ಗುರುವಾರ , ಮಾರ್ಚ್ 23, 2023
32 °C

ಸ್ತನ ಶೂಲೆಯೇ? ಆಹಾರದಿಂದಲೂ ನಿಯಂತ್ರಿಸಬಹುದು..

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

‘ಯಾಕೋ ಇತ್ತೀಚೆಗೆ ಸ್ತನಗಳಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ತುಂಬಾ ಹೊತ್ತೇನೂ ನೋವಿರುವುದಿಲ್ಲ. ಆದರೆ, ಒಂದು ರೀತಿಯ ವಿಚಿತ್ರ ನೋವು. ಆ ನೋವನ್ನು ಹೀಗೆ ಎಂದು ವಿವರಿಸಲು ಸಾಧ್ಯವಿಲ್ಲ. ಅದು ಯಾವ ಕಾರಣಕ್ಕೆ ಬರುತ್ತದೆ ಎಂಬುದು ತಿಳಿದಿಲ್ಲ. ಒಮ್ಮೆ ಡಾಕ್ಟರ್ ಬಳಿ ತೋರಿಸಬೇಕು ಎಂದುಕೊಂಡಿದ್ದೇನೆ’ ಎಂದು ಇತ್ತೀಚೆಗಷ್ಟೇ ತಾಯಿಯಾಗಿದ್ದ ಗೆಳತಿ ಸುಮಾ ಹೇಳಿದಾಗ ಗಾಬರಿಯಾಗಿತ್ತು. ಆದರೆ ಮತ್ತೊಮ್ಮೆ ಸಿಕ್ಕಾಗ ‘ಡಾಕ್ಟರ್‌ ಬಳಿ ತೋರಿಸಿದ್ದೇನೆ ಕಣೆ, ಏನೂ ತೊಂದರೆಯಿಲ್ಲ ಎಂದಿದ್ದಾರೆ’ ಎಂದಾಗ ನೆಮ್ಮದಿ ಎನ್ನಿಸಿತ್ತು.

‘ಹೆಣ್ಣುಮಕ್ಕಳಲ್ಲಿ ಋತುಚಕ್ರದ ಆರಂಭದ ದಿನಗಳಿಂದ ಹಿಡಿದು ಋತುಬಂಧದವರೆಗೂ ಸ್ತನಗಳಲ್ಲಿ ನೋವು ಕಾಣಿಸುವುದು ಸಾಮಾನ್ಯ ಸಂಗತಿ. ಅದರಲ್ಲೂ ಮುಟ್ಟಿನ ದಿನಗಳಲ್ಲಿ ಹಲವರಿಗೆ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಅದಕ್ಕೆ ಇಂತಹದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಋತುಚಕ್ರದ ಸಮಯದಲ್ಲಿ, ಬಾಣಂತಿಯಾದಾಗ, ಋತುಬಂಧದ ಸಮಯದಲ್ಲಿ ಸ್ತನಗಳಲ್ಲಿ ನೋವಿರುತ್ತದೆ. ಅದಕ್ಕೆ ಗಾಬರಿಗೊಳ್ಳುವ ಅಗತ್ಯವಿಲ್ಲ. ವೈದ್ಯರ ನೆರವು ಹಾಗೂ ಸಮರ್ಪಕ ಜೀವನಶೈಲಿ ಹಾಗೂ ಆಹಾರಕ್ರಮದಿಂದ ಪರಿಹಾರ ಕಂಡುಕೊಳ್ಳಬಹುದು’ ಎನ್ನುತ್ತಾರೆ ಡಾ.ವೀಣಾ ಭಟ್‌. 

ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಲು ಮುಖ್ಯ ಕಾರಣಗಳು 

ಋತುಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್‌ನಲ್ಲಿ ಏರುಪೇರಾಗುವುದು 

ಬಾಣಂತಿಯರಲ್ಲಿ ಎದೆಹಾಲಿನ ನಾಳಗಳಲ್ಲಿ ಹಾಲು ಸಂಗ್ರಹವಾಗುವುದು 

ಋತುಬಂಧ ಸಮಯದಲ್ಲಿನ ಹಾರ್ಮೋನ್‌ಗಳ ಏರಿಳಿತ 

ಅಸಮರ್ಪಕ ಆಹಾರಕ್ರಮ  

ಮಾನಸಿಕ ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳ ನಿರಂತರ ಸೇವನೆ 

ಸರಿಯಾದ ಅಳತೆಯ ಬ್ರಾ ಧರಿಸದೇ ಇರುವುದು 

ಕೆಫಿನ್ ಅಂಶ ಅಧಿಕವಿರುವ ಪದಾರ್ಥಗಳ ಸೇವನೆ 

ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು 

ಅತಿಯಾಗಿ ವರ್ಕೌಟ್ ಮಾಡುವುದರಿಂದಲೂ ಸ್ತನ ಹಾಗೂ ಎದೆಯ ಭಾಗದಲ್ಲಿ ನೋವು ಕಾಣಿಸಬಹುದು.

2013ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಸಣ್ಣ ಗಾತ್ರದ ಸ್ತನ ಹೊಂದಿರುವ ಹಾಗೂ ಸರಳ ವ್ಯಾಯಾಮ ಮಾಡುವ ಮಹಿಳೆಯರಿಗಿಂತ ದೊಡ್ಡ ಗಾತ್ರದ ಸ್ತನ ಹೊಂದಿರುವ ಹಾಗೂ ಅತಿ ಕಠಿಣ ವ್ಯಾಯಾಮದಲ್ಲಿ ತೊಡಗಿರುವ ಮಹಿಳೆಯರಲ್ಲಿ ಸ್ತನದ ನೋವು ಹೆಚ್ಚು ಕಾಣಿಸುತ್ತದೆ ಎಂಬ ಅಂಶವು ಸಾಬೀತಾಗಿದೆ.  ‌

ಪರಿಹಾರೋಪಾಯಗಳು 

ಸ್ತನದ ನೋವಿನ ಸಮಸ್ಯೆ ಕಾಣಿಸಿಕೊಳ್ಳುವವರು ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಕಡಿಮೆ ಜಂಕ್‌ಪುಡ್ ಸೇವನೆ, ಕೆಫಿನ್ ಅಂಶ ಕಡಿಮೆ ಇರುವ ಪದಾರ್ಥಗಳ ಸೇವನೆ, ಕಡಿಮೆ ಉಪ್ಪಿನಾಂಶ ಸೇವನೆ ಮುಂತಾದವುಗಳಿಂದ ಇದನ್ನು ನಿಯಂತ್ರಿಸಬಹುದು. ಜೊತೆಗೆ ಹೆಚ್ಚು ಹಸಿರು ತರಕಾರಿ, ಹಣ್ಣು–ಹಂಪಲು ಸೇವನೆ ಕೂಡ ಉತ್ತಮ. 

ಕಡೆಗಣಿಸದಿರಿ

‘ಋತುಬಂಧದ ನಂತರ ದಿನಗಳಲ್ಲಿ ಕಾಣಿಸುವ ಸ್ತನದ ನೋವನ್ನು ಕಡೆಗಣಿಸುವ ಹಾಗಿಲ್ಲ. ಕೆಲವೊಮ್ಮೆ ಸ್ತನದಲ್ಲಿ ನೋವಿಲ್ಲದ ಗಂಟು ಕೂಡ ಕಾಣಿಸಬಹುದು. ಒಮ್ಮೊಮ್ಮೆ ಮೊಲೆ ತೊಟ್ಟಿನಲ್ಲಿ ದ್ರವರೂಪದ ಸ್ರವಿಕೆ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ಮಾಡಬಾರದು. ಇದು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೂ ಕಾರಣವಾಗಬಹುದು. ಆ ಕಾರಣಕ್ಕೆ ಋತುಬಂಧದ ನಂತರದ ದಿನಗಳಲ್ಲಿ ಸ್ವಯಂ ತಪಾಸಣೆ ಅಥವಾ ವೈದ್ಯರ ಬಳಿ ನಿಯಮಿತ ತಪಾಸಣೆ ಅಗತ್ಯ’ ಎನ್ನುತ್ತಾರೆ ವೀಣಾ ಭಟ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು