ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಲಾ ಬರ್ತಿದೆ ದಾರಿಬಿಡಿ... ಸಿರಿವಂತ ಉದ್ಯಮಿಯ ಕನಸಿನ ಕಾರು ಭಾರತಕ್ಕೆ

ಬ್ಯಾಟರಿ ಚಾಲಿತ ವಾಹನ ಯುಗಕ್ಕೆ ಇನ್ನಷ್ಟು ಶಕ್ತಿ
Last Updated 13 ಜನವರಿ 2021, 20:30 IST
ಅಕ್ಷರ ಗಾತ್ರ

ದೇಶದಲ್ಲಿ ಮುಂದಿನ 10 ವರ್ಷಗಳಲ್ಲಿ ಬ್ಯಾಟರಿ ಚಾಲಿತ ಕಾರುಗಳ (ಇ.ವಿ) ದರ್ಬಾರ್ ಶುರುವಾಗಲಿದ್ದು, ಪ್ರಖ್ಯಾತ ಟೆಸ್ಲಾ ಕೂಡ ಇದರ ಭಾಗವಾಗುವ ಇಚ್ಛೆ ತೋರಿದೆ. ರಾಜ್ಯಕ್ಕೆ ಟೆಸ್ಲಾ ಪ್ರವೇಶದೊಂದಿಗೆ ಐಟಿ ಹಬ್ ಎನಿಸಿದ್ದ ಕರ್ನಾಟಕ ಇನ್ನು ಮುಂದೆ ಇ.ವಿ ಹಬ್ ಎಂಬ ಹೆಸರನ್ನೂ ಪಡೆದುಕೊಳ್ಳಬಹುದು. 10ಕ್ಕೂ ಹೆಚ್ಚು ಅಟೊಮೊಬೈಲ್ ಕಂಪನಿಗಳ ಆರ್‌ ಎಂಡ್‌ ಡಿ ಘಟಕ ಮತ್ತು 45ಕ್ಕೂ ಹೆಚ್ಚು ಇ.ವಿ ನವೋದ್ಯಮಗಳು ರಾಜ್ಯದಲ್ಲಿ ನೆಲೆಗೊಂಡಿವೆ.

ವಿಶ್ವದ ಎರಡನೇ ಸಿರಿವಂತ ಉದ್ಯಮಿ ಇಲಾನ್ ಮಸ್ಕ್ ಭಾರತದ ಬ್ಯಾಟರಿ ಚಾಲಿತ ಕಾರು ಮಾರುಕಟ್ಟೆ ಪ್ರವೇಶಿಸುವುದುಕೊನೆಗೂ ಖಚಿತಪಟ್ಟಿದೆ. ಇದೇ ಜನವರಿ 8ರಂದು ಭಾರತದಲ್ಲಿ ಟೆಸ್ಲಾ ಕಾರು ಕಂಪನಿ ನೋಂದಣಿ ಆಗಿದೆ. ₹1 ಲಕ್ಷ ಆರಂಭಿಕ ಶುಲ್ಕದೊಂದಿಗೆ ‘ಟೆಸ್ಲಾ ಇಂಡಿಯಾ ಮೋಟಾರ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್’ ಹೆಸರಿನಲ್ಲಿ ಕಂಪನಿ ನೋಂದಣಿಯಾಗಿದ್ದು, ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಕಾರ್ಪೊರೇಟ್ ಕಚೇರಿ ಇದೆ.

ಕಂಪನಿಗೆ ಮೂವರು ನಿರ್ದೇಶಕರನ್ನು ಹೆಸರಿಸಲಾಗಿದೆ. ವೈಭವ ತನೇಜಾ, ವೆಂಕಟರಂಗಂ ಶ್ರೀರಾಮ್ ಹಾಗೂ ಡೇವಿಡ್ ಜಾನ್ ಫಿನ್‌ಸ್ಟೀನ್ ಅವರು ಕಂಪನಿಯ ನಿರ್ದೇಶಕ ಮಂಡಳಿಯಲ್ಲಿದ್ದಾರೆ. ಇವರು ಭಾರತದ ಟೆಸ್ಲಾ ಇ.ವಿ ಮಾರುಕಟ್ಟೆಯನ್ನು ನೋಡಿಕೊಳ್ಳಲಿದ್ದಾರೆ.

ಬೇಡಿಕೆಗೆ ಅನುಗುಣವಾಗಿ ಟೆಸ್ಲಾ ದೇಶದಲ್ಲಿ ಉತ್ಪಾದನಾ ಘಟಕ ತೆರೆಯಲಿದೆ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ದೇಶೀಯವಾಗಿ ಟಾಟಾ ಮೋಟಾರ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಟೆಸ್ಲಾ ಮುಂದಾಗಿತ್ತು. ಆದರೆ ಇದು ಕಾರ್ಯಗತಗೊಂಡಿಲ್ಲ.

ಹಿಂದೆಯೇ ಬರಬೇಕಿತ್ತು

ಕಳೆದ ನವೆಂಬರ್‌ನಲ್ಲಿ ಟ್ವಿಟರ್ ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದ ಇಲಾನ್ ಮಸ್ಕ್, 2021ರ ಆರಂಭದಲ್ಲಿ ಭಾರತಕ್ಕೆ ಬರುವುದಾಗಿ ಭರವಸೆ ನೀಡಿದ್ದರು. 2016ರಲ್ಲೇ ಟೆಸ್ಲಾ ಕಂಪನಿಯು ಭಾರತದ ಬೃಹತ್ ಇ.ವಿ ಮಾರುಕಟ್ಟೆಗೆ ಪ್ರವೇಶ ಪಡೆಯಬೇಕಿತ್ತು. ಮಾಡೆಲ್ 3 ಕಾರಿಗೆ ಬುಕ್ಕಿಂಗ್ ಕೂಡ ಶುರುವಾಗಿತ್ತು. ಆದರೆ ಮೂಲಸೌಕರ್ಯಗಳು ಇಲ್ಲ ಎಂಬ ಕಾರಣಕ್ಕೆ ಅದು ನನೆಗುದಿಗೆ ಬಿದ್ದಿತ್ತು. ಇದಾದ ಬಳಿಕ 2018ರಲ್ಲಿ ವದಂತಿಗಳು ಹರಿದಾಡಿದ್ದವು. ದೇಶದ ನಿಯಂತ್ರಿತ ವಾತಾವರಣವೇ ಸವಾಲು ಎಂದು ಭಾರತ ಪ್ರವೇಶಕ್ಕೆ ಇದ್ದ ಅಡ್ಡಿಯನ್ನು ಮಸ್ಕ್ ಬಿಚ್ಚಿಟ್ಟಿದ್ದರು.

ತುಮಕೂರಿನಲ್ಲಿ ನಿರ್ಮಾಣ?

ಕರ್ನಾಟಕ, ಆಂ‌ಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಗುಜರಾತ್ ರಾಜ್ಯಗಳು ಟೆಸ್ಲಾಗೆ ಸ್ವಾಗತ ಕೋರಿವೆ. ಆದರೆ ಟೆಸ್ಲಾ ಮಾತ್ರ ನೋಂದಣಿ ವಿಳಾಸಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದೆ. ಕರ್ನಾಟಕ ಸರ್ಕಾರವು ತುಮಕೂರು ಸೇರಿದಂತೆ ಹಲವು ಪ್ರದೇಶಗಳ ಆಯ್ಕೆಯನ್ನು ಟೆಸ್ಲಾಗೆ ನೀಡಿದೆ. ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸ್ಥಾಪನೆಯಾಗಲಿದೆ. ಆದರೆ ಕಾರು ತಯಾರಿಕೆ ಘಟಕ ಎಲ್ಲಿ ಶುರುವಾಗಲಿದೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಮಹಾರಾಷ್ಟ್ರವು ದೇಶೀಯ ಮತ್ತು ವಿದೇಶಿ ವಾಹನ ತಯಾರಕರ ನೆಲೆಯಾಗಿದ್ದು, ಪುಣೆಯ ಸಮೀಪ ಜಾಗ ನೀಡಲು ಮುಂದಾಗಿದೆ.

₹60 ಲಕ್ಷದ ಕಾರು

ಟೆಸ್ಲಾ, ಆರಂಭದಲ್ಲಿ ಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. ಮಾಡೆಲ್ 3 ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ಸಂಪೂರ್ಣ ತಯಾರಾದ ಸ್ಥಿತಿಯಲ್ಲಿ (ಕಂಪ್ಲೀಟ್ ಬಿಲ್ಟ್ ಯೂನಿಟ್–ಸಿಬಿಯು) ಭಾರತಕ್ಕೆ ಬರಲಿದೆ. ಬೇಡಿಕೆ ನೋಡಿಕೊಂಡು ದೇಶದಲ್ಲೇ ಕಾರು ಉತ್ಪಾದನೆಯ ಸಾಧ್ಯತೆ ಇದೆ.

ಮಾಡೆಲ್ 3 ಎಸ್‌ಆರ್+ ಹೆಸರಿನ ಟೆಸ್ಲಾ ಕಂಪನಿಯ ಕಾರು ಭಾರತದಲ್ಲಿ ₹55 ಲಕ್ಷದಿಂದ ₹60 ಲಕ್ಷ ಬೆಲೆಗೆ ಲಭ್ಯವಾಗಬಹುದು. ಆರಂಭದಲ್ಲಿ 2,500 ಕಾರುಗಳು ಭಾರತಕ್ಕೆ ಆಮದು ಆಗಲಿವೆ. ಹೀಗಾಗಿ ಬೆಲೆ ಗಮನಾರ್ಹವಾಗಿ ಕಡಿತವಾಗಬಹುದು ಎಂದು ವಿಶ್ಲೇಷಿಸಲಾಗಿದೆ. 2021ರ ಮಧ್ಯಭಾಗದಲ್ಲಿ ದೇಶದಲ್ಲಿ ಕಾರು ಬಿಡುಗಡೆ ಆಗುವ ಸಾಧ್ಯತೆಯಿದೆ.

ಬೆಂಗಳೂರೇ ಏಕೆ?

ಇ.ವಿ. ಹಬ್‌ ಆಗುವ ಎಲ್ಲ ಸಾಧ್ಯತೆಗಳೂ ಬೆಂಗಳೂರಿಗೆ ಇವೆ ಎಂಬುದನ್ನು ಟೆಸ್ಲಾ ಕಂಪನಿ ಅರಿತಿದೆ. ಬ್ಯಾಟರಿ ಚಾಲಿತವಾದ ವಾಹನ ತಯಾರಿಸುವ10ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿರುವ ಬೆಂಗಳೂರು, ದೇಶದ ತಾಂತ್ರಿಕ ಮತ್ತು ಸಂಶೋಧನೆ ಮತ್ತು ವಿನ್ಯಾಸ (ಆರ್‌ ಎಂಡ್‌ ಡಿ) ಕೇಂದ್ರಗಳ ಅತಿದೊಡ್ಡ ಕ್ಲಸ್ಟರ್‌ಗಳಲ್ಲಿ ಒಂದಾಗಿದೆ. ಮರ್ಸಿಡಿಸ್ ಬೆಂಜ್, ಗ್ರೇಟ್ ವಾಲ್ ಮೋಟಾರ್ಸ್, ಜನರಲ್ ಮೋಟಾರ್ಸ್, ಕಾಂಟಿನೆಂಟಲ್, ಮಹೀಂದ್ರಾ ಎಂಡ್‌ ಮಹೀಂದ್ರಾ, ಬಾಷ್, ಡೆಲ್ಫಿ ಮತ್ತು ವೋಲ್ವೊ ಕಂಪನಿಗಳು ಬೆಂಗಳೂರಿನಲ್ಲಿ ಆರ್‌ ಎಂಡ್‌ ಡಿ ಘಟಕಗಳನ್ನು ಹೊಂದಿವೆ.

ಮಹೀಂದ್ರಾ ಎಲೆಕ್ಟ್ರಿಕ್, ಅಥರ್ ಎನರ್ಜಿ ಸೇರಿದಂತೆ 45ಕ್ಕೂ ಹೆಚ್ಚು ಬ್ಯಾಟರಿ ಚಾಲಿತ ವಾಹನ ನವೋದ್ಯಮಗಳು ರಾಜ್ಯದಲ್ಲಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಇವುಗಳಲ್ಲಿ ಹಲವು ದ್ವಿಚಕ್ರ ವಾಹನಗಳ ಮೇಲೆ ಕೇಂದ್ರೀಕೃತವಾಗಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರಕ್ಕೆ ಪ್ರವೇಶಿಸುವುದಾಗಿ ಇತ್ತೀಚೆಗೆ ಘೋಷಿಸಿದ ಓಲಾ ಎಲೆಕ್ಟ್ರಿಕ್ ಕೂಡ ಬೆಂಗಳೂರಿನಲ್ಲಿ ನೆಲೆಗೊಂಡಿದೆ.

ಬೆಂಗಳೂರಿನಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಹುಬ್ಬಳ್ಳಿ–ಧಾರವಾಡದಲ್ಲಿ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ ಘಟಕಗಳನ್ನೂ ಒಳಗೊಂಡಂತೆ ಇ.ವಿ ಹಬ್ ಸ್ಥಾಪನೆಗೆ ಕರ್ನಾಟಕವು ಭಾರಿ ಉತ್ತೇಜನ ನೀಡುತ್ತಿದೆ. ಸ್ಟ್ಯಾಂಪ್ ಡ್ಯೂಟಿಗೆ 100 ಪ್ರತಿಶತ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ಮರುಪಾವತಿ, ಹೂಡಿಕೆ ಪ್ರಚಾರ ಸಬ್ಸಿಡಿ ಮುಂತಾದ ಸರ್ಕಾರದ ಪ್ರೋತ್ಸಾಹ ಕ್ರಮಗಳಿಂದಾಗಿ ಕಂಪನಿಗಳು ರಾಜ್ಯಕ್ಕೆ ಬರುತ್ತಿವೆ.

ತಜ್ಞರ ಅಭಿಪ್ರಾಯ

lಟೆಸ್ಲಾ ಪ್ರವೇಶವು ಇ.ವಿ ವಿಭಾಗಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದ್ದು, ಬ್ಯಾಟರಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ

lಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಅತಿಹೆಚ್ಚು ಇ.ವಿ ತಯಾರಿಕಾ ಸಾಮರ್ಥ್ಯ ಹೊಂದಲಿದೆ

lಇ.ವಿ ತಯಾರಿಕೆಯ ಜಾಗತಿಕ ಹಬ್ ಆಗಬೇಕೆಂಬ ಭಾರತದ ಮಹತ್ವಾಕಾಂಕ್ಷೆಗೆ ಟೆಸ್ಲಾ ಪ್ರವೇಶ ಉತ್ತಮ ವೇದಿಕೆ ಎನಿಸಿದೆ

lಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆಯ ಅನಿಶ್ಚಿತತೆಯಿಂದಾಗಿ ಸದ್ಯಕ್ಕೆ ವಾಹನ ಉದ್ಯಮದ ಮೇಲೆ ಪರಿಣಾಮ ಬೀರುವುದಿಲ್ಲ

lಟೆಸ್ಲಾ ಕಾರುಗಳ ಬೆಲೆ ಕನಿಷ್ಠ ₹50 ಲಕ್ಷದಿಂದ ಆರಂಭವಾಗುವ ಕಾರಣ ದೇಶೀಯ ವಾಹನೋದ್ಯಮಕ್ಕೆ ಧಕ್ಕೆಯಾಗಲಾರದು

lಭಾರತದಲ್ಲಿ ಸರಿಯಾದ ಚಾರ್ಜಿಂಗ್ ಮೂಲಸೌಕರ್ಯ ಇಲ್ಲ; ಹಾಗಾಗಿ, ವಿಶೇಷವಾಗಿ ದೂರದ ಪ್ರಯಾಣಕ್ಕಾಗಿ ಕಾರು ಖರೀದಿಸುವವರು ಇ.ವಿ. ಕಾರು ಖರೀದಿಗೆ ಹಿಂದೇಟು ಹಾಕಬಹುದು

lಕಾರನ್ನು ಆಮದು ಮಾಡಿಕೊಳ್ಳುವುದರಿಂದ, ಯಾವುದೇ ಭಾರತೀಯ ವಾಹನ ಬಿಡಿಭಾಗ ಉತ್ಪಾದಕರಿಗೆ ಪ್ರಯೋಜನವಾಗುವುದಿಲ್ಲ

lದೇಶದಲ್ಲಿ ಬ್ಯಾಟರಿ ತಂತ್ರಜ್ಞಾನ ಅಭಿವೃದ್ಧಿಯಾಗಿ, ಚಾರ್ಜಿಂಗ್ ಮೂಲಸೌಕರ್ಯ ಹೆಚ್ಚಿ, ₹10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ವಾಹನ ಸಿಗಲು ಶುರುವಾದಾಗ, ವಾಹನ ಉದ್ಯಮದಲ್ಲಿ ಸ್ಪರ್ಧೆ ತೀವ್ರಗೊಳ್ಳಬಹುದು

ಇಲಾನ್‌ ಎಂಬ ದಂತಕತೆ

ಪತ್ರಿಕೆಗಳಿಗೆ ಹೊಸ ವೆಬ್‌ಸೈಟ್‌ಗಳ ಕುರಿತು ಮಾಹಿತಿ ನೀಡುವಲ್ಲಿಂದ ಹಣಕಾಸು ಸೇವೆ ಒದಗಿಸುವ ಕಂಪನಿ ಆರಂಭಿಸುವವರೆಗೆ, ಕಾರು ತಯಾರಿಕೆಯಿಂದ ಆರಂಭಿಸಿ ರಾಕೆಟ್‌, ಹೈಪರ್‌ಲೂಪ್‌ ತಯಾರಿಕೆವರೆಗೆ ಇಲಾನ್‌ ಮಸ್ಕ್‌ ಅವರ ಜೀವನ ಯಾತ್ರೆಯೇ ಅತ್ಯಂತ ರೋಚಕವಾದದ್ದು.

ಇಲಾನ್‌ ಹುಟ್ಟಿದ್ದು 1971ರ ಜೂನ್‌ 28ರಂದು. ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ ಅವರು, ಅಲ್ಲಿನ ಕಡ್ಡಾಯ ಮಿಲಿಟರಿ ಸೇವೆಯ ನಿಯಮದಿಂದ ತಪ್ಪಿಸಿಕೊಳ್ಳಲು ಸಣ್ಣ ವಯಸ್ಸಿನಲ್ಲೇ ಕೆನಡಾಕ್ಕೆ ಹೋಗುತ್ತಾರೆ. ಅಲ್ಲಿಯ ಪೌರತ್ವ ಸ್ವೀಕರಿಸಿದರೆ ಅಮೆರಿಕದ ವೀಸಾ ಪಡೆಯುವುದು ಸುಲಭ ಎಂಬ ಕಾರಣಕ್ಕೆ ಕೆನಡಾದ ಪ್ರಜೆಯಾಗಿ, ಆನಂತರ ವಿದ್ಯಾರ್ಥಿಯಾಗಿ ಅಮೆರಿಕ ಸೇರಿಕೊಳ್ಳುತ್ತಾರೆ.

l ಇಲಾನ್‌ ಅವರು 10ವರ್ಷ ವಯಸ್ಸಿನವರಿದ್ದಾಗ ಅವರ ತಂದೆ ತಾಯಿ ವಿಚ್ಛೇದನಗೊಂಡರು. ಸಹೋದರ ಮತ್ತು ಸಹೋದರಿಯ ಜತೆ ಬೆಳೆದ ಅವರು ಕಂಪ್ಯೂಟರ್‌ಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು

l ತಾವಾಗಿಯೇ ಕಂಪ್ಯೂಟರ್‌ ತಂತ್ರಾಂಶ ರೂಪಿಸುವುದನ್ನು ಕಲಿತು, 12ನೇ ವಯಸ್ಸಿನಲ್ಲಿ ತಾನೇ ಅಭಿವೃದ್ಧಿಪಡಿಸಿದ ‘ಬ್ಲಾಸ್ಟಾರ್‌’ ಎಂಬ ಕಂಪ್ಯೂಟರ್‌ ಗೇಮಿಂಗ್‌ ಸಾಫ್ಟ್‌ವೇರ್‌ ಒಂದನ್ನು ಮಾರಾಟ ಮಾಡಿದರು.

l 1989ರಲ್ಲಿ ಶಿಕ್ಷಣ ಪಡೆಯಲು ಕೆನಡಾಕ್ಕೆ ಬಂದರು. 1992ರಲ್ಲಿ ಅಮೆರಿಕಕ್ಕೆ ಬಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವನ್ನು ಸೇರಿಕೊಂಡರು.

l 1995ರಲ್ಲಿ ಸಹೋದರ ಕಿಂಬಲ್‌ ಮಸ್ಕ್‌ ಜತೆ ಸೇರಿ ‘ಝಿಪ್‌2 ಕಾರ್ಪೊರೇಷನ್‌’ ಎಂಬ ಕಂಪನಿ ಆರಂಭಿಸಿದರು

l 1999ರಲ್ಲಿ ಕಾಂಪ್ಯಾಕ್‌ ಕಂಪ್ಯೂಟರ್‌ ಕಾರ್ಪೊರೇಷನ್‌ ಸಂಸ್ಥೆಯ ಅಂಗಸಂಸ್ಥೆಯೊಂದು ಝಿಪ್‌2 ಕಂಪನಿಯನ್ನು (ಸುಮಾರು ₹2,200 ಕೋಟಿಗೆ) ಖರೀದಿಸಿತು.

l ಅದೇ ವರ್ಷ ಇಬ್ಬರು ಸಹೋದರರು ಸೇರಿ ‘ಎಕ್ಸ್‌ ಡಾಟ್‌ಕಾಂ’ (X.com) ಎಂಬ ಹಣಕಾಸು ಸೇವಾ ಸಂಸ್ಥೆಯನ್ನು ಆರಂಭಿಸಿದರು. ನಂತದ ಅದು ‘ಪೇಪಾಲ್‌’ ಎಂದು ಹೆಸರು ಬದಲಿಸಿಕೊಂಡಿತು.

l 2002ರಲ್ಲಿ ಆ ಕಂಪನಿಯನ್ನು ಇ–ಬೇ ಕಂಪನಿ ಖರೀದಿಸಿತು. ಈ ವಹಿವಾಟಿನಿಂದ ಇಲಾನ್‌ ಶತಕೋಟಿಯ ಉದ್ಯಮಿ ಎನಿಸಿಕೊಂಡರು.

l 2002ರಲ್ಲಿ ತಮ್ಮ ಮೂರನೇ ಕಂಪನಿ, ಬಾಹ್ಯಾಕಾಶ ನೌಕೆಗಳನ್ನು ತಯಾರಿಸುವ ‘ಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಟೆಕ್ನಾಲಜೀಸ್‌ ಕಾರ್ಪೊರೇಷನ್‌ (ಸ್ಪೇಸ್‌ ಎಕ್ಸ್‌) ಆರಂಭಿಸಿದರು.

l 2016ರಲ್ಲಿ ಸೋಲಾರ್‌ಸಿಟಿ ಕಾರ್ಪೊರೇಷನ್‌ ಸಂಸ್ಥೆಯನ್ನು ಖರೀದಿಸಿದರು.

l ಸುರಂಗ ಮಾರ್ಗಗಳನ್ನು ನಿರ್ಮಿಸಿ, ರಸ್ತೆಯ ಮೇಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2017ರಲ್ಲಿ ಸುರಂಗ ಕೊರೆಯುವ ‘ಟಿಬಿಸಿ’ ಎಂಬ ಕಂಪನಿ ಆರಂಭಿಸಿದರು. ತಮ್ಮದೇ ಸ್ಪೇಸ್‌ಎಕ್ಸ್ ಸಂಸ್ಥೆಯಲ್ಲಿ ಸುರಂಗ ಕೊರೆಯುವ ಮೂಲಕ ಅವರು ಪರೀಕ್ಷೆ ನಡೆಸಿದರು.

l 2013ರಲ್ಲಿ ಹೊಸ ಮಾದರಿಯ ಸಾರಿಗೆ ವ್ಯವಸ್ಥೆ ‘ಹೈಪರ್‌ಲೂಪ್‌’ ಅನ್ನು ಘೋಷಿಸಿದರು. 2017ರಲ್ಲಿ ಸ್ಪೇಸ್‌ಎಕ್ಸ್‌ ಆವರಣದಲ್ಲೇ ಇದರ ಮೊದಲ ಪ್ರಯೋಗವೂ ನಡೆಯಿತು.

ಟೆಸ್ಲಾ ಮೋಟರ್ಸ್‌

ಸೋಲಾರ್‌ ಚಾವಣಿ, ಬ್ಯಾಟರಿ ಉತ್ಪನ್ನಗಳು ಹಾಗೂ ಕೈಗೆಟಕುವ ದರದಲ್ಲಿ ಬ್ಯಾಟರಿ‌ ಚಾಲಿತ ಕಾರುಗಳನ್ನು ತಯಾರಿಸುವ ಉದ್ದೇಶದಿಂದ 2003ರಲ್ಲಿ ಟೆಸ್ಲಾ ಮೋಟರ್ಸ್ ಎಂಬ ಸಂಸ್ಥೆಯನ್ನು ಆರಂಭಿಸಲಾಯಿತು. ಇಲಾನ್‌ ಮಸ್ಕ್‌ ಈ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ.

ಐದು ವರ್ಷಗಳ ನಂತರ, 2008ರಲ್ಲಿ ಸಂಸ್ಥೆಯು ಮೊದಲ ಸ್ಪೋರ್ಟ್ಸ್‌ ಕಾರು ‘ರೋಡ್‌ಸ್ಟರ್‌’ ಅನ್ನು ಬಿಡುಗಡೆ ಮಾಡಿತು. ಕೇವಲ 3.7 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 60 ಮೈಲು (ಸುಮಾರು 96.5 ಕಿ.ಮೀ.) ವೇಗವನ್ನು ಪಡೆಯಬಲ್ಲಂಥ ಈ ಕಾರು ಮಾರುಕಟ್ಟೆಯ ಗಮನ ಸೆಳೆಯಿತು. ಲಿಥಿಯಂ ಅಯಾನ್‌ ಬ್ಯಾಟರಿಗಳನ್ನೊಳಗೊಂಡ ಈ ಕಾರು ಒಮ್ಮೆ ಚಾರ್ಜ್‌ ಮಾಡಿದರೆ 250 ಮೈಲು (ಸುಮಾರು 400 ಕಿ.ಮೀ) ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿತ್ತು.

ಮೊದಲ ಸೆಡಾನ್‌ ಕಾರು ‘ಮಾಡೆಲ್‌ ಎಸ್‌’ ಅನ್ನು ತಯಾರಿಸುವುದಾಗಿ 2008ರ ಆಗಸ್ಟ್‌ನಲ್ಲಿಸಂಸ್ಥೆಯು ಘೋಷಿಸಿತು. 2012ರಲ್ಲಿ ಇದರ ತಯಾರಿಕೆ ಆರಂಭವಾಯಿತು. ಒಂದೇ ಚಾರ್ಜಿಂಗ್‌ನಲ್ಲಿ 265 ಮೈಲು (425 ಕಿ.ಮೀ) ಕ್ರಮಿಸಬಲ್ಲ ಈ ಕಾರಿನ ಬೆಲೆ ಸುಮಾರು ₹42 ಲಕ್ಷ ಆಗಿತ್ತು. ಬಿಎಂಡಬ್ಲ್ಯು 5 ಸೀರೀಸ್‌ ಕಾರಿಗೆ ಇದು ಸ್ಪರ್ಧಿ ಎನ್ನುವಂತಾಯಿತು. 2013ರಲ್ಲಿ ‘ವರ್ಷದ ಕಾರು’ ಎಂಬ ಹೆಗ್ಗಳಿಕೆಯೂ ಇದಕ್ಕೆ ಲಭಿಸಿತು. 2017ರಲ್ಲಿ ಕಾರು ತಯಾರಿಕೆಯಲ್ಲಿ ಜನರಲ್‌ ಮೋಟರ್ಸ್‌ ಅನ್ನು ಟೆಸ್ಲಾ ಹಿಂದಿಕ್ಕಿತು.

2018ರಲ್ಲಿ ಸಂಸ್ಥೆಗೆ ಒಂದಷ್ಟು ಹಿನ್ನಡೆಯಾಗಿ, ಶೇ 9ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕಾಯಿತು. ಕಂಪನಿಯನ್ನು ಮರುವಿನ್ಯಾಸಗೊಳಿಸಲಾಯಿತು. 2018ರ ಜೂನ್‌ ವೇಳೆಗೆ ಸಂಸ್ಥೆ ಹಳಿಗೆ ಬಂತು. ತಯಾರಿಕೆಯ ಗುರಿಯನ್ನು ತಲುಪಲು ಸಾಧ್ಯವಾಯಿತು.

ಭಾರಿ ನಿರೀಕ್ಷೆ

2030ರ ವೇಳೆಗೆ ಮಾರಾಟವಾಗುವ ವಾಣಿಜ್ಯ ಬಳಕೆ ಕಾರುಗಳಲ್ಲಿ ಶೇ 70ರಷ್ಟು ಮತ್ತು ಖಾಸಗಿ ಕಾರುಗಳಲ್ಲಿ ಶೇ 30ರಷ್ಟು ವಿದ್ಯುತ್ ಚಾಲಿತವಾಗಿರಬೇಕು, ಶೇ 40ರಷ್ಟು ಬಸ್ಸುಗಳು ಹಾಗೂ ಶೇ 80ರಷ್ಟು ದ್ವಿಚಕ್ರ ವಾಹನಗಳು ವಿದ್ಯುತ್‌ ಚಾಲಿತವಾಗಿರಬೇಕು ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ನೀತಿ ಆಯೋಗ ಹಾಕಿಕೊಂಡಿದೆ.

ಇದು ಸಾಧ್ಯವಾಗಬೇಕಾದರೆ 2030ರ ವೇಳೆಗೆ ಈ ಕ್ಷೇತ್ರದಲ್ಲಿ ಒಟ್ಟಾರೆ ₹12.50 ಲಕ್ಷ ಕೋಟಿ ಹೂಡಿಕೆ ಆಗಬೇಕಾಗಬಹುದು ಎಂದು ವರದಿಯೊಂದು ಹೇಳಿದೆ.

ವಾಹನ ಸಾಲ ಮಾರುಕಟ್ಟೆಗೂ ಇದರಿಂದ ಉತ್ತೇಜನ ಲಭಿಸಲಿದೆ ಎಂದು ವರದಿ ಹೇಳಿದೆ. ಇಂತಹ ವಾಹನ ಖರೀದಿಸುವವರಲ್ಲಿ ಶೇ 50ರಷ್ಟು ಮಂದಿ ಸಾಲ ಪಡೆದರೂ 2030ರ ವೇಳೆಗೆ ಸಾಲ ಮಾರುಕಟ್ಟೆಯು ಶೇ 50ರಷ್ಟು ಹಿಗ್ಗಬಹುದು ಎನ್ನಲಾಗಿದೆ.

***

ವರದಿ: ಉದಯ ಯು., ಅಮೃತ ಕಿರಣ್ ಬಿ.ಎಂ.

(ಆಧಾರ: ಪಿಟಿಐ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT