ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Sleep Day | ಮನಶ್ಶಾಂತಿಗೆ ಕಾರಣವಾಗುವ ಸುಖ ನಿದ್ರೆ ನಿಮ್ಮದಾಗಬೇಕೇ?

Last Updated 18 ಮಾರ್ಚ್ 2021, 12:02 IST
ಅಕ್ಷರ ಗಾತ್ರ

ನಾವು ನಮ್ಮ ಜೀವನದಲ್ಲಿ ಅನುಸರಿಸುವ ಕೆಲವು ಸಹಜ ಆವರ್ತನಗಳಾವುವು? ಮೊದಲಿಗೆ, ನಮ್ಮ ಉಸಿರಾಟ ನಿರ್ದಿಷ್ಟ ನಮೂನೆಯಲ್ಲಿದೆ. ಎರಡನೆಯದಾಗಿ ನಮ್ಮ ಹೃದಯಬಡಿತವೂ ಲಯಬದ್ಧವಾಗಿದೆ ಹಾಗೆಯೆ ನಮ್ಮ ದೈನಂದಿನ ಆವರ್ತವಾದ ಚಟುವಟಿಕೆ, ವಿಶ್ರಾಮ ಮತ್ತು ನಿದ್ರೆ ಕೂಡ. ಆರೋಗ್ಯವಂತ ಶರೀರದಲ್ಲಿ ಮಾತ್ರವೇ ಆರೋಗ್ಯಕರ ಮನಸ್ಸಿರಲು ಸಾಧ್ಯ, ಅದರ ವಿಲೋಮವೂ ಸರಿಯೆ. ಆದ್ದರಿಂದ ಈ ಸಹಜ ಆವರ್ತಗಳನ್ನು ತಿಳಿದುಕೊಂಡು ಅವುಗಳೊಂದಿಗೆ ಸಮಶ್ರುತಿಯಿಂದಿರುವುದು ಬಲುಮುಖ್ಯ.

ಮೊದಲಿಗೆ ಉಸಿರಾಟದಿಂದ ಆರಂಭಿಸೋಣ. ಪ್ರತಿಯೊಬ್ಬರ ಉಸಿರಾಟದ ಮಾದರಿಯೂ ಅನನ್ಯ. ನಾವು ಒಂದು ನಿರ್ದಿಷ್ಟ ಲಯದಲ್ಲಿ ಉಚ್ಛ್ವಾಸ ಮತ್ತು ನಿಶ್ವಾಸಗಳನ್ನು ಮಾಡುತ್ತೇವೆ, ಅಲ್ಲದೆ ಸೂರ್ಯ-ಚಂದ್ರರ ಚಲನೆಗಳಿಗನುಸಾರವಾಗಿ ನಮ್ಮ ಎರಡು ಮೂಗಿನ ಹೊಳ್ಳೆಗಳೂ ಕಾರ್ಯ ಮಾಡುತ್ತವೆ. ಈಗಲೇ ಒಂದು ಕ್ಷಣವನ್ನು ತೆಗೆದುಕೊಂಡು ನಿಮ್ಮ ಎರಡು ಹೊಳ್ಳೆಗಳಲ್ಲಿ ಯಾವುದು ಸಕ್ರಿಯವಾಗಿದೆಯೆಂದು ಗಮನಿಸಿ - ಎಡವೊ, ಬಲವೊ? ಅಥವಾ ಎರಡೂ ಸಮನಾಗಿವೆಯೊ?

ಯೋಗಶಾಸ್ತ್ರಗಳಲ್ಲಿ ಉಸಿರಾಟಕ್ಕೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಬಲಹೊಳ್ಳೆಯು ಸೂರ್ಯನಾಡಿ ಅಥವಾ ಪಿಂಗಳಕ್ಕೆ ಸಂಬಂಧಿಸಿದ್ದು, ಕ್ರಿಯಾಶೀಲತೆಯನ್ನು ಪ್ರತಿನಿಧಿಸುತ್ತದೆ. ವೈಜ್ಞಾನಿಕ ಪರಿಭಾಷೆಯಲ್ಲಿ, ಇದು ಅನುವೇದಕ (ಸಿಂಪಥೆಟಿಕ್) ನರವ್ಯೂಹ ವ್ಯವಸ್ಥೆ. ಎಡಹೊಳ್ಳೆಯು ಚಂದ್ರನಾಡಿ ಅಥವಾ ‘ಇಡಾ’ಗೆ ಸಂಬಂಧಿಸಿದ್ದು, ವಿಶ್ರಾಂತಿ ಮತ್ತು ವಿರಾಮವನ್ನು ಪ್ರತಿನಿಧಿಸುತ್ತದೆ ಹಾಗು ಉಪಾನುವೇದಕ (ಪ್ಯಾರಾಸಿಂಪಥೆಟಿಕ್) ನರವ್ಯೂಹ ವ್ಯವಸ್ಥೆಯೆಂದು ಕರೆಯಲ್ಪಡುತ್ತದೆ. ಕೆಲವು ಗಂಟೆಗಳಿಗೊಮ್ಮೆ ಈ ಮಾದರಿ ಬದಲಾಗಬಹುದು, ಆದರೆ ಹಗಲು ಮತ್ತು ರಾತ್ರಿಗಳಲ್ಲೂ ಗಮನಾರ್ಹ ಬದಲಾವಣೆಯಾಗುತ್ತದೆ. ಸಾಮಾನ್ಯವಾಗಿ, ಬಲಹೊಳ್ಳೆಯು ಹಗಲಿನಲ್ಲಿ ಮತ್ತು ಎಡಹೊಳ್ಳೆಯು ರಾತ್ರಿಯಲ್ಲಿ ಸಕ್ರಿಯವಾಗಿರುತ್ತದೆ. ಇದು ಸೂರ್ಯ-ಚಂದ್ರರ ಚಲನೆಗೆ ನೇರವಾಗಿ ಸಂಬಂಧಿಸಿದೆ.

ನಮ್ಮ ಪ್ರಾಕೃತಿಕ ಸಮತೋಲನ ಬಿಗಡಾಯಿಸಿದಾಗ, ಬದಲಾವಣೆ ಸಂಭವಿಸುತ್ತದೆ. ಉದಾಹರಣೆಗೆ, ನಾವು ಕೋಪಗೊಂಡಾಗ, ಅನುವೇದಕ ನರವ್ಯೂಹ ಪ್ರತಿಕ್ರಿಯೆ ಪ್ರಚೋದನೆಗೊಳ್ಳುತ್ತದೆ, ಆಗ ಬಲಹೊಳ್ಳೆ ಸಕ್ರಿಯವಾಗುತ್ತದೆ. ನಮ್ಮೊಳಗೆ ಅಗಾಧ ಭಯ ಅಥವಾ ಆತಂಕವಿದ್ದಾಗಲೂ ಹಾಗೆಯೆ ಆಗುತ್ತದೆ. ಈ ಅನುವೇದಕ ಪ್ರತಿಕ್ರಿಯೆಯಲ್ಲಿ, ಅಡ್ರಿನಾಲಿನ್, ಕಾರ್ಟಿಸೋಲ್, ನೋರೆಪಿನೆಫ್ರಿನ್‍ನಂತಹ ಹಾರ್ಮೋನುಗಳು ರಕ್ತದಲ್ಲಿ ಬಿಡುಗಡೆಯಾಗಿ, ನಮ್ಮ ಹೃದಯಬಡಿತ ಜೋರಾಗುತ್ತದೆ, ಸ್ನಾಯುಗಳು ಬಿಗಿದು ಕಾರ್ಯಸಿದ್ಧವಾಗುತ್ತವೆ, ನಮ್ಮ ರಕ್ತದೊತ್ತಡ ಹೆಚ್ಚಿ ನಮ್ಮ ಅರಿವು ಅತ್ಯಧಿಕವಾಗುತ್ತದೆ. ನಾವೀಗ ‘ಓಡು ಇಲ್ಲವೇ ಕಾದಾಡು’ ಸ್ಥಿತಿಯಲ್ಲಿ ಸನ್ನದ್ಧರಾಗಿರುತ್ತೇವೆ.

ಅದನ್ನು ವಿರುದ್ಧವಾಗಿಸಲು, ಈ ಸರಳವಾದ ಉಸಿರಾಟದ ಅಭ್ಯಾಸವನ್ನು ಪ್ರಯತ್ನಿಸಿ: ನಿಮ್ಮ ಬಲಹೊಳ್ಳೆಯನ್ನು, ಬಲಗೈ ಹೆಬ್ಬೆರಳಿನಿಂದ ಮುಚ್ಚಿ, ಪ್ರತಿಸಲವೂ ಎಡಹೊಳ್ಳೆಯಿಂದ ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ ಮತ್ತು ಸಂಪೂರ್ಣವಾಗಿ ಹೊರಗೆ ಬಿಡಿರಿ. ನಿಮ್ಮ ಎಡಹೊಳ್ಳೆಯಿಂದ ಈ ರೀತಿಯಾಗಿ ಎಂಟರಿಂದ ಹತ್ತು ಬಾರಿ ಉಸಿರಾಡಿರಿ. ಅದುವರೆಗೂ ನಿಮ್ಮ ಬಲಹೊಳ್ಳೆಯನ್ನು ಮುಚ್ಚಿಕೊಂಡಿರಿ.

ಸಾಮಾನ್ಯವಾಗಿ, ಹೃದಯ ಜೋರಾಗಿ ಹೊಡೆದುಕೊಳ್ಳುವುದು ಕಡಿಮೆಯಾಗುತ್ತದೆ, ನೀವು ಶಾಂತರಾಗುತ್ತೀರಿ ಹಾಗು ಕೋಪ, ಭಯ, ಆತಂಕದಂತಹ ಭಾವೋನ್ಮಾದಗಳು ಅಗಾಧ ಪ್ರಮಾಣದಲ್ಲಿ ಇಳಿಮುಖವಾಗುತ್ತವೆ. ಆದರೆ ನಿಮಗೆ ಆತಂಕದ ವ್ಯಾಧಿ ಇದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಕಾಣಿರಿ.

ಸೂರ್ಯೋದಯದ ಹೊತ್ತಿನಲ್ಲಿ, ಎಡಹೊಳ್ಳೆಯಿಂದ ಬಲಹೊಳ್ಳೆಗೆ ಕ್ರಿಯಾಶೀಲತೆ ಬದಲಾಗುವುದನ್ನು ಕಾಣಬಹುದು, ಅಂತೆಯೆ ಸೂರ್ಯಾಸ್ತದ ಹೊತ್ತಿಗೆ ಬಲಹೊಳ್ಳೆಯಿಂದ ಎಡಹೊಳ್ಳೆಗೆ ಬದಲಾಗುತ್ತದೆ. ನಾವು ಆ ಸಂಕ್ರಮಣ ಕಾಲದಲ್ಲಿ ಧ್ಯಾನ ಮಾಡಿದರೆ, ಅದ್ಭುತ ಪರಿಣಾಮಗಳನ್ನು ಕಾಣಬಹುದು. ಏಕೆಂದರೆ ಆಗ ಪ್ರಕೃತಿಯಲ್ಲಿ ಮತ್ತು ನಾಡಿಗಳಲ್ಲಿ ಸಮತೋಲನವಿರುತ್ತದೆ.

ಅನಾದಿಕಾಲದಿಂದಲೂ, ನಮ್ಮ ಪೂರ್ವಜರು ಈ ಆವರ್ತಗಳಿಗಾಧರಿತವಾದ ನಿತ್ಯಕ್ರಮವನ್ನು ರೂಪಿಸಿದ್ದಾರೆ. ಬಹಳಷ್ಟು ಕೆಲಸಕಾರ್ಯಗಳನ್ನು ಹಗಲಿನ ಹೊತ್ತು ನಡೆಸಲಾಗುತ್ತಿತ್ತು ಹಾಗು ರಾತ್ರ್ಲಿ ವಿಶ್ರಾಂತಿಗೆಂದು ನಿಗದಿತವಾಗಿದ್ದಿತು. ಆಗ ದೇಹವು ಸಕ್ರಿಯತೆ ಮತ್ತು ವಿಶ್ರಾಂತಿ, ಹಗಲು ಮತ್ತು ರಾತ್ರಿ ಎಂಬ ಲಯಕ್ಕೆ ಹೊಂದಿಕೊಂಡಿತ್ತು. ಈ ಆವರ್ತಗಳೊಂದಿಗೆ ಸಮಶ್ರುತಿಗೊಳ್ಳಲು ಅವರು ಸಾಮಾನ್ಯವಾಗಿ ಮುಂಜಾನೆ ಬೇಗನೆ ಏಳುತ್ತಿದ್ದರು. ಇಂದಿಗೂ ಭಾರತದ ಹಳ್ಳಿಗಳಲ್ಲಿ, ಜನರು ಸೂರ್ಯೋದಯದ ಹೊತ್ತಿಗೆ ಸೂರ್ಯನಿಗೆ ತರ್ಪಣ ನೀಡುವುದನ್ನು ಕಾಣಬಹುದು.

ಕಮಲೇಶ್ ಡಿ ಪಟೇಲ್
ಕಮಲೇಶ್ ಡಿ ಪಟೇಲ್


ಒಂದು ಮತ್ತೊಂದಕ್ಕೆ ಹಾದಿ ಮಾಡಿಕೊಡುತ್ತದೆ: ಬೇಗನೆ ಎದ್ದು, ಸೂರ್ಯಕಿರಣಗಳಿಗೆ ಒಡ್ಡಿಕೊಂಡರೆ ಸೆರೊಟೊನಿನ್ ಎಂಬ ಸಂತೋಷದ ಹಾರ್ಮೋನ್ ಉತ್ಪಾದನೆಯಾಗುತ್ತದೆ. ತನ್ಮೂಲಕ ಉತ್ಪಾದನೆಯಾಗುವ ಮೆಲಟೊನಿನ್ ನಮ್ಮನ್ನು ಸುಖವಾಗಿ ನಿದ್ರಿಸುವಂತೆ ಮಾಡುವ ಕಾರಣ, ಮರುದಿನ ನಾವು ಬೇಗನೆ ಏಳುವುದಲ್ಲದೆ, ಚೈತನ್ಯಭರಿತರಾಗಿರುತ್ತೇವೆ. ಈ ಆವರ್ತನಕ್ಕೆ ತೊಂದರೆಯುಂಟಾದಾಗ, ನಮಗೆ ಆಧುನಿಕ ಜಗತ್ತಿನ ಎರಡು ಅತಿದೊಡ್ಡ ಸಮಸ್ಯೆಗಳಾದ ನಿದ್ರಾಹೀನತೆ ಮತ್ತು ಖಿನ್ನತೆಗಳು ಕಾಡುತ್ತವೆ.

ಇದರಿಂದ ನಮಗೆ ನಿದ್ರೆಯ ಪ್ರಾಮುಖ್ಯತೆ ತಿಳಿಯುತ್ತದೆ. ನಾವು ಎಷ್ಟು ಉತ್ತಮವಾಗಿ ಮತ್ತು ಎಷ್ಟು ಗಾಢವಾಗಿ ನಿದ್ರಿಸುತ್ತೇವೆ ಎಂಬುದು ನಮ್ಮ ಇಡೀ ದಿನದ ಮನಃಸ್ಥಿತಿಯನ್ನು ನಿರ್ಧರಿಸುತ್ತದೆ. ನಾವು ಸರಿಯಾದ ಪ್ರಮಾಣದಲ್ಲಿ ನಿದ್ರೆ ಮಾಡಬಲ್ಲೆವಾದರೆ, ಮುಂಜಾನೆ ಬಲಹೊಳ್ಳೆಯು ತನ್ನಿಂತಾನೇ ಸಕ್ರಿಯವಾಗುತ್ತದೆ. ಮುಂಜಾನೆ ನಾವು ಸಂಪೂರ್ಣ ಜಾಗೃತ ಸ್ಥಿತಿಯಲ್ಲಿದ್ದಾಗ, ಸಹಜವಾಗಿಯೆ ಉನ್ನತ ಪ್ರಜ್ಞಾಸ್ಥಿತಿಗಳನ್ನು ಆಹ್ವಾನಿಸುತ್ತೇವೆ. ಆಯ್ಕೆ ನಮ್ಮದು: ಪ್ರಕ್ಷುಬ್ಧ ಪ್ರಜ್ಞೆಯೊಂದಿಗೆ ಸೆಣಸುವುದು ಅಥವಾ ನಿಶ್ಚಲ, ಶುದ್ಧ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು. ನಾವು ಈ ಪ್ರಾಕೃತಿಕ ಲಯಗಳೊಂದಿಗೆ ಸಮರಸದಿಂದಿದ್ದಾಗ, ನಮ್ಮ ಪ್ರಜ್ಞೆ ಹಾಗು ನಮ್ಮ ಸಮಗ್ರ ಆರೋಗ್ಯವು ತಾನಾಗಿಯೇ ಸುಧಾರಿಸುತ್ತದೆ.

ನಾವು ರಾತ್ರಿ ತಡವಾಗಿ ಮಲಗಿದರೆ ಏನಾಗುತ್ತದೆ? ಆಗ ನಾವು ಪ್ರಾಕೃತಿಕ ಲಯಕ್ಕೆ ವಿರುದ್ಧವಾಗಿ ನಡೆಯುತ್ತಿದ್ದೇವೆ, ಪ್ರವಾಹಕ್ಕೆ ವಿರುದ್ಧವಾಗಿ ಈಜುತ್ತಿದ್ದೇವೆಂದು ಅರ್ಥ. ಕಾಲಕ್ರಮೇಣ ಇಳಿಮುಖವಾಗುವ ನಮ್ಮ ಆರೋಗ್ಯವೇ ಅದಕ್ಕೆ ಸಾಕ್ಷಿಯಾಗುತ್ತದೆ. ಅನಿಯಮಿತ ಅಭ್ಯಾಸಗಳು ಮತ್ತು ತಡರಾತ್ರಿ ಮಲಗುವುದರಿಂದ ನಿದ್ರೆಯ ಅಭಾವವಾಗುತ್ತದೆ. ನಮ್ಮ ನರವ್ಯೂಹ ಒತ್ತಡಕ್ಕೊಳಪಡುವುದರಿಂದ ನಮ್ಮ ಪ್ರತಿರೋಧಕ ಶಕ್ತಿ ತಗ್ಗುತ್ತದೆ. ನಮಗೆ ನಿದ್ರೆಯ ಕೊರತೆಯುಂಟಾದಾಗ, ಮರುದಿನ ಮುಂಜಾನೆ ಆಗುವುದೇನು? ಕಿರಿಕಿರಿಯುಂಟಾಗಿ, ಸಣ್ಣ ಭಿನ್ನಾಭಿಪ್ರಾಯಕ್ಕೂ ಸಿಡುಕುವಂತಾಗುತ್ತದೆ.

ನಮ್ಮಲ್ಲಿ ಯಾರಿಗೆ ಜೀವನದಲ್ಲಿ ಏಳಿಗೆ ಹೊಂದಬೇಕಿದೆಯೊ, ಅವರು ತಮ್ಮ ನಿದ್ರೆಯನ್ನು ಕ್ರಮಗೊಳಿಸುತ್ತಾರೆ. ಇಲ್ಲವಾದರೆ, ಅದೊಂದೇ ವಿಷಯ ನಮ್ಮ ಜೀವನಪರ್ಯಂತ ಎಟುಕದಂತಾಗಿ, ಏಕೈಕ ಮಾರ್ಗದರ್ಶಿ ಶಕ್ತಿಯಾದ ನಮ್ಮ ಪ್ರಜ್ಞೆ ಬುಡಮೇಲಾಗುತ್ತದೆ ಹಾಗು ನಾವು ಭಾವೋದ್ವೇಗ ಮತ್ತು ಪ್ರತಿಕ್ರಿಯೆಗಳಿಗೆ ಬಲಿಯಾಗುತ್ತೇವೆ.

ಆದ್ದರಿಂದ ಯಾರು ನಿಶ್ಚಿಂತೆ, ಹಗುರತೆ, ಆರಾಮ ಮತ್ತು ಶಾಂತಿಯಿಂದ ಇರಬಯಸುತ್ತೀರೊ, ಅವರು ನಿಮ್ಮ ನಿದ್ರೆ ಮತ್ತು ಉಸಿರಾಟದ ನಮೂನೆಗಳೊಂದಿಗೆ ಪ್ರಯೋಗ ಮಾಡಿರಿ. ಅದರಲ್ಲಿ ಅಪಾರ ಲಾಭವಿದೆ. ದಯವಿಟ್ಟು ನೀವೇ ಪ್ರಯತ್ನಿಸಿ ನೋಡಿ!

ಲೇಖಕರು: ಕಮಲೇಶ್ ಪಟೇಲ್ (ದಾಜಿ) ಹಾರ್ಟ್‌ಫುಲ್‌ನೆಸ್ (heartfulness.org) ಸಂಸ್ಥೆಯ ಮಾರ್ಗದರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT