ಬುಧವಾರ, ಸೆಪ್ಟೆಂಬರ್ 23, 2020
27 °C

ಕೋವಿಡ್–19 ಲಾಕ್‌ಡೌನ್‌ | ಮಕ್ಕಳಿಗೆ ಆಟ: ಪೋಷಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾಲಾ– ಕಾಲೇಜುಗಳ ತರಗತಿಗಳು ಇನ್ನೂ ಆರಂಭವಾಗಿಲ್ಲ. ಮಕ್ಕಳು ಸಮಯ ಕಳೆಯಲು ಸ್ನೇಹಿತರ ಜೊತೆ ಯಾವ ಜಾಗದಲ್ಲಿ ಸುತ್ತಿ ಬರುತ್ತಾರೋ, ಅವರ ಸ್ನೇಹಿತರು ಕೊರೊನಾ ವಿರುದ್ಧ ಸರಿಯಾದ ಮುನ್ನೆಚ್ಚರಿಕೆ ವಹಿಸುತ್ತಾರೋ ಇಲ್ಲವೋ ಎಂಬ ಶಂಕೆ ಪೋಷಕರಿಗೆ. ಈ ಸಂದರ್ಭದಲ್ಲಿ ಮಕ್ಕಳನ್ನು ನಿಭಾಯಿಸುವುದು ಹೇಗೆ?

***

ಲಾಕ್‌ಡೌನ್‌ ತೆರವಾದ ನಂತರ ಜನರ ಓಡಾಟವೂ ಜಾಸ್ತಿಯಾಗಿದೆ. ಕೆಲವರು ಕಚೇರಿಗೂ ಹೋಗಿ ಬಂದು ಮಾಡುತ್ತಿದ್ದಾರೆ. ದಿನನಿತ್ಯದ ಚಟುವಟಿಕೆಗಳಿಗೆ ನಿಧಾನವಾಗಿ, ಮುನ್ನೆಚ್ಚರಿಕೆಯ ಜೊತೆ ಹೊಂದಿಕೊಳ್ಳುತ್ತಿದ್ದಾರೆ. ಆದರೆ ಪೋಷಕರು ತಮ್ಮ ಕುರಿತ ಕಾಳಜಿಗಿಂತ ಮಕ್ಕಳ ಬಗ್ಗೆ ಆತಂಕಗೊಂಡಿರುವುದು ಸಹಜವೇ. ಕಚೇರಿಗೆ ತೆರಳಿದರೂ ಮಕ್ಕಳು ಏನು ಮಾಡುತ್ತಿದ್ದಾರೋ, ನೆರೆ ಮನೆಯ ಮಕ್ಕಳ ಜೊತೆ ಆಟ ಆಡಲು ಅಥವಾ ಸಮೀಪದ ಪಾರ್ಕ್‌ಗೆ ಹೋಗಿಬಿಟ್ಟಿದ್ದಾರೋ ಎಂಬ ಗಾಬರಿಯಿಂದ ದಿನ ಕಳೆಯುತ್ತಿದ್ದಾರೆ.

ಚಿಕ್ಕ ಮಕ್ಕಳ ಬಗ್ಗೆ ಒಂದು ರೀತಿಯ ಚಿಂತೆಯಾದರೆ, ಹದಿಹರೆಯದ ಮಕ್ಕಳ ಬಗ್ಗೆ ಇನ್ನೊಂದು ಬಗೆಯ ದುಗುಡ.

‘ಚಿಕ್ಕ ಮಕ್ಕಳನ್ನು ಎಷ್ಟು ದಿನಗಳ ಕಾಲ ಮನೆಯಲ್ಲೇ ಕೂಡಿ ಹಾಕಬೇಕು ಹೇಳಿ. ಟಿವಿ, ಮೊಬೈಲ್‌, ಮನೆಯಲ್ಲೇ ಆಡುವ ಬೋರ್ಡ್‌ ಗೇಮ್ಸ್‌, ಆನ್‌ಲೈನ್‌ ತರಗತಿ ಎಂದು ಕೆಲವು ತಿಂಗಳ ಕಾಲ ಅವರನ್ನು ಎಂಗೇಜ್‌ ಆಗಿರುವಂತೆ ನೋಡಿಕೊಂಡೆ. ‘ಆದರೆ ಇನ್ನೂ ಎಷ್ಟು ದಿನ ಹೀಗೇ ಮನೆಯೊಳಗೇ ಇರುವುದು, ಹೊರಗೆ ಪಾರ್ಕ್‌, ಮಾಲ್‌ ಎಂದು ಸುತ್ತಿ ಬರೋಣ’ ಎಂದು ಮಕ್ಕಳಿಬ್ಬರೂ ಒಂದೇ ಸಮನೆ ಪೀಡಿಸುತ್ತಾರೆ’ ಎನ್ನುವ ಬೆಂಗಳೂರು ಜೆ.ಪಿ. ನಗರದ ಅಶ್ವಿನಿ ಮನೋಹರ್‌, ‘ಕೆಲವೊಮ್ಮೆ ನಮ್ಮ ಕಣ್ಣು ತಪ್ಪಿಸಿ ಬೀದಿಯಲ್ಲಿ ಆಟವಾಡಲು ಹೋಗಿಬಿಡುತ್ತಾರೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ಪೋಷಕರ ಜವಾಬ್ದಾರಿ
ಮಕ್ಕಳು ಆಟವಾಡಲು ಹಟ ಮಾಡಿದರೆ ಒಳಾಂಗಣವೇ, ಹೊರಾಂಗಣವೇ, ಎಷ್ಟು ಸಮಯ ಅವರು ಬೇರೆ ಮಕ್ಕಳ ಜೊತೆ ಬೆರೆಯುತ್ತಾರೆ, ಹೊರಗಡೆ ತಿಂಡಿ– ಪಾನೀಯ ಸೇವಿಸುತ್ತಾರೆಯೇ ಇತ್ಯಾದಿ ಮಾಹಿತಿಗಳನ್ನು ಪೋಷಕರು ಕಲೆ ಹಾಕಬೇಕಾಗುತ್ತದೆ. ಇನ್ನು ಈ ಕೋವಿಡ್‌ ಸಂದರ್ಭದಲ್ಲಿ ಅನುಸರಿಸಬೇಕಾದ ಅವಶ್ಯಕ ಮುನ್ನೆಚ್ಚರಿಕೆಗಳಾದ ಮುಖಗವಸು, ಸ್ಯಾನಿಟೈಸರ್‌, ಅಂತರ ಮೊದಲಾದವುಗಳ ಬಗ್ಗೆಯಂತೂ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಕ್ಕಳು ಆಟವಾಡುವಾಗ ಇವೆಲ್ಲದರ ಬಗ್ಗೆ ನಿಗಾ ವಹಿಸುತ್ತಾರೆಯೇ ಎಂಬುದು ಹಲವು ಪೋಷಕರ ಪ್ರಶ್ನೆ.

ಮಕ್ಕಳನ್ನು ಪ್ರತಿ ಹಂತದಲ್ಲಿ ಪ್ರಶ್ನಿಸಿದರೂ ಅವರಿಗೆ ಕಿರಿಕಿರಿ ಎನಿಸುವುದು ಸಹಜ. ‘ನನ್ನ ಅಪ್ಪ ತುಂಬಾ ಸ್ಟ್ರಿಕ್ಟ್‌’ ಎಂದು ಒಳಗೊಳಗೇ ಸಿಡಿಮಿಡಿ ಶುರುವಾಗುತ್ತದೆ. ಕ್ರಮೇಣ ಅದು ದ್ವೇಷಕ್ಕೂ ತಿರುಗಬಹುದು. ಆದರೆ ಅಪಾರ್ಟ್‌ಮೆಂಟ್‌ ಸಮುಚ್ಛಯದಲ್ಲಿ ಯಾರಿಗಾದರೂ ಕೊರೊನಾ ಸೋಂಕಿದ್ದರೆ ನೀವು ಮಕ್ಕಳ ವಿಷಯದಲ್ಲಿ ಕಠಿಣವಾಗಿಯೇ ವರ್ತಿಸಬೇಕಾಗುತ್ತದೆ.

ಅರಿವು ಮೂಡಿಸಿ
ಆದರೆ ಎಲ್ಲವನ್ನೂ ಒಮ್ಮೆಲೇ ಮಾಡದೆ, ಹಂತಹಂತವಾಗಿ ತಿಳಿವಳಿಕೆ ನೀಡುತ್ತ ಹೋಗಿ. ಹದಿಹರೆಯದ ಮಕ್ಕಳಾದರೆ ಅವರು ಎಲ್ಲಿ, ಎಂತಹ ಗುಂಪಿನ ಜೊತೆ ಬೆರೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಸೂಕ್ತ ಮುನ್ನೆಚ್ಚರಿಕೆ ಕೊಡಿ.

ಬೇರೆ ಮಕ್ಕಳು ಮುಖಗವಸು ಧರಿಸದಿದ್ದರೆ ಬೆರೆಯಲು ಬಿಡಬೇಡಿ. ಮನೆಯೊಳಗಿಂತ ಹೊರಗಡೆ ಸೇರುವುದು ಹೆಚ್ಚು ಸುರಕ್ಷಿತ. ಜೊತೆಗೆ ಸಮಯವನ್ನು ನಿಗದಿಪಡಿಸಿ. ಉದಾಹರಣೆಗೆ ಮಧ್ಯಾಹ್ನ ಒಂದು ತಾಸು ಸಾಕು ಎಂದು ಕಟ್ಟುನಿಟ್ಟಾಗಿ ಹೇಳಿ. ಮುಖಗವಸು, ಸ್ಯಾನಿಟೈಸರ್‌, ಅಂತರ ಕಾಪಾಡಿಕೊಳ್ಳುವುದರ ಬಗ್ಗೆ ನೀವು ಎಷ್ಟೇ ಎಚ್ಚರಿಕೆ ಕೊಟ್ಟರೂ ಮಕ್ಕಳು ಮಕ್ಕಳೇ. ಅಲ್ಲಿ ನೂರಕ್ಕೆ ನೂರರಷ್ಟು ಇವೆಲ್ಲ ಪಾಲನೆಯಾಗುತ್ತವೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಆದರೆ ಹದಿಹರೆಯದವರಿಗೆ ಅವರ ಜವಾಬ್ದಾರಿಗಳ ಬಗ್ಗೆ ತಿಳಿಸಿ ಹೇಳಿ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು