ಸೋಮವಾರ, ಅಕ್ಟೋಬರ್ 3, 2022
24 °C

ಅನುಭವ ಮಂಟಪ | ಹಸಿರು ಹೊದ್ದ ಕೋಸ್ಟರೀಕ- ಮರ ಬೆಳೆಸಿದರೆ ಭತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನರನ್ನು ಒಳಗೊಂಡು ನಡೆಸಲಾಗುವ ಪರಿಸರ ಸಂರಕ್ಷಣೆ ಮತ್ತು ಅರಣ್ಯೀಕರಣಕ್ಕೆ ಕೋಸ್ಟರೀಕ ಅನುಸರಿಸುತ್ತಿರುವ ಮಾದರಿಯು, ಅತ್ಯಂತ ಯಶಸ್ವಿ ಎಂದು ಹೆಸರಾಗಿದೆ. ಜನ ಸಾಮಾನ್ಯರು ತಮ್ಮ ಹಿತ್ತಲು, ಕೈತೋಟ, ಕೃಷಿ ಭೂಮಿಯಲ್ಲಿ ಬೆಳೆಸುವ ಪ್ರತಿ ಮರಕ್ಕೂ ಸರ್ಕಾರವು ಇಂತಿಷ್ಟು ಎಂದು ಹಣವನ್ನು ನೀಡುತ್ತದೆ. ಹೀಗೆ ಪರಿಸರ ಸಂರಕ್ಷಣೆಗೆ ಉತ್ತೇಜನವಾಗಿ ಹಣ ನೀಡುವ ನೀತಿಯಿಂದ ಕೋಸ್ಟರೀಕವು ಬಹಳಷ್ಟನ್ನು ಸಾಧಿಸಿದೆ.

ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳ ನಡುವೆ ಇರುವ ಒಂದು ಸಣ್ಣ ರಾಷ್ಟ್ರ ಕೋಸ್ಟರೀಕ. ಎರಡು ಕಡೆ ಸಮುದ್ರದಿಂದ ಸುತ್ತುವರಿದಿರುವ ಈ ದೇಶದಲ್ಲಿ ಅರಣ್ಯವೇ ಪ್ರಮುಖ ನೈಸರ್ಗಿಕ ಸಂಪನ್ಮೂಲ. 1940ರ ಸುಮಾರಿನಲ್ಲಿ ದೇಶದ ಒಟ್ಟು ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶದ ಪ್ರಮಾಣವು ಶೇ 75ರಷ್ಟು ಇತ್ತು. ಆದರೆ, ನಗರೀಕರಣ ಮತ್ತು ವಾಣಿಜ್ಯ ಬೆಳೆಗಳಿಗಾಗಿ ಕಾಡು ಕಡಿಯಲು ಆರಂಭಿಸಿದ್ದರಿಂದ ನಂತರದ 45 ವರ್ಷಗಳಲ್ಲಿ ದೇಶದಲ್ಲಿನ ಅರಣ್ಯದ ಪ್ರಮಾಣವು ಶೇ 21ರಷ್ಟಕ್ಕೆ ಕುಸಿದಿತ್ತು. ಅರಣ್ಯವನ್ನು ಉಳಿಸಿಕೊಳ್ಳಲೇಬೇಕು ಎಂದು ಕೋಸ್ಟರೀಕ ಪಣತೊಟ್ಟಿದ್ದು ಆಗಲೇ.

ಅರಣ್ಯ ನಾಶದ ಅಪಾಯಗಳನ್ನು ಅರಿತ ಕೋಸ್ಟರೀಕ ಸರ್ಕಾರವು 1980ರ ದಶಕದ ಕೊನೆಯಲ್ಲಿ ಅರಣ್ಯದ ಮರಗಳನ್ನು ಕಡಿಯುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿತು. ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿತು. ಆದರೆ, ಅಷ್ಟರಿಂದ ಮಾತ್ರ ಅರಣ್ಯದ ಪುನರುಜ್ಜೀವನ ಸಾಧ್ಯವಿರಲಿಲ್ಲ. ಇದಕ್ಕಾಗಿ ಉತ್ತೇಜನಾ ಭತ್ಯೆ ಆಧಾರದಲ್ಲಿ ಜನರನ್ನು ಪರಿಸರ ಸಂರಕ್ಷಣೆಯಲ್ಲಿ ಮತ್ತು ಅರಣ್ಯೀಕರಣದಲ್ಲಿ ತೊಡಗಿಸಿಕೊಳ್ಳುವ ನೀತಿಯನ್ನು ರೂಪಿಸಲಾಯಿತು.

1940–1985ರ ಮಧ್ಯೆ ಕೋಸ್ಟರೀಕದ ಬಹುತೇಕ ಅರಣ್ಯ ಭಾಗವು ಬಾಳೆ ತೋಟ, ಕಾಫಿ ತೋಟ ಮತ್ತು ಕಬ್ಬಿನ ಗದ್ದೆಗಳಾಗಿದ್ದವು. ಈ ಮೂರೂ ಬೆಳೆಗಳ ರಫ್ತೇ ದೇಶದ ಪ್ರಮುಖ ಮತ್ತು ಪ್ರಧಾನ ಆದಾಯವಾಗಿತ್ತು. 1990ರ ಹೊತ್ತಿಗೆ ಮರುಅರಣ್ಯೀಕರಣಕ್ಕೆ ಒತ್ತು ನೀಡುವ ಬಗ್ಗೆ ಸರ್ಕಾರ ಗಮನ ಹರಿಸಿತು. ಆದರೆ, ಮರುಅರಣ್ಯೀಕರಣದಿಂದ ವಾಣಿಜ್ಯ ಬೆಳೆಗಳ ತೋಟಗಳೆಲ್ಲವೂ ನಾಶವಾಗುತ್ತಿದ್ದವು ಮತ್ತು ಅಪಾರ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಳ್ಳುವ ಅಪಾಯವಿತ್ತು. ಈ ಅಪಾಯವನ್ನು ನಿಭಾಯಿಸುವ ಸಲುವಾಗಿಯೇ, ಪರಿಸರ ಸಂರಕ್ಷಣೆ ಮತ್ತು ಮರುಅರಣ್ಯೀಕರಣದಲ್ಲಿ ಭಾಗಿಯಾಗುವ ಜನರಿಗೆ ಭತ್ಯೆ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಇದಕ್ಕಾಗಿ 1988–92ರ ಅವಧಿಯಲ್ಲಿ ‘ಫಾರೆಸ್ಟ್‌ ಏಡ್‌ ಸರ್ಟಿಫಿಕೇಟ್‌’ ಎಂಬ ಕಾರ್ಯಕ್ರಮವನ್ನು ರೂಪಿಸಲಾಯಿತು. ತಮ್ಮ ತೋಟಗಳಲ್ಲಿ ಇರುವ ಮರಗಳನ್ನು ಉಳಿಸಿಕೊಳ್ಳುವವರಿಗೆ ಭತ್ಯೆ ನೀಡುವ ಕಾರ್ಯಕ್ರಮವದು. ಜತೆಗೆ ಹೊಸದಾಗಿ ಮರಗಳನ್ನು ಬೆಳೆಸುವವರಿಗೂ ಭತ್ಯೆ ನೀಡಲಾಗುತ್ತಿತ್ತು. 1992ರ ನಂತರ ಈ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು. ಮರುಅರಣ್ಯೀಕರಣದಿಂದ ನಷ್ಟವಾಗುವ ಕೃಷಿ ಜಮೀನಿಗೆ ವಿಶೇಷ ಭತ್ಯೆ ನೀಡುವ ಕಾರ್ಯಕ್ರಮವನ್ನೂ ರೂಪಿಸಲಾಯಿತು. ಇದರಿಂದ ರೈತರ ಆದಾಯಕ್ಕೆ ಯಾವುದೇ ಹೊಡೆತ ಬೀಳಲಿಲ್ಲ. ಬದಲಿಗೆ ರೈತರ ಆದಾಯಕ್ಕೂ ಭದ್ರತೆ ದೊರೆಯಿತು, ಮರುಅರಣ್ಯೀಕರಣವೂ ಸಾಧ್ಯವಾಯಿತು. ನಂತರದ ವರ್ಷಗಳಲ್ಲಿ, ಮರುಅರಣ್ಯೀಕರಣಕ್ಕೆ ಇದೇ ಸ್ವರೂಪದ ಹೊಸ ಹೊಸ ಕಾರ್ಯಕ್ರಮಗಳನ್ನು ಸೇರಿಸಲಾಯಿತು. 1987ರಲ್ಲಿ ಶೇ 21ರಷ್ಟಕ್ಕೆ ಕುಸಿದಿದ್ದ ಅರಣ್ಯ ಪ್ರದೇಶದ ವ್ಯಾಪ್ತಿಯು 2005ರ ವೇಳೆಗೆ ಶೇ 51ರಷ್ಟಾಗಿತ್ತು.

ಮರುಅರಣ್ಯೀಕರಣದಿಂದ, ದೇಶದ ರಫ್ತು ಆದಾಯದಲ್ಲಿ ಆದ ಖೋತಾವನ್ನು ತುಂಬಿಕೊಳ್ಳಲು ಕೋಸ್ಟರೀಕ ಸರ್ಕಾರವು ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿತು. ಈ ಮೂಲಕ ಆದಾಯ ನಷ್ಟವನ್ನು ತುಂಬಿಕೊಳ್ಳಲಾಯಿತು. ಹೀಗೆ ಪರಿಸರ ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅಭಿವೃದ್ಧಿಪಡಿಸಿದ ಕೋಸ್ಟರೀಕದ ಮಾದರಿಯೂ ಮಹತ್ವದ್ದು.

ಪರಿಸರ ಪ್ರವಾಸೋದ್ಯಮ: ಅಭಿವೃದ್ಧಿಯ ಮಾದರಿ

ಅರಣ್ಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಹಾಗೂ ಜನರ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಿದರೆ ಮಾತ್ರ ಅರಣ್ಯ ಸಂರಕ್ಷಣೆ ಸಾಧ್ಯವಾಗುತ್ತದೆ ಎಂಬ ವಾದಕ್ಕೆ ಕೋಸ್ಟರೀಕ ದೇಶ ಅಪವಾದ. ಈ ದೇಶದಲ್ಲಿ ಅರಣ್ಯ ಸಂಪತ್ತು ದಾಖಲೆ ಮಟ್ಟದಲ್ಲಿ ಹೆಚ್ಚಳವಾಗಿದೆ. ಅದರೆ ಜೊತೆಜೊತೆಗೆ ಈ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನೂ ಹಾಗೂ ಜನರಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನೂ ಒದಗಿಸಲಾಗಿದೆ. ಹಲವು ದೇಶಗಳಲ್ಲಿ ಕಂಡುಬರುವ ಕಾಡಂಚಿನ ಜನರ ಅರಣ್ಯರೋದನ ಇಲ್ಲಿಲ್ಲ. 

ಕೋಸ್ಟರೀಕದ ಮತ್ತೊದು ಹೆಗ್ಗಳಿಕೆ ಎಂದರೆ ಪ್ರವಾಸೋದ್ಯಮ. ಇದು ಪರಿಸರವನ್ನು ಆಧರಿಸಿದ ಪ್ರವಾಸೋದ್ಯಮ. ಕೋಸ್ಟರೀಕ ದೇಶವು ತನ್ನ ಅರಣ್ಯ ಸಂಪತ್ತಿನ ಕಾರಣಕ್ಕಾಗಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಹಾಗೆಯೇ ದೇಶದ ಜನರು ಅರಣ್ಯಕ್ಕೆ ನೀಡಿದ ಗೌರವದಿಂದಾಗಿ, ಅದನ್ನು ಉಳಿಸಿ ಬೆಳೆಸಿಕೊಂಡ ಕಾರಣದಿಂದಾಗಿ ಪರಿಸರ ಪ್ರವಾಸೋದ್ಯಮವು ಅಗಾಧವಾಗಿ ಬೆಳೆದಿದೆ. ಸುಮಾರು ಮೂರು ಲಕ್ಷ ಪ್ರವಾಸಿಗರು ಕೋಸ್ಟರೀಕದ ಕಾಡುಗಳನ್ನು ನೋಡಲು ಪ್ರತೀ ವರ್ಷ ಬರುತ್ತಾರೆ. ಪ್ರವಾಸೋದ್ಯಮವು ದೇಶದ ಜಿಡಿಪಿಗೆ ಶೇ 8ಕ್ಕಿಂತಲೂ ಹೆಚ್ಚು ಕೊಡುಗೆ ನೀಡುತ್ತಿದೆ. ದೇಶದ ಸುಮಾರು 10ರಷ್ಟು ಜನರು ಈ ವಲಯವನ್ನು ನೆಚ್ಚಿಕೊಂಡಿದ್ದಾರೆ ಎಂಬುದನ್ನು ಗಮನಿಸಿದರೆ, ಈ ಕ್ಷೇತ್ರ ಬೆಳೆದಿರುವ ಪರಿ ತಿಳಿಯುತ್ತದೆ. 

ಇತರ ದೇಶಗಳು ತಮ್ಮ ದೇಶಕ್ಕೆ ಪ್ರವಾಸಿಗರನ್ನು ಸೆಳೆಯುವ ಆಕರ್ಷಕ ಮಾದರಿಗಳ ಬದಲಾಗಿ, ಸಮಗ್ರ ಅಭಿವೃದ್ಧಿ ಮಾದರಿಯನ್ನು ಕೋಸ್ಟರೀಕ ಅಳವಡಿಸಿಕೊಂಡಿರುವುದರಿಂದ ಪ್ರವಾಸೋದ್ಯಮವೂ ಬೆಳೆದಿದೆ. ಪ್ರವಾಸೋದ್ಯಮವನ್ನು ಕೇವಲ ಉದ್ಯೋಗ ಸೃಷ್ಟಿಸುವ ಮಾರ್ಗವಾಗಿ ಬಳಸಿಕೊಳ್ಳದೇ, ಸಾಮಾಜಿಕ ಪ್ರಗತಿಗೂ ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಕೋಸ್ಟರೀಕದ ಪ್ರವಾಸೋದ್ಯಮ ಸಚಿವ ಗುಸ್ತಾವೊ ಸೆಗುರಾ. ಪ್ರವಾಸಿಗರ ಕಾರಣದಿಂದ ದೇಶದ ಕರಾವಳಿ ಹಾಗೂ ಗ್ರಾಮೀಣ ಭಾಗಗಳು ಪ್ರವಾಸೋದ್ಯಮದ ಜತೆಜತೆಗೇ ಅಭಿವೃದ್ಧಿಯನ್ನು ದಾಖಲಿಸಿವೆ.  ದೇಶದ ಪ್ರಾಥಮಿಕ ಕೃಷಿ ಉತ್ಪನ್ನಗಳಾದ ಬಾಳೆ, ಕಾಫಿ ಹಾಗೂ ಸಕ್ಕರೆ ರಫ್ತಿನ ಆದಾಯವನ್ನು ಮೀರಿ ಕೋಸ್ಟರೀಕದ ಪ್ರವಾಸೋದ್ಯಮ ಮುಂದೆ ಹೋಗಿದೆ. ಅರಣ್ಯ ಪ್ರದೇಶದ ರಕ್ಷಣೆಯು ದೇಶದ ಆರ್ಥಿಕತೆಗೆ ಹಾಗೆಯೇ ಸಹಜ ಪರಿಸರಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂಬುದಕ್ಕೆ ಇವೆಲ್ಲವೂ ಸಮಗ್ರ ನಿದರ್ಶನಗಳಾಗಿವೆ.

ಇಂಧನ: ಶೇ 98ರಷ್ಟು ಸ್ವಾವಲಂಬನೆ

ಕೋಸ್ಟರೀಕದ ಮತ್ತೊಂದು ಹೆಗ್ಗಳಿಕೆ ಹಸಿರು ಇಂಧನ ಕ್ಷೇತ್ರದಲ್ಲಿ ಸಾಧಿಸಿರುವ ಯಶಸ್ಸು. ದೇಶದ ಶೇ 98ರಷ್ಟು ಇಂಧನವನ್ನು ಜಲವಿದ್ಯುತ್, ಪವನ ವಿದ್ಯುತ್‌ನಂತಹ ಪುನರ್‌ಬಳಕೆಯ ಮೂಲಗಳಿಂದಲೇ ಉತ್ಪಾದಿಸಲಾಗುತ್ತಿದೆ. ಶೇ 73 ರಷ್ಟು ವಿದ್ಯುತ್ ಜಲವಿದ್ಯುತ್ ಯೋಜನೆಗಳಿಂದ, ಶೇ 15ರಷ್ಟು ಪವನ ವಿದ್ಯುತ್‌ನಿಂದ ಹಾಗೂ ಶೇ 8 ರಷ್ಟು ವಿದ್ಯುತ್ ಭೂಶಾಖದಿಂದ (ಜಿಯೊ ಥರ್ಮಲ್‌) ಲಭ್ಯವಾಗುತ್ತಿದೆ. ದೇಶವು ಶೇ 98ರಷ್ಟು ಪುನರ್‌ಬಳಕೆ ಇಂಧನಗಳನ್ನು ಬಳಸುತ್ತಿದೆ ಎಂಬುದಾಗಿ ಸರ್ಕಾರ 2018ರಲ್ಲೇ ಘೋಷಿಸಿತ್ತು. 2017ರಲ್ಲಿ 300 ದಿನಗಳ ಕಾಲ ಯಾವುದೇ ಪಳೆಯುಳಿಕೆ (ಪೆಟ್ರೋಲಿಯಂ ಉತ್ಪನ್ನಗಳು) ಇಂಧನ ಬಳಸಿ ಉತ್ಪಾದಿಸಿದ ವಿದ್ಯುತ್ ಅನ್ನು ಬಳಸಿರಲಿಲ್ಲ.

ಮರುಅರಣ್ಯೀಕರಣ ಪ್ರಗತಿ

1940

75% ಅರಣ್ಯ ಪ್ರದೇಶದ ವ್ಯಾಪ್ತಿ

1987

21% ಅರಣ್ಯ ಪ್ರದೇಶದ ವ್ಯಾಪ್ತಿ

1997

42% ಅರಣ್ಯ ಪ್ರದೇಶದ ವ್ಯಾಪ್ತಿ

2005

51% ಅರಣ್ಯ ಪ್ರದೇಶದ ವ್ಯಾಪ್ತಿ

2010

53% ಅರಣ್ಯ ಪ್ರದೇಶದ ವ್ಯಾಪ್ತಿ

2020

59% ಅರಣ್ಯ ಪ್ರದೇಶದ ವ್ಯಾಪ್ತಿ

ಆಧಾರ: ಕೋಸ್ಟರೀಕ ಪರಿಸರ ಮತ್ತು ಇಂಧನ ಸಚಿವಾಲಯದ ವರದಿ, ಕೋಸ್ಟರೀಕ ಮರುಅರಣ್ಯೀಕರಣ ಕುರಿತ ವಿಶ್ವ ಸಂಸ್ಥೆಯ ವರದಿ. ನಕ್ಷೆ ಕೃಪೆ: ಗೂಗಲ್‌ ಅರ್ಥ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು