ಶನಿವಾರ, ಜುಲೈ 31, 2021
27 °C

ಕೊರೊನಾ ಜಯಿಸೋಣ | ಮಧುಮೇಹಿಗಳೇ, ಗಾಬರಿಗೊಳ್ಳುವುದನ್ನು ಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನಿಂದ ಮಧುಮೇಹಿಗಳಿಗೆ ಅಪಾಯ ಅಧಿಕ ಎಂಬ ಮಾತು ಕೇಳಿ ಕೇಳಿ ಗಾಬರಿಗೊಂಡಿದ್ದರೆ ಅದನ್ನು ಮೊದಲು ಬಿಟ್ಟುಬಿಡಿ. ಮನಸ್ಸಿಗೆ ನಾಟಿರುವ ಆ ಚಿಂತೆಯಿಂದ ಹೊರಬರಲೇಬೇಕು. ನಮ್ಮ ಎಚ್ಚರದಲ್ಲಿ ನಾವಿದ್ದರೆ ಕೊರೊನಾಕ್ಕಿಂತಲೂ ಭಯಾನಕವಾದ ಇತರ ಹಲವು ಬ್ಯಾಕ್ಟೀರಿಯಾಗಳಿಂದಲೂ ನಾವು ಸುರಕ್ಷಿತವಾಗಿಯೇ ಇರಬಹುದು ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಿ ಎಂಬುದು ತಜ್ಞರ ಹಿತನುಡಿ.

ಮಧುಮೇಹಿಗಳು ನಿಯಮಿತವಾಗಿ ಹಿಮೋಗ್ಲೋಬಿನ್‌ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇರಬೇಕು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಳೆಯುವ ಸಾಧನ ವನ್ನು ಮನೆಯಲ್ಲೇ ಇಟ್ಟಿರಬೇಕು. ಎಚ್‌ಬಿಎ ಪ್ರಮಾಣ 700ಕ್ಕಿಂತ ಕಡಿಮೆ ಬರದಂತೆ ಎಚ್ಚರ ವಹಿಸಬೇಕು. ವಿಟಮಿನ್‌ ಸಿ, ಡಿ ಮತ್ತು ಸತುವಿನ ಅಂಶ ಸಾಕಷ್ಟಿದ್ದಾಗ ಮಧುಮೇಹಿಗಳು ಆತಂಕಪಡುವ ಅಗತ್ಯ ಇರುವುದಿಲ್ಲ. ನ್ಯುಮೋನಿಯಾ ಲಸಿಕೆ ಹಾಕಿಸಿಕೊಂಡರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದು ಸಾಧ್ಯವಿದೆ ಎಂದು ಮಧು ಮೇಹ ತಜ್ಞರಾದ ಡಾ.ಎಸ್‌.ಪ್ರೀತಿ ಹೇಳುತ್ತಾರೆ.

ಬೇಕಾಬಿಟ್ಟಿ ಹಣ್ಣುಗಳನ್ನು ತಿನ್ನುವಂತಿಲ್ಲ ನಿಜ, ಆದರೆ ಸೇಬು, ಪಿಯರ್‌ (ಮರಸೇಬು) ಪೇರಳೆಯಂತಹ ಹಣ್ಣುಗಳನ್ನು ಧಾರಾಳವಾಗಿ ಸೇವಿಸ ಬಹುದು. ದಿನನಿತ್ಯದ ಆಹಾರ ಪೌಷ್ಟಿಕವಾಗಿರಬೇಕು. ಸದ್ಯದ ಸ್ಥಿತಿಯಲ್ಲಿ ಮಾಂಸಾಹಾರದಿಂದ ಸ್ವಲ್ಪ ದೂರ ಇದ್ದರೆ ಉತ್ತಮ.

ಆಹಾರದಂತೆಯೇ ಮುಖ್ಯವಾಗಿ ಬೇಕಿರುವುದು ವ್ಯಾಯಾಮ. ಅದನ್ನು ಪ್ರತಿದಿನ ಮಾಡುತ್ತಲೇ ಇರಬೇಕು. ಕೊರೊನಾ ಸೋಂಕು ಏರುಗತಿಯಲ್ಲಿದೆ. ಈ ಹಂತದಲ್ಲಿ ವಾಯು ವಿಹಾರಕ್ಕೆ ಉದ್ಯಾನಗಳು, ಜನನಿಬಿಡ ಸ್ಥಳಗಳಿಗೆ ಹೋಗಬೇಡಿ. ಮನೆಯೊಳಗೆ, ತಾರಸಿಯ ಮೇಲೆಯೇ ನಡೆದಾಡಬಹುದು. ಹೊರಗೆ ಹೋಗಿ ಬಂದಾಗ ಸಾಬೂನಿನೊಂದಿಗೆ ಕೈಗಳನ್ನು 20 ಸೆಕೆಂಡ್‌ ಕಾಲ ತೊಳೆಯಲೇಬೇಕು. ಹೊರಗೆ ಕೆಲಸಕ್ಕೆ ಹೋಗಿ ಬರುವ ಮನೆಯ ಇತರರು ಮಧುಮೇಹಿ ವೃದ್ಧರೊಂದಿಗೆ ಹಾಗೂ ಪುಟಾಣಿ ಮಕ್ಕಳೊಂದಿಗೆ ವ್ಯವಹರಿಸು ವಾಗ ಒಂದಿಷ್ಟು ಅಂತರ ಕಾಪಾಡಿ ಎಂದು ಸಲಹೆ ನೀಡುತ್ತಾರೆ ತಜ್ಞರು.

*
ಮಧುಮೇಹಿಗಳು ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳುವುದರತ್ತ ಗಮನ ಹರಿಸಿ. ನಿಯಮಿತ ವ್ಯಾಯಾಮ ತಪ್ಪಿಸಲೇಬಾರದು. ಸಕ್ಕರೆ ಪ್ರಮಾಣ 250ಕ್ಕಿಂತ ಅಧಿಕ ಹೋದಾಗಲೆಲ್ಲಾ ಸ್ವಂತ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಸಂಪರ್ಕಿಸಿ.
-ಡಾ.ಎಸ್.ಪ್ರೀತಿ, ಮಧುಮೇಹ ತಜ್ಞರು, ಡಾ.ಮೋಹನ್ಸ್‌ ಡಯಾಬಿಟೀಸ್‌ ಸ್ಪೆಷಾಲಿಟೀಸ್‌ ಸೆಂಟರ್‌, ಜೆ.ಪಿ ನಗರ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು