ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳ ಜಾರಿಯನ್ನು ನಿಲ್ಲಿಸಿ, ಇಲ್ಲವೇ ನಾವು ತಡೆ ನೀಡುತ್ತೇವೆ: ಸುಪ್ರೀಂ

ಕೇಂದ್ರಕ್ಕೆ ಸುಪ್ರೀಂ ತರಾಟೆ
Last Updated 11 ಜನವರಿ 2021, 20:06 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿರ್ವಹಿಸಿದ ರೀತಿ
ಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರೈತರು ಮತ್ತು ಸರ್ಕಾರದ ನಡುವಣ ಸಂಧಾನ ಪ್ರಕ್ರಿಯೆಯು ನಿರಾಶಾದಾಯಕ ಎಂದು ಹೇಳಿದೆ. ಬಿಕ್ಕಟ್ಟು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚಿಸುವ ಇಚ್ಛೆ ಇರುವುದಾಗಿಯೂ ಹೇಳಿದೆ.

ವಿವಾದಾತ್ಮಕವಾದ ಕಾಯ್ದೆಗಳ ಜಾರಿಗೆ ತಡೆ ನೀಡುವ ಸೂಚನೆಯನ್ನೂ ಸುಪ್ರೀಂ ಕೋರ್ಟ್ ನೀಡಿದೆ. ಬಿಕ್ಕಟ್ಟಿಗೆ ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಇನ್ನಷ್ಟು ಸಮಯ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ‘ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಅಟಾರ್ನಿ ಜನರಲ್‌ ಅವರೇ, ತಾಳ್ಮೆಯ ಬಗ್ಗೆ ನಮಗೆ ಬೋಧನೆ ಮಾಡಲು ಬರಬೇಡಿ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ಹೇಳಿದೆ.

ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಆದೇಶ ನೀಡುವುದಾಗಿಯೂ ನ್ಯಾಯಪೀಠವು ಹೇಳಿದೆ. ಸಂಧಾನ ಸಮಿತಿಯ ಮುಖ್ಯಸ್ಥರಾಗಿ ನೇಮಿಸಲು ಎರಡು–ಮೂರು ಹೆಸರುಗಳನ್ನು ಸೂಚಿಸುವಂತೆ ಕಕ್ಷಿದಾರರಿಗೆ ಹೇಳಿದೆ. ನಿವೃತ್ತ ಮುಖ್ಯ ನ್ಯಾಯ
ಮೂರ್ತಿ ಆರ್‌.ಎಂ. ಲೋಧಾ ಅವರ ಹೆಸರನ್ನೂ ಇದರಲ್ಲಿ ಸೇರಿಸಲು ತಿಳಿಸಿದೆ.

‘ಏನು ನಡೆಯುತ್ತಿದೆ? ರಾಜ್ಯಗಳು ನಿಮ್ಮ ಕಾಯ್ದೆಗಳ ವಿರುದ್ಧ ಬಂಡೆದ್ದಿವೆ. ರೈತರ ಪ್ರತಿಭಟನೆ ವಿಚಾರದಲ್ಲಿ ಸುಮ್ಮನೆ ಅಭಿಪ್ರಾಯಗಳನ್ನು ತಿಳಿಸಲು ನಾವು ಬಯಸುವುದಿಲ್ಲ. ಇಡೀ ಸಂಧಾನ ಪ್ರಕ್ರಿಯೆಯೇ ನಿರಾಶಾದಾಯಕ’ ಎಂದು ಪೀಠವು ಆಕ್ರೋಶ ವ್ಯಕ್ತಪಡಿಸಿದೆ.

ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ಕಾಯ್ದೆಗಳನ್ನು ವಾಪಸ್‌ ಪಡೆಯುವ ಬಗ್ಗೆ ಸದ್ಯಕ್ಕೆ ಯೋಚನೆ ಮಾಡುತ್ತಿಲ್ಲ ಎಂದೂ ಪೀಠವು ಹೇಳಿತು.

‘ಇದು ಅತ್ಯಂತ ಸೂಕ್ಷ್ಮವಾದ ಸ್ಥಿತಿ. ಕೇಂದ್ರವು ಜಾರಿಗೆ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ಪ್ರಯೋಜನಕಾರಿ ಎಂದು ಹೇಳುವ ಒಂದೇ ಒಂದು ಅರ್ಜಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ’ ಎಂದು ಪೀಠವು ಹೇಳಿತು.

ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂಬುದನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶ. ಅದಕ್ಕಾಗಿಯೇ, ನೀವು (ಸರ್ಕಾರ) ಕಾಯ್ದೆಗಳನ್ನು ಸ್ವಲ್ಪ ಕಾಲಕ್ಕೆ ತಡೆ ಹಿಡಿಯಲು ಸಾಧ್ಯವೇ ಎಂದು ಕೇಳುತ್ತಿದ್ದೇವೆ. ಆದರೆ, ನೀವು ಸಮಯ ಕಳೆಯಲು ಬಯಸುತ್ತಿದ್ದೀರಿ. ನೀವು ಪರಿಹಾರದ ಭಾಗವೇ ಅಥವಾ ಸಮಸ್ಯೆಯ ಭಾಗವೇ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಪೀಠವು ಹೇಳಿದೆ.

ತಡೆ ನೀಡಿಕೆ ಸುಲಭವಲ್ಲ

ಮೇಲ್ನೋಟಕ್ಕೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಕಾಣಿಸದೇ ಇದ್ದರೆ ಸಂಸತ್ತು ಅಂಗೀಕರಿಸಿದ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡುವಂತಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಯ್ದೆಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಆಕ್ಷೇಪಿಸಿದ್ದಾರೆ. ವೇಣುಗೋಪಾಲ್ ಅವರ ಆಕ್ಷೇಪಗಳಿಗೆ ಕಾನೂನು ತಜ್ಞರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಥವಾ ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಆಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದರೆ ಮಾತ್ರ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಬಹುದು ಎಂದು ವೇಣುಗೋಪಾಲ್‌ ಪ್ರತಿಪಾದಿಸಿದ್ದಾರೆ.

ಸಂಸತ್ತು ರೂಪಿಸಿದ ಕಾಯ್ದೆಯುಮೇಲ್ನೋಟಕ್ಕೆ ಸಂವಿಧಾನದ ಉಲ್ಲಂಘನೆ ಎಂಬ ಬಲವಾದ ನೆಲೆ ಇದ್ದರೆ ಮಾತ್ರ ಅದನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಬಹುದು ಎಂದು ಕಾನೂನು ತಜ್ಞ ರಾಕೇಶ್‌ ದ್ವಿವೇದಿ ಹೇಳಿದ್ದಾರೆ.

‘ಇದು ಸರಿಯಾದ ಕ್ರಮ ಅಲ್ಲ. ಸರ್ಕಾರದ ವಾದ ಏನು ಎಂಬುದನ್ನು ಆಲಿಸದೆ ನೀವು ನಿರ್ಧಾರಕ್ಕೆ ಬಂದಿದ್ದೀರಿ. ದೊಡ್ಡ ಸಂಖ್ಯೆಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಕಾಯ್ದೆಗೆ ತಡೆ ನೀಡುವುದಕ್ಕೆ ಸಮರ್ಥನೆ ಆಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತು ತನ್ನ ವ್ಯಾಪ್ತಿ ಮೀರಿ ಕಾಯ್ದೆ ರೂಪಿಸಿದೆ ಎಂಬುದು ಮೇಲ್ನೊಟಕ್ಕೆ ಕಂಡುಬಂದರೆ ಮಾತ್ರ, ಕಾಯ್ದೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯ ಎಂದು ಹಿರಿಯ ವಕೀಲ ಮೋಹನ ಕಾತರಕಿ ಅವರು ಹೇಳಿದ್ದಾರೆ.

ತರಾತುರಿಯ ಕಾಯ್ದೆ ಅಲ್ಲ: ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ತರಾತುರಿಯಲ್ಲಿ ಅಂಗೀಕಾರ ಮಾಡಿಲ್ಲ. ಎರಡು ದಶಕಗಳ ಸಮಾಲೋಚನೆಯ ನಂತರವೇ ಈ ಕಾಯ್ದೆಗಳು ರೂಪುಗೊಂಡಿವೆ. ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮಾತುಕತೆ ನಡೆಸಿ, ಅವರಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ಸರಿಪಡಿಸಲು ಪ್ರಯತ್ನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸರ್ಕಾರ ಹೇಳಿದೆ.

ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚುವರಿ ಅವಕಾಶವನ್ನು ಒದಗಿಸಲಾಗಿದೆ. ಅವರಿಗೆ ಈಗ ಇರುವ ಹಕ್ಕುಗಳನ್ನು ಮೊಟಕು ಮಾಡಲಾಗಿಲ್ಲ. ಹಾಗಾಗಿ ದೇಶದ ರೈತರು ಕಾಯ್ದೆಗಳ ಬಗ್ಗೆ ಸಂತುಷ್ಟರಾಗಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT