ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ್ಳೆಯ ಬ್ಯಾಕ್ಟೀರಿಯಾಗಳೂ ಇವೆ

Published 11 ಜುಲೈ 2023, 23:38 IST
Last Updated 11 ಜುಲೈ 2023, 23:38 IST
ಅಕ್ಷರ ಗಾತ್ರ

ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಬಹುತೇಕ ಕಾರ್ಯಗಳನ್ನು ನಿರ್ವಹಿಸುತ್ತವೆ ಮತ್ತು ನಿರ್ದೇಶಿಸುತ್ತವೆ.

ಕರುಳು ಮತ್ತು ಇತರೆ ಅಂಗಗಳ ಅಕ್ಷ ಮತ್ತು ಒಳ್ಳೆಯ ಬ್ಯಾಕ್ಟೀರಿಯಾಗಳು ವಿದ್ಯಾರ್ಥಿಗಳಾಗಿದ್ದಾಗಿನ ಮಾತು. ನಮಗೆ ಪರೀಕ್ಷೆಯ ದಿನ ಹಸಿವಾಗುತ್ತಿರಲಿಲ್ಲ. ಈಗಲೂ ಯಾವುದಾದರೂ ಸಂದರ್ಶನಕ್ಕೆ ಹೋಗುವ ದಿನ ಅದು ಮುಗಿಯುವವರೆಗೂ ಹಸಿವೆಯೇ ತೋರುವುದಿಲ್ಲ. ಅಥವಾ ಇನ್ನಾವುದೇ ಒತ್ತಡಗಳಿದ್ದರೂ ನಮಗೆ ಊಟ ಬೇಕೆನಿಸುವುದೇ ಇಲ್ಲ. ಇದು ಏಕಿರಬಹುದು? ಇದಕ್ಕೆ ಕಾರಣ ನಮ್ಮ ಮೆದುಳು ಹಾಗೂ ಕರುಳಿಗೂ ನೇರ ಸಂಪರ್ಕವಿರುವುದು.

ಜೀರ್ಣಾಂಗವ್ಯೂಹದ ಸಂದೇಶವು ವೇಗಸ್‌ ನರದ ಮೂಲಕ ಮೆದುಳಿಗೆ ತಲುಪುತ್ತದೆ. ಆಗ ಮೆದುಳು ಸರ್ವೈವಲ್‌ ಮೋಡ್‌ಗೆ ಹೋಗುತ್ತದೆ; ಹಸಿವನ್ನು ಮರೆಸುವಂತಹ ಹಾರ್ಮೋನುಗಳನ್ನು ಬಿಡುಗಡೆಗೊಳಿಸುತ್ತದೆ. ಇದೊಂದು ಬೈ–ಡೈರೆಕ್ಷನಲ್‌, ಅರ್ಥಾತ್‌ ದ್ವಿಮುಖವಾಗಿ ಕೆಲಸ ಮಾಡುವ ವಿಧಾನ. ಇದನ್ನೇ ‘ಕರುಳು-ಮೆದುಳಿನ ಅಕ್ಷ’ ಅಥವಾ ‘ಗಟ್-ಬ್ರೇನ್‌ ಆಕ್ಸಿಸ್‌’ ಎನ್ನುವುದು. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಸರಿಯಾಗಿ ನಿರ್ವಹಿಸಿದ್ದೇ ಆದಲ್ಲಿ ಮೆದುಳು ಈ ಒತ್ತಡವನ್ನು ನಿರ್ವಹಿಸಬಲ್ಲದಂತೆ. ಆಗ ಯಾವುದೇ ಒತ್ತಡದಲ್ಲೂ ನಮ್ಮ ದೇಹದ ಕಾರ್ಯಗಳೂ ತನ್ನಷ್ಟಕ್ಕೆ ತಾನೇ ಏರುಪೇರಿಲ್ಲದೇ ನಡೆದುಕೊಂಡು ಹೋಗಬಲ್ಲವು. ಹಿಂದೆ ಕೆಲಸದ ಮೇಲೆ ಹೊರಗಡೆ ಹೋಗುವವರಿಗೆ ಅಜ್ಜಿ ಮೊಸರು ಮತ್ತೆ ಸಕ್ಕರೆಯನ್ನು ತಿನ್ನಿಸಿ ಕಳುಹಿಸುತ್ತಿದ್ದರಂತೆ. ಮೊಸರಿನಲ್ಲಿ ಪ್ರೋಬಯಾಟಿಕ್ಸ್‌ ಅಥವಾ ಒಳ್ಳೆಯ ಬ್ಯಾಕ್ಟೀರಿಯಾಗಳು ಇರುತ್ತವೆ ಎಂದು ಅಜ್ಜಿ ತಿಳಿದಿದ್ದಳೋ ಅಥವಾ ಹಾಗೇ ಸುಮ್ಮನೆ ಸಿಹಿ ತಿನ್ನಿಸಿ ಕಳುಹಿಸುತ್ತಿದ್ದಳೋ ಗೊತ್ತಿಲ್ಲ.‌

ಇನ್ನೂ ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ನೀಡುವ ಆ್ಯಂಟಿಬಯಾಟಿಕ್‌ಗಳು ಹಾಗೂ ಅವುಗಳ ಪರಿಣಾಮದ ಬಗ್ಗೆ ನಿಮಗೆ ತಿಳಿದಿರಬೇಕು. ರೋಗವೇನೋ ಗುಣವಾಗಿಬಿಡುತ್ತದೆ. ಆದರೆ ನಿಃಶಕ್ತಿ ಇನ್ನಷ್ಟು ದಿನಗಳವರೆಗೆ ಬಾಧಿಸಲಿರುತ್ತದೆ. ಪಾಪ ಈ ಆ್ಯಂಟಿಬಯಾಟಿಕ್‌ಗಳು ಪಕ್ಷಪಾತವಿಲ್ಲದೆ ಕಾಯಿಲೆಗಳನ್ನು ತಂದೊಡ್ಡಿದ ಕೆಟ್ಟ ಬ್ಯಾಕ್ಟೀರಿಯಾಗಳನ್ನಷ್ಟೇ ಕೊಲ್ಲದೆ, ನಮಗೆ ಅವಶ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ಕೊಂದುಬಿಡುತ್ತವೆ. ಹಾಗಾಗಿ ನಮ್ಮ ನಿತ್ಯ ಆಹಾರದಲ್ಲಿ ಮೊಸರಿನಂತಹ ಪ್ರೋಬಯೋಟಿಕ್‌ ಆಹಾರಗಳನ್ನು ಸೇವಿಸುವುದು ಮುಖ್ಯ.


ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಬಹುತೇಕ ಕಾರ್ಯಗಳನ್ನು ನಿರ್ವಹಿಸುತ್ತವೆ ಮತ್ತು ನಿರ್ದೇಶಿಸುತ್ತವೆ. ಕರುಳಿನಲ್ಲಿರುವ ನಾರಿನಂಶವನ್ನು ಹುದುಗಿಸಿ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಸೆಕೆಂಡರಿ ಮೆಟಬೊಲೈಟ್‌ಗಳಾದ ಅಸಿಟೇಟು, ಪ್ರೊಪಿಯೋನೇಟು, ಬ್ಯುಟರೈಟು ಹಾಗೂ ಸಣ್ಣ ಸರಪಳಿ ಕೊಬ್ಬಿನಾಮ್ಲಗಳು ಮುಂತಾದವುಗಳನ್ನು ಉತ್ಪಾದಿಸುತ್ತವೆ. ಹೆಚ್ಚಿನ ನಾವು ತಿಂದ ಆಹಾರ ಮತ್ತು ನಾರಿನ ಪದಾರ್ಥಗಳೆಲ್ಲವೂ ಪಚನಗೊಳ್ಳುವುದು ಕರುಳಿನಲ್ಲಿಯೇ; ಅದುವೂ ಈ ಬ್ಯಾಕ್ಟೀರಿಯಾಗಳಿಂದಲೇ. ನಂತರ ಅವೆಲ್ಲಾ ರಕ್ತದ ಮೂಲಕ ಸಾಗಿ ಮೆದುಳನ್ನು ತಲುಪುತ್ತವೆ. ಹೀಗೆ ಕಾರ್ಯ ದ್ವಿಮುಖವಾಗಿ ಸಾಗುತ್ತಿರುತ್ತದೆ.

ಕರುಳಿನ ಬ್ಯಾಕ್ಟೀರಿಯಾಗಳು ಈ ಮೆದುಳು-ಕರುಳಿನ ದ್ವಿಮುಖ ಸಂವಹನದ ಮೂಲಕ ನಮ್ಮ ನಿದ್ರೆಯ ಮೇಲೂ ತಮ್ಮ ಪ್ರಭಾವವನ್ನು ಬೀರುತ್ತವೆ. ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸವಾದಾಗ ಸರಿಯಾಗಿ ನಿದ್ರೆ ಬಾರದಿರುವುದನ್ನು ನೀವು ಗಮನಿಸಿರಬೇಕು; ಮತ್ತು ಆಗ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ದೈನಂದಿನ ಚುಟುವಟಿಕೆಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕಾಗಿ. ಇದನ್ನು ‘ಗಟ್-ಸ್ಲೀಪ್ ಆಕ್ಸಿಸ್‌’ ಎನ್ನುತ್ತೇವೆ. ನಾವು ಮಗುವಾಗಿದ್ದಾಗ ದಿನವೆಲ್ಲಾ ನಿದ್ರೆ ಮಾಡುತ್ತಲೇ ಇರುತ್ತೇವೆ. ಅದು ಹೇಗೆ ಎಂದಿರಾ? ಇದು ತಾಯಿಯ ಹಾಲಿನಲ್ಲಿರುವ ಹೆಚ್ಚಿನ ಪ್ರಮಾಣದ ‘ಬೈಫಿಡೋಬ್ಯಾಕ್ಟೀರಿಯಾ’ ಎನ್ನುವ ಪ್ರೋಬಯಾಟಿಕ್‌ನಿಂದಾಗಿ. ನಾವು ದೊಡ್ಡವರಾಗುತ್ತಿದ್ದಂತೆಯೇ ಪ್ರೋಬಯಾಟಿಕ್‌ನಲ್ಲಿ ವೈವಿಧ್ಯ ಕಂಡು ಬಂದು ಬೈಫಿಡೋಬ್ಯಾಕ್ಟೀರಿಯಾದ ಪ್ರಮಾಣ ಕಡಿಮೆಯಾಗುತ್ತಹೋಗುತ್ತದೆ; ನಿದ್ರೆಯ ಪ್ರಮಾಣವೂ ಇಳಿಯುತ್ತದೆ. ವಯಸ್ಸಾಗುತ್ತಿದ್ದಂತೆಯೇ ನಿದ್ರಿಸುತ್ತಲೇ ಇರಲಾಗುವುದಿಲ್ಲವಲ್ಲ. ಇತರೆ ಕಾರ್ಯಗಳನ್ನು ನಿರ್ವಹಿಸಲು ಅವಶ್ಯವಿರುವ ಇತರೆ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹವ್ಯವಸ್ಥೆಗೆ ಬಂದು ಸೇರತೊಡಗುತ್ತವೆ.

ಕೆಟ್ಟ ಬ್ಯಾಕ್ಟೀರಿಯಾಗಳಿಂದ ತುಂಬಿರುವ ಅಥವಾ ಅನಾರೋಗ್ಯಕರ ಕರುಳು, ಚರ್ಮದ ತೊಂದರೆಗಳನ್ನೂ ತಂದೊಡ್ಡುತ್ತದೆ. ಕೆಲವು ನುರಿತ ವೈದ್ಯರು ನಮ್ಮ ಮುಖದ ಮೇಲಿರುವ ಗುಳ್ಳೆಗಳನ್ನು ನೋಡಿಯೇ ಇದು ಕೆಟ್ಟಿರುವ ಜೀರ್ಣವ್ಯವಸ್ಥೆಯ ಫಲಿತಾಂಶ ಎನ್ನುವುದು ಕೇಳಿದ್ದೇವೆ. ಅರ್ಥಾತ್‌, ಕರುಳು ನಮ್ಮ ಮುಖದ ಚರ್ಮದ ಜೊತೆಗೂ ಸಂಪರ್ಕ ಹೊಂದಿದೆ. ಇದನ್ನು ‘ಗಟ್‌-ಸ್ಕಿನ್‌ ಆಕ್ಸಿಸ್‌’ ಎನ್ನುತ್ತೇವೆ. ಕರುಳಿನ ಬ್ಯಾಕ್ಟೀರಿಯಾಗಳ ವ್ಯತ್ಯಾಸದಿಂದ ಉಂಟಾಗುವ ಪ್ರಮುಖ ಚರ್ಮದ ಸಮಸ್ಯೆಗಳೆಂದರೆ ಸೋರಿಯಾಸಿಸ್‌, ಅಟಾಪ್ಟಿಕ್‌ ಡರ್ಮಾಟೈಟಿಸ್‌, ಅಸ್ನೆ ವಲ್ಗ್ಯಾರಿಸ್‌ ಮುಂತಾದವು. ಹಾಗಾಗಿಯೇ ಕರುಳಿನ ಆರೋಗ್ಯವನ್ನು ಕೆಡಿಸುವ ಕರಿದ ಆಹಾರವನ್ನು ಹೆಚ್ಚಾಗಿ ಸೇವಿಸಕೂಡದು.

ಇದೇ ರೀತಿ ಕರುಳು ಹಾಗೂ ಶ್ವಾಸಕೋಶದ ನಡುವೆ ಇರುವ ನೇರ ಸಂಪರ್ಕವನ್ನು ‘ಗಟ್-ಲಂಗ್‌ ಆಕ್ಸಿಸ್‌’ ಎನ್ನುತ್ತೇವೆ. ಎರಡೂ ಅಂಗಗಳೂ ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸಿದರೂ ಅವುಗಳಲ್ಲಿರುವ ಬ್ಯಾಕ್ಟೀರಿಯಾ, ವೈರಸ್ಸು, ಶಿಲೀಂಧ್ರಗಳು ಒಂದೇ ಬಗೆಯವು. ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಸೆಕೆಂಡರಿ ಮೆಟಬೊಲೈಟುಗಳು ಶ್ವಾಸಕೋಶದ ರೋಗ ನಿರೋಧಕತ್ವವನ್ನೂ ನಿಯಂತ್ರಿಸಬಲ್ಲವಂತೆ.

ಹಾಗೆಯೇ ಬಾಯಿಯ ಆರೋಗ್ಯಕ್ಕೂ ಕರುಳಿನ ಪ್ರೋಬಯಾಟಿಕ್‌ಗಳೇ ಕಾರಣ. ಇದು ಕೂಡ ದ್ವಿಮುಖವಾದ್ದರಿಂದ ಬಾಯಿಯನ್ನು ಆರೋಗ್ಯವಾಗಿಟ್ಟುಕೊಂಡರೆ ಕರುಳಿನಲ್ಲಿಯೂ ಕೇವಲ ಒಳ್ಳೆಯ ಬ್ಯಾಕ್ಟೀರಿಯಾಗಳೇ ಇರುತ್ತವೆ. ನಮ್ಮ ಬಾಯೊಳಗೆ ಸುಮಾರು ಏಳನು ನೂರು ರೀತಿಯ ಬ್ಯಾಕ್ಟೀರಿಯಾಗಳಿರುತ್ತವೆಯಂತೆ. ಇವುಗಳಲ್ಲಿ ಆರೋಗ್ಯವನ್ನು ಕಾಪಾಡುವಂತವು ಎಷ್ಟಿವೆಯೋ, ಹಾಳುಮಾಡುವಂತಹವು ಎಷ್ಟಿವೆಯೋ ಬಲ್ಲವರಾರು? ಹಾಗಾಗಿಯೇ ಸೂಕ್ಷ್ಮಾಣುಜೀವಿಗಳನ್ನು ದೇಹದೊಳಕ್ಕೆ ಸೇರಗೊಡದೆ ಕೊಲ್ಲುವ ಗುಣವಿರುವ ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುತ್ತಿದ್ದರು ನಮ್ಮ ಪೂರ್ವಜರು.

ಒಂದು ವೇಳೆ ಈ ಒಳ್ಳೆಯ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳ ನಡುವಿನ ಅನುಪಾತದಲ್ಲಿ ಅಸಮತೋಲನ ಉಂಟಾದರೆ ಅದನ್ನೇ ‘ಗಟ್‌ ಡಿಸ್‌ಬಯಾಸಿಸ್‌’ ಎನ್ನುತ್ತೇವೆ. ಅದು ಹೀಗೆ ಮುಂದುವರೆದಾಗಲೇ ಬೊಜ್ಜು, ಹೈಪರ್‌ ಗ್ಲೈಸೀಮಿಯಾ, ಹೈಪರ್‌ ಲಿಪಿಡಿಮಿಯಾ, ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು, ಸಕ್ಕರೆಕಾಯಿಲೆ; ಜೊತೆಗೆ ಮನೋರೋಗಗಳೂ ಆರಂಭವಾಗುವುದು. ಹಾಗಾಗಿಯೇ ನಮ್ಮ ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಸರಿಯಾಗಿ ನಿರ್ವಹಿಸುವುದು ಅತ್ಯವಶ್ಯಕ. ಬೈಫಿಡೋಬ್ಯಾಕ್ಟೀರೀಯಂ, ಲ್ಯಾಕ್ಟೋಬ್ಯಾಸಿಲಸ್‌ ರ್‍ಯಾಮ್ನೋಸಸ್, ಬ್ಯಾಸಿಲಸ್‌ ಕೊಯಗ್ಯುಲನ್ಸ್‌, ಲ್ಯಾಕ್ಟೋಬ್ಯಾಸಿಲಸ್‌ ಪ್ಲಾಂಟ್ಯಾರಂ, ಲ್ಯಾಕ್ಟೋಬ್ಯಾಸಿಲಸ್‌ ಅಸಿಡೊಫಿಲಸ್ ಇವೇ ಮೊದಲಾದವು ನಮ್ಮ ಕರುಳಿಗೆ ಅವಶ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು. ಇವು ಕ್ಯಾನ್ಸರ್‌ ಕೀಮೋಥೆರಪಿ ತೆಗೆದುಕೊಂಡಿರುವ ರೋಗಿಗಳ ದೇಹದಲ್ಲಿ ಬಿಳಿರಕ್ತಕಣಗಳನ್ನು ಉತ್ಪಾದಿಸಲೂ ಸಹಕಾರಿಯಾಗಬಲ್ಲವಂತೆ. ಈ ಬ್ಯಾಕ್ಟೀರಿಯಾಗಳ ಪ್ರಮಾಣವು ಸರಿಯಾಗಿ ನಿರ್ವಹಣೆಯಾಗಬೇಕಾದರೆ ಅವುಗಳಿಗೂ ಆಹಾರದ ಅವಶ್ಯಕತೆಯಿದೆಯಲ್ಲವೇ. ಅದನ್ನು ಪೂರೈಸುವವೇ ಜೀರ್ಣವಾಗದಂತಹ, ಆದರೆ ಆರೋಗ್ಯಕರವೆನಿಸುವ ಹಾಗೂ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ನಾರಿನ ಪದಾರ್ಥಗಳು. ಅವುಗಳೇ ಪ್ರೀಬಯಾಟಿಕ್ಸ್‌. ಮತ್ತು ಇವನ್ನು ತಿಂದು ಬೆಳೆಯುವ ಪ್ರೋಬಯೋಟಿಕ್‌ ಗಳು ದೇಹದ ಇತರೆ ಕಾರ್ಯಗಳನ್ನು ನಿರ್ವಹಿಸುವಂತಹ ಕೆಲವು ಸೆಕೆಂಡರಿ ಮೆಟಬೊಲೈಟುಗಳಾದ ಸಣ್ಣ ಸರಪಳಿ ಕೊಬ್ಬಿನಾಮ್ಲಗಳು, ಅಸಿಟೇಟುಗಳನ್ನು ಬಿಡುಗಡೆ ಮಾಡುತ್ತವೆ. ಇವೇ ಪೋಸ್ಟ್‌ ಬಯಾಟಿಕ್ಸ್‌.

ಕರುಳು ನಮ್ಮ ದೇಹದ ಎಲ್ಲಾ ಪ್ರಮುಖ ಅಂಗಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಕರುಳಿನಲ್ಲಾಗುವ ವ್ಯತ್ಯಾಸ ಖಂಡಿತವಾಗಿಯೂ ಬೇರೆಲ್ಲಾ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಮಾನಸಿಕ ಒತ್ತಡ, ಆತಂಕ, ಖಿನ್ನತೆ, ನರಸಂಬಂಧಿ ಕಾಯಿಲೆಗಳನ್ನೂ ತಂದೊಡ್ಡಿಬಿಡಬಲ್ಲವು. ಇಡೀ ನಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಬುನಾದಿ ಈ ಬ್ಯಾಕ್ಟೀರಿಯಾಗಳು ಎಂದರೆ ತಪ್ಪಾಗಲಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT