ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ: ಮಕ್ಕಳ ತಟ್ಟೆಯಲ್ಲಿ ಏನಿರಬೇಕು?

Published : 8 ಸೆಪ್ಟೆಂಬರ್ 2023, 23:30 IST
Last Updated : 8 ಸೆಪ್ಟೆಂಬರ್ 2023, 23:30 IST
ಫಾಲೋ ಮಾಡಿ
Comments

ಲೇಖಕರು: ದೀಪ ಬಿ.ಆರ್‌.

ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರ (1 ರಿಂದ 7ರವರೆಗೆ) ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯಕ್ಕೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ ಹೇಗಿರಬೇಕು ಎಂಬುದನ್ನು ಅರಿಯೋಣ.

***

‘ಮಗು ಸರಿಯಾಗಿ ಊಟ ಮಾಡುತ್ತಿಲ್ಲ’ ಎಂಬುದು ಬಹುತೇಕ ಅಮ್ಮಂದಿರ ದೂರು. ಮಗು ತನ್ನ ಹೊಟ್ಟೆಗೆ ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳುತ್ತಿಲ್ಲವೋ ಅಥವಾ ನಮಗೆ ಬೇಕಾದಷ್ಟು ಮಗು ಊಟ ಮಾಡುತ್ತಿಲ್ಲವೋ ಎಂಬುದನ್ನು ಮೊದಲಿಗೆ ಕಂಡುಹಿಡಿದುಕೊಳ್ಳಬೇಕು. ಮಗುವಿಗೆ ಎಂಥ ಆಹಾರ ಕೊಡಬೇಕು ಎಂಬುದಕ್ಕೆ ನಿರ್ದಿಷ್ಟ ಸಿದ್ಧ ಸೂತ್ರಗಳು ಇರದೇ ಇದ್ದರೂ  ಹಲವು ಮಿಥ್ಯೆಗಳಂತೂ ಇವೆ.

ಮಗು ಹುಟ್ಟಿದ ನಂತರ ಆರು ತಿಂಗಳವರೆಗೆ ತಾಯಿಯ ಎದೆ ಹಾಲು ನೀಡುವುದು ಎಷ್ಟು ಮುಖ್ಯವೊ ಅದೇ ರೀತಿ ಮುಂದಿನ ಹಂತಗಳಲ್ಲಿ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೌಷ್ಟಿಕಯುಕ್ತ ಆಹಾರ ನೀಡುವುದು ಅಷ್ಟೆ ಅಗತ್ಯ. 

ಮಗುವಿನ ದೇಹಪ್ರಕೃತಿಯನ್ನು ಮೊದಲಿಗೆ ಅರ್ಥ ಮಾಡಿಕೊಳ್ಳುವುದು ಬಹುಮುಖ್ಯ. ಥಂಡಿ ದೇಹದ ಮಗುವಿಗೆ ರಾತ್ರಿ ಹೊತ್ತು ದ್ರಾಕ್ಷಿ, ದಾಳಿಂಬೆ, ಮೊಸರು ತಿನ್ನಿಸುವುದರಿಂದ ಶೀತ ಹೆಚ್ಚಾಗಬಹುದು. ದೇಹಪ್ರಕೃತಿ ಅರಿತು ಬಿಸಿ ಬಿಸಿ ಆಹಾರವನ್ನು ನಿಗದಿತ ಪ್ರಮಾಣದಲ್ಲಿ ನಿಗದಿತ ಸಮಯಕ್ಕೆ  ನೀಡುವುದು ವೈಜ್ಞಾನಿಕವಾಗಿ ಸರಿಯಾದುದು.

ಎಂಥ ಆಹಾರ ಇರಲಿ? 

ಆರು ತಿಂಗಳ ಮಗುವಿಗೆ ತಾಯಿಯ ಎದೆ ಹಾಲಿನ ಜತೆಗೆ ಸಿರಿಧಾನ್ಯ, ಮೊಳಕೆ ಕಟ್ಟಿದ ಕಾಳು, ಸೊಪ್ಪು, ತರಕಾರಿಯಂಥ ಕಿಚಡಿ ಅನ್ನವನ್ನು(ದ್ರವರೂಪದಲ್ಲಿ) ಎರಡರಿಂದ ಮೂರು ಹನಿ ತುಪ್ಪ ಬೆರೆಸಿ ನೀಡಬಹುದು. ಒಣ ಬೀಜಗಳಾದ ಕುಂಬಳ, ಅಗಸೆ ಬೀಜಗಳನ್ನು ಕುಟ್ಟಿ ಪುಡಿ ಮಾಡಿ, ಅನ್ನದೊಂದಿಗೆ ಬೆರೆಸಿ ನೀಡಬಹುದು. 

ಮಗುವಿನ ಜೀರ್ಣಶಕ್ತಿ ಗಮನಿಸಿ, ಮೊಳಕೆ ಕಾಳಿನ ಜೊತೆಗೆ ತಾಜಾ ಹಣ್ಣು ಮತ್ತು ತರಕಾರಿ ಹಾಗೂ ಡೇರಿ ಉತ್ಪನ್ನಗಳು, ಮೊಟ್ಟೆ, ಮೀನು, ಮಾಂಸವನ್ನು ನೀಡಬಹುದು. ಇವೆಲ್ಲವೂ ನಿತ್ಯ ಆಹಾರದ ಭಾಗವಾದರೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರಿಬಯಾಟಿಕ್‌ ಮತ್ತು ಪ್ರೋಬಯಾಟಿಕ್‌ ಆಹಾರ ನಮ್ಮ ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಮತ್ತು ನಿರ್ವಹಿಸುವು ದರಿಂದ ಹಾಲು, ಮೊಸರು, ತುಪ್ಪ ಇವುಗಳ ಬಳಕೆ ಯಥೇಚ್ಛವಾಗಿರಲಿ.

ಶಾಲೆಗೆ ಹೋಗುವ ಮಕ್ಕಳಿಗೆ ಕಾರ್ಬೋಹೈಡ್ರೇಟ್ಸ್ , ಪ್ರೊಟೀನ್ಸ್‌, ಜೀವಸತ್ವಗಳು ಮತ್ತು ಖನಿಜಗಳು, ಕ್ಯಾಲ್ಸಿಯಂ, ಕಬ್ಬಿಣದ ಅಂಶ, ಒಮೆಗಾ-3 ಕೊಬ್ಬಿನಾಮ್ಲ, ನಾರಿನಂಶ ಮತ್ತು ನೀರು ಹೀಗೆ ಸಕಲವೂ ಸೇರಿದ ಸಮೃದ್ಧ ಆಹಾರ ನೀಡಬೇಕು.

ಇಷ್ಟಪಡುವ ಆಹಾರ ಕೊಡಿ

ಮಗುವಿನ ಪಚನಶಕ್ತಿ ಕಡಿಮೆ ಇರುವುದರಿಂದ ನಾರಿನಾಂಶವಿರುವ ಆಹಾರವನ್ನು ಹೆಚ್ಚು ನೀಡಬೇಕು. ಅದರಲ್ಲಿ ಎರಡು ಮೂರು ಗಂಟೆಗೊಮ್ಮೆ ಮಗು ಇಷ್ಟಪಡುವ ಆಹಾರವನ್ನು ಪ್ರೀತಿಯಿಂದ ತಿನಿಸಿ. ಮೊಳಕೆ ಬರಿಸಿದ,  ಹಸಿರು ಬಟಾಣಿ, ಹೆಸರು ಕಾಳು, ಹುರಳಿ ಕಾಳುಗಳನ್ನು ಒಣಗಿಸಿ ಚೆನ್ನಾಗಿ ಮಿಕ್ಸಿಗೆ ಹಾಕಿ ಪುಡಿ ಮಾಡಿ, ಅದನ್ನು ಹಾಲಿನಲ್ಲಿ ಬೆರೆಸಿ ಅದಕ್ಕೆ ತುಸು ಬೆಲ್ಲ ಹಾಗೂ ತುಪ್ಪ ಸೇರಿಸಿ ತಿನ್ನಿಸಬಹುದು.

ಸಂಸ್ಕರಿತ ‘ರೆಡಿ ಟು ಈಟ್‌’ ರಾಗಿ ಮಣ್ಣಿ, ಜೋಳ ಹಾಗೂ ಅಕ್ಕಿ ಮಣ್ಣಿಗಳು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಅವುಗಳಿಂದ ಮಕ್ಕಳನ್ನು ದೂರವಿಡುವುದು ಒಳ್ಳೆಯದು. ಆದಷ್ಟು ಮನೆಯಲ್ಲಿ ಬಿಸಿ ಬಿಸಿಯಾಗಿ ಆ ಕೂಡಲೇ ಮಾಡಿದ ಆಹಾರವನ್ನೇ ತಿನ್ನಿಸಿ.

ಚಿಪ್ಸ್, ಪಿಜ್ಜಾ ಬರ್ಗರ್, ಪ್ಯಾಕ್ಡ್ ಆಹಾರ ಹಾಗೂ ಫುಡ್ ಡೆಲಿವರಿ ಆ್ಯಪ್ಸ್ ಗಳ ಜಾಹೀರಾತಿಗೆ ಮಕ್ಕಳು ಬಹು ಬೇಗ ಆಕರ್ಷಿತರಾಗುತ್ತಾರೆ. ಇಂಥ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಮೈದಾ, ಕೃತಕ ಸಿಹಿಕಾರಕ ಅಂಶ, ಸೋಡಿಯಂ ಭರಿತ ಉಪ್ಪು ಇದ್ದು , ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಆರಂಭದಿದಲೇ ಮಕ್ಕಳನ್ನು ಇವುಗಳಿಂದ ದೂರವಿರಿಸಿ.

ಆಹಾರದ ಅಲರ್ಜಿ

ಹತ್ತು ಮಕ್ಕಳಲ್ಲಿ ಒಂದು ಮಗುವಿಗಾದರೂ ಆಹಾರದ ಅಲರ್ಜಿ ಇರುತ್ತದೆ. ಕೆಲವು ಆಹಾರಗಳು ಕೆಲವು ಮಕ್ಕಳ ದೇಹಪ್ರಕೃತಿಗೆ ಒಗ್ಗದಿರಬಹುದು. ಉದಾಹರಣೆಗೆ ಕಡಲೆಕಾಯಿ ಬೀಜ, ಗೋಡಂಬಿ, ಬಾದಾಮಿ, ಪಿಸ್ತಾ, ಹಸುವಿನ ಹಾಲು, ಸಮುದ್ರದ ಮೀನು, ಮೊಟ್ಟೆ, ಗೋಧಿ ಮತ್ತು ಅದರ ಉತ್ಪನ್ನಗಳು ಇತ್ಯಾದಿ . ಇಂಥ ಆಹಾರವನ್ನು ಕೊಟ್ಟಾಗ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಂಭವ ಇರುತ್ತದೆ. ಬೇಧಿ, ವಾಂತಿ, ಮೈಮೇಲೆ ಗುಳ್ಳೆಗಳು, ಮೂಗು ಸೋರಿಕೆ ಲಕ್ಷಣ ಕಾಣಿಸಿಕೊಳ್ಳಬಹುದು. 

ಪ್ರಾದೇಶಿಕ ಆಹಾರಕ್ಕೆ  ಆದ್ಯತೆ

ಸ್ಥಳೀಯ ಆಹಾರಕ್ಕೆ ಪ್ರಾಮುಖ್ಯ ನೀಡಬೇಕು. ಆಯಾ ಪ್ರದೇಶದ ಆಹಾರ, ಹಣ್ಣು, ತರಕಾರಿಗಳನ್ನು ಮಕ್ಕಳಿಗೆ ಹೆಚ್ಚಾಗಿ ಕೊಡಿ. ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ಕೊಡಬೇಕು. ಜೋಳ ತಿನ್ನುವ ಮಗುವಿಗೆ ರಾಗಿ ಹಿಡಿಸದೇ ಹೋಗಬಹುದು. ಗೋಧಿ ತಿನ್ನುವ ಮಗುವಿಗೆ ಕುಸುವಲಕ್ಕಿ ಹಿಡಿಸದಿರಬಹುದು. ಹಾಗಾಗಿ ಆಯಾ ಪ್ರದೇಶ ಹಾಗೂ ಕುಟುಂಬದಲ್ಲಿ ಬಳಕೆಯಾಗುವ ಆಹಾರ ಪದಾರ್ಥಗಳಿಗೆ ಪ್ರಾಮುಖ್ಯ ನೀಡುವುದು ಒಳಿತು.‌

ಮಾಂಸಾಹಾರ ಬಳಕೆ ಹೇಗೆ?

ಮಕ್ಕಳಿಗೆ ಮಾಂಸಾಹಾರ ನೀಡುವ ವಿಚಾರದಲ್ಲಿ ಕೆಲವು ನಂಬಿಕೆ ಈಗಲೂ ಇದ್ದು, ಎರಡು ವರ್ಷ ತುಂಬುವವರೆಗೂ ನೀಡುವುದಿಲ್ಲ. ಆದರೆ, ಇದಕ್ಕೆ ಯಾವುದೇ ಸಿದ್ಧ ಸೂತ್ರಗಳಿಲ್ಲ. ಏಳು ತಿಂಗಳು ಪೂರ್ಣಗೊಂಡ ಮಗುವಿಗೆ ಚೆನ್ನಾಗಿ ತೊಳೆದು, ಬೇಯಿಸಿದ ಕೋಳಿ ಮಾಂಸ ಹಾಗೂ ಮಟನ್‌  ರಸವನ್ನು ಮೂರು ಟೇಬಲ್‌ ಸ್ಪೂನ್‌ನಷ್ಟು ನೀಡಬಹುದು. ಮಗು ಬೆಳೆದಂತೆ ಇದರ ಪ್ರಮಾಣವನ್ನು ಹೆಚ್ಚಿಸಬಹುದು.ಎಂಟು ತಿಂಗಳ ನಂತ ಬೇಯಿಸಿದ ಮಾಂಸದ ತುಂಡುಗಳನ್ನು ಬೇಯಿಸಿದ ತರಕಾರಿಯೊಂದಿಗೆ ಅರ್ಧಕಪ್‌ ದಿನಕ್ಕೆ ಒಂದು ಬಾರಿ ನೀಡಬಹುದು. ಯಾವುದೇ ಕಾರಣಕ್ಕೂ ಸಂಸ್ಕರಿಸಿದ ಮಾಂಸ ಅಥವಾ ಹಸಿ ಮಾಂಸವನ್ನು ಕೊಡಬೇಡಿ. ಮಗುವಿನ ಆಹಾರದಲ್ಲಿ ಸಕ್ಕರೆ ಹಾಗೂ ಉಪ್ಪನ್ನು ಕನಿಷ್ಠ ಎರಡು ವರ್ಷದವರೆಗೆ ಬಳಸಬೇಡಿ. 

ಪೂರಕ ವಾತಾವರಣ ಸೃಷ್ಟಿಸಿ

ತುತ್ತು ಅನ್ನವನ್ನು ಸಂತೋಷದಿಂದ ತಿನ್ನಲು ಮಗುವಿಗೆ ಸೂಕ್ತವಾದ ವಾತಾವರಣ ರೂಪಿಸಿ. ಊಟ ಮಾಡಲು ಮಗು ಸತಾಯಿಸಬಹುದು. ‘ಹಠ ಮಾಡುತ್ತಾರೆ, ತಿನ್ನವುದೇ ಇಲ್ಲ’ ಎಂಬ ದೂರು ನಿಮ್ಮದಿರಬಹುದು. ಅದೆಲ್ಲ ಪಕ್ಕಕ್ಕಿಡಿ. ಮಕ್ಕಳು ಹಸಿವಾದಾಗ ಖುಷಿಯಿಂದ ಊಟ ಮಾಡುತ್ತಾರೆ. ಅವರಿಗೆ ಊಟ ಮಾಡುವುದು ಖುಷಿಯ ಕೆಲಸವಾಗಬೇಕೇ ಹೊರತು, ಹಿಂಸೆ ನೀಡುವ ಕೆಲಸ ಎನಿಸದಂತೆ ನೋಡಿಕೊಳ್ಳಬೇಕು.

ವೈವಿಧ್ಯಮಯ ತರಕಾರಿ, ಹಣ್ಣು, ಸೊಪ್ಪುಗಳನ್ನು ಮಕ್ಕಳ ಮುಂದೆ ಇಡಿ. ಪದೇ ಪದೇ ಕಣ್ಣಿಗೆ ಬೀಳುವ ಆಹಾರಕ್ಕೆ ಆಕರ್ಷಿತರಾಗುವಂತೆ ಮಾಡಿ. ಆಗ ಮಕ್ಕಳು ತಾವಾಗೆ ತಿನ್ನುತ್ತಾರೆ. ವೈವಿಧ್ಯದ ಊಟವನ್ನು ನೀಡುವುದರಲ್ಲಿ ಪೋಷಕರ ಜಾಣತನವೂ ಅಡಗಿದೆ.

ಹೀಗಿರಲಿ: ಊಟದ ವಿಧಾನ

ಏನು ತಿನ್ನುತ್ತಾರೆ ಎನ್ನುವುದು ಎಷ್ಟು ಮುಖ್ಯವೋ ಎಷ್ಟು ತಿನ್ನುತ್ತಾರೆ, ಯಾವ ರೀತಿ ತಿನ್ನುತ್ತಾರೆ ಎಂಬುದು ಅಷ್ಟೆ ಮುಖ್ಯ. ತಿನ್ನುವ ವಿಚಾರದಲ್ಲಿ ಪ್ರತಿ ಮಗುವು ಭಿನ್ನ. ಒಂದು ಮಗು ಒಂದು ದೋಸೆ ತಿಂದರೆ, ಮತ್ತೊಂದು ಮಗು ಎರಡು ಚಪಾತಿ ತಿನ್ನಬಹುದು. ಕೆಲವು ಮಕ್ಕಳು ಗಂಟೆಗೊಮ್ಮೆ ತಿನ್ನುವ ರೂಢಿ ಮಾಡಿಕೊಂಡಿರುತ್ತವೆ. ಪರಸ್ಪರ ಹೋಲಿಕೆ ಮಾಡದೇ ಮಕ್ಕಳಿಗೆ ಉಣಬಡಿಸುವ ಕೆಲಸವಾಗಲಿ. ಒಂದೇ ಸಲ ಎರಡು ಚಪಾತಿ ಹಾಕಿ ತಿನ್ನು ತಿನ್ನು ಎಂದು ಒತ್ತಡ ಹಾಕಬೇಡಿ. ಚಪಾತಿಯನ್ನು ವಿಭಿನ್ನವಾಗಿ ಮಾಡಿ ತಿನಿಸುವ ಕಡೆಗೆ ಗಮನ ಕೊಡಿ.

ಮಕ್ಕಳ ಹೆಚ್ಚಿನ ಸಮಯ ಟಿ.ವಿ, ಕಂಪ್ಯೂಟರ್‌, ವಿಡಿಯೊಗೇಮ್‌, ಮೊಬೈಲ್‌, ಐಪ್ಯಾಡ್‌ಗಳಲ್ಲಿ ವ್ಯರ್ಥವಾಗುವುದರಿಂದ ದೈಹಿಕ ಕಸರತ್ತು ಕಡಿಮೆಯಾಗುತ್ತಿದೆ. ಏನನ್ನೇ ತಿಂದರೂ ಅರಗಿಸಿ ಕೊಳ್ಳಲು ಮಕ್ಕಳು ಆಟವಾಡಬೇಕು. ಇದರಿಂದ ಮಕ್ಕಳ ಮೂಳೆ ಮತ್ತು ಸ್ನಾಯುಗಳು ಬಲವಾಗುತ್ತವೆ. ಮಾನಸಿಕ ಒತ್ತಡ ನಿಯಂತ್ರಿಸುವ ಸಾಮರ್ಥ್ಯವೂ ಹೆಚ್ಚುತ್ತದೆ. ಏಕಾಗ್ರತೆ ಮತ್ತು ಆತ್ಮವಿಶ್ವಾಸವೂ ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT