ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ನೀಡಿ, 'ಬಂಗಾರದ ಬಂಗಾಳ' ನಿರ್ಮಿಸುತ್ತೇವೆ: ಪಶ್ಚಿಮ ಬಂಗಾಳದಲ್ಲಿ ಅಮಿತ್‌ ಶಾ

Last Updated 6 ನವೆಂಬರ್ 2020, 16:16 IST
ಅಕ್ಷರ ಗಾತ್ರ

ಕೋಲ್ಕತ್ತ: ಮಮತಾ ಬ್ಯಾನರ್ಜಿ ಅವರ ಸರ್ಕಾರ ಬೀಳಲಿದೆ ಮತ್ತು ಈಗ ಬಿಜೆಪಿಗೆ ನಗುವಿನ ಸಮಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ.

ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಅಮಿತ್‌ ಶಾ ರಾಜ್ಯದಲ್ಲಿ ಎರಡು ದಿನಗಳ ಭೇಟಿಯಲ್ಲಿದ್ದರು. ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ರಾಜಕೀಯ ಕಾರ್ಯಕರ್ತರ ಸಾವು ಹಾಗೂ ಭ್ರಷ್ಟಾಚಾರ, ಹಗರಣಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಶಾಮೀಲಾಗಿರುವ ಬಗ್ಗೆ ಟೀಕಿಸಿದ್ದಾರೆ. 'ಅಭಿವೃದ್ಧಿಗಾಗಿ ಮೋದಿ ಸರ್ಕಾರಕ್ಕೆ ಒಂದು ಅವಕಾಶ ನೀಡಿ' ಎಂದು ಬಂಗಾಳದ ಜನರಿಗೆ ಆಗ್ರಹಿಸಿದರು.

'ಇದೀಗ ನಮ್ಮ ನಗು ಅರಳುವ ಸಮಯ, ತೃಣಮೂಲ ಕಾಂಗ್ರೆಸ್‌ ಆಡಳಿತವು ಕೊನೆಯಾಗಲಿದೆ ಹಾಗೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸುಮಾರು 200 ಸ್ಥಾನಗಳ ಬಲದೊಂದಿಗೆ ನಾವು ಬಂಗಾಳದಲ್ಲಿ ಸರ್ಕಾರ ರಚನೆ ಮಾಡುತ್ತೇವೆ' ಎಂದು ಅಮಿತ್‌ ಶಾ ಭರವಸೆ ವ್ಯಕ್ತಪಡಿಸಿದ್ದಾರೆ.

'ನೀವು (ಬಂಗಾಳದ ಜನರು) ಕಾಂಗ್ರೆಸ್‌, ಎಡ ಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದೀರಿ. ನಮಗೂ ಒಂದು ಅವಕಾಶ ನೀಡಿ. ಐದು ವರ್ಷಗಳಲ್ಲಿ ಬಂಗಾರದ ಬಂಗಾಳ ನಿರ್ಮಿಸುವ ಭರವಸೆ ನೀಡುತ್ತೇವೆ. ಬಂಗಾಳದಲ್ಲಿ ಒಳನುಸುಳುವಿಕೆ ತಡೆಯುತ್ತೇವೆ ಹಾಗೂ ಗಡಿ ಭದ್ರ ಪಡಿಸುತ್ತೇವೆ' ಎಂದಿದ್ದಾರೆ.

ಕೇಂದ್ರ ಸರ್ಕಾರದ ಹಲವು ಜನಪರ ಕಾರ್ಯಕ್ರಮಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಆರೋಪಿಸಿದ ಅಮಿತ್‌ ಶಾ, '2010ರಲ್ಲಿ ಬಂಗಾಳವು ತಾಯಿ, ತಾಯ್ನಾಡು ಮತ್ತು ಮನುಷ್ಯರ (2009ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರದ ಘೋಷ ವಾಕ್ಯ) ಮೂಲಕ ಪರಿವರ್ತನೆ ಕಂಡಿತು. ಆಗ ಬಂಗಾಳದಲ್ಲಿ ಭರವಸೆಗಳು ಹಾಗೂ ಅಪೇಕ್ಷೆಗಳಿದ್ದವು. ಆದರೆ ಈಗ ಜನರಲ್ಲಿ ಆಕ್ರೋಶವಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT