ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾಗೆ ಖಾಲಿಸ್ತಾನಿ ನಂಟು: ಪುರಾವೆಯೇ ಇಲ್ಲವೆಂದ ನ್ಯಾಯಾಲಯ

Last Updated 23 ಫೆಬ್ರುವರಿ 2021, 23:03 IST
ಅಕ್ಷರ ಗಾತ್ರ

ನವದೆಹಲಿ:ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧಿತರಾಗಿದ್ದ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಖಾಲಿಸ್ತಾನಿ ಪ್ರತ್ಯೇಕತಾವಾದಿ ಸಂಘಟನೆಗಳ ಜತೆಗೆ ನಂಟು ಇದೆ ಎಂಬುದನ್ನು ತೋರಿಸುವ ಯಾವ ಸಾಕ್ಷ್ಯವೂ ಇಲ್ಲ ಎಂದು ದೆಹಲಿಯ ಹೆಚ್ಚುವರಿ ಸೆಶನ್ಸ್‌ ನ್ಯಾಯಾಲಯ ಹೇಳಿದೆ. ಭಾರತದೊಂದಿಗೆ ಶತ್ರುತ್ವ ಸಾಧಿಸಲು ಪ್ರಯತ್ನಿಸುವ
ಗುಂಪುಗಳ ಜತೆಗೆ ದಿಶಾ ಸಂಪರ್ಕದಲ್ಲಿದ್ದರು. ದೇಶದಲ್ಲಿ ಹಿಂಸಾಚಾರ ನಡೆಸುವ ಭಾರಿ ಪಿತೂರಿ ಟೂಲ್‌ಕಿಟ್‌ನ ಹಿಂದೆ ಇದೆ ಎಂದು ಪೊಲೀಸರು ಆರೋಪಿಸಿದ್ದರು.

‘ಆರೋಪಿಯು ಪ್ರತ್ಯೇಕತಾವಾದಿಗಳು ಅಥವಾ ಹಿಂಸಾಚಾರಕ್ಕೆ ಯತ್ನಿಸುವವರಿಗೆ ಬೆಂಬಲ ನೀಡಿದ್ದಾರೆ ಎಂದು ಯಾವುದೇ ಸಾಕ್ಷ್ಯ ಇಲ್ಲದೇ ಹೇಳುವುದು ಊಹೆ ಮತ್ತು ಕಲ್ಪನೆ ಮಾತ್ರವಾಗುತ್ತದೆ. ಕೃಷಿ ಕಾಯ್ದೆಯನ್ನು ವಿರೋಧಿಸುವವರ ಜತೆಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದರು ಎಂಬ ಒಂದೇ ಕಾರಣದಿಂದ ಆರೋಪಿಯ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗದು’ ಎಂದು ನ್ಯಾಯಾಲಯವು ಹೇಳಿದೆ.

ದಿಶಾ ಮತ್ತು ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರದ ನಡುವೆ ಸಂಬಂಧ ಕಲ್ಪಿಸುವ ನೇರ ಸಾಕ್ಷ್ಯ ಇಲ್ಲ ಎಂಬುದನ್ನು ದೆಹಲಿ ಪೊಲೀಸರ ಪರವಾಗಿ ವಾದಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರೇ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.

ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌ ಮತ್ತು ಅದರ ಸ್ಥಾಪಕರಾದ ಮೊ ಧಾಲಿವಾಲ್‌ ಮತ್ತು ಅಂಕಿತಾ ಲಾಲ್‌ ಅವರ ವಿರುದ್ಧ ಯಾವುದೇ ಪ್ರಕರಣ ವಿಚಾರಣೆಗೆ ಬಾಕಿ ಇಲ್ಲ ಎಂಬುದನ್ನು ದೆಹಲಿ ಪೊಲೀಸರು ಒಪ್ಪಿಕೊಂಡಿದ್ದಾರೆ. ಟೂಲ್‌ಕಿಟ್‌ ರಚನೆ ಹಿಂದೆ ಈ ಇಬ್ಬರು ಇದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ದಿಶಾ ಮತ್ತು ಈ ಇಬ್ಬರ ನಡುವೆ ನಂಟು ಇದೆ ಎಂಬುದನ್ನು ತೋರಿಸುವ ಪುರಾವೆಯೂ ಪೊಲೀಸರ ಬಳಿ ಇಲ್ಲ. ಜನವರಿ 26ರಂದು ನಡೆದ ಹಿಂಸಾಚಾರಕ್ಕೆ ದಿಶಾ ಅವರು ಕರೆ, ಕುಮ್ಮಕ್ಕು, ಒತ್ತಾಸೆ ನೀಡಿದ್ದಾರೆ ಎಂಬುದಕ್ಕೂ ಯಾವುದೇ ಆಧಾರ ಇಲ್ಲ. ವಾಟ್ಸ್‌ಆ್ಯಪ್‌ ಗುಂಪು ರಚಿಸಿಕೊಳ್ಳುವುದು, ನಿರುಪದ್ರವಿ ಟೂಲ್‌ಕಿಟ್‌ ಅನ್ನು ತಿದ್ದಿ ಕೊಡುವುದು ಅಪರಾಧ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌ ಮತ್ತು ಟೂಲ್‌ಕಿಟ್‌ ಜತೆಗೆ ನಂಟು ಇದೆ ಎಂಬುದೇ ಆಕ್ಷೇಪಾರ್ಹ ಅಲ್ಲ. ಹಾಗಿರುವಾಗ, ಸಾಕ್ಷ್ಯನಾಶಕ್ಕಾಗಿ ವಾಟ್ಸ್‌ಆ್ಯಪ್‌ ಗುಂಪನ್ನು ಅಳಿಸಿ ಹಾಕಿದ್ದಾರೆ ಎಂಬುದು ಅರ್ಥಹೀನ. ಪ್ರಶ್ನಾಹ ಹಿನ್ನೆಲೆಯ ವ್ಯಕ್ತಿಗಳ ಜತೆಗೆ ಸಂಬಂಧ ಹೊಂದಿದ್ದಾರೆ ಎಂಬುದು ಶಿಕ್ಷಾರ್ಹ ಅಪರಾಧ ಅಲ್ಲ. ಅಪರಾಧ ಎಸಗಿದ್ದಾರೆಯೇ ಎಂಬುದನ್ನು ನಂಟಿನ ಉದ್ದೇಶದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಎಂದು ರಾಣಾ ಅವರು ವಿವರಿಸಿದ್ದಾರೆ.

ಪ್ರಶ್ನಾರ್ಹ ಹಿನ್ನೆಲೆಯ ವ್ಯಕ್ತಿಗಳು ಹಲವಾರು ಜನರ ಜತೆಗೆ ಸಂಪರ್ಕದಲ್ಲಿರುತ್ತಾರೆ. ಈ ಸಂಪರ್ಕವು ಕಾನೂನಿನ ವ್ಯಾಪ್ತಿಯೊಳಗೇ ಇದ್ದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದಿದ್ದಾರೆ.

ನಿಷೇಧಿತ ಸಂಘಟನೆಯಾದ ‘ಸಿಖ್ಸ್‌ ಫಾರ್‌ ಜಸ್ಟಿಸ್‌’, ಜನವರಿ 26ರ ಹಿಂಸಾಚಾರ ಮತ್ತು ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌ ಜತೆಗೆ ದಿಶಾ ನಂಟು ಹೊಂದಿದ್ದಾರೆ ಎಂಬುದನ್ನು ಹೇಳುವುದಕ್ಕೆ ಅಣುವಿನಷ್ಟೂ ಪುರಾವೆ ಇಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಬಿಡುಗಡೆಗೆ ಸ್ವಾಗತ

ಬೆಂಗಳೂರು: ‘ಇದೊಂದು ಚಾರಿತ್ರಿಕ ಮತ್ತು ಸಾಂವಿಧಾನಿಕ ಕ್ಷಣ. ಹೆಚ್ಚುವರಿ ಸೆಶನ್ಸ್‌ ನ್ಯಾಯಾಲಯವು ಬಳಸಿದ ಭಾಷೆಯು ಇದಕ್ಕೆ ಕಾರಣ. ಉನ್ನತ ನ್ಯಾಯಾಲಯಗಳಿಂದ ನಿರೀಕ್ಷಿಸಲಾಗುವ ರೀತಿಯ ಆದೇಶವನ್ನು ನೀಡಲಾಗಿದೆ. ನ್ಯಾಯಾಲಯದ ಪಾತ್ರ ಏನು ಎಂಬುದನ್ನು ಈ ಆದೇಶವು ನಮಗೆ ನೆನಪಿಸಿದೆ’ ಎಂದು ಬೆಂಗಳೂರಿನ ಪರಿಸರ ಕಾರ್ಯಕರ್ತ ಲಿಯೊ ಸಾಲ್ದಾನಾ ಅವರು ಹೇಳಿದ್ದಾರೆ.

ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ ಅವರಿಗೆ ಜಾಮೀನು ನೀಡಿರುವುದಕ್ಕೆ ಬೆಂಗಳೂರಿನ ಪರಿಸರ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

‘ನ್ಯಾಯಾಂಗವು ಹೀಗೆ ಕೆಲಸ ಮಾಡಬೇಕು’ ಎಂದು ಸಾಲ್ದಾನಾ ಅವರು ಹೇಳಿದ್ದಾರೆ.

‘ಇಡೀ ಟೂಲ್‌ಕಿಟ್‌ ಪ್ರಕರಣವು ದ್ವೇಷ ಸಾಧನೆಯ ಅಸ್ತ್ರವಾಗಿ ಹೇಗೆ ಬಳಕೆಯಾಗಿದೆ ಎಂಬುದನ್ನು ನ್ಯಾಯಾಧೀಶರು ವಿವರಿಸಿದ್ದಾರೆ’ ಎಂದು ವಕೀಲ ಕ್ಲಿಫ್ಟನ್‌ ರೊಜಾರಿಯೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT