ಗಣಿಗಾರಿಕೆಯ ‘ರಿಪಬ್ಲಿಕ್‘
ಹೊಸಪೇಟೆ: ಎತ್ತ ನೋಡಿದರತ್ತ ಹಸಿರು ಹೊದ್ದು ನಿಂತ ಗಿರಿ ಶ್ರೇಣಿಗಳು, ಅದರ ನಡುವೆ ದಾರಿ ಕಾಣದಂತೆ ಸುತ್ತಲೂ ಸದಾ ಆವರಿಸಿಕೊಂಡಿರುವ ಕೆಂಪು ದೂಳು, ತಿರುವುಗಳಿಂದ ಕೂಡಿರುವ ದುರ್ಗಮ ರಸ್ತೆಗಳಲ್ಲಿ ಅತಿ ವೇಗದಲ್ಲಿ ಮೈಮೇಲೆ ಎರಗಿ ಬರುವ ಸಾಲು ಸಾಲು ಟ್ರಕ್, ಟಿಪ್ಪರ್‌ಗಳು. ಇವುಗಳಿಂದ ತಪ್ಪಿಸಿಕೊಡು ಮನೆ ಸೇರುವುದೇ ಆಸುಪಾಸಿನ ಹಳ್ಳಿಗಳ ಜನರಿಗೆ ದೊಡ್ಡ ಸವಾಲು.
ಮನೆ ಸೇರಿದ ನಂತರವೂ ಅವರಿಗೆ ನೆಮ್ಮದಿಯಿಲ್ಲ. ವಾಸವಿರುವ ಮನೆಗಳಿಂದ 400 ರಿಂದ 500 ಮೀಟರ್ ಅಂತರದಲ್ಲಿ ಸ್ಫೋಟಗಳ ಸದ್ದು. ಭೂಕಂಪನ ಇಲ್ಲವೇ ಯುದ್ಧಭೂಮಿಯಲ್ಲಿದ್ದ ಅನುಭವ. ನಡುರಾತ್ರಿ ಸ್ಫೋಟದ ಸದ್ದಿಗೆ ಮಕ್ಕಳು ಬೆಚ್ಚಿ ಬಿದ್ದು ನಿದ್ರೆಯಿಂದ ಎದ್ದರೆ ಗುಮ್ಮನ ಕಥೆ ಹೇಳಿ, ಸಂತೈಸಿ ಮಲಗಿಸಬೇಕಾದ ಅನಿವಾರ್ಯತೆ ಪೋಷಕರದು.
ತಾಲ್ಲೂಕು ಕೇಂದ್ರ ಸಂಡೂರಿನಿಂದ 35 ಕಿ.ಮೀ ಅಂತರದಲ್ಲಿರುವ ಕಮತೂರು ಗ್ರಾಮವನ್ನು ದೂರದಿಂದ ನೋಡಿದರೆ ಥೇಟ್ ದ್ವೀಪದಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರಿನ ಗಿರಿಗಳು ಕಾಣುತ್ತವೆ. ಹತ್ತಿರ ಹೋಗಿ ನೋಡಿದರೆ ಇನ್ನೊಂದು ಬದಿಯಲ್ಲಿ ಗಣಿಗಾರಿಕೆಯಿಂದ ಬೆಟ್ಟಗಳು ಬೋಳಾಗಿರುವುದು ಗೋಚರಿಸುತ್ತದೆ. ಗ್ರಾಮದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸತತವಾಗಿ ಗ್ರಾಮದ ವ್ಯಾಪ್ತಿ ಕುಗ್ಗುತ್ತ ಹೋಗುತ್ತಿದೆ. ಇದರ ಪರಿಣಾಮ ಕೃಷಿ ಮೇಲೂ ಉಂಟಾಗಿದೆ. ಪದವಿ ಮುಗಿಸಿದ ಯುವಕರಿಗೆ ಉದ್ಯೋಗಗಳಿಲ್ಲ. ಕೃಷಿ ಚಟುವಟಿಕೆಗಳು ಹೆಚ್ಚಾಗಿ ನಡೆಯದ ಕಾರಣ ಗುಳೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಗಣಿಗಳಲ್ಲಿನ ಸ್ಫೋಟಕ್ಕೆ ಸುತ್ತಮುತ್ತಲ ಗ್ರಾಮದ ಬಹುತೇಕ ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿವೆ. ಕೆಲವು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಇನ್ನುಳಿದವು ಯಾವುದೇ ಸಂದರ್ಭದಲ್ಲಿ ನೆಲಕ್ಕುರುಳುವ ಆತಂಕವಿದೆ. ಈ ಆತಂಕ, ದುಗುಡದ ನಡುವೆ ಬದುಕು ಮುಂದುವರೆಸುವ ಅನಿವಾರ್ಯತೆ. ಹೀಗೆ ಹತ್ತು ಹಲವು ಸಂಕಷ್ಟಗಳ ನಡುವೆ ಬದುಕು ನಡೆಸುತ್ತಿರುವವರು ಕಮತೂರು ಗ್ರಾಮದ ಜನ.
ಅಕ್ರಮ ಗಣಿಗಾರಿಕೆಗೆ ತಡೆ ಬಿದ್ದು ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಆದರೆ, ಅದು ಪರಿಸರ, ಜನಜೀವನದ ಮೇಲೆ ಬೀರಿದ ಕೆಟ್ಟ ಪರಿಣಾಮ ಇನ್ನೂ ಮಾಸಿಲ್ಲ. ಗಾಯ ವಾಸಿಯಾಗುವ ಮುನ್ನವೇ ಮತ್ತೆ ಮತ್ತೆ ಪೆಟ್ಟು ಬೀಳುತ್ತಲೇ ಇದೆ. ದಶಕದ ಹಿಂದಿಗೂ ಈಗಿರುವ ಪರಿಸ್ಥಿತಿಗೂ ದೊಡ್ಡ ವ್ಯತ್ಯಾಸವೆಂದರೆ ಹಿಂದೆ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಈಗ ಕಾನೂನುಬದ್ಧವಾಗಿ ನಡೆಯುತ್ತಿದೆ. ಆದರೆ, ಗಣಿಗಾರಿಕೆ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವುದರಿಂದ ಜನರು ಇನ್ನೂ ಸಮಸ್ಯೆಗಳ ಸುಳಿಯಲ್ಲೇ ಬದುಕು ನಡೆಸುವಂತಾಗಿದೆ.
‘ನಮ್ಮೂರಿನ ಜನಸಂಖ್ಯೆ ಸರಿಸುಮಾರು ಎರಡು ಸಾವಿರ. ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಉಳಿದಂತೆ ಹೆಚ್ಚೇನೂ ಅಭಿವೃದ್ಧಿ ಆಗಿಲ್ಲ. ಉಪ ಆರೋಗ್ಯ ಕೇಂದ್ರವಿದ್ದರೂ ವೈದ್ಯರಿಲ್ಲ. ಒಂದರಿಂದ ಐದನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪರ ಊರಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬಹುತೇಕ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟರೂ ಅವುಗಳ ದುರಸ್ತಿಯಾಗಲಿ ಅಥವಾ ಹೊಸ ಮನೆ ಕಟ್ಟಿಸಿಕೊಡುವ ಕೆಲಸಗಳಾಗಿಲ್ಲ. ಗ್ರಾಮದಲ್ಲಿ ಹೆಚ್ಚಿನವರು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು. ಗಣಿಗಳಲ್ಲಿ ಬಿಟ್ಟರೆ ಬೇರೆಡೆ ಕೆಲಸ ಮಾಡುವುದಕ್ಕೆ ಅವಕಾಶಗಳೇ ಇಲ್ಲ. ಗಣಿಗಾರಿಕೆಯಿಂದ ನಮ್ಮ ಬದುಕಿಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ, ಅದಕ್ಕೆ ಮುಲಾಮು ಹಚ್ಚುವ ಕೆಲಸ ಮಾಡುತ್ತಿಲ್ಲ’ ಎಂದು ಆರೋಪಿಸುತ್ತಾರೆ ಕಮತೂರಿನ ಯುವಕ ಮಂಜುನಾಥ.
ಇದು ಕಮತೂರು ಗ್ರಾಮದ ಕಥೆಯಲ್ಲ. ಸಂಡೂರು ತಾಲ್ಲೂಕಿನ ನಂದಿಹಳ್ಳಿ, ಭುಜಂಗನಗರ, ನಾರಾಯಣಪುರ, ಸುಶೀಲಾನಗರ, ಸಿದ್ದಾಪುರ, ಸೇನಿ ಬಸಪ್ಪ ಕ್ಯಾಂಪ್ ಕಥೆಯೂ ಹೆಚ್ಚು ಕಮ್ಮಿ ಹೀಗೇ ಇದೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಗಣಿಬಾಧಿತ ಗ್ರಾಮಗಳ ಕಥೆಯೂ ಹೌದು. ಆ ಗ್ರಾಮಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸತತ ಗಣಿಗಾರಿಕೆಯಿಂದ ನಾಲ್ಕು ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ನೀರಿನ ಝರಿಗಳು ನಾಶವಾಗಿವೆ. ಅಂತರ್ಜಲ ಕುಸಿದಿದೆ. ವನ್ಯಮೃಗಗಳು ಆವಾಸ ಸ್ಥಾನ ಕಳೆದುಕೊಂಡಿವೆ. ವಿಪರೀತ ದೂಳಿನಿಂದ ಬೆಳೆಗಳ ಇಳುವರಿ ಕುಸಿದಿದೆ. ಜನ ಉಸಿರಾಟದ ಸಮಸ್ಯೆ, ಕ್ಷಯರೋಗ, ಚರ್ಮ ರೋಗ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿದ್ದಾರೆ. ಲಾರಿ, ಟಿಪ್ಪರ್‌ಗಳ ಎರ್ರಾಬಿರ್ರಿ ಸಂಚಾರದಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.
‘ಸಮಾಜ ಪರಿವರ್ತನಾ ಸಮುದಾಯ‘ (ಎಸ್‌ಪಿಎಸ್) ಅದರಲ್ಲೂ ಎಸ್.ಆರ್. ಹಿರೇಮಠ ಅವರ ಹೋರಾಟದಿಂದ ಅಕ್ರಮ ಗಣಿಗಾರಿಕೆ ಕೊನೆಗೊಂಡಿತು. 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತರೇ ಅಕ್ರಮ ಗಣಿಗಾರಿಕೆ ಆರೋಪಕ್ಕೆ ಒಳಗಾಗಿದ್ದು ಬೇಲಿಯೇ ಎದ್ದು ಹೊಲ ಮೇದಂತಿತ್ತು. ಇಲ್ಲಿ ರೆಡ್ಡಿ ಮಾಡಿದ್ದೇ ಕಾನೂನು, ಹೇಳಿದ್ದೇ ಆದೇಶ ಎಂಬ ಪರಿಸ್ಥಿತಿ ಇತ್ತು. ಇದರಿಂದಾಗಿಯೇ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗಡೆ ಇದನ್ನು ‘ರಿಪಬ್ಲಿಕ್ ಆಫ್ ಬಳ್ಳಾರಿ’ ಎಂದು ಕರೆದಿದ್ದು. ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ರೆಡ್ಡಿ ಜೈಲಿಗೆ ಹೋಗಿ ಹೊರಬಂದಿದ್ದಾಯಿತು. ಆನಂತರ, ಮತ್ತೊಂದು ಅಧ್ಯಾಯ ಆರಂಭವಾಯಿತು.
ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂಚಿಂಚೂ ಬಿಡದೆ ಪರಿಶೀಲಿಸಿತು. ‘ಗಣಿಬಾಧಿತ ಪ್ರದೇಶಗಳ ಪರಿಸರ ಪುನಶ್ಚೇತನ ಯೋಜನೆ’ (ಸಿಇಪಿಎಂಐಝಡ್) ‘ವಿಶೇಷ ಉದ್ದೇಶದ ನಿಧಿ’ (ಎಸ್‌ಪಿವಿ) ಸ್ಥಾಪಿಸಬೇಕು ಎಂದು ಸಿಇಸಿ ಶಿಫಾರಸ್ಸು ಮಾಡಿತು. ಇದನ್ನು ಕೋರ್ಟ್ 2013ರ ಏಪ್ರಿಲ್ 18ರಂದು ನೀಡಿದ ತೀರ್ಪಿನಲ್ಲಿ, ಒಪ್ಪಿಕೊಂಡಿತು. ಪರಿಣಾಮವಾಗಿ 2014ರ ಜೂನ್ 30ರಂದು ‘ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ’ (ಕೆಎಂಇಆರ್‌ಸಿ) ಅಸ್ತಿತ್ವಕ್ಕೆ ಬಂತು.
‘ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಪರಿಸರವನ್ನು ಕಂಡರಿಯದ ಪ್ರಮಾಣದಲ್ಲಿ ನಾಶ ಮಾಡಲಾಗಿದೆ. ಹೀಗಾಗಿ, ಪರಿಸರ ಪುನರುಜ್ಜೀವನದ ಕೆಲಸವೂ ಅಸಾಧಾರಣವಾಗಿರಬೇಕು’ ಎಂದು ಕೋರ್ಟ್ ತಾಕೀತು ಮಾಡಿತು.
ಕೋರ್ಟ್ ಆದೇಶದ ಪ್ರಕಾರ, ‘ಎಸ್‌ಪಿವಿ’ಗೆ ಗಣಿ ಗುತ್ತಿಗೆದಾರರು ಅದಿರು ಮಾರಾಟದ ಹಣದಲ್ಲಿ ಶೇ 10ರಷ್ಟು ಪಾವತಿಸಬೇಕು. ಮನಸ್ಸಿಗೆ ಬಂದಂತೆ ಅಕ್ರಮ ನಡೆಸಿದ ಆರೋಪಕ್ಕೊಳಗಾಗಿರುವ ‘ಸಿ’ ಕೆಟಗರಿ ಗಣಿಗಳ ಅದಿರು ಹರಾಜಿನ ಸಂಪೂರ್ಣ ಹಣ ಇದಕ್ಕೆ ಸಂದಾಯವಾಗಬೇಕಾಗಿದೆ.
‘ಸಮಗ್ರ ಪರಿಸರ ಪುನಶ್ಚೇತನ ಕಾರ್ಯಕ್ರಮ’ಗಳ (ಸಿಇಪಿಎಂಐಝಡ್) ಅನುಷ್ಠಾನದ ಮೇಲ್ವಿಚಾರಣೆ ಹಾಗೂ ಪ್ರಗತಿ ಪರಿಶೀಲನೆಗೆ ಒಡಿಶಾ ಮಾದರಿಯಲ್ಲಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ಅಧ್ಯಕ್ಷತೆಯಲ್ಲಿ ‘ಕಣ್ಗಾವಲು ಪ್ರಾಧಿಕಾರ’ (ಓವರ್‌ಸೈಟ್ ಅಥಾರಿಟಿ) ನೇಮಿಸಿತು. ಎಸ್‌ಪಿವಿಯಲ್ಲಿ ಈಗ ₹25 ಸಾವಿರ ಕೋಟಿ ಸಂಗ್ರಹವಾಗಿದೆ. ಈ ಹಣದ ಮೇಲೆ ಜನಪ್ರತಿನಿಧಿಗಳ ಕಣ್ಣಿದೆ. ಹಿಂದೆ ಇದೇ ಕಾರಣಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ನಡೆದಿತ್ತು. ಈಗ ಕಣ್ಗಾವಲು ಪ್ರಾಧಿಕಾರ ಇರುವುದರಿಂದ ಹಣವನ್ನು ಮನಸ್ಸಿಗೆ ಬಂದಂತೆ ಬಳಸಲು ಅವಕಾಶವಿಲ್ಲ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಲ್ಲಿರುವ ಹಣದಲ್ಲಿ ಗಣಿಬಾಧಿತ ಪ್ರದೇಶಗಳಿಗೆ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರ 2016ರ ಏಪ್ರಿಲ್ 29ರಂದು ₹15,742 ಕೋಟಿ ಮೊತ್ತದ ಯೋಜನೆ ರೂಪಿಸಿತ್ತು. ಆದರೆ, ಸಿಇಸಿ ಸಮ್ಮುಖದಲ್ಲಿ ಕೆಎಂಇಆರ್‌ಸಿ ಸಂಬಂಧಪಟ್ಟ ಎಲ್ಲರ ಜತೆ ಸಮಾಲೋಚಿಸಿ 2018ರ ಫೆಬ್ರುವರಿ 11ರಂದು ₹24,996 ಸಾವಿರ ಕೋಟಿ ವೆಚ್ಚದ ಪರಿಷ್ಕೃತ ಪ್ರಸ್ತಾವನೆಯನ್ನು ಕೋರ್ಟ್‌ಗೆ ಸಲ್ಲಿಸಿತು.
ಈ ಮಧ್ಯೆ, ಗಣಿ ಗುತ್ತಿಗೆದಾರರು ಎಸ್‌ಪಿವಿಗೆ ಪಾವತಿಸುತ್ತಿರುವ ಶೇ 10 ವಂತಿಗೆಯನ್ನು ಸ್ಥಗಿತಗೊಳಿಸುವಂತೆ ‘ಭಾರತೀಯ ಗಣಿ ಉದ್ಯಮಿಗಳ ಒಕ್ಕೂಟ’ವು (ಫಿಮಿ) ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ (ಎಂಎಂಡಿಆರ್) ಕಾಯ್ದೆಯಡಿ ಗಣಿ ಗುತ್ತಿಗೆದಾರರು ಜಿಲ್ಲಾ ಖನಿಜ ನಿಧಿಗೂ (ಡಿಎಂಎಫ್) ರಾಜಧನದ 1/3 ಭಾಗಕ್ಕಿಂತ ಹೆಚ್ಚು ಪಾವತಿಸಬೇಕಿರುವುದರಿಂದ ಎಸ್‌ಪಿವಿಯಿಂದ ವಿನಾಯ್ತಿ ನೀಡುವಂತೆ ಕೇಳಿದ್ದರು. ಅದನ್ನು ಕೋರ್ಟ್ ತಿರಸ್ಕರಿಸಿದೆ. ಆದರೆ, ‘ಪರಿಸರ ಪುನರುಜ್ಜೀವನ ಯೋಜನೆ’ ಪೂರ್ಣವಾಗಿ ಮತ್ತು ಸ್ಪಷ್ಟವಾಗಿ ರೂಪುಗೊಳ್ಳಬೇಕಿದ್ದು, ಅದಕ್ಕೆ ಭಾರಿ ಹಣದ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
‘ಕೇಂದ್ರ ಉನ್ನತಾಧಿಕಾರ ಸಮಿತಿ’ (ಸಿಇಸಿ) ಈ ಸಂಬಂಧ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ‘ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಸಂಪೂರ್ಣ ಅನುಷ್ಠಾನಗೊಳಿಸಲು ಎಸ್‌ಪಿವಿಯಲ್ಲಿ ಸಂಗ್ರಹವಾಗಿರುವ ಹಣ ಸಾಕಾಗದು. ಸಮಗ್ರ ಪರಿಸರ ಪುನರುಜ್ಜೀವನ ಯೋಜನೆ ಮತ್ತು ಅದಕ್ಕೆ ಬೇಕಾಗುವ ಹಣದ ಅಂದಾಜನ್ನು ಅಂತಿಮಗೊಳಿಸಿದ ಬಳಿಕ ಈ ಬಗ್ಗೆ ಮರು ಪರಿಶೀಲನೆ ನಡೆಸಬಹುದು. ಅಲ್ಲಿವರೆಗೂ ಶೇ 10 ವಂತಿಗೆ ಪಾವತಿ ಅನಿವಾರ್ಯ’ ಎಂದು ಹೇಳಿದೆ.
ಅತಿ ಹೆಚ್ಚು ಸಮಸ್ಯೆ ಬಳ್ಳಾರಿಯಲ್ಲಿ:
ಗಣಿಗಾರಿಕೆಯಿಂದ ಅತಿ ಹೆಚ್ಚು ಸಮಸ್ಯೆಗೀಡಾಗಿದ್ದು ಬಳ್ಳಾರಿ ಜಿಲ್ಲೆ. ಜಿಲ್ಲೆಯ ಈ 125 ಗ್ರಾಮಗಳು ಪುನರ್ವಸತಿ ನಿರೀಕ್ಷೆಯಲ್ಲಿವೆ. ನಂತರದ ಸ್ಥಾನದಲ್ಲಿ ವಿಜಯನಗರ ಜಿಲ್ಲೆಯಿದೆ. ಜಿಲ್ಲೆಯ 66 ಗ್ರಾಮಗಳು ಗಣಿಗಾರಿಕೆ, ಅದಿರು ಸಾಗಾಟದಿಂದ ನಲುಗಿವೆ. ಚಿತ್ರದುರ್ಗ ಜಿಲ್ಲೆಯ 60 ಹಾಗೂ ತುಮಕೂರಿನ 59 ಹಳ್ಳಿಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಅವರ ನೋವಿಗೆ ಮಿಡಿಯುವ ಕೆಲಸದ ಪ್ರಗತಿ ನೋಡಿದರೆ ಬಹಳ ನಿರಾಸೆ ಮೂಡಿಸುತ್ತದೆ.
ಗಣಿ ಬಾಧಿತ ಪ್ರದೇಶದ ಜನರಿಗೆ ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲ. ಗಣಿಗಳಲ್ಲಿ ನಡೆಯುವ ಸ್ಫೋಟದ ಸದ್ದಿಗೆ ಇರುವ ಸೂರು ಕಳೆದುಕೊಳ್ಳುವ ಆತಂಕ ಇನ್ನೊಂದೆಡೆ. ಮಕ್ಕಳು ಆಟವಾಡುವುದಕ್ಕೆ ಮೈದಾನದಂತಹ ಮುಕ್ತವಾದ ಪ್ರದೇಶ, ಚೆಂದದ ವಾತಾವರಣ ಇಲ್ಲ. ಮಕ್ಕಳಿಗೆ ಮನೆಯ ಅಂಗಳವೇ ಎಲ್ಲ. ಆದರೆ, ಅಲ್ಲಿಗೂ ದೂಳು ಬಂದು ಬೀಳುತ್ತದೆ. ಸಂಚಾರಕ್ಕೆ ಸೂಕ್ತ ರಸ್ತೆಗಳಿಲ್ಲ. ಶಾಲೆ, ಆಸ್ಪತ್ರೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಕೆಲಸದ ವೇಗ ಆಮೆಗತಿಯಲ್ಲಿದೆ.
ನಿಯಮಕ್ಕಿದೆಯೇ ಬೆಲೆ?:
ಗಣಿಗಳಲ್ಲಿ ಕನ್ವೆಯರ್ ಬೆಲ್ಟ್, ಕನ್ವೆಯರ್ ಪೈಪ್ ಅಳವಡಿಸಿ, ಅದರ ಮೂಲಕ ಉಕ್ಕಿನ ಕೈಗಾರಿಕೆಗಳಿರುವ ಜಾಗಕ್ಕೆ ಅದಿರು ಸಾಗಿಸಬೇಕು. ಲಾರಿಗಳ ಸಂಚಾರ ಗಣನೀಯವಾಗಿ ತಗ್ಗಿಸಬೇಕು. ಅನಿವಾರ್ಯ ಇರುವ ಕಡೆಗಳಲ್ಲಿ ಬಟ್ಟೆ ಹೊದಿಕೆ ಹಾಕಿ ಲಾರಿಗಳಲ್ಲಿ ಅದಿರು ಸಾಗಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಈ ನಿಯಮದ ಪಾಲನೆ ಆಗುತ್ತಿಲ್ಲ ಎನ್ನುವುದು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಲ್ಲಿ ಒಮ್ಮೆ ಓಡಾಡಿದರೆ ಅದನ್ನು ಪಾಲಿಸುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಜೆಎಸ್‌ಡಬ್ಲ್ಯು, ಸ್ಮಯೋರ್ ಸೇರಿದಂತೆ ಕೆಲವೇ ಗಣಿ ಕಂಪನಿಗಳು ಮಾತ್ರ ಕನ್ವೇಯರ್ ಬೆಲ್ಟ್ ಬಳಸುತ್ತಿವೆ.
‘ಬೃಹತ್ ಕೈಗಾರಿಕೆಗಳಿಂದ ಜನರ ನೆಮ್ಮದಿ ಹಾಳಾಗಿದೆ. ಉಕ್ಕಿನ ಕೈಗಾರಿಕೆಗಳಿರುವ ಪ್ರದೇಶದಲ್ಲಿ ಮಿತಿ ಮೀರಿದ ದೂಳು ವ್ಯಾಪಿಸಿರುತ್ತದೆ. ಅದರಲ್ಲೂ ರಾತ್ರಿ ವೇಳೆ ಇದರ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಜನ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ಕೇವಲ ಹೆಸರಿಗಷ್ಟೇ. ಯಾರೊಬ್ಬರೂ ಅದನ್ನು ಪಾಲಿಸುತ್ತಿಲ್ಲ’ ಎಂದು ಆರೋಪಿಸುತ್ತಾರೆ ಗಣಿಬಾಧಿತ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಗ್ರಾಮಸ್ಥ ಕೊಟ್ರೇಶ್.
ಕಮಿಷನ್ ಕೈಸೇರದಿದ್ದರೆ ಭೂಮಿಪೂಜೆಗೆ ಗೈರು!:
ಕೆಎಂಇಆರ್‌ಸಿ ಜತೆ ಗಣಿ ಬಾಧಿತ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಜಿಲ್ಲಾ ಖನಿಜ ನಿಧಿ’ (ಡಿಎಂಎಫ್) ಕೂಡಾ ಸ್ಥಾಪಿಸಲಾಗಿದೆ. ಗಣಿ ಉದ್ಯಮಿಗಳಿಂದ ಈ ನಿಧಿಗೂ ಹಣ ಸಂಗ್ರಹಿಸಲಾಗುತ್ತಿದೆ. ಈ ಅನುದಾನದ ಅಡಿಯಲ್ಲಿ ನಾಲ್ಕೂ ಜಿಲ್ಲೆಗಳಿಗೆ ಕೋಟ್ಯಂತರ ರೂಪಾಯಿ ಹಂಚಿಕೆ ಮಾಡಲಾಗಿದೆ. ಆದರೆ, ಜನಪ್ರತಿನಿಧಿಗಳ ಮಾತೇ ಇದರಲ್ಲಿ ನಡೆಯುತ್ತಿರುವುದರಿಂದ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆಸಿದ ಆರೋಪಗಳಿವೆ.
‘ಗಣಿ ಬಾಧಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಡಿಎಂಎಫ್ ಅಧ್ಯಕ್ಷರಾಗಿರುತ್ತಾರೆ. ಶಾಸಕರು, ಅಧಿಕಾರಿಗಳು ಅದರ ಸದಸ್ಯರಾಗಿರುತ್ತಾರೆ. ಆಡಳಿತರೂಢ ಪಕ್ಷದ ಸಚಿವರ ಮಾತೇ ಅಲ್ಲಿ ನಡೆಯುತ್ತದೆ. ಹೆಚ್ಚು ಕಮಿಷನ್ ಸಿಗುವ ಕಾಮಗಾರಿಗಳಿಗೆ ಒತ್ತು ಕೊಟ್ಟು, ಅನುದಾನ ಮಂಜೂರು ಮಾಡಿಸಿಕೊಳ್ಳುತ್ತಾರೆ. ಕಾಮಗಾರಿಗಳ ಭೂಮಿ ಪೂಜೆಗೂ ಮುನ್ನ ಗುತ್ತಿಗೆದಾರರಿಂದ ಕಮಿಷನ್ ಕೈಸೇರಬೇಕು. ಇಲ್ಲವಾದರೆ ಭೂಮಿಪೂಜೆಗೆ ಜನಪ್ರತಿನಿಧಿಗಳು ಬರುವುದಿಲ್ಲ. ಕಮಿಷನ್ ಕೈಸೇರದಕ್ಕೆ ಅನೇಕ ಸಲ ಕೊನೆಯ ಕ್ಷಣದಲ್ಲಿ ಭೂಮಿಪೂಜೆ ಮುಂದೂಡಿದ ಅನೇಕ ನಿದರ್ಶನಗಳಿವೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಂಡೂರು ತಾಲ್ಲೂಕಿನ ಕಮತೂರಿನಲ್ಲಿ ಚರಂಡಿ ನಿರ್ಮಾಣಕ್ಕಾಗಿ ಹಣ ಬಿಡುಗಡೆಗೊಳಿಸಲಾಗಿದೆ. ಆದರೆ, ಆ ಕೆಲಸವಾಗಿಲ್ಲ. ಗ್ರಾಮದ ತುಂಬೆಲ್ಲಾ ಚರಂಡಿ ನೀರು ರಸ್ತೆಯ ಮಧ್ಯದಲ್ಲಿಯೇ ಹರಿಯುತ್ತದೆ. ಇನ್ನು, ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ಟ್ರ್ಯಾಕ್ ಕೂಡ ಡಿಎಂಎಫ್ ಅನುದಾನದಲ್ಲಿಯೇ ನಿರ್ಮಿಸಲಾಗಿದೆ. ಆದರೆ, ನಿರ್ಮಿಸಿದ ಕೆಲವೇ ದಿನಗಳಲ್ಲಿ ಅದರಲ್ಲಿ ಬಿರುಕುಗಳು ಮೂಡಿವೆ. ಇದು ಕಳಪೆ ಕಾಮಗಾರಿಗೆ ಜ್ವಲಂತ ಸಾಕ್ಷಿ. ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಅವರು, ಅಧಿಕಾರಿಗಳಿಂದ ವಿವರಣೆ ಕೇಳಿದ್ದರು. ಅಷ್ಟರಲ್ಲೇ ಅವರನ್ನೇ ಎತ್ತಂಗಡಿಗೊಳಿಸಿ, ತನಿಖೆಯನ್ನು ಅಲ್ಲಿಗೆ ಕೊನೆಗೊಳಿಸಲಾಯಿತು ಎನ್ನುವ ಆರೋಪವಿದೆ. ಯಾರ ವಿರುದ್ಧವೂ ಕ್ರಮ ಜರುಗಿಸಲಿಲ್ಲ. ಇನ್ನು, ಸಂಡೂರಿನ ನಾರಾಯಣಪುರ, ಭುಜಂಗನಗರ, ಹೊಸಪೇಟೆಯ ವ್ಯಾಸನಕೆರೆ, ಪಿ.ಕೆ.ಹಳ್ಳಿಯಲ್ಲಿ ಕಳಪೆ ಗುಣಮಟ್ಟದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಹಣ ಎತ್ತಲಾಗಿದೆ ಎಂಬ ಆರೋಪಗಳಿವೆ.
ಬಳ್ಳಾರಿ ಜಿಲ್ಲೆಗೆ ಅತಿ ಹೆಚ್ಚು ಅನುದಾನ ಹಂಚಿಕೆಯಾಗಿದೆ. ಒಟ್ಟು ₹1,593 ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ₹542 ಕೋಟಿ ವಿವಿಧ ಕಾಮಗಾರಿಗಳಿಗೆ ಬಿಡುಗಡೆಗೊಳಿಸಲಾಗಿದೆ. ವಿಜಯನಗರ ಜಿಲ್ಲೆಗೆ ಒಟ್ಟು ₹751 ಕೋಟಿ ಹಂಚಿಕೆಯಾಗಿದ್ದು, ₹308 ಕೋಟಿ ಬಿಡುಗಡೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ₹319.39 ಕೋಟಿ ಪೈಕಿ ₹214.18 ಕೋಟಿ ಹಾಗೂ ತುಮಕೂರು ಜಿಲ್ಲೆಗೆ ₹47.38 ಕೋಟಿಯಲ್ಲಿ ₹33.58 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಕುಡಿಯುವ ನೀರು, ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರಿಗೆ ನೆರವು, ಕೌಶಲ ಅಭಿವೃದ್ಧಿ, ಸ್ವಚ್ಛತೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೆಲವು ಯೋಜನೆಗಳು ಪ್ರಗತಿಯಲ್ಲಿವೆ.
ಗಣಿಬಾಧಿತ ಗ್ರಾಮಸ್ಥರ ನಿರೀಕ್ಷೆಗಳೇನು?:
‘ಡಿಎಂಎಫ್ ಅಥವಾ ಕೆಎಂಇಆರ್‌ಸಿ ಅನುದಾನ ಯಾವುದಕ್ಕೆ ಬಳಕೆಯಾಗಬೇಕು ಎನ್ನುವುದರ ಕುರಿತು ಗ್ರಾಮ ಸಭೆಗಳಲ್ಲಿ ತೀರ್ಮಾನಿಸಬೇಕು. ಒಂದೊಂದು ಗ್ರಾಮದ ಸಮಸ್ಯೆ ಒಂದೊಂದು ರೀತಿಯಲ್ಲಿರುತ್ತದೆ. ಬೇಕು ಬೇಡಿಕೆಗಳು ಭಿನ್ನವಾಗಿರುತ್ತವೆ. ಸ್ಥಳೀಯರೊಂದಿಗೆ ಕುಳಿತು ಚರ್ಚಿಸಿ, ಯೋಜನೆ ರೂಪಿಸಿದರೆ ಉತ್ತಮ. ಯಾವ್ಯಾವ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. ಅದಕ್ಕೆ ನಿಗದಿಯಾದ ಹಣವೆಷ್ಟು ಎನ್ನುವುದು ಗೊತ್ತಾದರೆ ಕಾಮಗಾರಿ ಕಳಪೆಯಾಗದಂತೆ ಗ್ರಾಮಸ್ಥರು ತಡೆಯಲು ಸಾಧ್ಯವಾಗುತ್ತದೆ. ಕಾಮಗಾರಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತವೆ’ ಎನ್ನುತ್ತಾರೆ ಕಮತೂರಿನ ಗ್ರಾಮಸ್ಥರಾದ ಮಂಜುನಾಥ, ಹುಲುಗಪ್ಪ ಹಾಗೂ ನಾರಾಯಣಪುರದ ಮೌನೇಶ್, ವಿನೋದ್ ಕುಮಾರ್, ಸಂಡೂರಿನ ಪರಿಸರ ಹೋರಾಟಗಾರ ಶ್ರೀಶೈಲ ಆಲ್ದಳ್ಳಿ.
‘ಛತ್ತೀಸಗಡ, ಒಡಿಶಾ ರಾಜ್ಯಗಳಲ್ಲಿ ಗ್ರಾಮ ಸಭೆ ನಡೆಸಿ, ಯೋಜನೆಗಳನ್ನು ತೀರ್ಮಾನಿಸಲಾಗುತ್ತದೆ. ಇಲ್ಲೂ ಅದೇ ರೀತಿ ಆಗಬೇಕು. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಗ್ರಾಮಸ್ಥರನ್ನು ಆರ್ಥಿಕವಾಗಿ ಸ್ವಾವಲಂಬಿಗೊಳಿಸಬೇಕು. ಕಟ್ಟಡ ಕಾಮಗಾರಿಗಳಿಗೆ ಆದ್ಯತೆ ಸಿಗುವುದರ ಜೊತೆಗೆ ಬದುಕು ಕಟ್ಟಿಕೊಡುವ ಕೆಲಸವಾಗಬೇಕು. ಆಸ್ಪತ್ರೆ ಕಟ್ಟಿದರೆ ಪ್ರಯೋಜನವಿಲ್ಲ. ಅದಕ್ಕೆ ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಬೇಕು. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿದೆ’ ಎಂದು ಶ್ರೀಶೈಲ ಆಲ್ದಳ್ಳಿ ತಿಳಿಸಿದರು.
ದಿನವಿಡೀ ಸ್ಫೋಟದ ಸದ್ದು ವಿಪರೀತ ದೂಳಿನಿಂದ ನಮ್ಮ ನೆಮ್ಮದಿ ಹಾಳಾಗಿದೆ. ನಮ್ಮ ಪಾಡಿಗೆ ನಮಗೆ ಬದುಕಲು ಬಿಡುತ್ತಿಲ್ಲ.
–ಮಂಜುನಾಥ ಕಮತೂರು ನಿವಾಸಿ
ಹಗಲು–ರಾತ್ರಿಯೆನ್ನದೆ ಲಾರಿ ಟಿಪ್ಪರ್‌ಗಳು ಸಾಲು ಸಾಲಾಗಿ ಸಂಚರಿಸುತ್ತವೆ. ಮನೆಯಿಂದ ಹೊರಗೆ ಬರಲು ಭಯವಾಗುತ್ತದೆ.
–ಮಂಜಪ್ಪ ಸೇನಿ ಬಸಪ್ಪ ಕ್ಯಾಂಪ್ ನಿವಾಸಿ
ಮೊದಲ ಹಂತದಲ್ಲಿ 37 ಯೋಜನೆ–ಪಿ.ಸಿ. ರೇ
‘ಓವರ್‌ಸೈಟ್ ಅಥಾರಿಟಿ ಇದುವರೆಗೆ ಎಂಟು ಸಭೆಗಳನ್ನು ನಡೆಸಿದೆ. ಇದರಲ್ಲಿ 289 ಯೋಜನೆಗಳ ಅನುಷ್ಠಾನಕ್ಕೆ ₹6900 ಕೋಟಿ ಖರ್ಚಿಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ. ಮೊದಲ ಹಂತದಲ್ಲಿ ₹687 ಕೋಟಿಯಲ್ಲಿ 37 ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸ್ವಲ್ಪ ವಿಳಂಬವಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಎರಡು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ’ ಎಂದು ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮ (ಕೆಎಂಇಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ರೇ ‘ಪ್ರಜಾವಾಣಿ’ಗೆ ಮಾಹಿತಿ ಹಂಚಿಕೊಂಡರು. ‘ರಸ್ತೆಗಳ ಅಭಿವೃದ್ಧಿ ಅರಣ್ಯೀಕರಣ ನೀರಾವರಿ ಶಾಲೆ ಅಂಗನವಾಡಿಗಳ ನಿರ್ಮಾಣ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಒತ್ತು ಕೊಡಲಾಗುವುದು. ಕಾಲಕಾಲಕ್ಕೆ ಓವರ್‌ಸೈಟ್ ಅಥಾರಿಟಿ ಸಭೆ ನಡೆಸುತ್ತಿದೆ. ಅದರ ಸೂಚನೆ ಪ್ರಕಾರ ಗಣಿಬಾಧಿತ ಜಿಲ್ಲೆಗಳಿಂದ ವರದಿ ತರಿಸಿಕೊಂಡು ಅಲ್ಲಿನ ಬೇಡಿಕೆಗಳಿಗೆ ತಕ್ಕಂತೆ ಯೋಜನೆ ರೂಪಿಸಲಾಗುತ್ತಿದೆ. ಕೆಎಂಇಆರ್‌ಸಿಯಲ್ಲಿ ಒಟ್ಟು ₹25000 ಕೋಟಿ ಹಣವಿದೆ. ಹಣಕಾಸು ಇಲಾಖೆಯು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಅದನ್ನು ಹೂಡಿಕೆ ಮಾಡಲಾಗುತ್ತದೆ. ಓವರ್‌ಸೈಟ್ ಅಥಾರಿಟಿ ಮೂಲಕ ಕಾಲಕಾಲಕ್ಕೆ ರೂಪಿಸಲಾಗುವ ಯೋಜನೆಗಳಿಗೆ ತಕ್ಕಂತೆ ಹಣ ಬಿಡುಗಡೆಗೊಳಿಸಲಾಗುತ್ತದೆ’ ಎಂದು ತಿಳಿಸಿದರು.
ಜಿಲ್ಲಾವಾರು ಗಣಿಬಾಧಿತ ಗ್ರಾಮಗಳ ವಿವರ ಜಿಲ್ಲೆ (ಹೆಸರು; ಗಣಿಬಾಧಿತ ಹಳ್ಳಿಗಳು)
ಬಳ್ಳಾರಿ; 125
ವಿಜಯನಗರ; 66
ಚಿತ್ರದುರ್ಗ; 60
ತುಮಕೂರು; 59
ಬೇಡಿಕೆಯುಳ್ಳ ಯೋಜನೆ ತನ್ನಿ: ಎಸ್. ಆರ್. ಹಿರೇಮಠ
‘ಕೆಎಂಇಆರ್‌ಸಿ ಅನುದಾನ ವೆಚ್ಚ ಮಾಡುವುದಕ್ಕೂ ಮುನ್ನ ಎಲ್ಲ ಗಣಿಬಾಧಿತ ಪ್ರದೇಶಗಳಿಗೆ ಭೇಟಿ ಕೊಡಬೇಕು. ಅನಂತರ ಅಲ್ಲಿನ ಜನರ ಸಾಮಾಜಿಕ–ಆರ್ಥಿಕ ಸ್ಥಿತಿಗತಿಯ ಅಧ್ಯಯನ ನಡೆಸಬೇಕು. ಬಳಿಕ ಗ್ರಾಮ ಸಭೆಗಳನ್ನು ನಡೆಸಿ ಗ್ರಾಮಸ್ಥರ ಅಭಿಪ್ರಾಯ ಆಲಿಸಿ ಯೋಜನೆಗಳನ್ನು ರೂಪಿಸಬೇಕು’ ಎನ್ನುತ್ತಾರೆ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷರೂ ಆದ ಪರಿಸರ ಹೋರಾಟಗಾರ ಎಸ್.ಆರ್. ಹಿರೇಮಠ. ಅಂಗನವಾಡಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ. ಅದರೊಂದಿಗೆ ನುರಿತ ಶಿಕ್ಷಕರನ್ನು ನೇಮಿಸಬೇಕು. ಮಕ್ಕಳ ಗುಣಮಟ್ಟದ ಕಲಿಕೆಗೆ ಪೂರಕವಾದ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಉದಾಹರಣೆಗೆ ಕಂಪ್ಯೂಟರ್‌ಗಳ ಮೂಲಕ ಆಧುನಿಕ ಜ್ಞಾನ ಕೊಡಬೇಕು. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡಬೇಕು. ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸಿಗುವಂತಾಗಬೇಕು. ಇನ್ನು ಪರಿಸರ ಪುನರುಜ್ಜೀವನ ಕೆಲಸ ನೈಸರ್ಗಿಕವಾಗಿ ಮಾಡಬೇಕು. ಯಾವ ಪ್ರದೇಶವನ್ನು ಪುನರುಜ್ಜೀವನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆಯೋ ಆ ಪ್ರದೇಶದಲ್ಲಿ ಬೀಜದುಂಡೆಗಳನ್ನು ಹಾಕಿ ಕನಿಷ್ಠ ನಾಲ್ಕೈದು ವರ್ಷ ಜನ–ಜಾನುವಾರುಗಳು ಅಲ್ಲಿ ಓಡಾಡದಂತೆ ಮಾಡಬೇಕು. ಹೀಗೆ ಮಾಡುವುದರಿಂದ ಬೇಗ ಹಸಿರು ಕಾಣಬಹುದು. ಖರ್ಚಿನಲ್ಲಿ ಪಾರದರ್ಶಕತೆಗೆ ಒತ್ತು ಕೊಡಬೇಕು ಎಂದು ಹೇಳಿದರು.
ಮಾಹಿತಿ ಕೇಳಿದ ಸಿಇಸಿ
ಗಣಿಗಾರಿಕೆ ಚಟುವಟಿಕೆ ನಡೆದಿರುವ ಬಳ್ಳಾರಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 2012ರ ಬಳಿಕ ಕೈಗೊಂಡಿರುವ ಮೂಲಸೌಲಭ್ಯ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ಸಿಇಸಿ ಈಚೆಗೆ ಪತ್ರ ಬರೆದಿದೆ. ಜೂನ್ 26ರಂದು ಬರೆದಿರುವ ಪತ್ರದಲ್ಲಿ ಜೂನ್ 6ರಂದು ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ಫಿಮಿ ಹಾಗೂ ಕಿಸ್ಮಾ ಮಾಹಿತಿ ಒದಗಿಸಲು ಒಪ್ಪಿದ್ದು ವಿಳಂಬ ಮಾಡದೆ ಮಾಹಿತಿ ಕೊಡುವಂತೆ ಪತ್ರದಲ್ಲಿ ಕೇಳಲಾಗಿದೆ. ಇದಲ್ಲದೆ ಮೂರೂ ಜಿಲ್ಲೆಗಳಲ್ಲಿ ವಿಶೇಷ ಉದ್ದೇಶದ ನಿಧಿಯಲ್ಲದೆ ಬೇರೆ ಅನುದಾನದಿಂದ ಕೈಗೆತ್ತಿಕೊಂಡಿರುವ ಯೋಜನೆಗಳು ಸಿಇಪಿಎಂಐಝಡ್ ಉದ್ದೇಶಿತ ಯೋಜನೆಗಳ ಪಟ್ಟಿ ಕೊಡುವಂತೆ ಹೇಳಲಾಗಿದೆ.
ಗಣಿಬಾಧಿತ ಪ್ರದೇಶಗಳ ಪರಿಸರ ಪುನಶ್ಚೇತನ ಯೋಜನೆಗೆ ಸಂಗ್ರಹವಾಗಿರುವ ನಿಧಿ ವಿಶೇಷ ಉದ್ದೇಶದ ನಿಧಿ ₹25 ಸಾವಿರ ಕೋಟಿ
‘ಜಿಲ್ಲಾ ಖನಿಜ ನಿಧಿ’
ಬಳ್ಳಾರಿ ಜಿಲ್ಲೆ– ₹1593 ಕೋಟಿ
ವಿಜಯನಗರ ಜಿಲ್ಲೆ ₹751 ಕೋಟಿ
ಚಿತ್ರದುರ್ಗ ಜಿಲ್ಲೆ ₹319.39 ಕೋಟಿ
ತುಮಕೂರು ಜಿಲ್ಲೆ ₹47.38
ಪೂರಕ ಮಾಹಿತಿ: ಹೊನಕೆರೆ ನಂಜುಂಡೇಗೌಡ (ಬಳ್ಳಾರಿ), ಜಿ.ಬಿ. ನಾಗರಾಜ್ (ಚಿತ್ರದುರ್ಗ), ಮೈಲಾರಿ ಲಿಂಗಪ್ಪ (ತುಮಕೂರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.