ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯನ್ನು ಬಿಸಿಯಾಗಿಸುವ ಚಿಕನ್ ಐಟಂಗಳು

Last Updated 16 ಅಕ್ಟೋಬರ್ 2020, 2:54 IST
ಅಕ್ಷರ ಗಾತ್ರ

ಗುಂಟೂರು ಚಿಕನ್ ಫ್ರೈ

ಈರುಳ್ಳಿ ಹೂವು – 2, ಗರಂ ಮಸಾಲಾ – 1/4ಟೀ ಚಮಚ, ಜೀರಿಗೆ – ಸ್ವಲ್ಪ, ಗೊಂಗುರ ಎಲೆ – 1ಕಪ್‌, , ಹಸಿಮೆಣಸಿನ ಕಾಯಿ – 2ರಿಂದ 3, ಎಣ್ಣೆ – 1 ಟೇಬಲ್ ಚಮಚ, ತುಪ್ಪ – 2ಚಮಚ (ಚಿಕನ್ ಹುರಿಯಲು),
ನೆನೆಸಲು: ಚಿಕನ್ – 300ಗ್ರಾಂ, ಈರುಳ್ಳಿ – 1 ಚೆನ್ನಾಗಿ ಹೆಚ್ಚಿದ್ದು, ನಿಂಬೆರಸ – 1/2ಚಮಚ, ತುಪ್ಪ – 1ಟೇಬಲ್ ಚಮಚ, ಮೆಣಸಿನ ಪುಡಿ – 1/4ಟೀ ಚಮಚ, ಕೊತ್ತಂಬರಿ ಪುಡಿ – 1/4ಟೀ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಟೇಬಲ್ ಚಮಚ
ತಯಾರಿಸುವ ವಿಧಾನ: ನೆನೆಸಿಕೊಳ್ಳಲು ಬೇಕಾದ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಬದಿಗಿರಿಸಿ. ಒಂದು ಪಾತ್ರೆ ತೆಗೆದುಕೊಂಡು ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ ಗೊಂಗುರ–ಎಲೆಗಳನ್ನು ಚೆನ್ನಾಗಿ ಹುರಿದುಕೊಂಡು ಒಂದು ಕಡೆ ತೆಗೆದಿರಿಸಿಕೊಳ್ಳಿ. ಅದು ತಣ್ಣಗಾದ ಮೇಲೆ ಹಸಿಮೆಣಸು ಹಾಕಿ ರುಬ್ಬಿಕೊಳ್ಳಿ. ನಂತರ ಚಿಕನ್ ಅನ್ನು ಹದವಾಗಿ ಬೇಯಿಸಿಕೊಳ್ಳಿ. ಬೇಕಿದ್ದರೆ ಕೆಲ ಚಮಚ ನೀರು ಸೇರಿಸಬಹುದು. ಆದರೆ ಕೊನೆಯಲ್ಲಿ ನೀರು ಉಳಿಯಬಾರದು. ನೀರು ಆವಿಯಾಗಲು ಬಿಡಬೇಕು.

ಗೊಂಗುರ ಚಿಕನ್ ಮಾಡುವ ವಿಧಾನ:
ಪಾತ್ರೆಯನ್ನು ಬಿಸಿ ಮಾಡಿ ತುಪ್ಪ ಹಾಕಿ. ನಂತರ ಅದಕ್ಕೆ ಜೀರಿಗೆ ಹಾಗೂ ಕರಿಬೇವು ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ನೆನೆಸಿಟ್ಟುಕೊಂಡ ಚಿಕನ್ ಹಾಕಿ ಸೇರಿಸಿ ಅದಕ್ಕೆ ಗರಂ ಮಸಾಲಾ ಬೆರೆಸಿ ಡ್ರೈ ಆಗುವವರೆಗೂ ಹುರಿಯಿರಿ. ನಂತರ ಅದಕ್ಕೆ ಗೊಂಗುರ ಪೇಸ್ಟ್ ಹಾಕಿ ತೇವಾಂಶ ಕಡಿಮೆಯಾಗುವವರೆಗೂ ಹುರಿಯಿರಿ. ಇದು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಚಿಕನ್ ಚೆಟ್ಟಿನಾಡು

ಬೇಕಾಗುವ ಸಾಮಗ್ರಿಗಳು: ಚಿಕನ್‌ – 1/2ಕೆ.ಜಿ., ಎಣ್ಣೆ – 2ಟೇಬಲ್ ಚಮಚ, ಈರುಳ್ಳಿ – 1ದೊಡ್ಡದು (ಚೆನ್ನಾಗಿ ಹೆಚ್ಚಿದ್ದು), ಕರೀಬೇವು – 2ಎಸಳು, ಟೊಮೆಟೊ – 2ಮಧ್ಯಮ ಗಾತ್ರದ್ದು (ಚೆನ್ನಾಗಿ ಹೆಚ್ಚಿದ್ದು), ಪಲಾವ್ ಎಲೆ – 1
ನೆನೆಸಿಡಲು: ಅರಿಸಿನ – 1ಚಮಚ, ಕೆಂಪುಮೆಣಸಿನ ಪುಡಿ ‌– 1/4ಟೀ ಚಮಚ, ಮೊಸರು – 1ಟೇಬಲ್ ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಟೇಬಲ್ ಚಮಚ, ಉಪ್ಪು – ರುಚಿಗೆ,

ಮಸಾಲೆಗೆ (ರುಬ್ಬಿಕೊಳ್ಳಲು): ಗಸಗಸೆ – 1ಟೇಬಲ್ ಚಮಚ, ತೆಂಗಿನ ತುರಿ – 1/4ಕಪ್‌, ಕೊತ್ತಂಬರಿಬೀಜ – 1ಟೇಬಲ್ ಚಮಚ, ಸೋಂಪುಕಾಳು – 1ಟೀ ಚಮಚ, ಜೀರಿಗೆ – 3/4ಟೀ ಚಮಚ, ಕಾಳುಮೆಣಸು – 1/2ಟೀ ಚಮಚ, ಕೆಂಪುಮೆಣಸು – 4 ರಿಂದ 5, ಏಲಕ್ಕಿ – 3, ಲವಂಗ – 4, ದಾಲ್ಚಿನ್ನಿ ಕಡ್ಡಿ – 1 ಇಂಚು

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಚಿಕನ್, ಅರಿಸಿನ, ಕೆಂಪುಮೆಣಸಿನ ಪುಡಿ, ಮೊಸರು, ಉಪ್ಪು ಹಾಗೂ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ತೆಗೆದಿರಿಸಿ. ನಂತರ ಪಾನ್ ತೆಗೆದುಕೊಂಡು ಸಣ್ಣ ಉರಿಯಲ್ಲಿ ಕೊತ್ತಂಬರಿಬೀಜ ಹಾಗೂ ಕೆಂಪುಮೆಣಸಿನ ಕಾಯಿಯನ್ನು ಹುರಿದುಕೊಳ್ಳಿ. ಕೊತ್ತಂಬರಿಪುಡಿಯನ್ನು ಸುವಾಸನೆ ಬರುವ ಸಮಯದಲ್ಲಿ ಏಲಕ್ಕಿ, ಜೀರಿಗೆ, ಕಾಳುಮೆಣಸು, ದಾಲ್ಚಿನ್ನಿ ಮತ್ತು ಲವಂಗ ಸೇರಿಸಿ ಚೆನ್ನಾಗಿ ಪರಿಮಳ ಬರುವವರೆಗೂ ಹುರಿಯಿರಿ. ನಂತರ ಸೋಂಪು ಸೇರಿಸಿ, ಬೇಗನೆ ತೆಗೆಯಿರಿ. ನಂತರ ಇವೆಲ್ಲವನ್ನೂ ಒಂದು ತಟ್ಟೆಯಲ್ಲಿ ತೆಗೆದಿರಿಸಿ. ನಂತರ ಅದೇ ಪಾತ್ರೆಯಲ್ಲಿ ತೆಂಗಿನ ತುರಿಯನ್ನು ಸೇರಿಸಿ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಅದನ್ನು ತಣ್ಣಗಾಗಲು ಬಿಡಿ. ನಂತರ ತೆಗದಿರಿಸಿದ ವಸ್ತುಗಳನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರನ್ನು ಸೇರಿಸಿ, ನುಣ್ಣನೆಯ ಪೇಸ್ಟ್ ಆಗುವವರೆಗೂ ರುಬ್ಬಿಕೊಳ್ಳಿ. ನಂತರ ಅದನ್ನು ಪಾತ್ರೆಯೊಂದರಲ್ಲಿ ತೆಗೆದಿಡಿ. ನಂತರ ಅದೇ ಜಾರಿಗೆ ಟೊಮೆಟೊ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ದಾಲ್ಚಿನ್ನಿ ಎಲೆ ಹಾಗೂ ಈರುಳ್ಳಿ ಸೇರಿಸಿ. ಅದನ್ನು ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಚಿಕನ್ ಹಾಕಿ 4ರಿಂದ 5 ನಿಮಿಷ ಹುರಿದುಕೊಳ್ಳಿ. ಅದಕ್ಕೆ ಟೊಮೆಟೊ, ಅರಿಸಿನ, ಉಪ್ಪು ಹಾಗೂ ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಎಣ್ಣೆ ಬೇರಾಗುವವರೆಗೂ ಚೆನ್ನಾಗಿ ಹುರಿಯಿರಿ.
ನಂತರ ರುಬ್ಬಿದ ಮಸಾಲಾ ಹಾಗೂ ಕರೀಬೇವು ಸೇರಿಸಿ. ಮತ್ತೆ 2ರಿಂದ 3 ನಿಮಿಷ ಹುರಿಯಿರಿ.

ಅದಕ್ಕೆ 1/4ಕಪ್ ನೀರು ಸೇರಿಸಿ. ಬಿಸಿ ನೀರು ಬಳಸಿದರೆ ಉತ್ತಮ. ನಂತರ ಪಾತ್ರೆಯನ್ನು ಮುಚ್ಚಿ ಚೆನ್ನಾಗಿ ಕುದಿಸಿ. ಗ್ರೇವಿಯ ಹದಕ್ಕೆ ಬೇಕಾದಷ್ಟು ಸೇರಿಸಿ ಕುದಿಸಿ. ಚೆನ್ನಾಗಿ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇದು ಅನ್ನ ಹಾಗೂ ಪುಲ್ಕಾದ ಜೊತೆ ತಿನ್ನಲು ಚೆನ್ನಾಗಿರುತ್ತದೆ. ‌

ಡಾಬಾಸ್ಟೈಲ್‌ ಚಿಕನ್ ಕರಿ

ಬೇಕಾಗುವ ಸಾಮಗ್ರಿಗಳು: ಚಿಕನ್ – 1ಕೆ.ಜಿ. (ಸ್ಕಿನ್‌ಲೆಸ್‌. ಚೆನ್ನಾಗಿ ತೊಳೆದು ಮಧ್ಯಮ ಗಾತ್ರದಲ್ಲಿ ಹೆಚ್ಚಿಟ್ಟುಕೊಂಡಿದ್ದು)
ನೆನೆಸಿಟ್ಟುಕೊಳ್ಳಲು: ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 2ಟೇಬಲ್ ಚಮಚ, ನಿಂಬೆರಸ – 1 (ನಿಂಬೆಹಣ್ಣಿನದ್ದು), ಉಪ್ಪು – 1ಟೇಬಲ್ ಚಮಚ

ಕರಿ ತಯಾರಿಸಲು: ಈರುಳ್ಳಿ – 4ಮಧ್ಯಮ ಗಾತ್ರದ್ದು (ಚೆನ್ನಾಗಿ ಹೆಚ್ಚಿಕೊಂಡಿದ್ದು), ಬೆಳ್ಳುಳ್ಳಿ – 10 ಎಸಳು, ಶುಂಠಿ – 1, 1/2ಇಂಚು, ಹಸಿಮೆಣಸು – 3ರಿಂದ 4, ಜೀರಿಗೆ – 1ಟೇಬಲ್ ಚಮಚ, ಪಲಾವ್ ಎಲೆ – 2, ದಾಲ್ಚಿನ್ನಿ ಕಡ್ಡಿ – 1/2, ಕಾಳುಮೆಣಸು – 8 ರಿಂದ 10, ಏಲಕ್ಕಿ – 4 ರಿಂದ 5, ಲವಂಗ – 4 ರಿಂದ 5, ಟೊಮೆಟೊ – 4ಮಧ್ಯಮ ಗಾತ್ರದ್ದು (ಚೆನ್ನಾಗಿ ಹೆಚ್ಚಿದ್ದು), ಅರಿಸಿನ – 1/2ಟೀ ಚಮಚ, ಕೆಂಪು ಮೆಣಸಿನಪುಡಿ – 1ಟೀ ಚಮಚ, ಕೊತ್ತಂಬರಿಪುಡಿ – 2ಟೇಬಲ್ ಚಮಚ, ಗರಂಮಸಾಲ – 1ಟೀ ಚಮಚ, ಉಪ್ಪು – ರುಚಿಗೆ

ಹದಗೊಳಿಸಲು: ತುಪ್ಪ – 1ಟೇಬಲ್ ಚಮಚ, ಹಸಿಮೆಣಸು – 2, ಶುಂಠಿ – 1/2ಇಂಚು, ಕೊತ್ತಂಬರಿಸೊಪ್ಪು – ಅಲಂಕಾರಕ್ಕೆ ‌
ತಯಾರಿಸುವ ವಿಧಾನ: ಚಿಕನ್ ಅನ್ನು ಶುಂಠಿ–ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, 30ಗಂಟೆ ಬಿಡಿ.

ನಂತರ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಒಂದೆಡೆ ಇರಿಸಿಕೊಳ್ಳಿ. ನಂತರ ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಸೇರಿಸಿ. ನಂತರ ಪಲಾವ್‌ ಎಲೆ, ದಾಲ್ಚಿನ್ನಿ, ಏಲಕ್ಕಿ, ಕಾಳುಮೆಣಸು, ಲವಂಗವನ್ನು ಎಣ್ಣೆಗೆ ಸೇರಿಸಿ. ಒಮ್ಮೆ ಅವು ಸಿಡಿಯಲು ಆರಂಭಿಸಿದಾಗ ಈರುಳ್ಳಿ ಪೇಸ್ಟ್ ಸೇರಿಸಿ, ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಿರಿ. ಅವು ಕೆಂಬಣ್ಣಕ್ಕೆ ಬರುವವರೆಗೂ ಹುರಿಯಿರಿ. ಎಣ್ಣೆ ಬಿಡುವವರೆಗೂ ಗ್ಯಾಸ್‌ನ ಮೇಲೆ ಇಡಿ. ನಂತರ ಅದಕ್ಕೆ ಟೊಮೆಟೊ, ಉಪ್ಪು, ಅರಿಸಿನ, ಕೆಂಪುಮೆಣಸಿನ ಪುಡಿ ಹಾಗೂ ಕೊತ್ತಂಬರಿಪುಡಿ ಹಾಕಿ. ಟೊಮೆಟೊ ಬೆಂದು ನುಣ್ಣಗಾಗುವವರೆಗೂ ಬೇಯಿಸಿ. ಅದಕ್ಕೆ ಚಿಕನ್‌ ಸೇರಿಸಿ ಗರಂ ಮಸಾಲ ಹಾಗೂ 1/2ಕಪ್‌ ನೀರು ಸೇರಿಸಿ.

ನಂತರ ಕುಕ್ಕರ್ ಮುಚ್ಚಿ 3 ವಿಶಲ್ ಹೊಡಿಸಿ. ನಂತರ ಗ್ಯಾಸ್ ಆರಿಸಿ ಕುಕ್ಕರ್‌ ಹಬೆ ಹೋಗುವವರೆಗೂ ಬಿಡಿ. ನಂತರ ಕುಕ್ಕರ್ ಬಾಯಿ ತೆರೆದು ಸ್ವಲ್ಪ ನೀರು ಸೇರಿಸಿ ಜಾಸ್ತಿ ಉರಿಯಲ್ಲಿ 5ರಿಂದ 10 ನಿಮಿಷ ಕುದಿಸಿ. ನಂತರ ಪಾನ್ ಒಂದರಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಹಸಿಮೆಣಸು ಮತ್ತು ಶುಂಠಿ ಸೇರಿಸಿ. ಅವೆಲ್ಲ ಸಿಡಿಸಿಯಲು ಆರಂಭಿಸಿದಾಗ ಅದನ್ನು ಚಿಕನ್ ಕರಿಗೆ ಸೇರಿಸಿ. ಅದರ ಮೇಲೆ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಇದು ರೊಟ್ಟಿ ಹಾಗೂ ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT