ಭಾನುವಾರ, ಏಪ್ರಿಲ್ 5, 2020
19 °C

ವಿದ್ಯಾರ್ಥಿಗಳು ತಯಾರಿಸಿದ ಸ್ಯಾನಿಟೈಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಗರದಲ್ಲಿ ಕೋವಿಡ್‌ ವೈರಸ್‌ ಭೀತಿ ಹೆಚ್ಚಿದ ಮೇಲೆ ಔಷಧ ಅಂಗಡಿಗಳಲ್ಲಿ ಸ್ಯಾನಿಟೈಸರ್‌ ಸಿಗುವುದೇ ಕಷ್ಟವಾಯಿತು. ಎಲ್ಲೆಲ್ಲೂ ‘ಔಟ್‌ ಆಫ್‌ ಸ್ಟಾಕ್‌‘ ಎಂಬ ಬೋರ್ಡ್‌.

ಇದನ್ನು ಗಂಭೀರವಾಗಿ ಪರಿಗಣಿಸಿದ ನಗರದ ಕೆನಡಿಯನ್ ಇಂಟರ್‌ನ್ಯಾಷನಲ್‌ ಸ್ಕೂಲ್ ವಿದ್ಯಾರ್ಥಿಗಳು ಶಾಲೆಯಲ್ಲಿರುವ ರಸಾಯನ ವಿಜ್ಞಾನ ಪ್ರಯೋಗಾಲಯದಲ್ಲಿ ಸ್ಯಾನಿಟೈಸರ್‌ ಅಭಿವೃದ್ಧಿಪಡಿಸಿದ್ದಾರೆ.

ಔಷಧೀಯ ಮಳಿಗೆಗಳಲ್ಲಿ ಸ್ಯಾನಿಟೈಸರ್‌ ಕೊರತೆಯಾಗಿದ್ದನ್ನು ಗುರುತಿಸಿದ ವಿದ್ಯಾರ್ಥಿಗಳು, ತಾವೇ ಏಕೆ ಸ್ಯಾನಿಟೈಸರ್ ಅಭಿವೃದ್ಧಿಪಡಿಸಬಾರದು ಎಂದು ಶಿಕ್ಷಕರು ಮತ್ತು ಲ್ಯಾಬ್‌ ಟೆಕ್ನೀಷಿಯನ್‌ಗಳ ಜತೆ ಚರ್ಚಿಸಿದರು. ಸುಧೀರ್ಘ ಚರ್ಚೆ ನಂತರ ‘ಸ್ಯಾನಿಟೈಸರ್‌‘ ಅಭಿವೃದ್ಧಿಪಡಿಸುವ ಐಡಿಯಾ ಉದಯಿಸಿತು.‌ 

ಲೋಳೆಸರ (ಅಲೊವೆರಾ ಜೆಲ್‌) ರಸದ ಜತೆಗೆ, ಐಸೋಪ್ರೊಪೈಲ್ ಆಲ್ಕೊಹಾಲ್ ಮತ್ತು ಜಾಸ್ಮಿನ್‌ ಆಯಿಲ್ ಮಿಶ್ರಮಾಡಿದ ನಂತರ ಹೊರ ಹೊಮ್ಮಿದ ದ್ರಾವಣವೇ ವಿದ್ಯಾರ್ಥಿಗಳು ತಯಾರಿಸಿದ ಸ್ಯಾನಿಟೈಸರ್‌. ಶಾಲೆಯ ಸಾಯನ ವಿಜ್ಞಾನ ಶಿಕ್ಷಕ ಡಾನ್‌ ದುಬೆ, ’ಸಾನಿಟೈಸರ್‌ ಕೊರತೆಯನ್ನು ನೀಗಿಸುವುದಕ್ಕಾಗಿಯೇ ವಿದ್ಯಾರ್ಥಿಗಳು ಈ ವಸ್ತುಗಳನ್ನು ಉಪಯೋಗಿಸಿಕೊಂಡು, ನಮ್ಮ ಪ್ರಯೋಗಾಲಯದಲ್ಲೇ ಹೊಸ ಸ್ಯಾನಿಟೈಸರ್ ಅಭಿವೃದ್ಧಿಪಡಿಸಿದರು‘ ಎಂದು ಹೇಳಿದರು.

ಈ ಪ್ರಯೋಗದ ಭಾಗವಾಗಿದ್ದ ವಿದ್ಯಾರ್ಥಿನಿ ಮಾನ್ಯ ‘ಶೇ 70ರಷ್ಟು ಪ್ರಮಾಣದ ಆಲ್ಕೊಹಾಲ್‌ಗೆ, ಲೋಳೆಸರದ ರಸವನ್ನು ಮಿಶ್ರ ಮಾಡಿದಾಗ, ಸ್ಯಾನಿಟೈಸರ್‌ ಸಿದ್ಧವಾಯಿತು‘ ಎಂದು ವಿವರಿಸಿದರು.

’ಇದೊಂದು ಅನೌಪಚಾರಿಕ ಪ್ರಯೋಗ. ಸ್ಯಾನಿಟೈಸರ್ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು, ಮನೆಯಲ್ಲೇ ಹೇಗೆ ಸರಳವಾಗಿ ಸ್ಯಾನಿಟೈಸರ್ ಮಾಡಿಕೊಳ್ಳಬಹುದು ಎಂದು ತೋರಿಸುವುದು ನಮ್ಮ ಪ್ರಯತ್ನದ ಹಿಂದಿನ ಉದ್ದೇಶ‘ ಎಂದರು. ’ನಮ್ಮ ಈ ಕಾರ್ಯಕ್ಕೆ ರಸಾಯನ ವಿಜ್ಞಾನದ ಶಿಕ್ಷಕರು, ಲ್ಯಾಬ್‌ ಟೆಕ್ನೀಷಿಯನ್ ತುಂಬಾ ನೆರವಾದರು‘ ಎಂದು ಹೇಳಿದರು.

ಲ್ಯಾಬ್‌ಟೆಕ್ನೀಷಿಯನ್ ಆರ್ ರಾಜೇಶ್, ’ಸ್ಯಾನಿಟೈಸರ್ ಕೊರತೆ ಮತ್ತು ದುಬಾರಿ ಬೆಲೆಕೊಟ್ಟು ಜನರು ಸ್ಯಾನಿಟೈಸರ್ ಖರೀದಿಸುತ್ತಿದ್ದನ್ನು ಗಮನಿಸಿದ ವಿದ್ಯಾರ್ಥಿಗಳು, ಈ ಪ್ರಯೋಗಕ್ಕೆ ಮುಂದಾದರು‘ ಎಂದು ತಿಳಿಸಿದರು. ಈ ಯಶಸ್ವಿ ಪ್ರಯೋಗ ಕೈಗೊಂಡ ವಿದ್ಯಾರ್ಥಿಗಳ ಬಗ್ಗೆ ಶಾಲಾ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು