ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಗುಜರಾತ್‌ ಎಟಿಎಸ್‌ ವಶಕ್ಕೆ

Last Updated 25 ಜೂನ್ 2022, 19:02 IST
ಅಕ್ಷರ ಗಾತ್ರ

ಮುಂಬೈ/ಅಹಮದಾಬಾದ್‌: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್‌) ಶನಿವಾರ ಮುಂಬೈನಲ್ಲಿ ವಶಕ್ಕೆ ಪಡೆದಿದೆ. ಅಹಮದಾಬಾದ್‌ ನಗರ ಕ್ರೈಂ ಬ್ರಾಂಚ್‌ನಲ್ಲಿ ಅವರ ವಿರುದ್ಧ ಶನಿವಾರ ಬೆಳಿಗ್ಗೆ 11 ಗಂಟೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ತೀಸ್ತಾ ಅವರು ಕೂಡ ಮುಂಬೈನ ಸಾಂತಾಕ್ರೂಜ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತೀಸ್ತಾ ಅವರನ್ನು ಅಹಮದಾ ಬಾದ್‌ಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಜರಾತ್ ಗಲಭೆ ಪ್ರಕರಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆ ತರಲು ವ್ಯವಸ್ಥಿತ ಅಭಿಯಾನ ನಡೆದಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು. ಅದರ ಮರುದಿನವೇ ತೀಸ್ತಾ ಅವರ ಬಂಧನವಾಗಿದೆ.

2002ರ ಗುಜರಾತ್‌ ಗಲಭೆ ಪ‍್ರಕರಣ ಗಳಲ್ಲಿ ‘ಮುಗ್ಧ’ ಜನರನ್ನು ಸಿಲುಕಿಸು ವುದಕ್ಕಾಗಿ ದಾಖಲೆಗಳನ್ನು ತಿರುಚಿದ ಮತ್ತು ಅಪರಾಧ ಒಳಸಂಚು ನಡೆಸಿದ ಆರೋಪದಲ್ಲಿ ತೀಸ್ತಾ, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ.ಶ್ರೀಕುಮಾರ್ ಮತ್ತು ಸಂಜೀವ್‌ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

2002ರ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ, ಆಗ ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪಮುಕ್ತ ಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಮರುದಿನ ತೀಸ್ತಾ ಅವರ ಬಂಧನವಾಗಿದೆ. ಗಲಭೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಆರೋಪಿಸಿ ಝಕಿಯಾ ಜಾಫ್ರಿ ಅವರು ದೂರು ದಾಖಲಿಸಿದ್ದರು. ಝಕಿಯಾ ಅವರನ್ನು ತೀಸ್ತಾ ಅವರ ಎನ್‌ಜಿಒ ಕಾನೂನು ಹೋರಾಟದ ಉದ್ದಕ್ಕೂ ಬೆಂಬಲಿಸಿದೆ. ಝಕಿಯಾ ಅವರ ಗಂಡ ಎಹ್ಸಾನ್‌ ಜಾಫ್ರಿ ಅವರನ್ನು ಗಲಭೆ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು.

ಮುಂಬೈನ ಜುಹುನಲ್ಲಿರುವ ನಿವಾಸದಿಂದ ತೀಸ್ತಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿಯೇ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮುಂಬೈನ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

2002ರ ಗಲಭೆ ಮರುತನಿಖೆ ಸಾಧ್ಯತೆಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿದ ತೀರ್ಪು ತೆರೆ ಎಳೆದಿದೆ. ‘ಪ್ರಕರಣವು ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದಕ್ಕಾಗಿ ಕುತಂತ್ರ ಹೆಣೆಯಲಾಗಿದೆ’ ಎಂಬುದು ಸ್ಪಷ್ಟ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಪೀಠವು ಹೇಳಿತ್ತು. ಗುಜರಾತ್‌ ಸರ್ಕಾರದ ‘ಅತೃಪ್ತ’ ಪೊಲೀಸ್‌ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಿರಬಹುದು ಎಂದು ಪೀಠ ಹೇಳಿತ್ತು.

ಅಹಮದಾಬಾದ್ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಡಿ.ಬಿ. ಬರಾದ್ ಅವರು ತೀಸ್ತಾ, ಭಟ್ ಹಾಗೂ ಶ್ರೀಕುಮಾರ್ ವಿರುದ್ಧ ದೂರು ನೀಡಿದ್ದರು. ಗರಿಷ್ಠ ಪ್ರಮಾಣದ ಶಿಕ್ಷೆ ನೀಡಲು ಅರ್ಹವಾದ ಅಪರಾಧದಲ್ಲಿ ಹಲವು ವ್ಯಕ್ತಿಗಳನ್ನು ಸಿಲುಕಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿ ಕಾನೂನು ಪ್ರಕ್ರಿಯೆಯನ್ನು ದಾರಿ ತಪ್ಪಿಸಿದ್ದಾರೆ ಎಂದು ಅವರು ಈ ಮೂವರ ವಿರುದ್ಧ ಆರೋಪ ಮಾಡಿದ್ದರು. ‘ತೊಂದರೆ ನೀಡುವ ಉದ್ದೇಶ ಇಟ್ಟುಕೊಂಡೇ ಅಮಾಯಕ ಜನರ ವಿರುದ್ಧ ದುರುದ್ದೇಶಪೂರಿತ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದರು’ ಎಂದು ಆರೋಪಿಸಿದ್ದಾರೆ.

ಪ್ರಕರಣದ ತನಿಖೆಗೆ ನೇಮಕವಾಗಿದ್ದ ವಿಶೇಷ ತನಿಖಾ ತಂಡದ ಎದುರು ಈ ಸಂಬಂಧ ಹಲವು ದಾಖಲೆಗಳನ್ನು ಸಲ್ಲಿಸಲಾಗಿತ್ತು. ಇವುಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ತೀಸ್ತಾ ಅವರು ದಾಖಲೆಗಳನ್ನು ತಿರುಚಿರುವ ಜೊತೆಗೆ ಸಾಕ್ಷಿಗಳ ಮನವೊಲಿಸಿ, ಖಾಲಿ ಹಾಳೆಗಳ ಮೇಲೆ ಸಹಿ ಮಾಡಿಸಿ ಕೊಂಡಿದ್ದಾರೆ ಎಂದೂ ಆರೋಪಿಸಲಾಗಿದೆ. ಝಕಿಯಾ ವಿಚಾರದಲ್ಲೂ ಹೀಗೆಯೇ ಆಗಿದೆ ಎಂದು ದೂರ ಲಾಗಿದೆ. ಸಂಜೀವ್ ಭಟ್ ಹಲವು ದಾಖಲೆ ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ. ಸಂಜೀವ್ ಭಟ್‌ ಅವರಿಗೆ ಈ ಹಿಂದೆಯೇ ಜೀವಾವಧಿ ಶಿಕ್ಷೆ ಆಗಿದ್ದು ಜೈಲಿನಲ್ಲಿದ್ದಾರೆ. ಶ್ರೀಕುಮಾರ್ ಅವರನ್ನು ಗಾಂಧಿನಗರದಲ್ಲಿ ಬಂಧಿಸಲಾಗಿದೆ.


ಜೀವ ಭಯ

‘ಗುಜರಾತ್ ಪೊಲೀಸರು ನನ್ನ ಮನೆಗೆ ನುಗ್ಗಿದ್ದಾರೆ. ಎಫ್‌ಐಆರ್‌ನ ಪ್ರತಿ ಅಥವಾ ವಾರಂಟ್‌ ಅನ್ನು ತೋರಿಸಿಲ್ಲ. ನನ್ನ ಎಡಕೈಯಲ್ಲಿ ದೊಡ್ಡ ತರಚಿದ ಗಾಯವಾಗಿದೆ. ನನ್ನ ಜೀವಕ್ಕೆ ಅಪಾಯ ಇದೆ ಎಂದು ಭಯವಾಗುತ್ತಿದೆ’ ಎಂದು ತೀಸ್ತಾ ನೀಡಿದ ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT