ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ದಿನಗಳ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು: ವೈದ್ಯರ ಅಚ್ಚರಿ

Last Updated 4 ನವೆಂಬರ್ 2022, 10:52 IST
ಅಕ್ಷರ ಗಾತ್ರ

ರಾಂಚಿ: 21 ದಿನಗಳ ಮಗುವಿನ ಹೊಟ್ಟೆಯಲ್ಲಿದ್ದ 8 ಭ್ರೂಣಗಳನ್ನು ರಾಂಚಿಯ ಖಾಸಗಿ ಆಸ್ಪತ್ರೆ ವೈದ್ಯರು ಇತ್ತೀಚೆಗೆ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಭ್ರೂಣಗಳ ಗಾತ್ರವು ಮೂರು ಸೆಂಟಿಮೀಟರ್‌ಗಳಿಂದ ಐದು ಸೆಂಟಿಮೀಟರ್‌ಗಳವರೆಗೆ ಇದ್ದವು. ಅವುಗಳೆಲ್ಲ ಚೀಲದಂಥ ರಚನೆಯಲ್ಲಿದ್ದವು ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ ಎಂಡಿ ಇಮ್ರಾನ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಫೆಟಸ್-ಇನ್-ಫೀಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ. ಅಂದರೆ, ಭ್ರೂಣದೊಳಗೆ ಭ್ರೂಣ ಸೇರಿರುವುದು. ಇದು ಅತ್ಯಂತ ಅಪರೂಪ. ಎಫ್‌ಐಎಫ್‌ನಂತ ಪ್ರಕರಣಗಳಲ್ಲಿ ಸರಿಯಾಗಿ ಬೆಳವಣಿಗೆಯಾಗದ ಭ್ರೂಣವು ತನ್ನ ಅವಳಿಯ ಹೊಟ್ಟೆಯಲ್ಲಿ ಸೇರಿರುತ್ತದೆ ಎಂದು ‘ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌’ನ ನಿಯತಕಾಲಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ಇದುವರೆಗೆ ಲಭ್ಯವಿರುವ ದಾಖಲೆಗಳು, ನಿಯತಕಾಲಿಕೆಗಳ ಪ್ರಕಾರ ಹೆಚ್ಚಿನ ಎಫ್‌ಐಎಫ್ ಪ್ರಕರಣಗಳಲ್ಲಿ ಒಂದು ಭ್ರೂಣ ಮಾತ್ರ ಪತ್ತೆಯಾಗಿದೆ. ಎಂಟು ಭ್ರೂಣಗಳು ಪತ್ತೆಯಾದ ಪ್ರಕರಣ ಎಲ್ಲಿಯೂ ವರದಿಯಾಗಿಲ್ಲ’ ಎಂದು ಡಾ ಇಮ್ರಾನ್ ಹೇಳಿದ್ದಾರೆ. ಎಫ್ಐಎಫ್ ಬಹಳ ಅಪರೂಪ. ಐದು ಲಕ್ಷದಲ್ಲಿ ಒಂದು ಮಗುವಿನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿರುತ್ತದೆ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 10 ರಂದು ಜಾರ್ಖಂಡ್‌ನ ರಾಮಗಢ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇರುವುದನ್ನು ಪತ್ತೆ ಮಾಡಿದ್ದರು. ಭವಿಷ್ಯದಲ್ಲಿ ಇದು ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಲು ಪೋಷಕರಿಗೆ ತಿಳಿಸಲಾಗಿತ್ತು.

‘ಮಗುವಿಗೆ 21 ದಿನಗಳು ತುಂಬಿದ ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಆರಂಭಿಕ ರೋಗನಿರ್ಣಯದಲ್ಲಿ, ಚೀಲ ಅಥವಾ ಗಡ್ಡೆಯಂಥ ವಸ್ತು ಶ್ವಾಸಕೋಶದ ಕೆಳ ಭಾಗದಲ್ಲಿ ಕಂಡುಬಂದಿತ್ತು. ನಾವು ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ನಿರ್ಧರಿಸಿದೆವು. ನವೆಂಬರ್ 1 ರಂದು ಶಸ್ತ್ರಚಿಕಿತ್ಸೆ ನಡೆಯಿತು. ಗಡ್ಡೆಯಂಥ ರಚನೆಯಲ್ಲಿ ಎಂಟು ಭ್ರೂಣಗಳು ಪತ್ತೆಯಾಗಿವೆ’ ಎಂದು ಡಾ ಎಂಡಿ ಇಮ್ರಾನ್ ತಿಳಿಸಿದ್ದಾರೆ.

‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸದ್ಯ ಮಗುವಿನ ಸ್ಥಿತಿ ಸಹಜವಾಗಿದೆ. ಮಗುವನ್ನು ನಿಗಾದಲ್ಲಿ ಇರಿಸಲಾಗಿದ್ದು, ಒಂದು ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಇದು ಅಪರೂಪದ ಪ್ರಕರಣವಾಗಿರುವುದರಿಂದ ನಾವು ಇದನ್ನು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಲು ತಯಾರಿ ನಡೆಸುತ್ತಿದ್ದೇವೆ’ ಎಂದು ರಾಂಚಿಯ ರಾಣಿ ಆಸ್ಪತ್ರೆಯ ಮುಖ್ಯಸ್ಥ ರಾಜೇಶ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT