ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾಧಿಕಾರಿಗಳ ವಿರುದ್ಧವೂ ಪೆಗಾಸಸ್‌ ಗೂಢಚರ್ಯೆ- ಪಟ್ಟಿಯಲ್ಲಿ ಇಬ್ಬರು ಕರ್ನಲ್‌ಗಳು

‘ರಾ’ ಅಧಿಕಾರಿ, ಕೇಜ್ರಿವಾಲ್‌ ಆಪ್ತ ಸಹಾಯಕ
Last Updated 26 ಜುಲೈ 2021, 20:09 IST
ಅಕ್ಷರ ಗಾತ್ರ

ನವದೆಹಲಿ: ಗಡಿ ಭದ್ರತಾ ಪಡೆಯ ಮುಖ್ಯಸ್ಥರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ, ಗುಪ್ತಚರ ಸಂಸ್ಥೆ ‘ರಾ’ ಅಧಿಕಾರಿ ಮತ್ತು ಸೇನೆಯ ಇಬ್ಬರು ಕರ್ನಲ್‌ಗಳ ಫೋನ್‌ ಸಂಖ್ಯೆಯು ಪೆಗಾಸಸ್ ಗೂಢಚರ್ಯೆ ಗುರಿಯ ಪಟ್ಟಿಯಲ್ಲಿವೆ. 2017-19ರ ಅವಧಿಯಲ್ಲಿ ಈ ಫೋನ್‌ ಸಂಖ್ಯೆಗಳನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ‘ದಿ ವೈರ್’ ಪೋರ್ಟಲ್‌ ವರದಿ ಮಾಡಿದೆ.

ಈ ಎಲ್ಲಾ ಅಧಿಕಾರಿಗಳಲ್ಲಿ ಹಲವರು ಒಂದಿಲ್ಲೊಂದು ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವಿರುದ್ಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದರು ಮತ್ತು ಪ್ರಕರಣಗಳಲ್ಲಿ ಸಾಕ್ಷಿಗಳಾಗಿದ್ದರು. ಪ್ರಕರಣ ದಾಖಲಾದ ನಂತರವೇ ಅವರ ಫೋನ್‌ ಸಂಖ್ಯೆಗಳನ್ನು ಪೆಗಾಸಸ್ ಗೂಢಚರ್ಯೆ ಪಟ್ಟಿಗೆ ಸೇರಿಸಲಾಗಿದೆ ಎಂದು ದಿ ವೈರ್ ವಿಶ್ಲೇಷಿಸಿದೆ.

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಹಾ ನಿರ್ದೇಶಕ ಕೆ.ಕೆ.ಶರ್ಮಾ, ಬಿಎಸ್‌ಎಫ್ ಪೊಲೀಸ್ ಮಹಾ ನಿರ್ದೇಶಕ ಜಗದೀಶ್ ಮಿಥಾನಿ, ಜಾರಿ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ರಾಜೇಶ್ವರ ಸಿಂಗ್, ಕೇಜ್ರಿವಾಲ್ ಅವರ ಆಪ್ತ ಸಹಾಯಕ ಮತ್ತು ಐಎಎಸ್‌ ಅಧಿಕಾರಿ ವಿ.ಕೆ.ಜೈನ್, ನಿವೃತ್ತ ರಾ ಅಧಿಕಾರಿ ಜಿತೇಂದ್ರ ಓಜಾ, ಸೇನಾ ಕರ್ನಲ್‌ಗಳಾದ ಮುಕುಲ್ ದೇವ್ ಮತ್ತು ಅಮಿತ್ ಕುಮಾರ್ ಅವರ ಫೋನ್‌ ಸಂಖ್ಯೆಗಳು ಈ ಪಟ್ಟಿಯಲ್ಲಿವೆ. ಪ್ರಧಾನಿ ಕಾರ್ಯಾಲಯದ ಒಬ್ಬ ಅಧಿಕಾರಿ ಮತ್ತು ನೀತಿ ಆಯೋಗದ ಒಬ್ಬ ಅಧಿಕಾರಿಯ ಫೋನ್‌ ಸಂಖ್ಯೆ ಈ ಪಟ್ಟಿಯಲ್ಲಿವೆ.

2018ರ ಫೆಬ್ರುವರಿಯಲ್ಲಿ ಬಿಎಸ್‌ಎಫ್‌ನ ಮಹಾ ನಿರ್ದೇಶಕರಾಗಿದ್ದಾಗ ಕೆ.ಕೆ.ಶರ್ಮಾ ಅವರು ಆರ್‌ಎಸ್‌ಎಸ್‌ನ ಘಟಕವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಎಸ್‌ಎಫ್ ಸಮವಸ್ತ್ರದಲ್ಲೇ ಭಾಗಿಯಾಗಿದ್ದರು. 2018ರಲ್ಲಿ ನಿವೃತ್ತಿಯಾದ ನಂತರ ಅವರನ್ನು ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಜಾರ್ಖಂಡ್‌ನ ಪೊಲೀಸ್ ವೀಕ್ಷಕರಾಗಿ ನೇಮಕ ಮಾಡಿತ್ತು. ಬಿಜೆಪಿ ಜತೆಗೆ ಸಖ್ಯ ಹೊಂದಿದ್ದಾರೆ ಎಂಬ ಆರೋಪ ಬಂದ ನಂತರ ಅವರನ್ನು ವೀಕ್ಷಕರ ಹುದ್ದೆಯಿಂದ ತೆಗೆಯಲಾಗಿತ್ತು. 2018-19ರ ಅವಧಿಯಲ್ಲಿ ಅವರ ಫೋನ್‌ ಸಂಖ್ಯೆಯನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಅವರು ಪಿ.ಚಿದಂಬರಂ ಅವರು ಆರೋಪಿಯಾಗಿದ್ದ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಅವಧಿಯಲ್ಲಿ (2017-19) ಅವರ ಪತ್ನಿ, ಇಬ್ಬರು ಸೋದರಿಯರು ಮತ್ತು ಅವರ ಹತ್ತಿರದ ವಕೀಲರೊಬ್ಬರ ಫೋನ್‌ ಸಂಖ್ಯೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಅದೇ ಅವಧಿಯಲ್ಲಿ ಹಣಕಾಸು ಸಚಿವಾಲಯದ ಅಧಿಕಾರಿ ಹಸ್ಮುಖ್ ಅಧಿಯಾ ಅವರು ತಮ್ಮ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಕೇಜ್ರಿವಾಲ್ ಅವರ ಗೃಹಕಚೇರಿಯಲ್ಲಿ ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ವಿ.ಕೆ.ಜೈನ್ ಸಾಕ್ಷಿಯಾಗಿದ್ದರು. ಪ್ರಕರಣ ದಾಖಲಾದ ನಂತರ ಅವರ ಫೋನ್‌ ಸಂಖ್ಯೆಯನ್ನು ಈ ಪಟ್ಟಿಗೆ ಸೇರಿಸಲಾಗಿತ್ತು.

ಸೇನೆಯ ಕರ್ನಲ್ ಮುಕುಲ್ ದೇವ್ ಅವರು ಒಳನಾಡಿನಲ್ಲಿ ಸೇವೆಯಲ್ಲಿರುವ ಸೇನಾಧಿಕಾರಿಗಳಿಗೆ ಉಚಿತ ಪಡಿತರ ರದ್ದುಪಡಿಸಿದ ಕ್ರಮದ ವಿರುದ್ಧ ರಕ್ಷಣಾ ಕಾರ್ಯದರ್ಶಿಗೆ 2017ರಲ್ಲಿ ನೋಟಿಸ್ ನೀಡಿದ್ದರು. ಆನಂತರ ಅವರ ಫೋನ್‌ ಸಂಖ್ಯೆಯನ್ನು ಈ ಪಟ್ಟಿಗೆ ಸೇರಿಸಲಾಯಿತು.

ಸಶಸ್ತ್ರ ಪಡೆಗಳ (ವಿಶೇಷ ಪಡೆಗಳ) ಕಾಯ್ದೆಯನ್ನು ಸಡಿಲಗೊಳಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಲ್ ಅಮಿತ್ ಕುಮಾರ್ ಅವರು ಪ್ರಕರಣ ದಾಖಲಿಸಿದ್ದರು. ಆನಂತರ ಅವರ ಫೋನ್‌ ಸಂಖ್ಯೆಯನ್ನು ಈ ಪಟ್ಟಿಗೆ ಸೇರಿಸಲಾಗಿತ್ತು.

ಬಿಎಸ್‌ಎಫ್ ಐಜಿ ಜಗದೀಶ್ ಮಿಥಾನಿ ಅವರು ಗೃಹ ಸಚಿವಾಲಯದ ‘ಸ್ಮಾರ್ಟ್‌ ಫೆನ್ಸಿಂಗ್’ ಯೋಜನೆಯ ಪ್ರಮುಖ ಉಸ್ತುವಾರಿಗಳಲ್ಲಿ ಒಬ್ಬರಾಗಿದ್ದರು.

ಒತ್ತಡ ಹೇರುವ ತಂತ್ರ

‘1952ರ ತನಿಖಾ ಆಯೋಗ ಕಾಯ್ದೆಯ ಸೆಕ್ಷನ್ 3ರ ಅನ್ವಯ ತನಿಖಾ ಆಯೋಗವನ್ನು ರಚಿಸಲಾಗಿದೆ. ರಾಜ್ಯದಲ್ಲಿ ನಡೆದಿರುವ ಕಾನೂನುಬಾಹಿರ ಕಣ್ಗಾವಲು, ಹ್ಯಾಕಿಂಗ್, ಫೋನ್ ಕದ್ದಾಲಿಸುವಿಕೆ ಕುರಿತು ಈ ಆಯೋಗವು ತನಿಖೆ ನಡೆಸಲಿದೆ’ ಎಂದು ಮಮತಾ ಬ್ಯಾನರ್ಜಿ ಅವರು ಮಾಹಿತಿ ನೀಡಿದ್ದಾರೆ.

ಇಂತಹ ಪ್ರಕರಣಗಳ ತನಿಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತನಿಖಾ ಆಯೋಗವನ್ನು ರಚಿಸಲು ಈ ಕಾಯ್ದೆಯ ಸೆಕ್ಷನ್ 3 ಅವಕಾಶ ಮಾಡಿಕೊಡುತ್ತದೆ. ಆದರೆ ಕೇಂದ್ರ ಸರ್ಕಾರವು ಈಗಾಗಲೇ ತನಿಖಾ ಆಯೋಗ ರಚಿಸಿದ್ದರೆ, ಆ ಆಯೋಗವು ರದ್ದಾಗುವವರೆಗೂ ರಾಜ್ಯ ಸರ್ಕಾರವು ತನಿಖಾ ಆಯೋಗ ರಚಿಸಲು ಅವಕಾಶವಿಲ್ಲ ಎಂದು ಸೆಕ್ಷನ್ 3 ಹೇಳುತ್ತದೆ.

ಅದರಂತೆಯೇ ರಾಜ್ಯ ಸರ್ಕಾರವು ಮೊದಲು ಆಯೋಗ ರಚಿಸಿದ್ದರೆ, ಆ ಆಯೋಗವು ರದ್ದಾಗುವವರೆಗೂ ಕೇಂದ್ರ ಸರ್ಕಾರವು ತನಿಖಾ ಆಯೋಗ ರಚಿಸಲು ಅವಕಾಶವಿಲ್ಲ. ಆದರೆ, ಪ್ರಕರಣದ ತನಿಖೆಯು ಎರಡು ಅಥವಾ ಅದಕ್ಕಿಂತಲೂ ಹೆಚ್ಚು ರಾಜ್ಯಗಳಿಗೆ ವಿಸ್ತರಿಸಿದ್ದರೆ, ಕೇಂದ್ರ ಸರ್ಕಾರವು ತನಿಖಾ ಆಯೋಗವನ್ನು ರಚಿಸಬಹುದು ಎಂದು ಸೆಕ್ಷನ್ 3 ಹೇಳುತ್ತದೆ.

ತಾವು ತನಿಖಾ ಆಯೋಗ ರಚಿಸುವ ಮೂಲಕ ಕೇಂದ್ರ ಸರ್ಕಾರವು ತನಿಖಾ ಆಯೋಗ ರಚಿಸುವಂತೆ ಒತ್ತಡ ಸೃಷ್ಟಿಸಲು ಮಮತಾ ಬ್ಯಾನರ್ಜಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

***

ಪತ್ರಕರ್ತರು, ರಾಜಕೀಯ ಎದುರಾಳಿಗಳು, ಸಂಪುಟ ಸಹೋದ್ಯೋಗಿಗಳು ಕೊನೆಗೆ ಸೇನಾಧಿಕಾರಿಗಳನ್ನೂ ಇವರು ಬಿಟ್ಟಿಲ್ಲ. ಇದು ಅಪರಾಧ. ಪ್ರಧಾನಿ, ಗೃಹ ಸಚಿವರು ಉತ್ತರಿಸಲೇಬೇಕು

- ಡೆರೆಕ್ ಒಬ್ರಿಯಾನ್, ಟಿಎಂಸಿ ಸಂಸದ

***
ತನಿಖೆ ತಕ್ಷಣವೇ ಆರಂಭವಾಗಲಿದೆ. ಕೆಲವೊಮ್ಮೆ ಮಲಗಿರುವವರನ್ನು ಬಡಿದೆಬ್ಬಿಸಬೇಕಾಗುತ್ತದೆ. ನಾವು ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಬೇರೆಯವರು ಎಚ್ಚರಗೊಳ್ಳುತ್ತಾರೆ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***
ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಸಾರ್ವಜನಿಕರ ಹಣವನ್ನು ಗೂಢಚರ್ಯೆಗೆ ದುರ್ಬಳಕೆ ಮಾಡಿಕೊಂಡಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಬೇಕು

- ಶಶಿ ತರೂರ್, ಕಾಂಗ್ರೆಸ್ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT