ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕುಟುಂಬ ರಾಜಕೀಯ ‘ವಿಜಯ’

Last Updated 27 ಸೆಪ್ಟೆಂಬರ್ 2020, 6:55 IST
ಅಕ್ಷರ ಗಾತ್ರ

ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ‘ಪ್ರಜಾವಾಣಿ’ ನಡೆಸಿದ ಫೇಸ್ ಬುಕ್ ಲೈವ್ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬಂದಿದ್ದರು. ಸಹಜವಾಗಿಯೇ ಅವರಿಗೆ ಕುಟುಂಬ ರಾಜಕರಣದ ಕುರಿತ ಪ್ರಶ್ನೆ ಎದುರಾಯಿತು. ಅದಕ್ಕೆ ನೇರವಾಗಿ ಉತ್ತರ ನೀಡದ ದೇವೇಗೌಡರು ವೇದಿಕೆಯ ಮುಂದಿನ ಸಾಲಿನಲ್ಲಿಯೇ ಕುಳಿತಿದ್ದ ಪತ್ರಿಕೆಯ ಮಾಲೀಕರಾದ ಕೆ.ಎನ್.ತಿಲಕ್ ಕುಮಾರ್ ಅವರನ್ನು ತೋರಿಸಿ ‘ಈ ಪತ್ರಿಕೆ ಆರಂಭಿಸಿದ್ದು ನಿಮ್ಮ ಅಜ್ಜ. ಈಗ ನೀವು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೀರಲ್ಲವೇ?’ ಎಂದು ಮರುಪ್ರಶ್ನೆ ಮಾಡಿದ್ದರು. ಅಂದರೆ ಜೆಡಿಎಸ್ ಪಕ್ಷ ದೇವೇಗೌಡ ಕುಟುಂಬದ ಖಾಸಗಿ ಆಸ್ತಿ ಎಂದು ಅವರು ಉತ್ತರ ಹೇಳಿದಂತಾಯಿತಲ್ಲವೇ? ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರ ಖಾಸಗಿ ಸ್ವತ್ತು ಅಲ್ಲ ಎನ್ನುವುದನ್ನು ರಾಜಕಾರಣಿಗಳಿಗೆ ಮನವರಿಕೆ ಮಾಡಿ ಕೊಡುವುದು ಹೇಗೆ? ದೇವೇಗೌಡರು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಶ್ರಮವನ್ನು ಪಟ್ಟಿದ್ದರು.

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಆಗಿನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕದ ವಿದ್ಯಾರ್ಥಿ ಸಮುದಾಯದ ಜೊತೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿಯೂ ಅವರಿಗೂ ಇಂತದೇ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರ ನೀಡಿದ ರಾಹುಲ್ ‘ಹೌದು, ಭಾರತದಲ್ಲಿ ಆನುವಂಶೀಯ ಆಡಳಿತ ಸಮಸ್ಯೆಯೇ ಆಗಿದೆ’ ಎಂದಿದ್ದರು. ಯಾವುದೇ ಕಾನೂನು ಬಾಹಿರ ಮಾರ್ಗಗಳನ್ನು ಅನುಸರಿಸದೆ, ಹಿಂಬಾಗಿಲಿನಿಂದ ರಾಜಕೀಯ ಅಂಗಳವನ್ನು ಪ್ರವೇಶ ಮಾಡದೆ, ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸುವ ವ್ಯಕ್ತಿಗೆ ಕುಟುಂಬ ರಾಜಕಾರಣದ ವಾರಸುದಾರ ಎಂದು ಹೇಳಲಾಗದು ಎಂದು ರಾಹುಲ್ ಆಗ ಹೇಳಿದ್ದರು. ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಳ್ಳುವ ಬಹುತೇಕ ಮಂದಿ ಇದೇ ಮಾತನ್ನು ಹೇಳುತ್ತಾರೆ.

ನಮ್ಮ ದೇಶದಲ್ಲಿ ಯಾವುದೇ ಜನಪ್ರಿಯ ರಾಜಕಾರಣಿ ನಿಧನರಾದಾಗ ಅವರ ಸ್ಥಾನಕ್ಕೆ ಅವರ ಪತ್ನಿ, ಮಕ್ಕಳನ್ನು ಕರೆ ತರುವುದು ಮಾಮೂಲು. ಹೀಗೆ ತಂದೆಯ ಅಥವಾ ಪತಿಯ ಸಾವಿನ ಅನುಕಂಪದ ಲಾಭವನ್ನು ಪಡೆದ ವ್ಯಕ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕೂಡ ಅಚ್ಚರಿಯಲ್ಲ. ಹೀಗೆ ಅನುಕಂಪದ ಅಲೆಯಲ್ಲಿ ಗೆದ್ದು ಬಂದವರನ್ನು ಪ್ರಜಾಪ್ರಭುತ್ವದ ಮಾದರಿಯಲ್ಲಿಯೇ ಗೆದ್ದು ಬಂದವರು, ಅವರಿಗೆ ಕುಟುಂಬ ರಾಜಕಾರಣದ ವಾರಸುದಾರ ಪಟ್ಟ ನೀಡಬೇಡಿ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ಇದೂ ಕೂಡ ಒಂದು ರೀತಿಯಲ್ಲಿ ಹಿಂಬಾಗಿಲ ರಾಜಕಾರಣವಲ್ಲವೇ?

ಅಪ್ಪ ಮುಖ್ಯಮಂತ್ರಿಯೋ, ಮಂತ್ರಿಯೋ ಆಗಿದ್ದರೆ ಅವರ ಅಧಿಕಾರದ ಲಾಭವನ್ನು ಮಕ್ಕಳು ಪಡೆಯುವುದು. ಆ ಕಾರಣಕ್ಕಾಗಿಯೇ ಪಕ್ಷದೊಳಗಿನ ಪ್ರಮುಖ ಹುದ್ದೆಯನ್ನು ಗಿಟ್ಟಿಸಿಕೊಳ್ಳುವುದು, ಚುನಾವಣೆಯಲ್ಲಿ ಕೂಡ ಅದರ ಲಾಭ ಪಡೆಯುವುದನ್ನು ಮುಂಬಾಗಿಲಿನ ರಾಜಕಾರಣ ಎನ್ನಲಾದೀತೇ?

ರಾಜೀವ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪುತ್ರ ಅಲ್ಲದೇ ಹೋಗಿದ್ದರೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಆಯ್ಕೆಯಾಗುತ್ತಿದ್ದರೇ? ಇಂದಿರಾ ಗಾಂಧಿ ಅವರ ಪುತ್ರ ಅಲ್ಲದೇ ಹೋಗಿದ್ದರೆ ರಾಜೀವ ಗಾಂಧಿ ಯಾವ ವಿರೋಧವೂ ಇಲ್ಲದೆ ಪ್ರಧಾನಿ ಸ್ಥಾನ ಏರಬಲ್ಲವರಾಗಿದ್ದರೇ? ಇದೇ ಮಾತನ್ನು ಇಂದಿರಾ ಗಾಂಧಿ ಅವರಿಗೂ ಅನ್ವಯಿಸಬೇಕಾಗುತ್ತದೆ.

ರಾಜ್ಯದಲ್ಲಿಯೂ ಇಂತಹ ಲಾಭವನ್ನು ಪಡೆದುಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅದರಲ್ಲಿ ಪ್ರಮುಖರು. ತಮ್ಮ ಪಾಡಿಗೆ ತಾವು ವೈದ್ಯಕೀಯ ಕೆಲಸ ಮಾಡಿಕೊಂಡಿದ್ದ ಯತೀಂದ್ರ ದಿಢೀರ್ ಶಾಸಕರಾಗುವುದು, ರಾಘವೇಂದ್ರ ಲೋಕಸಭೆ ಸದಸ್ಯರಾಗುವುದು ಸುಲಭ. ಯಾಕೆಂದರೆ ಅವರಿಗೆ ಒಂದು ಹಿನ್ನೆಲೆ ಇದೆ. ಆದರೆ ಸಾಮಾನ್ಯ ವ್ಯಕ್ತಿಯೊಬ್ಬ ಈ ಹಂತಕ್ಕೆ ಏರಬೇಕು ಎಂದರೆ ಸಾಕಷ್ಟು ಬೆವರು ಹರಿಸಬೇಕು.

ಒಬ್ಬ ಉದ್ಯಮಿಯ ಪುತ್ರ ತನ್ನ ತಂದೆಯ ನಂತರ ಉದ್ಯಮವನ್ನು ಮುನ್ನೆಡೆಸುವುದು ಆತನ ಕಾನೂನುಬದ್ಧ ಹಕ್ಕು. ಇಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಇಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಗೂ ಅವಕಾಶವಿಲ್ಲ. ಸಂಗೀತಗಾರನ ಮಗನೊಬ್ಬ ಸಂಗೀತಗಾರನಾದಂತೆ, ಸಿನಿಮಾ ನಟನೊಬ್ಬನ ಪುತ್ರ ನಟನಾದಂತೆ, ವೈದ್ಯರ ಪುತ್ರ ಅಥವಾ ಪುತ್ರಿ ವೈದ್ಯಕೀಯ ರಂಗದಲ್ಲಿಯೇ ಸಾಧನೆ ಮಾಡುವುದನ್ನು ಸಾರಾಸಗಟಾಗಿ ರಾಜಕೀಯ ರಂಗಕ್ಕೂ ಅನ್ವಯಿಸಲಾಗದು. ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ವ್ಯವಸ್ಥೆ. ಜನತಂತ್ರದ ಮೂಲ ಆಶಯಗಳನ್ನು ಬುಡಮೇಲು ಮಾಡಿ ಶ್ರೀಸಾಮಾನ್ಯರ ಹಕ್ಕು ಕಸಿದುಕೊಳ್ಳುವ ಆಕ್ರಮಣಕಾರಿ ರಾಜಕೀಯವೇ ಕುಟುಂಬ ರಾಜಕಾರಣ.

ಒಂದು ಕಾಲದಲ್ಲಿ ಸಂಜಯ ಗಾಂಧಿ ಬಹಳಷ್ಟು ಕಾಂಗ್ರೆಸ್ ಮುಖಂಡರಿಗೆ ಅವತಾರ ಪುರುಷರಂತೆ ಕಂಡಿದ್ದರೆ ಅದಕ್ಕೆ ಮೂಲ ಕಾರಣ ಅವರು ಪ್ರಧಾನಿ ಮಗ ಎನ್ನುವುದೇ ಆಗಿತ್ತು. ಈಗ ಕರ್ನಾಟಕದಲ್ಲಿ ಆಗಿರುವುದೂ ಅದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಎಲ್ಲರಿಗೂ ‘ವಿಜಯ’ ಪತಾಕೆ ಹಾರಿಸುವ ದಂಡನಾಯಕನಂತೆ ಕಂಡರೆ ಅಚ್ಚರಿಯೂ ಇಲ್ಲ. ಅಪರೂಪವೂ ಅಲ್ಲ. ಹಲವರ ದೃಷ್ಟಿಯಲ್ಲಿ ಅದು ಅಪರಾಧವೂ ಅಲ್ಲ.

ಕುಟುಂಬ ರಾಜಕಾರಣಕ್ಕೆ ಅವಕಾಶವನ್ನೇ ನೀಡದ ಸಾಕಷ್ಟು ಮಂದಿ ಮಹಾಪುರುಷರು ನಮ್ಮ ದೇಶದಲ್ಲಿ ಆಗಿ ಹೋಗಿದ್ದಾರೆ. ಎಲ್ಲ ಅಧಿಕಾರ ಇದ್ದರೂ ಯಾವುದನ್ನೂ ಅಂಟಿಸಿಕೊಳ್ಳದ ಮಹಾತ್ಮಾ ಗಾಂಧಿ, ಪ್ರಧಾನಿಯಾಗಿದ್ದರೂ ಕುಟುಂಬದ ಜವಾಬ್ದಾರಿಯನ್ನು ಪತ್ನಿಗೇ ವಹಿಸಿದ್ದ ಲಾಲ್ ಬಹಾದ್ದೂರ್ ಶಾಸ್ತ್ರೀ ಮುಂತಾದವರ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ನಾವು ಒಳ್ಳೆಯದನ್ನು ತೆಗೆದುಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT