ಶನಿವಾರ, ಆಗಸ್ಟ್ 13, 2022
26 °C

ಎಐಎಡಿಎಂಕೆ: ಇಪಿಎಸ್ ಬಣದ ಮೇಲುಗೈ?

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಎಐಎಡಿಎಂಕೆ ಪಕ್ಷದಲ್ಲಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್) ಮತ್ತು ಒ.ಪನ್ನೀರ್‌ಸೆಲ್ವಂ (ಒಪಿಎಸ್‌) ನೇತೃತ್ವದಲ್ಲಿ ಇದ್ದ ದ್ವಿ ನಾಯಕತ್ವ ವ್ಯವಸ್ಥೆ ರದ್ದಾಗಿದೆ ಎಂದು ಪಕ್ಷದ ಮೇಲೆ ಪ್ರಾಬಲ್ಯ ಹೊಂದಿರುವ ಇಪಿಎಸ್‌ ಬಣ ಶುಕ್ರವಾರ ಪ್ರತಿಪಾದಿಸಿದೆ.

ಇಬ್ಬರ ನೇತೃತ್ವದಲ್ಲಿ ನಾಯಕತ್ವ ಹಂಚಿಕೆಗೆ ಸಂಬಂಧಿಸಿದ ಪಕ್ಷದ ಬೈಲಾಗೆ ಡಿಸೆಂಬರ್‌ 1, 2021ರಲ್ಲಿ ತರಲಾಗಿದ್ದ ತಿದ್ದುಪಡಿಯನ್ನು ಗುರುವಾರ ನಡೆದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ದ್ವಿನಾಯಕತ್ವ ವ್ಯವಸ್ಥೆ ರದ್ದಾಗಲಿ ದೆ ಎಂದೂ ಈ ಬಣ ಪ್ರತಿಪಾದಿಸಿದೆ.

ಪಕ್ಷದ ಸಾಮಾನ್ಯ ಸಭೆಯು ಪಕ್ಷದಲ್ಲಿ ಏಕ ನಾಯಕತ್ವ ವ್ಯವಸ್ಥೆಯೇ ಜಾರಿಯಲ್ಲಿ ಇರಬೇಕು ಎಂದು ಪ್ರತಿಪಾದಿಸಿದ ಹಿಂದೆಯೇ ಈ ಬೆಳವಣಿಗೆ ನಡೆದಿದೆ. ಬೈಲಾಗೆ ತಿದ್ದುಪಡಿಯಾದ ಬಳಿಕ ಒಪಿಎಸ್‌ ಮತ್ತು ಇಪಿಎಸ್‌ ಅವರು ಕ್ರಮವಾಗಿ ಸಂಯೋಜಕ ಮತ್ತು ಜಂಟಿ ಸಂಯೋಜಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪಕ್ಷದ ಈ ಉನ್ನತ ಸ್ಥಾನಗಳಿಗೆ ಸಂಬಂಧಿಸಿದ ಬೈಲಾ ತಿದ್ದುಪಡಿಯನ್ನು ಗುರುವಾರ ನಡೆದಿದ್ದ ಸಾಮಾನ್ಯ ಸಭೆಯು ಅನುಮೋದಿಸಿಲ್ಲ. ಹೀಗಾಗಿ, ಸಹಜವಾಗಿ ಉಲ್ಲೇಖಿತ ಎರಡೂ ಅಧಿಕಾರ ಸ್ಥಾನಗಳು ನಿಷ್ಕ್ರಿಯಗೊಳ್ಳಲಿವೆ. ಒಪಿಎಸ್‌ ಅವರು ಸಂಯೋಜಕರಾಗಿ ಇರುವುದಿಲ್ಲ. ಇಪಿಎಸ್‌ ಅವರು ಜಂಟಿ ಸಂಯೋಜಕರಾಗಿ ಉಳಿಯುವುದಿಲ್ಲ.

‘ಈ ಇಬ್ಬರು ತಮ್ಮ ಇತರೆ ಸ್ಥಾನಗಳಾದ ಖಜಾಂಚಿ (ಒಪಿಎಸ್‌) ಮತ್ತು ಕೇಂದ್ರ ಕಚೇರಿ ಕಾರ್ಯದರ್ಶಿ (ಇಪಿಎಸ್‌) ಆಗಿ ಮಾತ್ರವೇ ಮುಂದು ವರಿಯಲಿದ್ದಾರೆ’ ಎಂದು ಮಾಜಿ ಕಾನೂನು ಸಚಿವ ಷಣ್ಮುಗಂ ಅವರು
ಪ್ರತಿಪಾದಿಸಿದರು.

ಈ ಮೂಲಕ ಇಪಿಎಸ್ ಬಣವು ತಮ್ಮ ನಾಯಕನನ್ನು ಪಕ್ಷದ ಏಕ ನಾಯಕರಾಗಿ ಬಿಂಬಿಸಲು ಸಿದ್ಧತೆ ನಡೆಸಿರುವುದರ ಇಂಗಿತವನ್ನು ನೀಡಿದೆ. ಜುಲೈ 11ರಂದು ಮತ್ತೆ ನಡೆಯಲಿರುವ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಹಕ್ಕೊತ್ತಾಯ ಮಂಡಿಸುವ ಸಾಧ್ಯತೆ ಇವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು