ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾದಲ್ಲಿ ಬಂಧಿತನಾದ ಡ್ರಗ್‌ ಪೆಡ್ಲರ್‌ ಎಫ್.ಅಹ್ಮದ್‌ಗೆ ಸ್ಯಾಂಡಲ್‌ವುಡ್‌ ನಂಟು

Last Updated 2 ಸೆಪ್ಟೆಂಬರ್ 2020, 10:57 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಡ್ರಗ್‌ ಮಾಫಿಯಾದ ನಡುವೆ ಇದೆ ಎನ್ನಲಾದ ನಂಟಿನ ವಿಚಾರವೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಸ್ಯಾಂಡಲ್‌ವುಡ್‌ ಕಲಾವಿದರು ಮತ್ತು ಬೆಂಗಳೂರಿನ ನಿವಾಸಿಗಳಿಗೆ ಗಾಂಜಾ ಹಾಗೂ ಇತರ ನಿಷೇಧಿತ ಡ್ರಗ್‌ಗಳನ್ನು ಪೂರೈಸಿದ ಆರೋಪದ ಮೇಲೆ ಗೋವಾದಲ್ಲಿ ಡ್ರಗ್‌ ಪೆಡ್ಲರ್‌ ಒಬ್ಬನನ್ನು ಮಾದಕವಸ್ತುಗಳ ನಿಯಂತ್ರಣ ಘಟಕ (ಎನ್‌ಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಸೆರೆಯಾಗಿರುವ ಡ್ರಗ್‌ ಪೆಡ್ಲರ್‌ನನ್ನು ಗೋವಾ ಮೂಲದ ಎಫ್‌.ಅಹ್ಮದ್‌(30) ಎಂದು ಗುರುತಿಸಲಾಗಿದೆ.

ಬಂಧಿತ ಡ್ರಗ್‌ ಪೆಡ್ಲರ್‌ ಗೋವಾದ ಪ್ರಸಿದ್ಧ ರೆಸಾರ್ಟ್‌ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಚಿತ್ರೋದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

'ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಕೆಲ ವ್ಯಕ್ತಿಗಳು ಡ್ರಗ್‌ ಮಾಫಿಯಾ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. ಅದರ ಭಾಗವಾಗಿ ಅಹ್ಮದ್‌ನನ್ನು ಸೆರೆಹಿಡಿಯಲಾಗಿದೆ' ಎಂದು ಎನ್‌ಸಿಬಿ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ ಮೇಲೆ ಕಳೆದ ವಾರ ದಾಳಿ ಮಾಡಿ ಡ್ರಗ್ಸ್ ದಂಧೆ ಭೇದಿಸಿದ್ದರು.

ದಂಧೆಯ ಕಿಂಗ್‌ಪಿನ್ ಎನ್ನಲಾದ ಡಿ. ಅನಿಕಾ, ಹಲವು ನಟ–ನಟಿಯರು ಹಾಗೂ ಸಂಗೀತ ನಿರ್ದೇಶಕರ ಹೆಸರುಗಳನ್ನು ಹೇಳಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿತ್ತು. ಆಕೆ ಸಹಚರರಾದ ಮೊಹಮ್ಮದ್ ಅನೂಪ್ ಹಾಗೂ ರಾಜೇಶ್ ರವೀಂದ್ರನ್ ಸಹ ಗ್ರಾಹಕರ ಪಟ್ಟಿಯನ್ನೇ ಎನ್‌ಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದುಬಂದಿತ್ತು.

ಈ ಹಿನ್ನೆಲೆಯಲ್ಲಿ ಪತ್ರಕರ್ತ ಇಂದ್ರಜಿತ್‌ ಲಂಕೇಶ್‌ ಸಿಸಿಬಿ ಕಚೇರಿಗೆ ತೆರಳಿ ಡ್ರಗ್‌ ದಂಧೆಯಲ್ಲಿ ಭಾಗಿಯಾಗಿರುವ ಸ್ಯಾಂಡಲ್‌ವುಡ್‌ನ 15 ಜನರ ಹೆಸರುಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT