗೆ ಅನುವು ಮಾಡಿಕೊಟ್ಟಿತು. ಅದುವೇ ವಾಸ್ತವ ಎಂದು ಭಾವಿಸಿದ ಹಲವು ಕಂಪನಿಗಳು ವಿಸ್ತರಣೆಗಾಗಿ ವಿಪರೀತ ಹೂಡಿಕೆ ಮಾಡಿವೆ. ನೇಮಕಾತಿಯನ್ನು ಕೂಡ ಎಗ್ಗಿಲ್ಲದೆ ಮಾಡಲಾಯಿತು. ಆದರೆ, ಈಗ ಜಗತ್ತು ಬಹುಪಾಲು ಕೋವಿಡ್‌ಪೂರ್ವದ ಸ್ಥಿತಿಗೆ ಮರಳಿದೆ. ಕೆಲಸವು ಮನೆಯಿಂದ ಕಚೇರಿಗೆ ಸ್ಥಳಾಂತರಗೊಂಡಿದೆ. ತಂತ್ರಜ್ಞಾನ, ಇ–ಕಾಮರ್ಸ್‌ ಇತ್ಯಾದಿ ಮೇಲಿನ ಅವಲಂಬನೆ ತಗ್ಗಿದೆ.

ಇದರ ಜೊತೆಗೆ ಜಗತ್ತು ಮತ್ತೊಂದು ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ ಎಂಬ ಭೀತಿಯೂ ಮೂಡಿದೆ.‘ಆರ್ಥಿಕ ಹಿಂಜರಿತ ಉಂಟಾಗಲಿದೆಯೇ ಎಂಬ ಪ್ರಶ್ನೆ ಈಗ ಇಲ್ಲ. ಆರ್ಥಿಕ ಹಿಂಜರಿತ ಯಾವಾಗ ಕಾಣಿಸಿಕೊಳ್ಳಲಿದೆ ಎಂಬುದಷ್ಟೇ ಈಗಿರುವ ಪ್ರಶ್ನೆ’ ಎಂದು ಹಲವು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಜಗತ್ತಿನ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರವನ್ನು ಸತತವಾಗಿ ಏರಿಸಿ, ಹಣದುಬ್ಬರನ್ನು ನಿಯಂತ್ರಿಸಲು ಏದುಸಿರು ಬಿಡುತ್ತಿವೆ. ಹಾಗಾಗಿಯೇ 2023ರಲ್ಲಿ ಜಗತ್ತು ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಅಮೆರಿಕ, ಭಾರತ, ಬ್ರಿಟನ್‌ ಮುಂತಾದ ಪ್ರಮುಖ ಆರ್ಥಿಕತೆಗಳು ಹಣದುಬ್ಬರದಿಂದ ಬಸವಳಿದಿವೆ. ಅಮೆರಿಕವು ಸತತ ಎರಡು ತ್ರೈಮಾಸಿಕಗಳಲ್ಲಿ ನಕಾರಾತ್ಮಕ ಪ್ರಗತಿ ದಾಖಲಿಸಿದೆ. ಅಮೆರಿಕದಲ್ಲಿ ಗ್ರಾಹಕ ವಸ್ತುಗಳ ಬೇಡಿಕೆ ಪಾತಾಳಕ್ಕೆ ಕುಸಿದಿದೆ. ಅಲ್ಲಿ ಈಗ ಹಣದುಬ್ಬರವು 7.7ರಷ್ಟಿದೆ. ಕಳೆದ ತಿಂಗಳು ಇದು ಶೇ 8.2ರಷ್ಟಿತ್ತು. ಇದು 40 ವರ್ಷಗಳಲ್ಲೇ ಗರಿಷ್ಠವಾಗಿದೆ.

ಜಗತ್ತು ಆರ್ಥಿಕ ಹಿಂಜರಿತದತ್ತ ಸಾಗುವುದಕ್ಕೆ ಕೋವಿಡ್ ಸಾಂಕ್ರಾಮಿಕವೂ ಒಂದು ಕಾರಣ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಸಾಂಕ್ರಾಮಿಕ ಸಂದರ್ಭದಲ್ಲಿ ಆದ ಉದ್ಯೋಗ ನಷ್ಟ, ಉತ್ಪಾದನೆ ಕಡಿತ, ಆದಾಯ ಕುಸಿತದ ಪರಿಣಾಮವು ಈಗ ಕಾಣಿಸಿಕೊಳ್ಳುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಪರಿಣಾಮವೂ ಇದೆ. ಹೀಗಾಗಿಯೇ ಅಮೆರಿಕ ಮತ್ತು ಇತರೆಡೆಗಳ ತಂತ್ರಜ್ಞಾನ ಕಂಪನಿಗಳು ವೆಚ್ಚ ಕಡಿತದ ಭಾಗವಾಗಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಮುಂದೆ ಬರಬಹುದಾದ ಆರ್ಥಿಕ ಹಿಂಜರಿತವು ಎಷ್ಟು ತೀವ್ರವಾಗಿರಲಿದೆ ಎಂಬುದನ್ನು ಈಗ ಅಂದಾಜಿಸಲು ಆಗದು ಎಂಬುದು ಹಲವು ಅರ್ಥಶಾಸ್ತ್ರಜ್ಞರ ಅಭಿಮತ.

ಉದ್ಯೋಗಿಗಳ ಜತೆ ಮಸ್ಕ್‌ ಚೆಲ್ಲಾಟ
ಪ್ರಮುಖ ಸಾಮಾಜಿಕ ಜಾಲತಾಣವಾದ ‘ಟ್ವಿಟರ್’ ಖರೀದಿ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ವಿಶ್ವದ ಅತಿ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಮಾಡಿದ ಮೊದಲ ಕೆಲಸವೆಂದರೆ, ಸಂಸ್ಥೆಯ ಸಿಇಒ ಪರಾಗ್ ಅಗ್ರವಾಲ್‌, ಸಿಎಫ್‌ಒ ನೆಡ್ ಸೆಗೆಲ್, ನೀತಿ ಮುಖ್ಯಸ್ಥೆ ವಿಜಯಾ ಗಡ್ಡೆ ಸೇರಿದಂತೆ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಆದೇಶ ಹೊರಡಿಸಿದ್ದು. ಭಾರತದ ಸುಮಾರು 300 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.ಇದಾದ ಬಳಿಕ, ಅತ್ಯಗತ್ಯದ ಕೆಲಸಗಳನ್ನು ನಿರ್ವಹಿಸಲು ಕೆಲಸಗಾರರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ, ತಕ್ಷಣವೇ ಕೆಲವು ಉದ್ಯೋಗಿಗಳನ್ನು ವಾಪಸ್ ಬರುವಂತೆ ಸೂಚಿಸಲಾಯಿತು. ನ.4ರಂದು ಕೆಲಸದಿಂದ ತೆಗೆಯುವ ಆದೇಶ ಹೊರಡಿಸುವ ಮುನ್ನ, ಸಂಸ್ಥೆಯಲ್ಲಿ ಒಟ್ಟು 7,500 ಜನರು ಕೆಲಸ ಮಾಡುತ್ತಿದ್ದರು. ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಆಟೊಪೈಲಟ್ ವಿಭಾಗದ ಶೇ 10ರಷ್ಟು ನೌಕರರನ್ನೂ ತೆಗೆದುಹಾಕಲು ನಿರ್ಧರಿಸಲಾಗಿದೆ.

ಶೇ 13ರಷ್ಟು ಉದ್ಯೋಗಿಗಳು ಮನೆಗೆ
ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ತನ್ನ 11,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಚೇರಿಯಿಂದ ಹೊರನಡೆಯುವಂತೆ ಸೂಚಿಸಿ, ತಂತ್ರಜ್ಞಾನ ವಲಯದಲ್ಲಿ ಸಂಚಲನ ಸೃಷ್ಟಿಸಿತು. 18 ವರ್ಷಗಳ ಸಂಸ್ಥೆಯ ಇತಿಹಾಸದಲ್ಲಿ ಉದ್ಯೋಗಿಗಳನ್ನು ತೆಗೆದುಹಾಕಿದ್ದು ಇದು ಮೊದಲು. ಮೆಟಾದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಶೇ 13ರಷ್ಟು ಉದ್ಯೋಗಿಗಳ ಕೆಲಸ ಕಳೆದುಕೊಂಡಿದ್ದು, ಇದು ಅಮೆರಿಕದ ಐಟಿ ಕಂಪನಿಗಳಲ್ಲೇ ಅತಿದೊಡ್ಡ ಉದ್ಯೋಗನಷ್ಟ ಎನಿಸಿಕೊಂಡಿದೆ.

ಅರ್ಧದಷ್ಟು ನೌಕರರಿಗೆ ಕೆಲಸವಿಲ್ಲ
‘ಸ್ನ್ಯಾಪ್‌ಚಾಟ್’ ಆ್ಯಪ್ ಅಭಿವೃದ್ಧಿಪಡಿಸಿರುವ ‘ಸ್ನ್ಯಾಪ್’ ಸಂಸ್ಥೆಯು ಇದೇ ಆಗಸ್ಟ್‌ನಲ್ಲಿ ಶೇ 20ರಷ್ಟು ಉದ್ಯೋಗ ಕಡಿತದ ಘೋಷಣೆ ಮಾಡಿತ್ತು. ಸಂಸ್ಥೆಯಲ್ಲಿ 6,400 ಜನರು ಕೆಲಸ ಮಾಡುತ್ತಿದ್ದು, ಸಂಸ್ಥೆಯ ಷೇರುಗಳು ಮಾರುಕಟ್ಟೆಯಲ್ಲಿ ಶೇ 80ರಷ್ಟು ಕುಸಿತ ಕಂಡಿರುವುದೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಹೇಳಿಕೆ ನೀಡಿತ್ತು. ಸಂಸ್ಥೆಯು ದೀರ್ಘಕಾಲ ಉಳಿಯಬೇಕಾದರೆ ಈ ಕ್ರಮ ಅನಿವಾರ್ಯ ಎಂದು ಉದ್ಯೋಗಿಗಳಿಗೆ ಕಳುಹಿಸಿದ್ದ ಇಮೇಲ್‌ನಲ್ಲಿ ವಿವರಣೆ ನೀಡಿತ್ತು.

ತಂತ್ರಜ್ಞಾನ ಕ್ಷೇತ್ರದ ಬೃಹತ್‌ ಕಂಪನಿಯಿಂದಲೂ ಕೆಲಸಕ್ಕೆ ಕತ್ತರಿ
ತಂತ್ರಜ್ಞಾನ ಕ್ಷೇತ್ರದ ಬೃಹತ್‌ ಕಂಪನಿ ಮೈಕ್ರೊಸಾಫ್ಟ್‌ ಉದ್ಯೋಗಿಗಳ ಮರು ಹೊಂದಾಣಿಕೆ ಉದ್ದೇಶದಿಂದ ಕೆಲವರನ್ನು ಕೆಲಸದಿಂದ ತೆಗೆಯುವ ನಿರ್ಧಾರವನ್ನು ಪ್ರಕಟಿಸಿದೆ. 1.80 ಲಕ್ಷ ಜನರು ಸಂಸ್ಥೆಯ ಉದ್ಯೋಗಿ– ಗಳಾಗಿದ್ದು ಇದರಲ್ಲಿ ಶೇ 1ರಷ್ಟು ಜನರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಈ ಪೈಕಿ ಸರಿಸುಮಾರು 1,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ‘ಆಕ್ಸಿಯೋಸ್’ ವರದಿ ಮಾಡಿದೆ.

ಚಿಪ್ ಕಂಪನಿಯ ಕಠಿಣ ಕ್ರಮ
ಕಂಪ್ಯೂಟರ್ ಚಿಪ್ ತಯಾರಿಕಾ ಕಂಪನಿ ಇಂಟೆಲ್,ವೆಚ್ಚ ಕಡಿತ ಉದ್ದೇಶದಿಂದ ತನ್ನ ಶೇ 20ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋವಿಡ್‌ ನಂತರ ಉಂಟಾದ ಆರ್ಥಿಕ ಬಿಕ್ಕಟ್ಟು ಸರಿಪಡಿಸಿಕೊಳ್ಳಲು ಇಂಟೆಲ್ ಈ ನಿರ್ಧಾರಕ್ಕೆ ಬಂದಿದೆ.

ಹಣಕಾಸು ಸಂಸ್ಥೆಯೂ ಹೊರತಲ್ಲ
ಅಮೆಜಾನ್, ಉಬರ್‌ನಂತಹ ಸಂಸ್ಥೆಗಳಿಗೆ ಪಾವತಿ ಪ್ರಕ್ರಿಯೆ ಸಾಫ್ಟ್‌ವೇರ್ ಒದಗಿಸುತ್ತಿರುವ ಐರಿಷ್–ಅಮೆರಿಕನ್ ಹಣಕಾಸು ಸೇವಾ ಸಂಸ್ಥೆಯಾದ ‘ಸ್ಟ್ರಿಪ್’ ಸಹ ತನ್ನ ಶೇ 14ರಷ್ಟು ಉದ್ಯೋಗಿಗಳಿಗೆ (ಸುಮಾರು 7,000) ಮನೆ ದಾರಿ ತೋರಿಸಿದೆ. ಇದಕ್ಕೆ ಹಣದುಬ್ಬರ, ಅಧಿಕ ಬಡ್ಡಿದರಗಳ ಕಾರಣಗಳನ್ನು ಕಂಪನಿ ಪಟ್ಟಿ ಮಾಡಿದೆ.

‘ಉತ್ತಮ’ವಾಗದ ನೌಕರರ ಬದುಕು
ಅಮೆರಿಕ ಮೂಲದ ಹಣಕಾಸು ಸೇವಾ ಸಂಸ್ಥೆ ಬೆಟರ್ ಕಳೆದ ವರ್ಷ ಒಂದೇ ಝೂಮ್ ಮೀಟಿಂಗ್‌ನಲ್ಲಿ 900 ಉದ್ಯೋಗಿಗಳನ್ನು ತೆಗೆದು ಹಾಕಿತ್ತು. ಈ ವರ್ಷ 3000ಕ್ಕೂ ಅಧಿಕ ಜನರಿಗೆ ಕೆಲಸ ಇಲ್ಲ ಎಂದು ತಿಳಿಸಿದೆ. ಕಾರ್ಯಕ್ಷಮತೆ ಸರಿಯಿಲ್ಲ ಎಂಬ ಕಾರಣ ನೀಡಿ ಉದ್ಯೋಗಿಗಳನ್ನು ವಜಾಗೊಳಿಸಿದೆ. 2021ರ ಡಿಸೆಂಬರ್ ಬಳಿಕ ತನ್ನ ಶೇ 50ರಷ್ಟು ಸಿಬ್ಬಂದಿಯನ್ನು ಕಂಪನಿ ತೆಗೆದುಹಾಕಿದೆ.

ಉದ್ಯೋಗಿಗಳಿಗೆ ಕೈಕೊಟ್ಟ ‘ಲಿಫ್ಟ್’
‘ಇ–ಟ್ಯಾಕ್ಸಿ’ ಎಂಬ ಆ್ಯಪ್‌ ಮೂಲಕ ಕಾರ್ಯಾಚರಣೆ ನಡೆಸುವಸಾರಿಗೆ ಸೇವಾ ಸಂಸ್ಥೆ ಲಿಫ್ಟ್ ತನ್ನ 683 ಉದ್ಯೋಗಿಗಳಿಗೆ ಕೈ ಕೊಟ್ಟಿದೆ. ಅಂದರೆ ಸಂಸ್ಥೆಯ ಶೇ 13ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ನೇಮಕಾತಿಗೆ ತಡೆ ಪ್ರಕಟಿಸಿತ್ತು.

ಕೆಲಸ ಕಳೆದ ಯುದ್ಧ
ವೋಗ್, ವ್ಯಾನಿಟಿ ಫೇರ್‌ನಂತಹ ಜನಪ್ರಿಯ ಪ್ರಕಟಣೆಗಳ ಮಾತೃಸಂಸ್ಥೆ ‘ಕೊಂಡೆ ನಾಸ್ಟ್’ ಮಾಧ್ಯಮ ಸಂಸ್ಥೆಯು ರಷ್ಯಾದ ವೋಗ್‌ ಮತ್ತು ಇತರ ಪ್ರಕಟಣೆಗಳನ್ನು ರಷ್ಯಾದಲ್ಲಿ ನಿಲ್ಲಿಸಿದೆ. ಇದಕ್ಕಾಗಿ ಕೆಲಸ ಮಾಡುತ್ತಿದ್ದ ಶೇ 90ರಷ್ಟು ಉದ್ಯೋಗಿಗಳನ್ನು ತೆಗೆದುಹಾಕಲು ಮುಂದಾಗಿದೆ. ಇದಕ್ಕೆ ರಷ್ಯಾ–ಉಕ್ರೇನ್ ಯುದ್ಧದ ಕಾರಣ ನೀಡಿದೆ.

ಹೊಸ ನೇಮಕಾತಿಗೆ ತಡೆ
ಇ–ಮಾರುಕಟ್ಟೆಯ ಬೃಹತ್‌ ಕಂಪನಿ ಅಮೆಜಾನ್, ಲಾಭ ಇರುವ ವಿಭಾಗಗಳಿಗೆ ನೌಕರರನ್ನು ವರ್ಗ ಮಾಡಿ, ಮರು ಹೊಂದಾಣಿಕೆ ಮಾಡಿದೆ. ಕೆಲವು ವಿಭಾಗಗಳನ್ನು ಮುಚ್ಚಿದೆ. ಹೊಸ ನೇಮಕಾತಿಗಳಿಗೂ ತಡೆ ನೀಡಿದೆ. ಪ್ರಮುಖ ತಂತ್ರಜ್ಞಾನ ಕಂಪನಿ ಆ್ಯಪಲ್, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಹೊರತುಪಡಿಸಿ, ಉಳಿದ ನೇಮಕಾತಿ ಸ್ಥಗಿತಗೊಳಿಸಿದೆ.

ಬೆಳೆಯುತ್ತಲೇ ಇದೆ ಪಟ್ಟಿ
ನೌಕರರನ್ನು ತೆಗೆದುಹಾಕುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪಟ್ಟಿಗೆ ಪ್ರತಿದಿನವೂ ಹೊಸ ಕಂಪನಿ ಸೇರುತ್ತಿದೆ. ಮಾರ್ಗನ್ ಸ್ಟ್ಯಾನ್ಲಿ, ಜಾನ್ಸನ್ ಅಂಡ್ ಜಾನ್ಸನ್, ವಾರ್ನರ್ ಬ್ರದರ್ಸ್ ಡಿಸ್ಕವರಿ, ಬಿಯಾಂಡ್ ಮೀಟ್,ಇವಿ ನವೋದ್ಯಮ ಅರೈವಲ್ ಮೊದಲಾದ ಸಂಸ್ಥೆಗಳು ಮುಂದಿನ ದಿನಗಳಲ್ಲಿ ನೌಕರರ ಉದ್ಯೋಗಕ್ಕೆ ಕತ್ತರಿ ಹಾಕಲಿವೆ.

ಆಧಾರ: ವಿಶ್ವಬ್ಯಾಂಕ್‌ ಜಾಲತಾಣ, ಮೆಟಾ ಜಾಲತಾಣ, ಇನ್‌ವೆಂಟಿಯಾ, ಪಿಟಿಐ, ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT