ಶನಿವಾರ, ಅಕ್ಟೋಬರ್ 24, 2020
28 °C
ಮಹಿಳಾ ಸುರಕ್ಷತೆಗೆ ಮಾರ್ಗಸೂಚಿ

ಅತ್ಯಾಚಾರ ಪ್ರಕರಣ: ತನಿಖೆಗೆ 2 ತಿಂಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Protest against rape

ನವದೆಹಲಿ: ಅ‌ತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚನೆ ನೀಡಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳ ತನಿಖೆ ಬಗ್ಗೆ ಉಂಟಾಗಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವುದು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾರ್ಗಸೂಚಿಯಲ್ಲಿ ಒತ್ತು ನೀಡಲಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಅವರ ವಿರುದ್ಧದ ಅಪರಾಧ ಪ್ರಕರಣಗಳನ್ನು ನಿಭಾಯಿಸುವ ಕುರಿತು ಇರುವ ಕಾನೂನುಗಳು ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ತನಿಖಾಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದೆ.

‘ಸಂತ್ರಸ್ತೆಯು ಸಾಯುವ ಮುನ್ನ ನೀಡುವ ಹೇಳಿಕೆಯನ್ನು ‘ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ದಾಖಲಿಸಲಾಗಿಲ್ಲ’ ಎಂಬ ಕಾರಣಕ್ಕೆ ತನಿಖಾ ಸಂಸ್ಥೆಗಳು ಉಪೇಕ್ಷಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯನ್ನೂ ಕೇಂದ್ರ ನೆನಪಿಸಿದೆ.

‘ನಿಯಮಗಳನ್ನು ಪಾಲಿಸಲು ಪೊಲೀಸರು ವಿಫಲವಾದರೆ, ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ. ಒಂದು ವೇಳೆ ಪೊಲೀಸರ ವೈಫಲ್ಯ ಮೇಲ್ನೋಟಕ್ಕೆ ಕಂಡುಬಂದರೆ, ಆ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸಬೇಕು’ ಎಂದು ಮಾರ್ಗಸೂಚಿ ಉಲ್ಲೇಖಿಸಿದೆ.

ಲೈಂಗಿಕ ಅಪರಾಧಗಳ ಮೇಲ್ವಿಚಾರಣೆಗಾಗಿ ಇರುವ ‘ಇನ್ವೆಸ್ಟಿಗೇಷನ್ ಟ್ರ್ಯಾಕಿಂಗ್ ಸಿಸ್ಟಮ್’ ಎಂಬ ಆನ್‌ಲೈನ್ ಪೋರ್ಟಲ್‌ ಬಗ್ಗೆ ಗೃಹ ಸಚಿವಾಲಯ ಉಲ್ಲೇಖಿಸಿದೆ. ಮತ್ತೆ ಮತ್ತೆ ಲೈಂಗಿಕ ಅಪರಾಧ ಎಸಗುವವರನ್ನು ಪತ್ತೆಹಚ್ಚಲು ರಾಷ್ಟ್ರೀಯ ಡೇಟಾಬೇಸ್ ಬಳಸಲು ಸಲಹೆ ನೀಡಿದೆ. 

ವರದಿಯಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಿವಿಜ್ಞಾನದ ಸಾಕ್ಷ್ಯಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ನಿರ್ವಹಣೆಗೆ ಮೀಸಲಿರಿಸಿರುವ ಕಿಟ್‌ಗಳ ಬಳಕೆಗೆ ಒತ್ತು ನೀಡಬೇಕು ಎಂದು ಹೇಳಿದೆ.

ಎಫ್‌ಐಆರ್ ಕಡ್ಡಾಯ

ಶಿಕ್ಷಾರ್ಹ ಅಪರಾಧಗಳು ಜರುಗಿದ್ದಲ್ಲಿ ಸಿಆರ್‌ಪಿಸಿ ಪ್ರಕಾರ ಎಫ್ಐಆರ್ ದಾಖಲಿಸುವುದು ಕಡ್ಡಾಯ. ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳೂ ಸೇರಿದಂತೆ ಪೊಲೀಸ್ ಠಾಣೆಯ ವ್ಯಾಪ್ತಿ ಹೊರಗಡೆ ಘಟನೆ ನಡೆದಿದ್ದರೂ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು