ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜಾರ್ಖಂಡ್ ಟೈಗರ್' ಎನಿಸಿದ್ದ ಚಂಪೈ ಸೊರೇನ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ

Published 1 ಫೆಬ್ರುವರಿ 2024, 2:38 IST
Last Updated 1 ಫೆಬ್ರುವರಿ 2024, 2:38 IST
ಅಕ್ಷರ ಗಾತ್ರ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೇನ್ ಅವರು ಬುಧವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಕಟಿಸಿದೆ.

ಒಂದು ವೇಳೆ ಹೇಮಂತ್ ಅವರ ಬಂಧನವಾದರೆ, ಅವರು ಪತ್ನಿ ಕಲ್ಪನಾ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಿಎಂ ನಿವಾಸದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಚಂಪೈ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಭೆಯಲ್ಲಿ ಕಲ್ಪನಾ ಅವರೂ ಭಾಗವಹಿಸಿದ್ದರು. ಆದರೆ, ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವುದಕ್ಕೆ, ಹೇಮಂತ್ ಅವರ ಸೋದರ ಸೊಸೆ ಮತ್ತು ಜೆಎಂಎಂ ಶಾಸಕಿಯೂ ಆಗಿರುವ ಸೀತಾ ಸೊರೇನ್ ಬಹಿರಂಗವಾಗಿ ವಿರೋಧಿಸಿದರು.

ಶೀಘ್ರದಲ್ಲೇ ಪ್ರಮಾಣ ವಚನ ಸ್ವೀಕರಿಸಲಿರುವ ಚಂಪೈ ಸೊರೇನ್ ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ..

  1. ಸೆರೈಕಲ ಕ್ಷೇತ್ರದ ಶಾಸಕರಾಗಿರುವ ಚಂಪೈ ಸೊರೇನ್, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ಹಾಗೂ ಪ್ರಮುಖ ನಾಯಕ.

  2. ಹೇಮಂತ್ ಸೊರೇನ್ ಸಂಪುಟದಲ್ಲಿ ಸಾರಿಗೆ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

  3. ರೈತ ಕುಟುಂಬದಲ್ಲಿ 1961ರಲ್ಲಿ ಜನಿಸಿದ ಚಂಪೈ, 1974ರಲ್ಲಿ ಜೆಮ್‌ಶೆಡ್‌ಪುರದ RKM ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು.

  4. ಚಂಪೈ ಅವರೇ ಘೋಷಿಸಿರುವಂತೆ, 2019ರಲ್ಲಿ ₹ 2.28 ಕೋಟಿ ಮೌಲ್ಯದ ಆಸ್ತಿ, ₹ 76.50 ಲಕ್ಷ ಸಾಲ ಹೊಂದಿದ್ದರು.

  5. 1990ರ ದಶಕದಲ್ಲಿ ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಿರ್ಗಮಿತ ಸಿಎಂ ಹೇಮಂತ್ ಸೋರೆನ್ ಅವರ ತಂದೆ ಶಿಬು ಸೊರೇನ್ ಅವರೊಂದಿಗೆ ಹೋರಾಟದುದ್ದಕ್ಕೂ ಜೊತೆಯಾಗಿ ನಿಂತಿದ್ದ ಚಂಪೈ, 'ಜಾರ್ಖಂಡ್ ಟೈಗರ್' ಎನಿಸಿಕೊಂಡಿದ್ದರು. ಶಿಬು ಸೊರೇನ್ ಅವರು ಮುಖ್ಯಮಂತ್ರಿಯಾದಾಗ ಅವರಿಗೆ ಬೆಂಬಲ ಸೂಚಿಸಿದ್ದರು.

ಸೊರೇನ್‌ ರಾಜೀನಾಮೆಗೂ ಮುನ್ನ ಮಂಗಳವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ್ದ ಚಂಪೈ, 'ಮುಂದೆ ಎದುರಾಗಬಹುದಾದ ಸನ್ನಿವೇಶಗಳಿಗೆ ಸಿದ್ಧರಿದ್ದೇವೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳನ್ನು ಉರುಳಿಸಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ, ಅವರ ಪ್ರಯತ್ನ ಯಶಸ್ವಿಯಾಗಲು ನಾವು ಬಿಡುವುದಿಲ್ಲ' ಎಂದು ಗುಡುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT