ಸೋಮವಾರ, ಮಾರ್ಚ್ 8, 2021
20 °C

ಆಳ–ಅಗಲ: ರಾಜ್ಯದ ಮಹಿಳೆಯರಲ್ಲಿ ಕರಗುತ್ತಿದೆ ಅಪೌಷ್ಟಿಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಮಹಿಳೆಯರ ಅಪೌಷ್ಟಿಕತೆ ಪ್ರಮಾಣ ತಗ್ಗುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೊಗ್ಯ ಸಮೀಕ್ಷಾ ವರದಿ (2019–20) ತಿಳಿಸಿದೆ. ಮಹಿಳೆಯರ ಅಪೌಷ್ಠಿಕತೆ ಪ್ರಮಾಣ ಬೆಂಗಳೂರು ಜಿಲ್ಲೆಯಲ್ಲಿ ಅತಿ ಕಡಿಮೆ ಎಂದರೆ ಶೇ 10ರಷ್ಟಿದ್ದರೆ, ಯಾದಗಿರಿ ಜಿಲ್ಲೆಯಲ್ಲಿ ಶೇ 26ರಷ್ಟಿದೆ. ಆದರೆ ಕಳೆದ ಸಮೀಕ್ಷೆಗೆ ಹೋಲಿಸಿದರೆ ಅಪೌಷ್ಠಿಕತೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

***

ಏನಿದು ಬಿಎಂಐ?
ವ್ಯಕ್ತಿಯೊಬ್ಬರ ವಯಸ್ಸು ಹಾಗೂ ಎತ್ತರಕ್ಕೆ ಅನುಗುಣವಾಗಿ ಇಂತಿಷ್ಟೇ ತೂಕ ಇರಬೇಕು ಎಂದು ನಿರ್ಣಯಿಸುವ ಮಾನದಂಡವೇ ಬಾಡಿ ಮಾಸ್ ಇಂಡೆಕ್ಸ್. ಈ ದತ್ತಾಂಶಗಳು ವ್ಯಕ್ತಿಯೊಬ್ಬ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾನೆಯೇ ಅಥವಾ ಇಲ್ಲವೇ ಎಂದು ಸ್ಪಷ್ಟವಾಗಿ ತಿಳಿಸುತ್ತವೆ.

ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 18.5 kg/m2ಗಿಂತ ಕಡಿಮೆ ಇದ್ದರೆ ಅದು ಕಡಿಮೆ ತೂಕ ಎನಿಸಿಕೊಳ್ಳುತ್ತದೆ. ಬಿಎಂಐ 18.5 ರಿಂದ 24.9kg/m2 ಇದ್ದಲ್ಲಿ ಅದು ಸಾಮಾನ್ಯ ಅಥವಾ ಆರೋಗ್ಯಕರ, 25kg/m2 ಯಿಂದ 29.9kg/m2 ವರೆಗೆ ಅಧಿಕತೂಕ ಎಂತಲೂ, 30kg/m2 ಗಿಂತ ಹೆಚ್ಚು ಇದ್ದಲ್ಲಿ ಬೊಜ್ಜು/ಸ್ಥೂಲಕಾಯ ಎಂದೂ ಕರೆಯಲಾಗುತ್ತದೆ.

* ಸಾಮಾನ್ಯಕ್ಕಿಂತ ಕಡಿಮೆ ಬಿಎಂಐ ಹೊಂದಿರುವ ಮಹಿಳೆಯರು ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ (26%) ಸಂಖ್ಯೆಯಲ್ಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ (27.4%) ಈ ಬಾರಿ ಜಿಲ್ಲೆಯಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ

* ರಾಯಚೂರು, ಉಡುಪಿ, ಕೊಪ್ಪಳ ಹಾಗೂ ಬೀದರ್‌ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ

* ಸಾಮಾನ್ಯಕ್ಕಿಂತ ಕಡಿಮೆ ಬಿಎಂಐ ಹೊಂದಿರುವ ಮಹಿಳೆಯರ ಪ್ರಮಾಣ ಅತಿಕಡಿಮೆ ಇರುವುದು ಬೆಂಗಳೂರು ನಗರದಲ್ಲಿ (ಶೇ 10). ಕಳೆದ ಬಾರಿಗೆ (ಶೇ 14) ಹೋಲಿಸಿದರೆ ಬೆಂಗಳೂರಿನ ದರ ಸಾಕಷ್ಟು ಸುಧಾರಿಸಿದೆ.

* ನಂತರದ ಸ್ಥಾನಗಳಲ್ಲಿ ಹಾಸನ, ದಕ್ಷಿಣ ಕನ್ನಡ, ರಾಮನಗರ ಹಾಗೂ ಬೆಂಗಳೂರು ಗ್ರಾಮಂತರ ಜಿಲ್ಲೆಗಳು ಇವೆ.

* ಬಹುತೇಕ ಜಿಲ್ಲೆಗಳು ಸುಧಾರಣೆ ಕಂಡಿದ್ದರೆ ರಾಯಚೂರಿನಲ್ಲಿ ಮಾತ್ರ 2015–16 ಹೋಲಿಸಿದರೆ (20.8%) ಈ ಬಾರಿ (23.3%) ಹೆಚ್ಚು ದಾಖಲಾಗಿದೆ.

ಅಪೌಷ್ಟಿಕತೆ: ಪುರುಷರ ಸಂಖ್ಯೆ ಹೆಚ್ಚಳ

ದೇಶದ ಕೆಲವು ರಾಜ್ಯಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪುರುಷರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಹಿಳೆಯರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮಹಿಳೆಯರಲ್ಲಿನ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಕೈಗೊಂಡಿರುವ ಕಾರ್ಯಕ್ರಮಗಳ ಪರಿಣಾಮವಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಕಡಿಮೆಯಾಗಿದೆ. ಆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಪುರುಷರ ಸಂಖ್ಯೆಯಲ್ಲಿ ಏರಿಕೆ ಆಗಿರುವುದರ ಬಗ್ಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಮೊದಲ ಹಂತದ ಸಮೀಕ್ಷಾ ವರದಿಯಲ್ಲಿ 20 ರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರವೇ ಅಪೌಷ್ಟಿಕತೆಯಿಂದ ಬಳಲುವವರ ಪ್ರಮಾಣದಲ್ಲಿ ಏರಿಕೆಯಾಗಿದೆ.

ರಾಜ್ಯದ ವಯಸ್ಕರಲ್ಲಿ ಬೊಜ್ಜು ಏರಿಕೆ
ರಾಜ್ಯದಲ್ಲಿ 2015-16ನೇ ಸಾಲಿಗೆ ಹೋಲಿಸಿದರೆ, 2019-20ನೇ ಸಾಲಿನಲ್ಲಿ ಅಪೌಷ್ಟಿಕತೆಯಿಂದ ಬಳಲುವವರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಎತ್ತರ-ವಯಸ್ಸಿಗೆ ಹೋಲಿಸಿದರೆ ಹೆಚ್ಚು ತೂಕವಿರುವ ಮತ್ತು ಬೊಜ್ಜಿನಿಂದ ಬಳಲುತ್ತಿರುವವರ ಪ್ರಮಾಣದಲ್ಲಿ ಏರಿಕೆಯಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಶೇ 25.6ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಬೊಜ್ಜಿನಿಂದ ಬಳಲುವವರ ಪ್ರಮಾಣ ಹೆಚ್ಚು. ನಗರ ಪ್ರದೇಶದಲ್ಲಿ ಶೇ 37.1ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪುರುಷರಲ್ಲಿ ಶೇ 25 ಮತ್ತು ನಗರ ಪ್ರದೇಶದಲ್ಲಿ ಶೇ 39.4ರಷ್ಟು ಪುರುಷರು ಬೊಜ್ಜಿನಿಂದ ಬಳಲುತ್ತಿದ್ದಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಪುರುಷರು ಹಾಗೂ ನಗರ ಪ್ರದೇಶದ ಮಹಿಳೆಯರಿಗೆ ಹೋಲಿಸಿದರೆ, ರಾಜ್ಯದ ನಗರ ಪ್ರದೇಶದ ಪುರುಷರಲ್ಲಿ ಬೊಜ್ಜಿನಿಂದ ಬಳಲುವವರ ಪ್ರಮಾಣ ಹೆಚ್ಚು ಎಂದು ಸಮೀಕ್ಷಾ ವರದಿಯ ಅಂಕಿಅಂಶಗಳು ಹೇಳುತ್ತವೆ.

ಸೊಂಟ-ನಿತಂಬ ಅನುಪಾತ ಅಪಾಯಕಾರಿಮಟ್ಟದಲ್ಲಿ
2019-20ನೇ ಸಾಲಿನ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ರಾಜ್ಯದ ಜನರ ಸೊಂಟ ಮತ್ತು ನಿತಂಬದ ಸುತ್ತಳತೆಯ ಅನುಪಾತದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಈ ಮಾಹಿತಿ ಸಂಗ್ರಹಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಈ ಮಾಹಿತಿಯನ್ನು ಸಂಗ್ರಹಿಸಿದ್ದು ಇದೇ ಮೊದಲು. ರಾಜ್ಯದ ಶೇ 45.1ರಷ್ಟು ಮಹಿಳೆಯರಲ್ಲಿ ಈ ಅನುಪಾತವು ಅತಿ ಅಪಾಯಕಾರಿಮಟ್ಟದಲ್ಲಿದೆ. ಪುರುಷರಲ್ಲಿ ಈ ಪ್ರಮಾಣ ಶೇ 38.9 ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಹೋಲಿಸಿದರೆ, ನಗರ ಪ್ರದೇಶದ ಪುರುಷರಲ್ಲಿ ಸೊಂಟ-ನಿತಂಬ ಅನುಪಾತವು ಅತಿ ಅಪಾಯಕಾರಿ ಮಟ್ಟದಲ್ಲಿ ಇರುವವರ ಪ್ರಮಾಣ ಹೆಚ್ಚು.

ಈ ಅನುಪಾತವು ಆರೋಗ್ಯಕರ ಮಟ್ಟಕ್ಕಿಂತ ಅಧಿಕವಾಗಿದ್ದರೆ, ಬೊಜ್ಜಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು