ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಿಜೆಪಿ ನಂಟಿನ ಆರೋಪ': ಅಸಮಾಧಾನದ ಟ್ವೀಟ್ ಹಿಂಪಡೆದ ಕಪಿಲ್ ಸಿಬಲ್

ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ ಎಂದ ಕಪಿಲ್ ಸಿಬಲ್
Last Updated 24 ಆಗಸ್ಟ್ 2020, 10:27 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ತಮ್ಮ ಟ್ವೀಟ್ ಅನ್ನು ಹಿಂತೆಗೆದುಕೊಂಡಿದ್ದಾರೆ. ಟ್ವೀಟ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ತಮ್ಮ ವಿರುದ್ಧ ಆರೋಪ ಮಾಡಿದ್ದ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಪಕ್ಷದ ನಾಯಕತ್ವದಲ್ಲಿ ಸುಧಾರಣೆಯಾಗಬೇಕು ಎಂದು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದವರ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಈ ಪತ್ರವನ್ನು ಬರೆದ ಜನರ ಗುಂಪು ಭಾರತೀಯ ಜನತಾ ಪಕ್ಷದ (ಬಿಜೆಪಿ) ಆದೇಶದ ಮೇರೆಗೆ ಹೀಗೆ ಮಾಡಿದ್ದಾರೆ ಎಂದು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ ಎಂದು ವರದಿಯಾಗಿತ್ತು. ಸಿಬಲ್ ಕೂಡ ಪತ್ರ ಬರೆದವರ ಗುಂಪಿನಲ್ಲೊಬ್ಬರಾಗಿದ್ದರು.

ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಿಬಲ್, ‘ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಮಣಿಪುರದಲ್ಲಿ ಬಿಜೆಪಿಯನ್ನು ಮಣಿಸಿ ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಕಳೆದ 30 ವರ್ಷಗಳಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಪರ ಹೇಳಿಕೆ ನೀಡಿಲ್ಲ. ಆದಾಗ್ಯೂ, ನಾವು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ!’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಕೂಡಲೇ ಈ ಬಗ್ಗೆ ಸಮರ್ಥನೆ ನೀಡಿದ ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿ, ರಾಹುಲ್ ಗಾಂಧಿ ಅವರು ಈ ರೀತಿಯ ಒಂದು ಮಾತನ್ನೂ ಹೇಳಿಲ್ಲ ಅಥವಾ ಅದನ್ನು ಸೂಚಿಸಿಲ್ಲ. ಸುಳ್ಳು ಮಾಧ್ಯಮ ವರದಿ ಅಥವಾ ತಪ್ಪು ಮಾಹಿತಿ ಹರಡುವ ಮೂಲಕ ದಯವಿಟ್ಟು ದಾರಿ ತಪ್ಪಿಸಬೇಡಿ. ಮೋದಿ ಆಡಳಿತದ ವಿರುದ್ಧ ಹೋರಾಡುವಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ' ಎಂದು ಹೇಳಿದ್ದರು.

ಇದಾದ ನಂತರ, ಕೂಡಲೇ ಮತ್ತೊಂದು ಟ್ವೀಟ್ ಮಾಡಿದ ಸಿಬಲ್, ತಮ್ಮ ಟ್ವೀಟ್ ಅನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. 'ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದ್ದ ಯಾವುದನ್ನು ಅವರು ಹೇಳಿಲ್ಲ ಎನ್ನುವುದನ್ನೇ ನನಗೆ ವೈಯಕ್ತಿಕವಾಗಿ ಅವರು ತಿಳಿಸಿದ್ದಾರೆ. ಆದ್ದರಿಂದ ನಾನು ನನ್ನ ಟ್ವೀಟ್ ಅನ್ನು ಹಿಂತೆಗೆದುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

ಸಿಬಲ್ ಹೊರತುಪಡಿಸಿ, ಇತರ 21 ನಾಯಕರು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ಕೂಲಂಕಷವಾಗಿ ಪರಿಶೀಲಿಸುವ ಬಗ್ಗೆ ಪತ್ರ ಬರೆದ ಗುಂಪಿನ ಭಾಗವಾಗಿದ್ದರು. ಅವರಲ್ಲೊಬ್ಬರಾದ ಗುಲಾಮ್ ನಬಿ ಆಜಾದ್, ರಾಹುಲ್ ಗಾಂಧಿಯವರು ಹೇಳಿದ್ದ ಬಿಜೆಪಿ ನಂಟಿನ ಬಗ್ಗೆ ವರದಿಗಳು ಬಂದ ನಂತರವೇ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್, ಬಿಜೆಪಿ ಜೊತೆ ನಂಟು ಹೊಂದಿದ್ದೇವೆ ಎಂಬ ರಾಹುಲ್ ಗಾಂಧಿಯವರ ಆರೋಪ ಸಾಬೀತಾದರೆ ಕಾಂಗ್ರೆಸ್​ಗೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ. ನಮ್ಮ ಮೇಲೆ ಈ ರೀತಿ ನೇರವಾಗಿ ಆರೋಪ ಮಾಡಿರುವುದು ಬೇಸರ ಉಂಟು ಮಾಡಿದೆ. ಒಂದು ವೇಳೆ ನಾವು ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸಾಬೀತಾದರೆ ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ತಿಳಿಸಿದ್ದರು.

ಇದಾದ ಬಳಿಕ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿಯವರು ಈ ರೀತಿಯಾಗಿ ಸಿಡಬ್ಲ್ಯುಸಿ ಸಭೆಯಲ್ಲಾಗಲಿ ಅಥವಾ ಹೊರಗಾಗಲಿ ಹೇಳಿಲ್ಲ ಎಂದು ತಿಳಿಸಿದ್ದಾರೆ.

ಈ ನಾಯಕರು ‘ಪೂರ್ಣ ಪ್ರಮಾಣದ’ ಸಕ್ರಿಯ ನಾಯಕತ್ವ, ಪಕ್ಷದೊಳಗೆ ವ್ಯಾಪಕ ಸುಧಾರಣೆಗಳು ಮತ್ತು ಪಕ್ಷದ ಸ್ಥಿತಿ ಮತ್ತು ನಿರ್ದೇಶನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಪತ್ರದ ನಂತರ ಇಂದು ಸಿಡಬ್ಲ್ಯುಸಿಯ ನಿರ್ಣಾಯಕ ಸಭೆ ನಡೆಯುತ್ತಿದೆ. ವರ್ಚುಯಲ್ ಮೀಟಿಂಗ್ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಿಯಾಂಕ ಗಾಂಧಿ ವಾದ್ರಾ, ಅಮರೀಂದರ್ ಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ಪಿ.ಎಲ್. ಪುನಿಯಾ, ಕೆ.ಸಿ. ವೇಣುಗೋಪಾಲ್ ಮತ್ತು ಎ.ಕೆ. ಆ್ಯಂಟನಿ ಸೇರಿ ಹಲವರು ಭಾಗವಹಿಸಿದ್ದರು.

ಕಾಂಗ್ರೆಸ್‌ನ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ಇಂಗಿತವನ್ನುಸೋನಿಯಾ ಗಾಂಧಿ ವ್ಯಕ್ತಪಡಿಸಿದ್ದರು. ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕರೆ ನೀಡಿದ್ದರುಎಂದು ಮೂಲಗಳು ತಿಳಿಸಿವೆ.

ಆದರೆ, ಮನಮೋಹನ್ ಸಿಂಗ್ ಮತ್ತು ಎ.ಕೆ. ಆ್ಯಂಟನಿ ಸೇರಿದಂತೆ ಹಲವರು ಸೋನಿಯಾ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT