ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ ನಿವಾರಣೆಗೂ ಅಶ್ವಗಂಧಕ್ಕೂ ಇದೆ ನಂಟು..

Last Updated 26 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಸ ರ್‌, ನನಗೆ ಮರದ ಸೇತುವೆಯ ಮೇಲೆ ನಡೆಯಲು ಆಗುವುದಿಲ್ಲ. ಪಾರ್ಶ್ವವಾಯು ಬಂದಂತೆ ಭಾಸವಾಗುತ್ತದೆ. ಸಿನಿಮಾಗಳಲ್ಲಿ ಸೇತುವೆ ಒಡೆದು ಬೀಳುವಂತಹ ದೃಶ್ಯಗಳು ಮನಸ್ಸಿನಲ್ಲಿ ಪುನರಾವರ್ತಿತವಾಗುತ್ತವೆ. ಕೈಕಾಲು ಆಡಿಸಲು ಆಗುವುದಿಲ್ಲ. ಇದು ಸಹಜ ಭಯವೇ ಅಥವಾ ನನಗೆ ಹುಚ್ಚು ಹಿಡಿಯುತ್ತಿದೆಯೇ?’

‘ಡಾಕ್ಟರ್, ನನಗೆ ರಕ್ತ ನೋಡಿದರೆ ವಾಕರಿಕೆ ಬರುತ್ತದೆ. ನನ್ನ ಮಗನಿಗೆ ಗಾಯವಾಗಿದೆ. ಅವನಿಗೆ ಡ್ರೆಸ್ಸಿಂಗ್ ಮಾಡಬೇಕಿದೆ. ಹೆಂಡತಿ ನನ್ನ ಬಳಿ ಮಾಡಲು ಹೇಳುತ್ತಾಳೆ. ಗಾಯ ನೋಡಿದರೂ ನನಗೆ ವಾಂತಿ ಬಂದ ಹಾಗೇ ಆಗುತ್ತದೆ. ಗಾಯ ಸಂಪೂರ್ಣ ಮುಚ್ಚುವವರೆಗೂ ನನಗೆ ಅದನ್ನು ನೋಡಲು ಆಗುವುದಿಲ್ಲ. ನನ್ನ ಈ ಭಯ ಹೋಗಲಾಡಿಸಲು ಯಾವುದಾದರೂ ಔಷಧಿ ಇದೆಯೇ?’

‘ಸರ್‌, ನಾನು ಗರ್ಭಿಣಿ, ನನ್ನ ತಾಯಿ ಹಾಗೂ ಅತ್ತೆ ಸಹಜ ಹೆರಿಗೆಗೆ ಪ್ರಯತ್ನ ಮಾಡು ಎನ್ನುತ್ತಿದ್ದಾರೆ. ಆದರೆ ನನ್ನಿಂದ ಅದು ಸಾಧ್ಯವಿಲ್ಲ. ನಾನು ವಿಡಿಯೊಗಳಲ್ಲಿ ಸಹಜ ಹೆರಿಗೆಯನ್ನು ನೋಡಿದ್ದೇನೆ. ಆದರೆ, ನನಗೂ ಸಹಜ ಹೆರಿಗೆಯಾದರೆ, ಮಧ್ಯದಲ್ಲೇ ಪ್ರಜ್ಞೆ ತಪ್ಪಬಹುದು. ನಂತರ ಸಿಸೇರಿಯನ್ ಮಾಡಬಹುದು ಎಂಬ ಭಯ ಇದೆ. ಅದಕ್ಕೆ ಮದ್ದೇನು?’

– ಇಂತಹ ಹಲವು ರೀತಿಯ ಭಯವನ್ನು ಹೊಂದಿರುವವರು ನಮ್ಮ ನಡುವೆ ಸಾಮಾನ್ಯ.

ಎತ್ತರದ ಪ್ರದೇಶ ಹಾಗೂ ಮುಚ್ಚಿದ ಅಥವಾ ಕತ್ತಲೆ ಇರುವ ಸ್ಥಳಗಳ ಬಗ್ಗೆ ಭಯವಿರುವುದು ಸಾಮಾನ್ಯ. ಹಲವರಿಗೆ ಹಲವು ರೀತಿಯ ಭಯ ಕಾಡುತ್ತದೆ. ಅಲ್ಲದೇ ಭಯಕ್ಕೆ ಕಾರಣಗಳು ಬೇರೆ ಬೇರೆ ಇರುತ್ತವೆ. ಕೆಲವೊಮ್ಮೆ ಭಯದ ಪ್ರಮಾಣ ಕಡಿಮೆ ಇದ್ದರೆ, ಇನ್ನೂ ಕೆಲವೊಮ್ಮೆ ಭಯ ಮನಸ್ಸಿನಾಳದಲ್ಲಿ ಬೇರೂರಿರುತ್ತದೆ.

ಆದರೆ ಭಯದೊಂದಿಗೆ ಸ್ಥಿರವಾಗಿ ಉಳಿಯುವ ವಿಷಯವೆಂದರೆ ಹೃದಯ ಬಡಿತದಲ್ಲಿನ ವ್ಯತ್ಯಾಸ, ಭಾವನೆಗಳಲ್ಲಿ ಏರುಪೇರು ಹಾಗೂ ದುರ್ಬಲ ನಿರ್ಧಾರ ತೆಗೆದುಕೊಳ್ಳುವಂತಹ ಸಂದರ್ಭಗಳು.

ಅಂತಹ ಭಯಕ್ಕೆ ಪರಿಹಾರ ತಿಳಿಯುವ ಮೊದಲು ಭಯದ ಹಿಂದಿರುವ ಮನೋವೈಜ್ಞಾನಿಕ ಕಾರಣಗಳೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಭಯ ಎಂದರೇನು?

ಭಯ ಎಂದರೆ ಅಪಾಯ ಅಥವಾ ಬೆದರಿಕೆಯಿಂದ ಪ್ರಚೋದಿಸಲ್ಪಟ್ಟ ನೈಸರ್ಗಿಕವಾದ ಮಾನಸಿಕ ಭಾವನೆಯಾಗಿದೆ. ಇದು ಮಾನವನಿಗೆ ತನ್ನ ಉಳಿವಿಗಾಗಿ ಬೇಕಾಗುವ ಪ್ರಬಲ ಭಾವನೆ. ಇದನ್ನು ಮನಸ್ಸಿನ ಎಚ್ಚರಿಕೆ ವ್ಯವಸ್ಥೆ ಎಂದೂ ವ್ಯಾಖ್ಯಾನಿಸಬಹುದು. ಭಯವಾದಾಗ ಹೃದಯ ಬಡಿತ ಹೆಚ್ಚುತ್ತದೆ ಹಾಗೂ ಮೈ ಬೆವರುತ್ತದೆ.

ಭಯವು ಭಯಾನಕವಾಗಿದ್ದರೂ ಅದರಿಂದ ಪ್ರಯೋಜನ ವಿದೆ. ಇದು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೋರಾಟದ ಪ್ರತಿಕ್ರಿಯೆ
ಯನ್ನು ಪ್ರಚೋದಿಸುವ ಪ್ರವೃತ್ತಿಯಾಗಿದೆ. ಆದರೂ ಈ ಅಸಹಜ ಭಯ ಹಾಗೂ ಫೋಬಿಯಾ ನಮಗೆ ತೊಂದರೆ ಮಾಡಬಹುದು.

ಕೆಟ್ಟ ಭಯ

ಆಘಾತಕಾರಿ ಅನುಭವವು ಭಯವನ್ನು ಮನಸ್ಸಿನಾಳದಲ್ಲಿ ಆಳವಾಗಿ ಬೇರೂರುವಂತೆ ಮಾಡುತ್ತದೆ ಎನ್ನುತ್ತದೆ ಮನೋವಿಜ್ಞಾನ. ಬೆಂಕಿ, ನೀರು ಹಾಗೂ ಎತ್ತರ ಪ್ರದೇಶದ ಭಯ ಇದರಲ್ಲಿ ಬರುತ್ತವೆ. ದೆವ್ವಗಳ ಭಯ, ಕತ್ತಲೆಯ ಭಯದಂತೆ ಇವು ಮನಸ್ಸಿನಲ್ಲಿ ಹಾಗೇ ಇರಬಹುದು. ಕ್ಲಾಸ್ಟ್ರೋಫೋಬಿಯಾ (ಇಕ್ಕಟ್ಟಿನ ಜಾಗದಲ್ಲಿ ಇರುವಾಗ ತಲೆದೋರುವ ಭಯ)ದಂತೆ ಕೆಲವೊಮ್ಮೆ ಕೆಲವೊಂದು ರೀತಿಯ ಭಯ ಸ್ಪಷ್ಟ ಕಾರಣವಿಲ್ಲದೇ ಮನಸ್ಸಿನಲ್ಲಿ ಹರಿದಾಡಬಹುದು. ನಿಖರವಲ್ಲದ, ತರ್ಕಬದ್ಧ ತಾರ್ಕಿಕತೆಯಿಲ್ಲದ ಅಂತಹ ಭಯವನ್ನು ಮನಸ್ಸಿನಿಂದ ತೆಗೆದುಹಾಕಬೇಕು.

ಭಯಕ್ಕೆ ಕಾರಣ ಹಾಗೂ ಪ್ರತಿಕ್ರಿಯೆಗಳು

ಭಯದಿಂದ ಒತ್ತಡ, ಆತಂಕ ಹಾಗೂ ಹೆದರಿಕೆ ಉಂಟಾಗುತ್ತದೆ. ಇದು ಸ್ಪಷ್ಟವಾಗಿ ಯೋಚಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಮೆದುಳನ್ನು ಗೊಂದಲಕ್ಕೆ ತಳ್ಳುತ್ತದೆ.

ಪುರುಷರಿಗಿಂತ ಮಹಿಳೆಯರನ್ನು ಭಯ ಹೆಚ್ಚು ಕಾಡುತ್ತದೆ. ಆದರೆ ಪುರುಷರಿಗೂ ಭಯದ ಅನುಭವವಾಗುತ್ತದೆ. ಸಾಮಾನ್ಯವಾಗಿ ಎರಡು ರೀತಿಯ ಹಾರ್ಮೋನ್‌ಗಳು ಭಯವನ್ನು ಹೆಚ್ಚು ಪ್ರಚೋದಿಸುತ್ತವೆ. ಒಂದು ಒತ್ತಡದ ಹಾರ್ಮೋನ್‌ ಹಾಗೂ ಇನ್ನೊಂದು ಲೈಂಗಿಕ ಹಾರ್ಮೋನ್‌. ಕೆಲವೊಂದು ಸಂದರ್ಭಗಳಲ್ಲಿ ಥೈರಾಯಿಡ್‌ ಹಾರ್ಮೋನ್‌ಗಳು ಸಹ ಭಯಕ್ಕೆ ಕಾರಣವಾಗಬಹುದು.

ಲೈಂಗಿಕ ಹಾರ್ಮೋನ್‌ಗಳಾದ ಈಸ್ಟ್ರೋಜನ್‌ ಹಾಗೂ ಟೆಸ್ಟೊಸ್ಟಿರಾನ್ ಹಾರ್ಮೋನ್‌ಗಳಲ್ಲಿನ ವ್ಯತ್ಯಾಸವು ಆತಂಕಕ್ಕೆ ಕಾರಣವಾಗುತ್ತದೆ. ಆ ಕಾರಣಕ್ಕೆ ಪ್ರೌಢಾವಸ್ಥೆ, ಋತುಚಕ್ರ ಹಾಗೂ ಋತುಬಂಧದ ಸಮಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದ ಭಯದ ಪ್ರಮಾಣವು ಗರಿಷ್ಠ ಮಟ್ಟವನ್ನು ತಲುಪುತ್ತದೆ.

ಒತ್ತಡಕ್ಕೆ ಕಾರಣವಾಗುವ ಕಾರ್ಟಿಸಾಲ್‌ ಹಾರ್ಮೋನ್‌ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಆತಂಕ ಹೆಚ್ಚುವಂತೆ ಮಾಡುತ್ತದೆ. ಆತಂಕ ಹಾಗೂ ಒತ್ತಡದಿಂದ ಜೀವನದ ಕುರಿತ ಭಯ, ಸೋಲಿನ ಭಯ, ಅಪಹಾಸ್ಯಕ್ಕೆ ಒಳಗಾಗುವ ಭಯ ಮುಂತಾದ ಹಲವು ರೀತಿಯ ಭಯವು ನಮ್ಮನ್ನು ಕಾಡುವಂತೆ ಮಾಡುತ್ತದೆ.

ಒಳ್ಳೆಯ ಭಯ

ಭಯವು ವೇಗವಾಗಿ ಯೋಚಿಸಲು ಹಾಗೂ ಕಾರ್ಯನಿರ್ವಹಿಸಲು ವ್ಯಕ್ತಿಯನ್ನು ಶಕ್ತಗೊಳಿಸುತ್ತದೆ. ಸಂದರ್ಭ, ಮಾಹಿತಿ ಹಾಗೂ ಪರಿಸರದ ಸೂಚನೆಗಳನ್ನು ಬಳಸಿಕೊಂಡು ಥಟ್ಟನೆ ಅ‍ಪಾಯವನ್ನು ಗ್ರಹಿಸಲು ಕಲಿಸುತ್ತದೆ.

ಅಶ್ವಗಂಧ ಮದ್ದು

ಕೆಲವೊಂದು ಸಂದರ್ಭಗಳಲ್ಲಿ ಭಯಕ್ಕೆ ಪರಿಹಾರವಾಗಿ ಅಶ್ವಗಂಧವನ್ನು ಬಳಸಬೇಕೆಂದು ಆಯುರ್ವೇದ ಸಲಹೆ ನೀಡುತ್ತದೆ. ಈ ಗಿಡಮೂಲಿಕೆಯನ್ನು ಹಲವು ಕಾರಣಗಳಿಗಾಗಿ ಆಯುರ್ವೇದದಲ್ಲಿ ಔಷಧಿಯಾಗಿ ಬಳಸುತ್ತಾರೆ. ಬಲವರ್ಧಕ ಹಾಗೂ ನವ ತಾರುಣ್ಯ ಮೂಡಿಸುವ ಅಶ್ವಗಂಧದಲ್ಲಿ ಹಲವು ವೈದ್ಯಕೀಯ ಅಂಶಗಳಿವೆ. ಇದರಲ್ಲಿರುವ ಅಡಾಪ್ಟೊಜೆನ್‌ ಹಾಗೂ ಅಫ್ರೊಡಿಸಾಯಿಕ್‌ ಅಂಶಗಳು ಹಾರ್ಮೋನ್‌ಗಳನ್ನು ಆರೋಗ್ಯಕರ ರೀತಿಯಲ್ಲಿ ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ.

ಒತ್ತಡ, ಆತಂಕ, ಭಯದಂತಹ ಭಾವನಾತ್ಮಕ ಆಘಾತಗಳ ನಿರ್ವಹಣೆಯಲ್ಲಿ ಅಶ್ವಗಂಧದ ಪರಿಣಾಮವು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಆಯುರ್ವೇದ ಮೂಲಿಕೆ ಮಾನಸಿಕ ಕಾರ್ಯಚಟುವಟಿಕೆಯ ಮೇಲೆ ಕಾರ್ಯನಿರ್ವಹಿಸುತ್ತದೆ, ಆತಂಕವನ್ನು ನಿವಾರಿಸುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ. ಇದು ಅರಿವಿನ ಕಾರ್ಯ ಮತ್ತು ತರ್ಕಬದ್ಧ ಚಿಂತನೆಯನ್ನು ಸುಧಾರಿಸುತ್ತದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುವ ಅಗತ್ಯವಿದೆ.

(ಲೇಖಕ: ಆಯುರ್ವೇದ ವೈದ್ಯರು, ಆಯುರ್ವೇದಿಸಂ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT