ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕಾಂಗ್ರೆಸ್‌ ತಂತ್ರಕ್ಕೆ ಪ್ರಧಾನಿ ಪ್ರತಿತಂತ್ರ?

Last Updated 3 ಜುಲೈ 2020, 19:52 IST
ಅಕ್ಷರ ಗಾತ್ರ
ADVERTISEMENT
""
""

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟು ಹಾಗೂ ಚೀನಾ ಅತಿಕ್ರಮಣ –ಎರಡೂ ವಿಷಯಗಳಲ್ಲಿ ತಮ್ಮ ಸರ್ಕಾರದ ವಿರುದ್ಧ ನಡೆದಿರುವ ‘ದಾಳಿ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ‘ಉತ್ತರ’ ನೀಡಲು ಕಂಡುಕೊಂಡ ಹಾದಿ ಲೇಹ್‌ ಭೇಟಿ. ಯಾವುದೇ ಪೂರ್ವ ಸೂಚನೆಯಿಲ್ಲದೆ ಲೇಹ್‌ಗೆ ತೆರಳಿ ಸೈನಿಕರನ್ನು ಭೇಟಿ ಮಾಡಿದ ಅವರು, ಚೀನಾ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. ಕೋವಿಡ್‌ ತಡೆಗಟ್ಟಲು ರೂಪಿಸಬೇಕಿರುವ ಯೋಜನೆಗಳ ಕುರಿತು ಚರ್ಚೆ ನಡೆಸಲು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಶನಿವಾರ ಕರೆದಿದ್ದಾರೆ.

ಈ ಮಧ್ಯೆ ಕಾಂಗ್ರೆಸ್‌ ಎರಡೂ ವಿಷಯಗಳಲ್ಲಿ ಸರ್ಕಾರದ ವಿರುದ್ಧ ತನ್ನ ಆಕ್ರಮಣವನ್ನು ಇನ್ನಷ್ಟು ಹರಿತಗೊಳಿಸಿದೆ. ಜೂನ್‌ 15ರ ಕರಾಳ ರಾತ್ರಿಯಿಂದ ಇಲ್ಲಿಯವರೆಗೆ ಗಡಿಯಲ್ಲಿ ಏನು ನಡೆದಿದೆ ಎಂಬ ವಿಷಯವಾಗಿ ಯಾವುದೇ ಮಾಹಿತಿ ನೀಡದೆ ಭಾರತೀಯರನ್ನು ಕತ್ತಲಲ್ಲಿ ಇಡಲಾಗಿದೆ. ಮೌನದ ಸಮಯ ಮುಗಿದಿದೆ. ಈಗ ಉತ್ತರಿಸಲೇಬೇಕಾದ ಕಾಲ ಬಂದಿದೆ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದಿದೆ.

‘ನೈಜ ನಾಯಕ’
1971ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಲೇಹ್‌ಗೆ ಹೋಗಿದ್ದನ್ನು ಮೋದಿ ಅವರ ಶುಕ್ರವಾರದ ದಿಢೀರ್‌ ಭೇಟಿ ನೆನಪಿಸಿದೆ. ‘ಸೈನಿಕರಲ್ಲಿ ಉತ್ಸಾಹವನ್ನು ತುಂಬಿದ ಅವರು, ಭಾರತದ ಭೂಭಾಗವನ್ನು ಅತಿಕ್ರಮಿಸಲು ಬಿಡುವುದಿಲ್ಲ ಎಂಬ ಸಂದೇಶವನ್ನೂ ಚೀನಾಕ್ಕೆ ನೀಡಿದ್ದಾರೆ’ ಎಂಬುದು ಬಿಜೆಪಿ ಪ್ರತಿಪಾದನೆ. ‘ಭಾರತದ ಭೂಭಾಗವನ್ನು ಅತಿಕ್ರಮಿಸಿದ ಚೀನಾ ಸೈನಿಕರನ್ನು ಹೊರದಬ್ಬಬೇಕು ಹಾಗೂ ವಿಷಯದ ಚರ್ಚೆಗೆ ಸಂಸತ್‌ ಅಧಿವೇಶನ ಕರೆಯಬೇಕು’ ಎನ್ನುವುದು ಕಾಂಗ್ರೆಸ್‌ ಆಗ್ರಹ. ಚೀನಾ ಹೆಸರನ್ನು ಏಕೆ ಉಲ್ಲೇಖಿಸುತ್ತಿಲ್ಲ ಎಂದೂ ಆ ಪಕ್ಷ ಪ್ರಧಾನಿಯನ್ನು ಪ್ರಶ್ನಿಸಿದೆ.

‘ನೈಜ ನಾಯಕನ ದಿಟ್ಟ ಹೆಜ್ಜೆ’, ‘ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಹುರುಪು ತುಂಬಿದ ನಾಯಕ’ ಎಂದೆಲ್ಲ ಬಿಜೆಪಿ ಗುಣಗಾನ ಮಾಡಿದೆ.

‘ವಿಸ್ತರಣೆ ನೀತಿಗೆ ಅವಕಾಶವಿಲ್ಲ’ ಎನ್ನುವ ಮೋದಿ ಅವರ ಹೇಳಿಕೆ ಚೀನಾದ ತೀಕ್ಷ್ಣ ಪ್ರತಿಕ್ರಿಯೆಗೆ ಕಾರಣವಾಗಿದೆ. ‘ಭಾರತದ ಒಂದಿಂಚೂ ಭೂಮಿಯನ್ನು ಅತಿಕ್ರಮಿಸಲು ಆಸ್ಪದ ನೀಡುವುದಿಲ್ಲ’ ಎಂದು ಮೋದಿ ಅವರು ಮೇಲಿಂದ ಮೇಲೆ ಹೇಳುತ್ತಿರುವುದು ದಿಟ್ಟತನದ ಸಂಕೇತವಾಗಿ ಬಿಜೆಪಿಗೆ ಕಂಡಿದೆ. ಯಾರು ದುರ್ಬಲರೋ ಅವರು ಶಾಂತಿಯ ಪಠಣ ಮಾಡುವುದಿಲ್ಲ. ಸೇನೆಗೆ ಕ್ರಮ ಕೈಗೊಳ್ಳಲು ಮುಕ್ತ ಅವಕಾಶ ನೀಡಿರುವುದು, ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿರುವುದು ನಮ್ಮ ಸರ್ಕಾರ ಯಾವುದೇ ಕಾರಣಕ್ಕೆ ಚೀನಾ ಮುಂದೆ ಮಣಿಯಲು ಸಿದ್ಧವಿರದ ಸಂಕೇತ ಎಂದು ಬಿಜೆಪಿ ಹೇಳುತ್ತಿದೆ.

ಆದರೆ, ಭಾರತೀಯ ಭೂಭಾಗದಿಂದ ಹಿಂದೆ ಸರಿಯಲು ಚೀನಾ ಇನ್ನೂ ಹಿಂದೇಟು ಹಾಕುತ್ತಿದೆ. ಇದೇ ಈಗ ಸರ್ಕಾರದ ಮುಂದಿರುವ ಮುಖ್ಯ ಸವಾಲೂ ಆಗಿದೆ.

ಕೋವಿಡ್‌ ವಿಷಯಕ್ಕೆ ಬಂದರೆ, ಐದು ಹಂತಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿದ್ದರೂ ಪ್ರಕರಣಗಳ ಸಂಖ್ಯೆ ಈಗಲೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ, ಶ್ರೀಮಂತ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸಾವಿನ ಪ್ರಮಾಣ ತುಂಬಾ ಕಡಿಮೆ. ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡಿದೆ ಎಂದು ವಾದ ಮಂಡಿಸಲಾಗುತ್ತಿದೆ.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಶನಿವಾರ ವಿಡಿಯೊ ಸಂವಾದ ನಡೆಸಲಿದ್ದಾರೆ. ಲಾಕ್‌ಡೌನ್‌ನಲ್ಲಿ ಉಂಟಾದ ವಲಸಿಗರ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌, ಸರ್ಕಾರದ ವಿರುದ್ಧ ಆಕ್ರಮಣ ನಡೆಸಿದೆ.

ಕಾಂಗ್ರೆಸ್‌ನ ಈ ತಂತ್ರಕ್ಕೆ ಪ್ರತಿತಂತ್ರವಾಗಿ ಲೇಹ್‌ ಭೇಟಿ ಮತ್ತು ಮುಖ್ಯಮಂತ್ರಿಗಳ ಸಭೆಯ ದಾಳವನ್ನು ಉರುಳಿಸಲಾಗಿದೆ.

ಇತಿಹಾಸದ ಪುಟಗಳಿಂದ

ಲೇಹ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಇಂದಿರಾ ಗಾಂಧಿ

‘1971ರಲ್ಲಿ ಲೇಹ್‌ಗೆ ಭೇಟಿ ನೀಡಿದ್ದಇಂದಿರಾ’
ಮೋದಿ ಅವರು ಲೇಹ್‌ಗೆ ಅಚ್ಚರಿ ಭೇಟಿ ನೀಡಿದ ಮಧ್ಯೆಯೇ ಸುದ್ದಿಯಾಗಿದ್ದು ಇಂದಿರಾ ಗಾಂಧಿ ಅವರ ಲೇಹ್ ಭೇಟಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1971ರಲ್ಲಿ ಲೇಹ್‌ಗೆ ಭೇಟಿ ನೀಡಿದ್ದರು. ಹಿಮಾಲಯ ಬೆಟ್ಟಗುಡ್ಡಗಳಲ್ಲಿ ದೇಶದ ಕಾವಲು ಕಾಯುತ್ತಿದ್ದ ಯೋಧರನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಈ ಚಿತ್ರವು ಮೋದಿ ಭೇಟಿ ವೇಳೆ ಭಾರಿ ಸದ್ದು ಮಾಡಿದೆ. ಇತ್ತೀಚೆಗೆ ಭಾರತ–ಚೀನಾ ಸೈನಿಕರ ನಡುವೆ ಘರ್ಷಣೆಗೆ ಕಾರಣವಾದ ಗಾಲ್ವನ್ ಕಣಿವೆಗೆಇಂದಿರಾ ಅವರು ಭೇಟಿ ನೀಡಿದ್ದರು ಎಂದು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಟ್ವಿಟರ್‌ನಲ್ಲಿ ನಮೂದಿಸಿದ್ದಾರೆ. ಆದರೆ ಇಂದಿರಾ ಗಾಂಧಿ ಭೇಟಿ ನೀಡಿದ್ದು ಲೇಹ್‌ಗೆ. ಅವರು ಅಲ್ಲಿಗೆ ಹೋಗಿ ಬಂದ ಬಳಿಕ ಪಾಕಿಸ್ತಾನ ವಿಭಜನೆಯಾಗಿ, ಬಾಂಗ್ಲಾದೇಶ ಉದಯವಾಯಿತು.

‘ಅರುಣಾಚಲ ಗಡಿಗೆಮನಮೋಹನ್ ಸಿಂಗ್’
2019ರ ಜನವರಿಯಲ್ಲಿ ಚೀನಾ ಜೊತೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಭೇಟಿ ನೀಡಿದ್ದರು. ಅರುಣಾಚಲ ಪ್ರದೇಶವು ತನ್ನದೇ ಎಂದು ಚೀನಾ ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದೆ. ಟಿಬೆಟ್‌ನ ತವಾಂಗ್ ಜಿಲ್ಲೆಗೆ ಅರುಣಾಚಲ ಸೇರಿದೆ ಎಂಬುದು ಚೀನಾ ವಾದ. ಹೀಗಾಗಿ ಮಹಮೋಹನ್ ಸಿಂಗ್ ಅವರ ಭೇಟಿ ಮಹತ್ವ ಪಡೆದುಕೊಂಡಿತ್ತು. ಆ ಬಳಿಕ ಅರುಣಾಚಲ ಪ್ರದೇಶಕ್ಕೆ ಯಾವ ನಾಯಕರು ಭೇಟಿ ನೀಡಿದರೂ ಚೀನಾ ಆಕ್ಷೇಪ ಎತ್ತುತ್ತಿದೆ.

ಪ್ರಹಾವ ಪರಿಸ್ಥಿತಿ ವೀಕ್ಷಣೆ:2010ರ ಆಗಸ್ಟ್ 18ರಂದು ಮನಮೋಹನ್ ಸಿಂಗ್ ಅವರು ಲೇಹ್‌ಗೆ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿ ವೀಕ್ಷಿಸಿದ್ದ ಅವರು ₹125 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಪ್ರವಾಹದಲ್ಲಿ 200 ಜನರು ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದರು. ಚೀನಾ ಗಡಿಯ ಹಲವು ಗ್ರಾಮಗಳಲ್ಲಿ ಸೇತುವೆ, ರಸ್ತೆಗಳು ಕುಸಿದುಬಿದ್ದಿದ್ದವು. ವಿದ್ಯುತ್‌ ಸಂಪರ್ಕವೇ ಇರಲಿಲ್ಲ.

ಚೀನಾದ ಬೀಜಿಂಗ್‌ಗೆ ಭೇಟಿ ನೀಡಿದ್ದ ನೆಹರೂ

ಗಡಿ ವಿವಾದ ನಡುವೆ ನೆಹರೂ ಚೀನಾ ಭೇಟಿ
ಬ್ರಿಟಿಷ್ ಸರ್ಕಾರ ರೂ‍ಪಿಸಿದ್ದ 1914ರ ಮೆಕ್‌ಮಹೊನ್‌ ಗಡಿಯನ್ನು‌ ಚೀನಾ ಒಪ್ಪಿರಲಿಲ್ಲ. ಸುಮಾರು 90 ಸಾವಿರ ಚದರ ಕಿಲೋಮೀಟರ್‌ ಪ್ರದೇಶ ಭಾರತಕ್ಕೆ ಸೇರಿದೆ ಎಂದು ಮೆಕ್‌ಮೊಹಾನ್‌ ಗಡಿ ನಿಯಮ ಉಲ್ಲೇಖಿಸುತ್ತದೆ. ಅಂದರೆ ಇಡೀ ಅರುಣಾಚಲ ಪ್ರದೇಶ ಭಾರತಕ್ಕೆ ಸೇರಿದೆ. ಆದರೆ ಇದನ್ನು ಚೀನಾ ಒಪ್ಪಿರಲಿಲ್ಲ. ನೆಹರೂ ಅವರು 1959ರಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದಾಗ ಈ ಗಡಿ ವಿವಾದ ತಾರಕಕ್ಕೇರಿತ್ತು. ಅದು ಕೊನೆಗೆ 1962ರಲ್ಲಿ ಭಾರತ–ಚೀನಾ ಯುದ್ಧಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT