ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!

Published 16 ಮೇ 2024, 11:32 IST
Last Updated 16 ಮೇ 2024, 11:32 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಕಾಲ್ಚೆಂಡಿನ ಲೋಕದ ತಾರೆ ಸುನಿಲ್ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ ಕಂಡ 'ಸಾರ್ವಕಾಲಿಕ ಶ್ರೇಷ್ಠ' ಆಟಗಾರರಲ್ಲಿ ಓರ್ವರೆನಿಸಿಕೊಂಡಿರುವ ಚೆಟ್ರಿ, ದೇಶದ ಫುಟ್‌ಬಾಲ್ ಕ್ರೀಡೆಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಅವರ ಸ್ಮರಣೀಯ ಸಾಧನೆಯು ಪ್ರತಿಯೊಬ್ಬ ಕ್ರೀಡಾಪ್ರೇಮಿಯ ನೆನಪಿನಂಗಳದಲ್ಲಿ ಸದಾ ಅಚ್ಚಳಿಯದೇ ಉಳಿಯುತ್ತದೆ.

ನಿಮಗೆ ಗೊತ್ತಿರುವ ಚೆಟ್ರಿ ಬಗೆಗಿಗ 5 ಅಂಶಗಳನ್ನು ಇಲ್ಲಿ ಕೊಡಲಾಗಿದೆ.

1. ರೊನಾಲ್ಡೊ, ಮೆಸ್ಸಿ ಸಾಲಿನಲ್ಲಿ ಚೆಟ್ರಿ

ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ನಲ್ಲಿ ಸಕ್ರಿಯ ಆಟಗಾರರ ಪೈಕಿ ಅತಿ ಹೆಚ್ಚು ಗೋಲು ಗಳಿಸಿದ ಮೂರನೇ ಆಟಗಾರ ಎಂದ ಶ್ರೇಯವನ್ನು ಚೆಟ್ರಿ ಹೊಂದಿದ್ದಾರೆ. ಚೆಟ್ರಿ ಈವರೆಗೆ ಒಟ್ಟು 94 ಗೋಲುಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದು (128 ಗೋಲು, 205 ಪಂದ್ಯ), ಅರ್ಜೇಂಟೀನಾದ ಲಯೊನೆಲ್ ಮೆಸ್ಸಿ (106 ಗೋಲು, 180 ಪಂದ್ಯ) ಎರಡನೇ ಸ್ಥಾನದಲ್ಲಿದ್ದಾರೆ.

2. ಭಾರತದ ಪರ ದಾಖಲೆಯ 150 ಪಂದ್ಯ

ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನು ಸುನಿಲ್ ಚೆಟ್ರಿ ತಮ್ಮದಾಗಿಸಿಕೊಂಡಿದ್ದಾರೆ. 2005ರಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಚೆಟ್ರಿ ಫುಟ್‌ಬಾಲ್ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಈವರೆಗೆ 150 ಪಂದ್ಯಗಳನ್ನು ಆಡಿದ್ದಾರೆ.

3. 25 ವರ್ಷಗಳ ಬಳಿಕ ಏಷ್ಯಾ ಕಪ್‌ಗೆ ಅರ್ಹತೆ ಪಡೆದ ಭಾರತ

ತಮ್ಮ ಸದೃಢ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಹೆಸರುವಾಸಿಯಾಗಿರುವ 39 ವರ್ಷದ ಚೆಟ್ರಿ, 2008ರ ಎಎಫ್‌ಸಿ ಚಾಲೆಂಜ್ ಕಪ್ ಫೈನಲ್‌ನಲ್ಲಿ ತಜಕಿಸ್ತಾನದ ವಿರುದ್ಧ 'ಹ್ಯಾಟ್ರಿಕ್ ಗೋಲು'ಗಳ ಸಾಧನೆ ಮಾಡಿದ್ದರು. ಆ ಮೂಲಕ ಗೆಲುವು ದಾಖಲಿಸಿದ್ದ ಭಾರತ 25 ವರ್ಷಗಳ ಬಳಿಕ ಏಷ್ಯಾ ಕಪ್‌ಗೆ ಅರ್ಹತೆ ಪಡೆದಿತ್ತು.

ಸುನಿಲ್ ಚೆಟ್ರಿ

ಸುನಿಲ್ ಚೆಟ್ರಿ

(ಚಿತ್ರ ಕೃಪೆ: ಇನ್‌ಸ್ಟಾಗ್ರಾಂ/@chetri_sunil11)

4. ಚೆಟ್ರಿ ಸಾಧನೆ

2007, 2009 ಹಾಗೂ 2012ರಲ್ಲಿ ನೆಹರೂ ಕಪ್ ಮತ್ತು 2011, 2015, 2021 ಹಾಗೂ 2023ರಲ್ಲಿ ಸ್ಯಾಫ್ ಚಾಂಪಿಯನ್‌ಶಿಪ್ ಅನ್ನು ಭಾರತ ಗೆಲ್ಲುವಲ್ಲಿ ಸುನಿಲ್ ಚೆಟ್ರಿ ಮಹತ್ವದ ಪಾತ್ರ ವಹಿಸಿದ್ದರು.

5. ಚೆಟ್ರಿಗೆ ಒಲಿದ ಎಐಎಫ್‌ಎಫ್ ಗೌರವ

ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆಯಿಂದ (ಎಐಎಫ್‌ಎಫ್) ಏಳು ಸಲ 'ವರ್ಷದ ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ. (2007, 2011, 2013, 2014, 2017, 2018–19 ಮತ್ತು 2021–22)

*39 ವರ್ಷದ ಚೆಟ್ರಿ, ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಜೂನ್ 6ರಂದು ಕೋಲ್ಕತ್ತದಲ್ಲಿ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಬೆಂಗಳೂರು ಎಫ್‌ಸಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಪ್ರಶಸ್ತಿಗಳು:

  • ಅರ್ಜುನ ಪ್ರಶಸ್ತಿ (2011)

  • ಪದ್ಮಶ್ರೀ (2019)

  • ಖೇಲ್ ರತ್ನ ಪ್ರಶಸ್ತಿ (2021)

ಸುನಿಲ್ ಚೆಟ್ರಿ

ಸುನಿಲ್ ಚೆಟ್ರಿ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT