ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | 35 ವಯಸ್ಸಿನ ನಂತರ ಮಕ್ಕಳಾಗುವುದಿಲ್ಲವೇ?

Last Updated 20 ಮೇ 2022, 19:30 IST
ಅಕ್ಷರ ಗಾತ್ರ

01. ನನಗೆ 36 ವರ್ಷ, ನನ್ನ ಪತಿಗೆ 42 ವರ್ಷ. ಮದುವೆ ಆಗಿ ನಾಲ್ಕು ವರ್ಷ ಆಗಿದೆ. ಇನ್ನೂ ಮಕ್ಕಳಾಗಿಲ್ಲ. ನಾವು ಎಲ್ಲಾ ತರಹದ ಚಿಕಿತ್ಸೆ ತೆಗೆದುಕೊಂಡಿದ್ದೀವಿ. ಐಯುಐ ಕೂಡ ಒಂದು ಸಲ ಆಗಿತ್ತು. ನಾನು ತಿಂಗಳು ಸರಿಯಾಗಿ ಮುಟ್ಟು ಆಗ್ತೀನಿ. ನನ್ನ ಪತಿಯ ವೀರ್ಯಾಣುಗಳ ಚಲನಶೀಲತೆ ಕಡಿಮೆ ಅಂತೆ. ನನ್ನ ಅಂಡಾಣುಗಳ ಗುಣಮಟ್ಟ ಕಡಿಮೆ ಇದ್ದು, ನಾನು ಇನ್ನು ಯಾವ ತರಹದ ಚಿಕಿತ್ಸೆ ತೆಗೆದುಕೊಳ್ಳಬಹುದು. ದಯವಿಟ್ಟು ಸಲಹೆ ಕೊಡಿ.
-ಹೆಸರು, ಊರು ಬೇಡ

ನಿಮಗೆ ಈಗಾಗಲೇ 36 ವರ್ಷಗಳಾಗಿದ್ದು ವಯೋಸಹಜವಾಗಿ ಅಂಡಾಣು ಬಿಡುಗಡೆಯಾಗುವ ಪ್ರಕ್ರಿಯೆ ಹಾಗೂ ಗುಣಮಟ್ಟ ಕಡಿಮೆಯಾಗುತ್ತಾ ಬರುತ್ತದೆ. ನೀವು ಫೋಲಿಕ್ ಆಸಿಡ್ ಮಾತ್ರೆಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿರಿ. ನಿಮ್ಮ ತೂಕ ಕಾಯ್ದುಕೊಳ್ಳಲು ಪ್ರಯತ್ನಿಸಿ. ನಿಮ್ಮ ಪತಿಯೂ ಕೂಡ ವೀರ್ಯಾಣುಗಳ ಚಲನಶೀಲತೆ ಹೆಚ್ಚಿಸುವ ಮಾತ್ರೆಗಳನ್ನು ವೈದ್ಯರ ಸಲಹೆಯಮೇರೆಗೆ ಕನಿಷ್ಠ 3 ರಿಂದ 6 ತಿಂಗಳು ತೆಗೆದುಕೊಳ್ಳಲಿ. ಬಂಜೆತನ ಚಿಕಿತ್ಸಾ ತಜ್ಞರ ಸಲಹೆಯ ಮೇರೆಗೆ ಸ್ವಲ್ಪ ದಿನ ಕಾದು ನೋಡಿ. ನಂತರ ಐವಿಎಫ್‌ಗೆ (ಪ್ರನಾಳಶಿಶು)ಮೊರೆಹೋಗುವುದು ಉತ್ತಮ ಎನಿಸುತ್ತದೆ.

***

02. ನನಗೆ 25 ವರ್ಷ. ಮೊದಲ ಮಗು ಸಿ-ಸೆಕ್ಷನ್ ಡೆಲಿವರಿ ಆಗಿತ್ತು. ಎರಡನೇ ಮಗು ಕೂಡ ಸಿ-ಸೆಕ್ಷನ್ ಡೆಲಿವರಿ ಆಗುತ್ತದೆಯೋ ಅಥವಾ ನಾರ್ಮಲ್ ಆಗುತ್ತದೆಯೇ? ನಾರ್ಮಲ್‌ ಹೆರಿಗೆ ಸಂಭವ ಎಷ್ಟು?
-ಹೆಸರು ತಿಳಿಸಿಲ್ಲ, ಬೆಂಗಳೂರು

ಸಿಜೇರಿಯನ್ ಹೆರಿಗೆ ಅತಿಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಕಾರಣಗಳು ಹಲವಾರು ಇದ್ದರೂ ಒಟ್ಟಾರೆ ಉದ್ದೇಶ ತಾಯಿ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿರಬೇಕು ಎನ್ನುವುದು ಮಾತ್ರ. ಮಗು ತುಂಬಾ ದೊಡ್ಡದಿದ್ದರೆ ಇಲ್ಲವೇ ತೀರಾ ಸಣ್ಣದಾಗಿ ಬೆಳವಣಿಗೆ ಕುಂಠಿತವಾಗಿದ್ದರೆ, ಹೆರಿಗೆಯ ಸಮಯದಲ್ಲಿ ಮಗು ಉಸಿರುಗಟ್ಟಿ ಸುಸ್ತಾಗಿದ್ದರೆ, ಮಗು ಕಾಲು ಮುಂದಾಗಿರುವ ಭಂಗಿಯಲ್ಲಿದ್ದರೆ ಅಥವಾ ಅಡ್ಡವಾಗಿದ್ದರೆ, ತಲೆ ಹಿಂದಿದ್ದರೆ ಇತ್ಯಾದಿ ಕಾರಣದಿಂದಾಗಿ ಸಿಜೇರಿಯನ್ ಆಗಬಹುದು. 35ಕ್ಕೂ ಅಧಿಕ ವಯಸ್ಸಿನ ಮಹಿಳೆ ಗರ್ಭಿಣಿಯಾಗಿದ್ದರೆ, ಗರ್ಭಿಣಿಯರಲ್ಲಿ ಮಧುಮೇಹ, ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ತೊಂದರೆ ಉಂಟಾದರೆ, ಈ ಮೊದಲು ಒಂದೆರಡು ಸಿಜೇರಿಯನ್ ಹೆರಿಗೆ ಆಗಿದ್ದರೆ.. ಇಂಥ ಹಲವು ಕಾರಣಗಳಿಂದ ಸಿಜೇರಿಯನ್ ಹೆರಿಗೆಯಾಗುತ್ತದೆ.

ಇತ್ತೀಚಿನ ಆಧುನಿಕ ಜೀವನಶೈಲಿಯಲ್ಲಿ ಹೆರಿಗೆ ನೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಭಯಪಡುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿಅವರ ಕುಟುಂಬದವರಲ್ಲೂ ತಾಳ್ಮೆ, ಸಹನೆ, ನೋವು ಸಹಿಸಿಕೊಳ್ಳುವುದು ಕಡಿಮೆ ಆಗುತ್ತಿದೆ. ಜೊತೆಗೆ ವೈದ್ಯರು ದಾದಿಯರೂ ಇವರೆಲ್ಲರೂ ಮನುಷ್ಯರೇ ಆಗಿರುವು ದರಿಂದ ಅವರಲ್ಲೂ ಮನುಷ್ಯ ಸಹಜ ಗುಣವಾದ ತಾಳ್ಮೆ, ಸಹನೆ ಕಡಿಮೆಯಾಗಿರುವುದರಿಂದ ಸಿಜೇರಿಯನ್ ಹೆಚ್ಚಾಗುತ್ತಿರಬಹುದೇ ಹೊರತು ಕೇವಲ ವೈದ್ಯರ ಹಣ ದಾಹ ಕಾರಣವಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ನಡೆಸಬೇಕಿದೆ.

ನಿಮಗೆ ಈಗಾಗಲೇ ಒಂದು ಸಿಜೇರಿಯನ್ ಆಗಿರುವುದರಿಂದ, ಅದು ಯಾವ ಕಾರಣಕ್ಕಾಗಿ ಆಗಿತ್ತು ಎಂಬುದು ನಿಮಗೆ ಗೊತ್ತಿರಬೇಕಲ್ಲವೇ? ನಿಮಗೆ ಸಹಜ ಹೆರಿಗೆಯಾಗಬೇಕಾದರೆ ಸಿಜೇರಿಯನ್ ಹೆರಿಗೆಯಾಗಿ ಕನಿಷ್ಠ 2 ರಿಂದ 3 ವರ್ಷ ಅಂತರವಿದ್ದು ಮಗು ಬರುವ ಜಾಗ (ಪೆಲ್ವಿಸ್) ಸುಗಮವಾಗಿರಬೇಕು ಹಾಗೂ ಹೊಟ್ಟೆಯಲ್ಲಿ ಒಂದೇ ಮಗುವಿದ್ದು, ತಲೆಕೆಳಗಾಗಿದ್ದು, ಸಾಧಾರಣ ತೂಕವಿದ್ದರೆ ಹಾಗೂ ಗರ್ಭಿಣಿಯರಲ್ಲಿ ಮಧುಮೇಹ, ಏರುರಕ್ತದೊತ್ತಡ, ಇನ್ನಿತರ ಸಮಸ್ಯೆಗಳಿಲ್ಲದೆ ಇದ್ದರೆ ಸಹಜ ಹೆರಿಗೆಗೆ ಪ್ರಯತ್ನಿಸಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ನಂಬಿಕೆಯಿರುವ ತಜ್ಞವೈದ್ಯರನ್ನು ಆರಿಸಿಕೊಂಡು ಸುಸಜ್ಜಿತ ಸೌಲಭ್ಯವಿದ್ದ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಬೇಕು. ‘ಈ ಬಾರಿ ನನ್ನ ಹೆರಿಗೆ ನೈಸರ್ಗಿಕವಾಗಿಯೇ ಆಗಲಿ. ಅದನ್ನು ನಾನು ಎದುರಿಸಲು ಸಜ್ಜಾಗಿದ್ದೇನೆ’ ಎಂಬ ಮಾತನ್ನು ಧೈರ್ಯವಾಗಿ ಹೇಳಿ ವೈದ್ಯರೊಂದಿಗೆ ಮುಕ್ತ ಸಂವಾದ ನಡೆಸಿ ಚರ್ಚಿಸಿದ ನಂತರ ಎರಡನೇ ಬಾರಿ ನೀವು ಸಹಜ ಹೆರಿಗೆಗೆ ಪ್ರಯತ್ನಿಸಬಹುದು.

***

03. ನಾನು ಇನ್ನೂ ಮದುವೆ ಆಗಿಲ್ಲ, ಮದುವೆ ನಿಶ್ಚಿತಾರ್ಥವಾಗಿರುವ ಹುಡುಗನ ಜೊತೆಗೆ ಸೇರಿ ಮಾಡಿದ ತಪ್ಪಿಂದ, 45 ದಿನದ ಪ್ರೆಗ್ನೆಂಟ್ ಆಗಿದ್ದೆ. ಆಗ ಅವರು ನನಗೆ ಮಾತ್ರೆಗಳನ್ನು ತಂದುಕೊಟ್ಟಿದ್ದರು. ಇದರಿಂದ ಗರ್ಭಪಾತವಾಯಿತು. ಆದರೆ ನನಗೀಗ ಮುಖದಲ್ಲಿ ಭಂಗು ಬಂದಿದೆ. ಅದು ಹೋಗುತ್ತಲೇ ಇಲ್ಲ, ಏನು ಮಾಡೋದು ತಿಳಿಸಿಕೊಡಿ.
-
ಪಲ್ಲವಿ, ಊರು ತಿಳಿಸಿಲ್ಲ

ಮದುವೆಯಾಗದೇ ಲೈಂಗಿಕ ಸಂಪರ್ಕ ಮಾಡಿ ಗರ್ಭಪಾತ ಮಾಡಿಸಿಕೊಂಡಿದ್ದು ತಪ್ಪು. ಇಂತಹ ತಪ್ಪು ಮರುಕಳಿಸದಿರಲಿ. ಸೂರ್ಯನ ಬೆಳಕು ಮುಖಕ್ಕೆ ನೇರವಾಗಿ ಬಿದ್ದರೆ, ಮಾನಸಿಕ ಒತ್ತಡ, ಥೈರಾಯಿಡ್ ಹಾಗೂ ಯಕೃತ್‌ ತೊಂದರೆಗಳಿದ್ದರೆ, ಗರ್ಭನಿರೋಧಕ ಮಾತ್ರೆಗಳಿಂದ, ಗರ್ಭಧಾರಣೆಯಿಂದ ಹಾರ್ಮೋನು ಅಸಮತೋಲನ ಉಂಟಾದಾಗ ಈ ಭಂಗು ಹೆಚ್ಚಾಗಿ ಕಾಣಿಸುತ್ತದೆ. ಚರ್ಮದ ಕೆಳಗಿರುವ ಮೆಲನೋಸೈಟ್‌ಗಳು ಹೆಚ್ಚು ಮೆಲನೋಸೈಟನ್ನು ಉತ್ಪಾದನೆ ಮಾಡುವುದರಿಂದ ಭಂಗು ಉಂಟಾಗುತ್ತದೆ. ಲೋಳೆಸರ ಹಾಗೂ ಅರಿಸಿನ ಮಿಶ್ರಣ ಮಾಡಿ ನಿಯಮಿತವಾಗಿ ಹಚ್ಚುವುದರಿಂದ ಇದು ಕಡಿಮೆಯಾಗುತ್ತದೆ. ಜಿಂಕ್ ಹಾಗೂ ವಿಟಮಿನ್ ಬಿ 12, ವಿಟಮಿನ್ ಸಿ ಕೊರತೆಯಿಂದಲೂ ಭಂಗು ಉಂಟಾಗುತ್ತದೆ. ಹಾಗಾಗಿ ಈ ಅಂಶಗಳು ಹೆಚ್ಚಿರುವ ಕಡಿದ ಮಜ್ಜಿಗೆ, ಪಾಲಕ್ ಸೊಪ್ಪು, ಕ್ಯಾರೆಟ್, ನೆಲ್ಲಿಕಾಯಿ, ನಿಂಬೆಹಣ್ಣು, ಒಣಹಣ್ಣುಗಳನ್ನು ಹೆಚ್ಚಾಗಿ ಆಹಾರದೊಂದಿಗೆ ಸೇವಿಸಿ. ಪ್ರತಿದಿನ ಮೂರೂವರೆ ಲೀಟರ್ ನೀರನ್ನಾದರೂ ಕುಡಿಯಿರಿ. ಸೂರ್ಯನ ಬೆಳಕು ನೇರವಾಗಿ ಮುಖಕ್ಕೆ ಬೀಳದಂತೆ ನೋಡಿಕೊಳ್ಳಿ. ಇಷ್ಟಕ್ಕೂ ಕಡಿಮೆ ಆಗದಿದ್ದಲ್ಲಿ ಚರ್ಮ ರೋಗ ತಜ್ಞರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಿರಿ.

***

4. ನನಗೆ 42 ವರ್ಷ. 17 ವರ್ಷದ ಮಗಳಿದ್ದಾಳೆ. ಅವಳಿಗೆ 35 ದಿನಕ್ಕೊಮ್ಮೆ ಮುಟ್ಟಾಗುತ್ತದೆ. ಇದೇನಾದರೂ ಸಮಸ್ಯೆಯಾಗುತ್ತದೆಯೇ, ವೈದ್ಯರನ್ನು ಸಂಪರ್ಕಿಸಬೇಕೇ? ಇದಕ್ಕೇನಾದರೂ ಪರಿಹಾರವಿದೆಯೇ?
-
ಪುಷ್ಪ, ಊರು ತಿಳಿಸಿಲ್ಲ

ನಿಮ್ಮ ಮಗಳಿನ್ನೂ ಹದಿವಯಸ್ಸಿನಲ್ಲಿದ್ದಾಳೆ. ಅವಳಿಗೆ ಈ ವಯಸ್ಸಿನಲ್ಲಿ 22 ದಿನದಿಂದ 35 ದಿನಗಳೊಳಗಾಗಿ ಮುಟ್ಟು ಬರುವುದು ಸಹಜ. ಈ ಬಗ್ಗೆ ಆತಂಕ ಬೇಡ. ನಿಮ್ಮ ಮಗಳೇನಾದರೂ ಅವಳ ವಯಸ್ಸಿಗೆ ಹಾಗೂ ಎತ್ತರಕ್ಕೆ ಹೆಚ್ಚು ತೂಕ ಹೊಂದಿದ್ದರೆ ಸಮತೂಕ ಹೊಂದಲು ಪ್ರಯತ್ನಿಸಲಿ. ಪೌಷ್ಠಿಕ ಆಹಾರ ಸೇವನೆ ಇರಲಿ. ರಕ್ತಹೀನತೆ ಇದ್ದರೆ ಸರಿಪಡಿಸಿಕೊಳ್ಳಲಿ. ಅತಿಯಾಗಿ ರಕ್ತಸ್ರಾವವಾಗುತ್ತಿದ್ದರೆ ಅಥವಾ ಬೇರೇನಾದರೂ ಸಮಸ್ಯೆ ಇದ್ದರೆ ಮಾತ್ರ ವೈದ್ಯರನ್ನು ಸಂಪರ್ಕಿಸಿ.

***

5. ನನಗೆ ಮದುವೆಯಾಗಿ 2 ವರ್ಷ, ನನಗೆ ಯಾವಾಗಲೂ 28 ದಿನಕ್ಕೊಮ್ಮೆ ಮುಟ್ಟಾಗುತ್ತದೆ. ಆದರೆ ಮೊದಲ ಬಾರಿ ನನಗೆ 18 ದಿನಕ್ಕೆ ಮುಟ್ಟಾಯಿತು. ನಾವು ಆಸ್ಪತ್ರೆಗೆ ಭೇಟಿ ಕೊಟ್ಟಾಗ ಅವರು ನನಗೆ ನಿಯಮಿತವಾಗಿ ಮುಟ್ಟಾಗುತ್ತಿದ್ದರೆ ಮಗು ಆಗಲು ತೊಂದರೆ ಏನು ಇಲ್ಲ ಎಂದು ತಿಳಿಸಿದ್ದಾರೆ. ಏನು ಮಾಡಲಿ?
-ಲಕ್ಷ್ಮೀ, ಊರು ತಿಳಿಸಿಲ್ಲ

ನಿಯಮಿತವಾಗಿ ಮುಟ್ಟಾಗುತ್ತಿದ್ದರೂ ಅಪರೂಪಕ್ಕೊಮ್ಮೆ 18 ದಿನಕ್ಕೆ ಮುಟ್ಟಾದರೆ ಏನೂ ತೊಂದರೆ ಇಲ್ಲ. ನಿಮಗೆ ಎಷ್ಟು ವಯಸ್ಸು ಎಂದು ನೀವು ತಿಳಿಸಿಲ್ಲ. ನಿಮಗೆ 21 ವರ್ಷಕ್ಕೂ ಮೇಲ್ಪಟ್ಟು ವಯಸ್ಸಾಗಿದ್ದರೆ ನೀವು ಮಗುವನ್ನು ಪಡೆಯಲು ಪ್ರಯತ್ನಿಸಿ. ನಾವು ಈ ಹಿಂದೆ ತಿಳಿಸಿರುವ ಹಾಗೆ ಋತುಫಲಪ್ರದ ದಿನಗಳಲ್ಲಿ ಅಂದರೆ 30 ದಿನದ ಋತುಚಕ್ರದಲ್ಲಿ 8ನೇ ದಿನದಿಂದ 18ನೇ ದಿನದ ತನಕ ಲೈಂಗಿಕ ಸಂಪರ್ಕ ಬೆಳೆಸಿದರೆ ಮಗುವಾಗುವ ಸಂಭವ ಹೆಚ್ಚು. ಇದಕ್ಕೆ ನಿಮ್ಮ ಪತಿಯ ವೀರ್ಯಾಣುಗಳ ಸಂಖ್ಯೇ ಕೂಡ ಸರಿ ಇದ್ದಾಗ ಫಲಪ್ರದ ಗರ್ಭಧಾರಣೆಯಾಗುತ್ತದೆ. ಹಾಗಾಗದಿದ್ದಲ್ಲಿ ನೀವು ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

***

6. ನನಗೆ ಸಿಝೇರಿಯನ್ ಆಗಿ 7 ದಿನ ಆಯ್ತು. ನಿನ್ನೆಯಿಂದ ಹೊಟ್ಟೆ ಕಡಿತ ಮತ್ತೆ ಭೇದಿಕೂಡ ಆಗ್ತಿದೆ. ಪರಿಹಾರ ತಿಳಿಸಿ.

ನಿಮಗೆ ಸೀಝೇರಿಯನ್ ಹೆರಿಗೆ ಆಗಿ ಕೇವಲ ಒಂದು ವಾರ ಆಗಿರುವುದರಿಂದ ನೀವು ಕೇವಲ ಸುಲಭವಾಗಿ ಜೀರ್ಣವಾಗುವ ಮೆತ್ತಗಿನ ಆಹಾರವನ್ನು ಸೇವಿಸಬೇಕು. ಕೆಲವರಲ್ಲಿ ಆಹಾರದ ವ್ಯತ್ಯಾಸದಿಂದ ಕೂಡ ಭೇದಿಯಾಗಬಹುದು. ಇಲ್ಲವಾದಲ್ಲಿ ಕೆಲವೊಮ್ಮೆ ಸಿಝೇರಿಯನ್ ಆದ ನಂತರ ತೆಗೆದುಕೊಳ್ಳುವ ಆ್ಯಂಟಿಬಯಾಟಿಕ್ ಮಾತ್ರೆಗಳಿಂದ ಕೂಡ ಭೇದಿಯಾಗುವ ಸಾಧ್ಯತೆ ಇದೆ. ಆದ್ದರಿಂದ ನೀವು ಲ್ಯಾಕ್ಟೋಬ್ಯಾಸಿಲಸ್ (ಸ್ಪೋರಿಲ್ಯಾಕ್) ಮಾತ್ರೆಯನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಂಡರೆ ಸರಿಹೋಗಬಹುದು. ಇಲ್ಲದಿದ್ದಲ್ಲಿ ವೈದ್ಯರನ್ನು ಮತ್ತೆ ಭೇಟಿ ಮಾಡಿ ಚಿಕಿತ್ಸೆ ತೆಗೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT