ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನಿಗಳ ಸಹವಾಸ: ದೇಶಕ್ಕೆ ₹56,000 ಕೋಟಿಗೂ ಅಧಿಕ ಹೊರೆ

Last Updated 24 ಮಾರ್ಚ್ 2022, 7:16 IST
ಅಕ್ಷರ ಗಾತ್ರ

ನವದೆಹಲಿ: ಧೂಮಪಾನಿಗಳು ಹೊರಬಿಡುವ ಹೊಗೆಯಿಂದಾಗಿ ತೊಂದರೆಗೆ ಸಿಲುಕಿ, ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿದ್ದು, ಅದರಿಂದ ದೇಶದ ಆರೋಗ್ಯ ವೆಚ್ಚಕ್ಕೆ ₹56,000 ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಧೂಮಪಾನಿಗಳ ಸಹವಾಸದಿಂದ ತೊಂದರೆಗೆ ಸಿಲುಕುವವರ ಆರೋಗ್ಯ ವೆಚ್ಚ, 2017ರಲ್ಲಿ ₹56,700 ಕೋಟಿ ವೆಚ್ಚವಾಗಿದ್ದು, ದೇಶದ ಜಿಡಿಪಿಯ ಶೇ 0.33ರಷ್ಟಿದೆ. ಅಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯದ ವಾರ್ಷಿಕ ಬಜೆಟ್ ಮೇಲೆ ಸುಮಾರು ₹47,300 ಕೋಟಿ ಹೊರೆಯಾಗಿದೆ.

ವಿವಿಧ ರೀತಿಯ ಹೊಗೆಸೊಪ್ಪು ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ದೇಶದಲ್ಲಿ ವಾರ್ಷಿಕ ₹1,80,000 ಕೋಟಿ ವೆಚ್ಚವಾಗುತ್ತಿದ್ದು, ಅದರ ಪೈಕಿ ಪರೋಕ್ಷವಾಗಿ ಧೂಮಪಾನಿಗಳ ಮೇಲೆ ಉಂಟಾಗುತ್ತಿರುವ ಆರೋಗ್ಯ ವೆಚ್ಚದ ಪಾಲು ಹೆಚ್ಚಿದೆ.

ಅಧ್ಯಯನ ವರದಿಯ ಲೇಖಕರಲ್ಲೊಬ್ಬರಾದ ಕೊಚ್ಚಿಯ ರಾಜಗಿರಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರೊ. ರಿಜೊ ಜಾನ್ ಪ್ರಕಾರ, ಇದೊಂದು ಮೊದಲ ಅಧ್ಯಯನ ವರದಿಯಾಗಿದ್ದು, ಕಳೆದ ಮೂರು ವರ್ಷಗಳ ಪೈಕಿ, ಸರಾಸರಿ ಎಲ್ಲ ವಿಧದ ತಂಬಾಕು ಉತ್ಪನ್ನಗಳಿಂದ ಬರುವ ತೆರಿಗೆ ಆದಾಯಕ್ಕಿಂತ, ಪರೋಕ್ಷವಾಗಿ ಧೂಮಪಾನದ ತೊಂದರೆಗೆ ಸಿಲುಕಿದವರ ಆರೋಗ್ಯ ವೆಚ್ಚಕ್ಕೆ ಬೇಕಾಗುವ ಮೊತ್ತವೇ ಹೆಚ್ಚು ಎಂದಿದೆ ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ, ಮಹಿಳೆಯರು, ಯುವಜನತೆ ಮತ್ತು ಕಡಿಮೆ ಆದಾಯ ಹೊಂದಿರುವ ವರ್ಗದ ಜನತೆ ಈ ತೊಂದರೆಗೆ ಸಿಲುಕುತ್ತಿದ್ದಾರೆ ಎಂದು ವರದಿ ಹೇಳಿದೆ.

ವಾಷಿಂಗ್ಟನ್‌ ಡಿಸಿಯ ಜಾನ್ ಮತ್ತು ಎಸೆಲ್ ಡಾಶಿ ಅಧ್ಯಯನ ವರದಿ ಪ್ರಕಾರ, ಪರೋಕ್ಷ ಧೂಮಪಾನದ ತೊಂದರೆಗೆ ಸಿಲುಕುವವರ ಪೈಕಿ 20 ರಿಂದ 24ರ ವಯೋಮಾನದ ಯುವಜನತೆ ಮತ್ತು ಮಹಿಳೆಯರ ಪ್ರಮಾಣವೇ ಶೇ 71ರಷ್ಟಿದೆ ಎಂದು ತಿಳಿಸಿದ್ದಾರೆ.

ಜಾಗತಿಕವಾಗಿ ತಂಬಾಕು ಬಳಕೆದಾರರ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಪ್ರತಿ ವರ್ಷ ತಂಬಾಕು ಸಂಬಂಧಿತ ಕಾಯಿಲೆಗಳಿಗೆ ಸಿಲುಕಿ ಪ್ರತಿ ವರ್ಷ 12 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಜತೆಗೆ ದೇಶದಲ್ಲಿ ವರದಿಯಾಗುವ ಕ್ಯಾನ್ಸರ್ ಸಂಬಂಧಿ ಸಾವಿನ ಪ್ರಕರಣಗಳಲ್ಲಿ ಸುಮಾರು ಶೇ 27ರಷ್ಟು ತಂಬಾಕು ಕುರಿತವುಗಳಾಗಿವೆ.

ದೇಶದಲ್ಲಿ ಶೇ 39 ರಷ್ಟು ವಯಸ್ಕರು ಮನೆಯಲ್ಲೇ ಪರೋಕ್ಷವಾಗಿ ಧೂಮಪಾನದ ಸಮಸ್ಯೆಗೆ ಸಿಲುಕಿದರೆ, ಶೇ 30 ರಷ್ಟು ಮಂದಿ ಕೆಲಸದ ಸ್ಥಳದಲ್ಲಿ ಧೂಮಪಾನದ ಹೊಗೆ ಸೇವಿಸುತ್ತಾರೆ ಎಂದು ವರದಿ ಹೇಳಿದೆ.

ಜಾಗತಿಕ ವಯಸ್ಕ ತಂಬಾಕು ಸಮೀಕ್ಷೆ ವರದಿಯ ಪ್ರಕಾರ, ಅಧ್ಯಯನಕ್ಕೆ ಪೂರಕ ಮಾಹಿತಿ ಪಡೆದುಕೊಂಡು, ವೈದ್ಯಕೀಯ ವೆಚ್ಚವನ್ನು ಅಂದಾಜಿಸಲಾಗಿದೆ.

ಆದರೆ, ಅದರಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಪರಿಣಾಮ, ಅಕಾಲಿಕ ಮರಣ, ಸಂತಾನಶಕ್ತಿ ಹರಣದ ಕುರಿತು ಪ್ರತ್ಯೇಕ ಮತ್ತು ಸೂಕ್ತ ವಿವರ ಲಭ್ಯವಾಗಿಲ್ಲ. ಅದರ ಬದಲು, ನೇರವಾಗಿ ಆರೋಗ್ಯ ವೆಚ್ಚದ ಕುರಿತು ತಿಳಿಸಲಾಗಿದೆ ಎಂದು ಜಾನ್ ಅಭಿಪ್ರಾಯಪಟ್ಟಿದ್ದಾರೆ.

ಧೂಮಪಾನ ಮಾಡದಿದ್ದರೂ, ಪರೋಕ್ಷವಾಗಿ ಅದರ ಹೊಗೆಯನ್ನು ಸೇವಿಸುವವರು ಸುಮಾರು 4,000ಕ್ಕೂ ಅಧಿಕ ರಾಸಾಯನಿಕ ಮತ್ತು 50ಕ್ಕೂ ಹೆಚ್ಚಿನ ಕ್ಯಾನ್ಸರ್ ಕಾರಕ ಮಾರಕ ವಸ್ತುಗಳ ಸಂಪರ್ಕಕ್ಕೆ ಬರುತ್ತಾರೆ. ಅದರಿಂದ ಅವರಿಗೆ ಶ್ವಾಸಕೋಶದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ ಜತೆಗೆ ಇತರ ತೊಂದರೆಗಳು ಮತ್ತು ಅನಾನುಕೂಲತೆಗಳು ಕಾಣಿಸಿಕೊಳ್ಳಬಹುದಾಗಿದೆ.

ಟಾಟಾ ಮೆಮೊರಿಯಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಪಂಕಜ್ ಚತುರ್ವೇದಿ ಅವರು ಹೇಳುವಂತೆ, ಭಾರತದಲ್ಲಿ ತಂಬಾಕು ಮತ್ತು ಅದರ ವಿವಿಧ ಉತ್ಪನ್ನಗಳ ಬಳಕೆಯ ಮೇಲೆ ಹೆಚ್ಚಿನ ನಿಯಂತ್ರಣ ವಿಧಿಸುವುದರಿಂದ, ಆರ್ಥಿಕ ಹೊರೆ ತಪ್ಪಿಸುವುದರ ಜತೆಗೆ, ಆರೋಗ್ಯ ಸುಧಾರಿಸುವುದು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT