ಶುಕ್ರವಾರ, ಮೇ 29, 2020
27 °C

ಯುಗಾದಿ ಸಂಭ್ರಮಕ್ಕೆ ಸಿಹಿಯ ತೋರಣ

ವೇದಾವತಿ ಎಚ್‌. ಎಸ್‌. Updated:

ಅಕ್ಷರ ಗಾತ್ರ : | |

ಯುಗಾದಿ ಚೈತ್ರ ಮಾಸದ ಮೊದಲ ದಿನ. ಯುಗದ ಆದಿ– ಯುಗಾದಿ ಅಂದರೆ ಹಿಂದೂ ಧರ್ಮದಲ್ಲಿ ಹೊಸ ಯುಗದ ಆರಂಭ ಎಂಬ ಅರ್ಥ. ಅಂದು ಬೇವು–ಬೆಲ್ಲ ತಿನ್ನುವುದು ವಾಡಿಕೆ. ಸಿಹಿ ಹಾಗೂ ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಭಾವನೆಯಲ್ಲಿ ಬೇವು–ಬೆಲ್ಲ ತಿನ್ನುವ ಜೊತೆಗೆ ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ. ಅಂತಹ ಕೆಲವು ಹೊಸ ರುಚಿಯ ಸಿಹಿ ತಿನಿಸುಗಳನ್ನು ಇಲ್ಲಿ ಪರಿಚಯಿಸಿದ್ದಾರೆ ವೇದಾವತಿ ಎಚ್‌. ಎಸ್‌.

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ (ಒಂದು ದೊಡ್ಡ ತೆಂಗಿನಕಾಯಿ) – 3 ಕಪ್, ಸಕ್ಕರೆ – 2 ಕಪ್, ಸೇಬುಹಣ್ಣು – 2
( ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ), ಏಲಕ್ಕಿ ಪುಡಿ – 1 ಟೀ ಚಮಚ, ತುಪ್ಪ – 4 ಟೀ ಚಮಚ, ಪಿಸ್ತಾ  – ಅಲಂಕಾರಕ್ಕೆ ಸ್ವಲ್ಪ

ತಯಾರಿಸುವ ವಿಧಾನ: ಒಂದು ದಪ್ಪ ತಳದ ಪಾತ್ರೆಯಲ್ಲಿ ಸೇಬುಹಣ್ಣಿನ ರಸ, ಸಕ್ಕರೆ, ತುಪ್ಪ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಬೇಕಿದ್ದರೆ ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಿ. ಬಾಣಲೆಯನ್ನು ಬಿಟ್ಟು ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. ಅದರ ಮೇಲೆ ಪಿಸ್ತಾವನ್ನು ಹಾಕಿ. ಐದು ನಿಮಿಷಗಳ ನಂತರ ಚೌಕಾಕಾರವಾಗಿ ಕತ್ತರಿಸಿ. ರುಚಿಯಾದ ಸೇಬುಹಣ್ಣಿನ ಕೊಬ್ಬರಿ ಮಿಠಾಯಿ ತಯಾರಿಸಿ ಸವಿಯಿರಿ.

***

ಜಾಮೂನ್ ಪುಡಿಯ ಸೆವೆನ್ ಕಪ್
ಬೇಕಾಗುವ ಸಾಮಗ್ರಿಗಳು:
ಜಾಮೂನು ಪೌಡರ್ – 200ಗ್ರಾಂ, ಚಿರೋಟಿ ರವೆ – 1ಕಪ್, ಹಸಿ ತೆಂಗಿನಕಾಯಿ ತುರಿ – 1ಕಪ್, ತುಪ್ಪ – 1ಕಪ್, ಸಕ್ಕರೆ – 3 ಕಪ್ /ಸಿಹಿ ಎಷ್ಟು ಬೇಕು ಅಷ್ಟು, ಹಾಲು – 1 ಕಪ್.

ತಯಾರಿಸುವ ವಿಧಾನ: ಬಾಣಲೆಗೆ ಚಿರೋಟಿ ರವೆಯನ್ನು ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಸಕ್ಕರೆ ಮತ್ತು ಹಾಲನ್ನು ಬಾಣಲೆಗೆ ಹಾಕಿ ಕರಗಿಸಿಕೊಳ್ಳಿ. ಕರಗಿಸಿಕೊಂಡ ಪಾಕಕ್ಕೆ ಚಿರೋಟಿ ರವೆ, ತೆಂಗಿನಕಾಯಿ ತುರಿ, ಜಾಮೂನು ಪೌಡರ್ ಹಾಕಿ ಚೆನ್ನಾಗಿ ಗಂಟಾಗದ ರೀತಿ ಮಿಶ್ರಣ ಮಾಡಿ. ಈ ಮಿಶ್ರಣವು ಗಟ್ಟಿಯಾಗುತ್ತಾ ಬಂದಾಗ ತುಪ್ಪವನ್ನು ಸೇರಿಸಿ. ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಿ. ಬಾಣಲೆಯಿಂದ ತಳ ಬಿಟ್ಟು ಬರುವಾಗ ತುಪ್ಪವನ್ನು ಸವರಿದ ತಟ್ಟೆಗೆ ಹಾಕಿ ಸಮತಟ್ಟು ಮಾಡಿ, ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.

***

ಹಾಲಿನ ಪುಡಿಯ ಒಬ್ಬಟ್ಟು
ಬೇಕಾಗುವ ಸಾಮಗ್ರಿಗಳು:
ಕಾಯಿತುರಿ – 1 ಕಪ್, ಹಾಲಿನ ಪುಡಿ – 1/2 ಕಪ್, ಪುಡಿ ಮಾಡಿಕೊಂಡ ಸಕ್ಕರೆ – 1/2 ಕಪ್, ಕಲಸಿಕೊಳ್ಳಲು ಹಾಲು – ಸ್ವಲ್ಪ/ಬೇಕಿದ್ದರೆ ಹಾಕಿ.

ಕಣಕದ ಹಿಟ್ಟು: ಮೈದಾ/ಚಿರೋಟಿ ರವೆ – ಕಾಲು ಕಿಲೋ, ತುಪ್ಪ – 2 ಟೀ ಚಮಚ, ಎಣ್ಣೆ – ಸ್ವಲ್ಪ ಉಪ್ಪು – ರುಚಿಗೆ ತಕ್ಕಷ್ಟು, ಅರಸಿನ ಪುಡಿ – 1/2 ಟೀ ಚಮಚ, ನೀರು.

ತಯಾರಿಸುವ ವಿಧಾನ: ಒಂದು ಮಿಕ್ಸಿಯಲ್ಲಿ ತೆಂಗಿನತುರಿ ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣಕ್ಕೆ ಹಾಲಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ತುಂಬಾ ಗಟ್ಟಿಯಾಗಿದ್ದರೆ ಸ್ವಲ್ಪ ಹಾಲನ್ನು ಹಾಕಿ ಉಂಡೆಯ ಹದ ಬರುವವರೆಗೆ ಗಟ್ಟಿಯಾಗಿ ಕಲಸಿ, ಉಂಡೆಗಳನ್ನು ಮಾಡಿಕೊಳ್ಳಿ.

ಕಣಕ ಮಾಡುವ ವಿಧಾನ: ಉಪ್ಪು, ತುಪ್ಪ ಎರಡು ಚಮಚ, ಅರಿಸಿನ ಪುಡಿ, ರವೆ ಅಥವಾ ಮೈದಾ ಎಲ್ಲಾವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸಿ ಮೃದುವಾಗಿ ನಾದಿಕೊಳ್ಳಿ. ಈ ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು ಒಂದು ಗಂಟೆ ಕಾಲ ಒದ್ದೆ ಬಟ್ಟೆಯಿಂದ ಮುಚ್ಚಿಡಿ. ನಂತರ ಹಿಟ್ಟನ್ನು ಮೃದುವಾಗಿ, ಹಿಗ್ಗುವಂತೆ ನಾದಿಕೊಳ್ಳಿ. ನಂತರ ಅದರ ಮೇಲೆ ಎಣ್ಣಿ ಹಾಕಿ. ಹಿಟ್ಟು ಎಣ್ಣೆಯನ್ನು ಹೀರಿಕೊಳ್ಳುವ ತನಕ ನಾದಿ ಚೆನ್ನಾಗಿ ಕಲಸಿ. ನಾದಿಕೊಳ್ಳಲು ಅರ್ಧ ಕಪ್ ಎಣ್ಣೆ ಬೇಕಾದೀತು. ಇದನ್ನು ಮೂರು ಗಂಟೆ ಮುಚ್ಚಿಡಿ. ಕಣಕದ ಹಿಟ್ಟನ್ನು ಸಮ ಅಳತೆಯ ಉಂಡೆ ಮಾಡಿ. ಕಣಕದ ಹಿಟ್ಟನ್ನು ಚಪ್ಪಟೆ ಮಾಡಿ ಅದರಲ್ಲಿ ಹೂರಣವನ್ನು ತುಂಬಿ. ಹೂರಣವನ್ನು ಕಣಕದ ಹಿಟ್ಟಿನಿಂದ ಮುಚ್ಚಿ. ಈ ಉಂಡೆಗಳನ್ನು ದಪ್ಪದಾದ ಪ್ಲಾಸ್ಟಿಕ್ ಷೀಟ್ ಅಥವಾ ಬಾಳೆ ಎಲೆಯಲ್ಲಿ ತಟ್ಟಿ ಕೊಳ್ಳಿ.ಹದ ಸರಿ ಇದ್ದರೆ ಲಟ್ಟಣಿಗೆಯಿಂದ ತೆಳುವಾಗಿ ಲಟ್ಟಿಸಿ ಕೊಳ್ಳಬಹುದು. ತವದಲ್ಲಿ ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡು ಕಡೆ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಿ. ಇದಕ್ಕೆ ತುಪ್ಪವನ್ನು ಹಾಕಿ ತಿಂದರೆ ತುಂಬಾ ರುಚಿಯಾಗಿರುತ್ತದೆ.

***

ಗೋಡಂಬಿ ಲಡ್ಡು
ಬೇಕಾಗುವ ಸಾಮಗ್ರಿಗಳು:‌
ಗೋಡಂಬಿ – 1ಕಪ್, ಸಕ್ಕರೆ – 1/2ಕಪ್, ನೀರು – 1/4ಕಪ್, ಹಾಲು – 2ಚಮಚ, ತುಪ್ಪ – 1/2ಟೀ ಚಮಚ, ಏಲಕ್ಕಿ ಪುಡಿ – 1/2ಟೀ ಚಮಚ

ತಯಾರಿಸುವ ವಿಧಾನ: ಗೋಡಂಬಿಯನ್ನು ಸ್ವಲ್ಪ ಸಮಯ ಫ್ರಿಜ್‌ನಲ್ಲಿ ಇಟ್ಟು ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಫ್ರಿಜ್‌ನಲ್ಲಿ ಇಟ್ಟರೆ ಪುಡಿ ಉದುರು ಉದುರಾಗಿ ಇರುತ್ತದೆ. ಸಕ್ಕರೆಗೆ ನೀರು ಹಾಕಿ ಎಳೆ ಪಾಕ ತಯಾರಿಸಿಕೊಳ್ಳಿ. ಈ ಪಾಕಕ್ಕೆ ಗೋಡಂಬಿ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಇರಿ.ಹಾಲನ್ನು ಜೊತೆಗೆ ಸೇರಿಸಿ. ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿ ಮತ್ತು ತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ. ಬಾಣಲೆಯನ್ನು ಬಿಟ್ಟು ಬರುವಾಗ ಒಲೆಯಿಂದ ಇಳಿಸಿ ನಿಮಗೆ ಬೇಕಾದ ಆಕಾರಕ್ಕೆ ಉಂಡೆಗಳನ್ನು ಕಟ್ಟಿ.

**

ಬಾದಾಮಿ ಖೀರ್/ಪಾಯಸ
ಬೇಕಾಗುವ ಸಾಮಗ್ರಿಗಳು:
ಬಾದಾಮಿ – 1 ಕಪ್‌ (ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದಿರಿಸಿದ್ದು), ತುಪ್ಪ – 1ಟೇಬಲ್ ಚಮಚ, ಗೋಡಂಬಿ, ದ್ರಾಕ್ಷಿ – ಸ್ವಲ್ಪ, ಗಟ್ಟಿಯಾದ ಹಾಲು – 1ಲೀಟರ್, ಕೇಸರಿ ದಳಗಳು – 1/2 ಟೇಬಲ್ ಚಮಚ, ಸಕ್ಕರೆ/ಸಿಹಿ  – ರುಚಿಗೆ, ಏಲಕ್ಕಿ ಪುಡಿ – 1/4ಟೇಬಲ್ ಚಮಚ, ಕತ್ತರಿಸಿದ ಪಿಸ್ತಾ, ಬಾದಾಮಿ ಸ್ವಲ್ಪ ಅಲಂಕಾರಕ್ಕೆ.

ಖೋವಾ ತಯಾರಿಸಲು: ಬೆಣ್ಣೆ – 1ಟೇಬಲ್ ಚಮಚ, ಹಾಲು – 1/4ಕಪ್, ಹಾಲಿನ ಪುಡಿ – 1/2ಕಪ್  ಬಾಣಲೆಯಲ್ಲಿ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಹಾಲು ಮತ್ತು ಹಾಲಿನ ಪುಡಿಯನ್ನು ಹಾಕಿ ಗಂಟಾಗದ ರೀತಿಯಲ್ಲಿ ಸಣ್ಣ ಉರಿಯಲ್ಲಿ ಮಗುಚಿ. ಗಟ್ಟಿಯಾದ ನಂತರ ಆರಲು ಬಿಡಿ. ನಂತರ ಪುಡಿ ಮಾಡಿ ಪಾಯಸಕ್ಕೆ ಹಾಕಿ.

ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಬಾದಾಮಿ ಮತ್ತು ಸ್ವಲ್ಪ ಹಾಲನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿಯಾದ ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ತೆಗೆದಿಡಿ. ನಂತರ ಅದೇ ಬಾಣಲೆಯಲ್ಲಿ ಹಾಲನ್ನು ಮತ್ತು ಕೇಸರಿ ದಳಗಳನ್ನು ಹಾಕಿ ಹದಿನೈದು ನಿಮಿಷ ಚೆನ್ನಾಗಿ ಕುದಿಸಿ. ಕುದಿಸಿದ ಹಾಲಿಗೆ ತಯಾರಿಸಿದ ಬಾದಾಮಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ ಐದು ನಿಮಿಷ ಕುದಿಸಿ. ನಂತರ ತಯಾರಿಸಿಕೊಂಡ ಖೋವಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 3-4ನಿಮಿಷಗಳ ಕಾಲ ಕುದಿಸಿ. ಈಗ ಸಕ್ಕರೆಯನ್ನು ಹಾಕಿ 2-3ನಿಮಿಷಗಳ ಕುದಿಸಿ. ನಂತರ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಕೊನೆಯಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. ನಂತರ ಪಿಸ್ತಾ ಮತ್ತು ಬಾದಾಮಿ ಚೂರುಗಳಿಂದ ಅಲಂಕರಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು