ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ವಿದ್ಯಮಾನ | ವಿಮಾನ ಅವಘಡಗಳಿಂದ ನಲುಗಿದ ನೇಪಾಳ

Last Updated 17 ಜನವರಿ 2023, 19:13 IST
ಅಕ್ಷರ ಗಾತ್ರ

ನೇಪಾಳದಲ್ಲಿ ಇದೇ ಭಾನುವಾರ ಅಪಘಾತಕ್ಕೀಡಾದ ಯೇತಿ ವಿಮಾನಯಾನ ಸಂಸ್ಥೆಯ ಎಟಿಆರ್72–500 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಜನರಲ್ಲಿ 70 ಜನರು ಮೃತಪಟ್ಟಿದ್ದಾರೆ. ಇದು 1992ರ ಬಳಿಕ ನೇಪಾಳದಲ್ಲಿ ನಡೆದ ಅತ್ಯಂತ ಭೀಕರ ವೈಮಾನಿಕ ಅವಘಡ ಎಂದು ದಾಖಲಾಗಿದೆ. ಈ ಅಪಘಾತ ನೇಪಾಳದ ಮಟ್ಟಿಗೆ ಹೊಸದೂ ಅಲ್ಲ, ಸುದೀರ್ಘ ಸಮಯದ ನಂತರ ನಡೆದದ್ದೂ ಅಲ್ಲ ಎಂಬುದು ವಾಸ್ತವ. ಕೇವಲ ಎಂಟು ತಿಂಗಳ ಹಿಂದೆಯಷ್ಟೇ ತಾರಾ ಏರ್ ಸಂಸ್ಥೆಯ ವಿಮಾನವು ಪತನವಾಗಿತ್ತು.

1946ರಿಂದ ಇಲ್ಲಿಯವರೆಗೆ 69 ವೈಮಾನಿಕ ಅವಘಡಗಳಿಗೆ ಹಿಮಾಲಯದ ಈ ಪುಟ್ಟ ದೇಶ ಸಾಕ್ಷಿಯಾಗಿದೆ. ಇವುಗಳಲ್ಲಿ 40 ಅಪಘಾತಗಳಲ್ಲಿ ಪ್ರಾಣಾಪಾಯ ಸಂಭವಿಸಿದೆ. ಉಳಿದ ಅವಘಡಗಳಲ್ಲಿ ಪ್ರಾಣಾಪಾಯ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆದರೆ, ವಿಮಾನಗಳು ಹಾಗೂ ವಿಮಾನ ನಿಲ್ದಾಣದ ರನ್‌ವೇಗಳು ಹಾನಿಗೊಂಡಿವೆ. ದೇಶದಲ್ಲಿ ಕಳೆದ 30 ವರ್ಷಗಳಲ್ಲಿ 27 ವಿಮಾನ ಅಪಘಾತಗಳು ಸಂಭವಿಸಿವೆ. ಈ ಪೈಕಿ 20 ಅಪಘಾತಗಳು ಕಳೆದ 10 ವರ್ಷಗಳಲ್ಲಿ ನಡೆದಿವೆ. ವಿಮಾನ ಅವಘಡಗಳಲ್ಲಿ ಇಲ್ಲಿಯವರೆಗೆ ನೇಪಾಳದ ಸುಮಾರು 600 ಮಂದಿ ಮೃತಪಟ್ಟಿದ್ದಾರೆ. 2000ನೇ ಇಸ್ವಿಯ ಬಳಿಕ ಮೃತಪಟ್ಟವರ ಸಂಖ್ಯೆ 350 ದಾಟಿದೆ.

1998ರಲ್ಲಿ ಸ್ಥಾಪನೆಯಾದ ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರವು ದೇಶದ ವಿಮಾನಯಾನ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. ವಿಮಾನ ಪ್ರಯಾಣ ಸುರಕ್ಷತೆಗೆ ಹೆಚ್ಚು ಶ್ರಮ ವಹಿಸಿದ್ದರೂ ಅಂತರರಾಷ್ಟ್ರೀಯ ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ತಲುಪಲು ಆಗುತ್ತಿಲ್ಲ ಎಂಬುದು ವಾಸ್ತವ.

ವೈಮಾನಿಕ ಸುರಕ್ಷತೆಯ ಕಾರಣ ಒಡ್ಡಿ, ತಮ್ಮ ವಾಯುಗಡಿ ಪ್ರವೇಶಿಸದಂತೆ ಐರೋಪ್ಯ ಒಕ್ಕೂಟ ದೇಶಗಳು ನೇಪಾಳದಿಂದ ಕಾರ್ಯಾಚರಣೆ ನಡೆಸುವ ವಿಮಾನಗಳಿಗೆ 2013ರಲ್ಲೇ ನಿರ್ಬಂಧ ವಿಧಿಸಿದ್ದವು. ಇಲ್ಲಿಯವರೆಗೂ ಈ ನಿರ್ಬಂಧವನ್ನು ತೆರವು ಮಾಡಿಸಲು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಫಲ ಸಿಕ್ಕಿಲ್ಲ. ಸುರಕ್ಷತೆಯ ಮಾನದಂಡಗಳನ್ನು ಪೂರೈಸದ ಕಾರಣ, ಈ ನಿರ್ಬಂಧ ಮುಂದುವರಿದಿದೆ.

ರಾಜಧಾನಿ ಕಠ್ಮಂಡುವಿನಿಂದ ಪ್ರವಾಸಿ ನಗರ ಪೊಖರಾಗೆ ತೆರಳುವ ಮಾರ್ಗದಲ್ಲಿ ಪತನವಾದ ಯೇತಿ ಸಂಸ್ಥೆಯ ವಿಮಾನವು 15 ವರ್ಷಗಳಿಂದ ಸೇವೆಯಲ್ಲಿದೆ. ಕಾರ್ಯಾಚರಣೆಗೆ ಯೋಗ್ಯವಾಗಿದ್ದರೂ ಅಪಘಾತಕ್ಕೆ ಒಳಗಾಗಿರುವುದು ನಿರ್ವಹಣೆಯಲ್ಲಿರುವ ನ್ಯೂನತೆಯನ್ನು ತೋರಿಸುತ್ತದೆ. ಬಹುತೇಕ ವಿಮಾನ ಅಪಘಾತಗಳಲ್ಲಿ ನಿರ್ವಹಣೆಯ ಲೋಪವೇ ಎದ್ದು ಕಾಣುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

‘ಗಿರಿ–ಕಂದರಗಳದ್ದೇ ಸಮಸ್ಯೆ’
ಅತಿ ಹೆಚ್ಚು ವಿಮಾನ ಅಪಘಾತಗಳು ನಡೆದ ದೇಶಗಳಲ್ಲಿ ನೇಪಾಳ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ವಿಶ್ವದ ಅತ್ಯಂತ ಎತ್ತರದ 14 ಶಿಖರಗಳಲ್ಲಿ ಎಂಟು ಶಿಖರಗಳು ನೇಪಾಳದಲ್ಲೇ ಇವೆ. ಇವಲ್ಲದೆ, ಹಿಮದಿಂದ ಆವೃತವಾದ ಸಾವಿರಾರು ಪರ್ವತಗಳು ಮತ್ತು ಕಣಿವೆಗಳು ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಭೂಮಿ ಮೇಲಿನ ಸ್ವರ್ಗವೆಂಬಂತೆ ಕಾಣುವ ಈ ಗಿರಿ–ಕಂದರಗಳು, ವಿಮಾನಗಳು ಹೆಚ್ಚು ಅಪಘಾತಕ್ಕೆ ಈಡಾಗುವ ದೇಶ ಎಂಬ ಕುಖ್ಯಾತಿಯನ್ನೂ ನೇಪಾಳಕ್ಕೆ ತಂದುಕೊಟ್ಟಿವೆ. ನೇಪಾಳದಲ್ಲಿ ವಿಮಾನಯಾನ ಕಾರ್ಯಾಚರಣೆಯ ಸವಾಲುಗಳನ್ನು ಟ್ರಾವೆಲ್‌ನೇಪಾಳ್‌ ಸಂಸ್ಥೆಯ ಸುರಕ್ಷತಾ ಪರಿಶೋಧನಾ ವರದಿಯಲ್ಲಿ ದಾಖಲಿಸಲಾಗಿದೆ.

ನೇಪಾಳದ ಬಹುತೇಕ ನಗರಗಳು ಹಿಮಪರ್ವತಗಳ ಕಣಿವೆ ಪ್ರದೇಶಗಳಲ್ಲಿ ಇವೆ. ಇಕ್ಕಟ್ಟಾದ ಪ್ರದೇಶದಲ್ಲಿನ ವಿಮಾನ ನಿಲ್ದಾಣಗಳ ರನ್‌ವೇ ಬಹಳ ಚಿಕ್ಕವು. ದೊಡ್ಡ ವಿಮಾನಗಳು ಲ್ಯಾಂಡ್‌ ಆಗಲು ಮತ್ತು ಟೇಕ್‌ಆಫ್‌ ಆಗಲು ಅಗತ್ಯವಿರುವಷ್ಟು ದೊಡ್ಡ ರನ್‌ವೇಗಳ ನಿರ್ಮಾಣ ಸಾಧ್ಯವಿಲ್ಲ. ದೇಶದಲ್ಲೇ ಅತ್ಯಂತ ದೊಡ್ಡ ವಿಮಾನ ನಿಲ್ದಾಣ ಎನಿಸಿರುವ ಕಠ್ಮಂಡು ಮತ್ತು ಪೊಖರಾ ವಿಮಾನ ನಿಲ್ದಾಣಗಳಲ್ಲೂ ದೊಡ್ಡ ವಿಮಾನಗಳನ್ನು ಇಳಿಸಲು ಸಾಧ್ಯವಿಲ್ಲ. ಹೀಗಾಗಿ ನೇಪಾಳದ ಯಾವ ವಿಮಾನಯಾನ ಸಂಸ್ಥೆಯೂ ದೊಡ್ಡ ವಿಮಾನಗಳನ್ನು ಹೊಂದಿಲ್ಲ ಎಂಬುದನ್ನು ವರದಿಯಲ್ಲಿ ಗುರುತಿಸಲಾಗಿದೆ.

ನೇಪಾಳದ ಪ್ರತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಮುನ್ನ ವಿಮಾನಗಳು ಯಾವುದಾದರೂ ಒಂದು ಗಿರಿ–ಕಂದರದ ಮೂಲಕವೇ ಪ್ರವೇಶಿಸಬೇಕು. ಟೇಕ್‌ಅಫ್‌ ಸಂದರ್ಭದಲ್ಲೂ ಗಿರಿ–ಕಂದರಗಳ ಮೂಲಕವೇ ಆಗಸಕ್ಕೆ ಏರಬೇಕು. ಇಂತಹ ಗಿರಿ ಕಂದರಗಳು ತೀರಾ ನೇರವಾಗಿ ಏನೂ ಇಲ್ಲ. ಬದಲಿಗೆ ಲ್ಯಾಂಡ್‌ ಮತ್ತು ಟೇಕ್‌ಆಫ್‌ ಸಂದರ್ಭದಲ್ಲಿ ಕಂದರಗಳಲ್ಲೇ ವಿಮಾನಗಳು ಪದೇ–ಪದೇ ದಿಕ್ಕು ಬದಲಿಸಬೇಕಾಗುತ್ತದೆ. ಜೆಟ್‌ ಎಂಜಿನ್‌ನ ದೊಡ್ಡ ವಿಮಾನಗಳ ವೇಗ ಹೆಚ್ಚು ಇರುವುದರಿಂದ ಮತ್ತು ಅವುಗಳ ಗಾತ್ರ ದೊಡ್ಡದಿರುವ ಕಾರಣ ಅವುಗಳ ದಿಕ್ಕನ್ನು ಹೀಗೆ ಪದೇ ಪದೇ ಬದಲಿಸಲು ಸಾಧ್ಯವಿಲ್ಲ. ಈ ಸ್ವರೂಪದ ಹಾರಾಟ ಟರ್ಬೊಪ್ರಾಪ್‌ ಎಂಜಿನ್‌ ಇರುವ ಸಣ್ಣ ವಿಮಾನಗಳಿಂದ ಮಾತ್ರ ಸಾಧ್ಯ. ಹೀಗಾಗಿಯೇ ನೇಪಾಳದ ವಿಮಾನಯಾನ ಕಂಪನಿಗಳು ಸಣ್ಣ ವಿಮಾನಗಳನ್ನೇ ಖರೀದಿಸುತ್ತವೆ.ಕ್ಲಿಷ್ಟ ಸ್ವರೂಪದ ಹಾರಾಟಕ್ಕೆ ಇಂತಹ ವಿಮಾನಗಳು ಹೇಳಿಮಾಡಿಸಿದ್ದಾದರೂ ಅತ್ಯಾಧುನಿಕವಾದ ವ್ಯವಸ್ಥೆಗಳು ಇಂತಹ ವಿಮಾನಗಳಲ್ಲಿ ಇರುವುದಿಲ್ಲ. ಕ್ಲಿಷ್ಟವಾದ ಕಾರ್ಯಾಚರಣೆ ವೇಳೆ ಎಂಜಿನ್‌ ವೈಫಲ್ಯದಂತಹ ಸಮಸ್ಯೆಗಳು ಸಾಮಾನ್ಯ. ಇಂತಹ ವಿಮಾನಗಳ ಎಂಜಿನ್‌ಗೆ ಹಕ್ಕಿಗಳು ಬಡಿದರೂ ಅವು ವಿಫಲವಾಗಿ ಬಿಡುತ್ತವೆ. ಹೀಗಾಗಿ ಅಪಾಯದ ಸಾಧ್ಯತೆ ಹೆಚ್ಚು. ಆದರೆ, ನೇಪಾಳದಂತಹ ಭೌಗೋಳಿಕ ಪ್ರದೇಶಕ್ಕೆ ಇಂತಹ ವಿಮಾನಗಳೇ ಅನಿವಾರ್ಯ ಎಂದು ವರದಿಯಲ್ಲಿ ಹೇಳಲಾಗಿದೆ.

ನೇಪಾಳದ ಪಟ್ಟಣಗಳು ಮತ್ತು ವಿಮಾನ ನಿಲ್ದಾಣಗಳು ಸಮುದ್ರಮಟ್ಟದಿಂದ ಸರಾಸರಿ 2,600 ಮೀಟರ್‌ ಎತ್ತರ ದಲ್ಲಿವೆ. ಇಷ್ಟು ಎತ್ತರದ ಪ್ರದೇಶದಲ್ಲಿ ವಾತಾವರಣ ದಿಢೀರ್‌ ಬದಲಾವಣೆಯಾಗುತ್ತದೆ. ಇದರ ಜತೆಯಲ್ಲಿ ಐದಾರು ಸಾವಿರ ಮೀಟರ್‌ ಎತ್ತರದ ಪರ್ವತಗಳು ಇಂತಹ ಪಟ್ಟಣ–ವಿಮಾನ ನಿಲ್ದಾಣಗಳನ್ನು ಸುತ್ತುವರಿದಿವೆ. ಹೀಗಾಗಿ ಟೇಕ್‌ಆಫ್‌ ಆದ ವಿಮಾನ ನಿಲ್ದಾಣದ ಬಳಿ ಇದ್ದ ವಾತಾವರಣವು, ಲ್ಯಾಂಡ್‌ ಆಗುತ್ತಿರುವ ವಿಮಾನ ನಿಲ್ದಾಣದ ಬಳಿ ಇರುವುದಿಲ್ಲ. ವೇಗವಾಗಿ ಬೀಸುವ ಗಾಳಿ, ದಟ್ಟಮಂಜು–ಮೋಡ ಮುಸುಕಿದ ವಾತಾವರಣಗಳ ಕಾರಣ ವಿಮಾನದ ಏವಿಯಾನಿಕ್ಸ್‌ (ಎತ್ತರ, ವೇಗ, ದಿಕ್ಕು ಮೊದಲಾದ ಮಾಹಿತಿಗಳನ್ನು ನಿಖರವಾಗಿ ಒದಗಿಸುವ ವ್ಯವಸ್ಥೆ) ವ್ಯವಸ್ಥೆ ಕರಾರುವಾಕ್ಕಾಗಿ ಕೆಲಸ ಮಾಡುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪೈಲಟ್‌ಗಳು ತಮ್ಮ ಕಣ್ಣಿಗೆ ಕಾಣುವ ದೃಶ್ಯಗಳ ಆಧಾರದಲ್ಲೇ ವಿಮಾನವನ್ನು ಹಾರಿಸಬೇಕಾಗುತ್ತದೆ. ಪೈಲಟ್‌ನ ಕಡೆಯಿಂದ ಆಗುವ ಸಣ್ಣ ತಪ್ಪು ದೊಡ್ಡ ಅಪಘಾತಗಳಿಗೆ ಕಾರಣವಾದ ನಿದರ್ಶನಗಳಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಎಟಿಆರ್‌–72 ಪತನವಾಗಿದ್ದೇಕೆ?
ಪೊಖರಾ ವಿಮಾನ ನಿಲ್ದಾಣದ ಬಳಿ ಎಟಿಆರ್‌–72 ವಿಮಾನವು ಪತನವಾಗಲು ಕಾರಣವಾದ ಅಂಶವನ್ನು ಇನ್ನಷ್ಟೇ ಪತ್ತೆಮಾಡಬೇಕಿದೆ. ವಿಮಾನದ ಕಪ್ಪುಪೆಟ್ಟಿಗೆ (ಬ್ಲ್ಯಾಕ್‌ಬಾಕ್ಸ್‌) ಪತ್ತೆಯಾಗಿದೆ. ಅದರ ವಿಶ್ಲೇಷಣೆಯ ನಂತರ ಪತನಕ್ಕೆ ನಿಜವಾದ ಕಾರಣ ಏನು ಎಂಬುದು ಪತ್ತೆಯಾಗಲಿದೆ. ಆದರೆ, ಕೆಲವು ತಜ್ಞರು ಅಪಘಾತವನ್ನು ವಿಶ್ಲೇಷಿಸಲು ಯತ್ನಿಸಿದ್ದಾರೆ.

‘ಎಟಿಆರ್‌–72 ವಿಮಾನವು ಪತನವಾಗುವ ಮುನ್ನ, ದಿಢೀರ್‌ ನೆಲದತ್ತ ಕುಸಿದಿದೆ. ಹಾರಾಟದ ವೇಳೆ ಎಂಜಿನ್‌ ಏಕಾಏಕಿ ಸ್ಥಗಿತವಾದರೆ ಮಾತ್ರ ವಿಮಾನಗಳು ಹೀಗೆ ಕುಸಿದು ಬೀಳುತ್ತವೆ. ಎಟಿಆರ್‌–72 ಪತನದಲ್ಲಿ ಹೀಗೇ ಆಗಿದ್ದರೆ, ಎಂಜಿನ್‌ ಸ್ಥಗಿತವಾಗಲು ಕಾರಣ ಏನು ಎಂದು ಹುಡುಕಬೇಕಾಗುತ್ತದೆ’ ಎಂದು ಭಾರತದ ಸೇಫ್ಟಿ ಮ್ಯಾಟರ್ಸ್‌ ಫೌಂಡೇಷನ್‌ನ ಸಂಸ್ಥಾಪಕ ಮತ್ತು ಅನುಭವಿ ಪೈಲಟ್‌ ಅಮಿತ್ ಸಿಂಗ್‌ ಹೇಳಿದ್ದಾರೆ ಎಂದು ಎಪಿ ನ್ಯೂಸ್‌ ವರದಿ ಮಾಡಿದೆ.

ಎರಡು ವಾರಗಳ ಹಿಂದಷ್ಟೇ ಉದ್ಘಾಟಿಸಲಾಗಿದ್ದ ಪೊಖರಾ ನೂತನ ವಿಮಾನ ನಿಲ್ದಾಣದ ಎರಡೂ ತುದಿಯಲ್ಲಿ ನದಿ ಕಣಿವೆಗಳಿವೆ. ಈ ಕಣಿವೆಗಳಲ್ಲಿ ಸಾವಿರಾರು ಹಕ್ಕಿಗಳಿವೆ. ಈ ಹಕ್ಕಿಗಳು ವಿಮಾನ ಹಾರಾಟಕ್ಕೆ ತೊಡಕಾಗುವ ಅಪಾಯ ಇದ್ದೇ ಇದೆ. ಎಟಿಆರ್‌–72 ವಿಮಾನದ ಎಂಜಿನ್‌ ಸ್ಥಗಿತವಾಗಲೂ ಹಕ್ಕಿ ಡಿಕ್ಕಿಯೇ ಕಾರಣವಾಗಿರಬಹುದು ಎಂದು ನೇಪಾಳದ ವಿಮಾನಯಾನ ಸಂಸ್ಥೆಗಳ ಪೈಲಟ್‌ಗಳು ಶಂಕಿಸಿದ್ದಾರೆ ಎಂದು ಎಪಿ ನ್ಯೂಸ್‌ ವರದಿ ಮಾಡಿದೆ.

ಅವಘಡಗಳ ಸರಣಿ
ನೇಪಾಳದಲ್ಲಿ ವರ್ಷಕ್ಕೆ ಒಂದು ವಿಮಾನ ಅಪಘಾತ ಸಾಮಾನ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ದತ್ತಾಂಶ ಗಳನ್ನು ಪರಿಶೀಲಿಸಿದರೆ, ವರ್ಷಕ್ಕೆ ಎರಡು ಅಥವಾ ಮೂರು ಅವಘಡಗಳು ನಡೆದ ಉದಾಹರಣೆಗಳೂ ಸಿಗುತ್ತವೆ.

1992ರಲ್ಲಿ ಎರಡು ಭೀಕರ ಅವಘಡಗಳು ನಡೆದಿದ್ದವು. ಜುಲೈ ತಿಂಗಳಲ್ಲಿ ಥಾಯ್‌ ಏರ್‌ವೇಸ್‌ನ ಏರ್‌ಬಸ್ 310 ವಿಮಾನವು ಕಠ್ಮಂಡುಗೆ ಬರುವ ಮಾರ್ಗದಲ್ಲಿ ಪತನವಾಗಿತ್ತು. 14 ಸಿಬ್ಬಂದಿ ಹಾಗೂ 99 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದ ಅಪಘಾತವು ಅತಿಭೀಕರ ಎನಿಸಿಕೊಂಡಿದೆ. 167 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಪಾಕಿಸ್ತಾನದ ವಿಮಾನವು ಕಠ್ಮಂಡುವಿನ ತ್ರಿಭುವನ ವಿಮಾನ ನಿಲ್ದಾಣದಲ್ಲಿ ಇಳಿಯುವ ಸ್ವಲ್ಪ ಹೊತ್ತಿನ ಹಿಂದೆ ಪತನವಾಗಿ, ಎಲ್ಲರ ಪ್ರಾಣ ತೆಗೆದಿತ್ತು.

ಕಳೆದ ವರ್ಷವೂ ನೇಪಾಳಿಗರು ವಿಮಾನ ಅಪಘಾತಕ್ಕೆ ಸಾಕ್ಷಿಯಾಗಿದ್ದರು. 22 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತಾರಾ ಏರ್‌ ವಿಮಾನಯಾನ ಸಂಸ್ಥೆಯ ವಿಮಾನವು 2022ರ ಮೇ 29ರಂದು ನೇಪಾಳದ ಮಸ್ತಾಂಗ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ನಾಪತ್ತೆಯಾಗಿತ್ತು. 2016ರಲ್ಲೂ ತಾರಾ ಏರ್ ಸಂಸ್ಥೆಯ ವಿಮಾನದಲ್ಲಿ 23 ಮಂದಿ ಅಸುನೀಗಿದ್ದರು. ಇದಕ್ಕೆ ಹವಾಮಾನ ವೈಪರೀತ್ಯದ ಕಾರಣ ನೀಡಲಾಗಿತ್ತು. 2018ರಲ್ಲಿ ಬಾಂಗ್ಲಾದೇಶದ ಖಾಸಗಿ ವಿಮಾನವು ಕಠ್ಮಂಡು ಬಳಿ ಅಪಘಾತಕ್ಕೀಡಾಗಿ, 51 ಮಂದಿ ಸಾವಿಗೆ ಕಾರಣವಾಗಿತ್ತು.

ಅಪಾಯ ತಡೆಗೆ ನಿರಂತರ ಯತ್ನ
ವಿಮಾನ ಅವಘಡ ತಡೆಯುವುದಕ್ಕಾಗಿ ನೇಪಾಳ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ವಿಮಾನಯಾನದ ಮೇಲೆ ಸರ್ಕಾರವು ನಿಕಟ ನಿಗಾ ಇರಿಸಿದೆ. ಪೊಖರಾದಿಂದ ಜೊಮ್‌ಸೊಮ್‌ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ತಾರಾ ಏರ್‌ ವಿಮಾನವು ಸನ್ಸೊವೇರ್‌ ಎಂಬಲ್ಲಿ 2022ರ ಮೇ 29ರಂದು ಪತನಗೊಂಡಿತ್ತು. ಈ ಅವಘಡದ ನಂತರ ವಿಮಾನಯಾನಕ್ಕೆ ಸಂಬಂಧಿಸಿ ಹಲವು ನಿಯಮಗಳನ್ನು ಸರ್ಕಾರವು ರೂಪಿಸಿತ್ತು. ಹವಾಮಾನವು ಪ್ರತಿಕೂಲವಾಗಿರುವಾಗ ವಿಮಾನ ಹಾರಾಟವನ್ನು ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಸ್ಥಗಿತಗೊಳಿಸಲೇಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಎಲ್ಲ ವಿಮಾನಯಾನಗಳಿಗೂ ಅಂತಿಮ ಅನುಮತಿ ನೀಡಬೇಕು ಎಂಬ ನಿಯಮ ತರಲಾಗಿತ್ತು. ಒಂದೇ ಎಂಜಿನ್‌ ಇರುವ ವಿಮಾನಗಳಲ್ಲಿ ಇಬ್ಬರು ಪೈಲಟ್‌ ಇರಲೇಬೇಕು ಎಂಬ ನಿಯಮ ರೂಪಿಸುವ ಕುರಿತು ನೇ‍ಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರವು ಚಿಂತಿಸುತ್ತಿದೆ.

ವಿಶ್ವ ಸಂಸ್ಥೆಯ ಅಧೀನದಲ್ಲಿರುವ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ಕೂಡ ವಿಮಾನಯಾನ ಸುರಕ್ಷತೆ ನೆರವು ಪಾಲುದಾರಿಕೆ ಯೋಜನೆಯ ಅಡಿ ನೇಪಾಳಕ್ಕೆ ನೆರವು ನೀಡುತ್ತಿದೆ.

ನೇಪಾಳದ ಹವಾಮಾನ ಮತ್ತು ಭೂ ಮೇಲ್ಮೈ ಸ್ಥಿತಿಗತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ವಿಮಾನಯಾನ ಸುರಕ್ಷತೆ ಹೆಚ್ಚಿಸುವುದಕ್ಕೆ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.

* ನೇಪಾಳದ ಎಲ್ಲ ವಿಮಾನಯಾನ ಮಾರ್ಗಗಳು ಅಪಾಯಕಾರಿ ಅಲ್ಲ. ಆದರೆ, ಹೆಚ್ಚು ಪರ್ವತಗಳಿಂದ ಕೂಡಿರುವ ಜೊಮ್‌ಸೊಮ್‌ ಮತ್ತು ಲುಕ್ಲಾ ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಅವಘಡಗಳು ಸಂಭವಿಸಿವೆ. ಈ ಮಾರ್ಗಗಳಲ್ಲಿ ಸಣ್ಣ ವಿಮಾನ ಸಂಚಾರ ಮಾತ್ರ ಸಾಧ್ಯ

* ಕಠ್ಮಂಡು–ಪೊಖರಾ ಮಾರ್ಗವು ಹೆಚ್ಚು ಅಪಾಯಕಾರಿ ಅಲ್ಲ. ಇಲ್ಲಿನ ಅಪಾಯದ ಪ್ರಮಾಣವು ಬಹಳ ಕಡಿಮೆ. ಹಾಗಿದ್ದರೂ ಕಠ್ಮಂಡು–ಪೊಖರಾ ನಡುವಣ ಪ್ರಯಾಣಕ್ಕೆ ವಿಮಾನಯಾನದ ಬದಲು ರಸ್ತೆ ಮಾರ್ಗವನ್ನು ಆಯ್ದುಕೊಳ್ಳಬಹುದು. ಈ ಎರಡು ನಗರಗಳ ನಡುವಣ ರಸ್ತೆ ಮಾರ್ಗದ ಅಂತರವು 200 ಕಿ.ಮೀ. ಅಷ್ಟೇ ಇದೆ

* ನೇಪಾಳ ಪ್ರವಾಸಕ್ಕೆ ಮೊದಲು ಆ ದೇಶ ಮತ್ತು ಅಲ್ಲಿನ ಸಾರಿಗೆ ಕುರಿತು ಸಾಧ್ಯವಾದಷ್ಟು ತಿಳಿದುಕೊಳ್ಳಬೇಕು. ಸಾರಿಗೆ ಆಯ್ಕೆಗಳನ್ನು ತಿಳಿದುಕೊಂಡು ಅಪಾಯಕಾರಿ ವಾಯು ಮಾರ್ಗದಲ್ಲಿ ವಿಮಾನ ಪ್ರಯಾಣದಿಂದ ದೂರ ಇರಬಹುದು

* ನೇಪಾಳದಲ್ಲಿ ರಾಷ್ಟ್ರೀಯ ರೈಲು ಮಾರ್ಗ ಜಾಲ ಇಲ್ಲ. ಹಾಗಾಗಿ, ಏರು ತಗ್ಗು, ತಿರುವುಗಳಿಂದ ಕೂಡಿದ ರಸ್ತೆ ಮಾರ್ಗದಲ್ಲಿಯೇ ಸಂಚರಿಸಬೇಕಾಗುತ್ತದೆ. ದೇಶದ ಎಲ್ಲ ಮೂಲೆಗೂ ಬಸ್‌ ಸೌಲಭ್ಯ ಇದೆ ಮತ್ತು ಅತ್ಯಂತ ಅಗ್ಗದ ದರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಹುದು. ಟ್ಯಾಕ್ಸಿ ವ್ಯವಸ್ಥೆಯೂ ಇದೆ

ಆಧಾರ: ಎಪಿ, ಪಿಟಿಐ, ರಾಯಿಟರ್ಸ್, ಟ್ರಾವೆಲ್‌ನೇಪಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT