ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಡಿಯಲ್ಲೇ ಏಕೆ ರೈತರ ಪ್ರತಿಭಟನೆ? ಅಲ್ಲಿ ಅವರಿಗೆ ಸಿಗೋ ಸೌಲಭ್ಯಗಳೇನೇನು?

Last Updated 21 ಡಿಸೆಂಬರ್ 2020, 10:57 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ತಿಂಗಳಾಗುತ್ತಾ ಬಂದಿದೆ. ಕೊರೆಯುವ ಚಳಿಯಲ್ಲಿ ಇಷ್ಟೊಂದು ದಿನಗಳ ಕಾಲ ರೈತರು ಅಲ್ಲಿ ಬಿಡುಬಿಟ್ಟಿರಬೇಕಾದರೆ ಅವರಿಗೆ ಅಲ್ಲಿ ಏನೇನು ಸೇವೆ, ಸೌಲಭ್ಯ ಸಿಗುತ್ತವೆ?

ಪಾದ ಮಸಾಜ್ ಯಂತ್ರಗಳು, ದಂತ ಶಸ್ತ್ರಚಿಕಿತ್ಸೆ, ಓದಲು ತಮ್ಮದೇ ಆದ ದಿನಪತ್ರಿಕೆ, ಟ್ಯಾಟೂ ಪಾರ್ಲರ್... ಹೀಗೆ ಅಲ್ಲಿ ದೊರೆಯುತ್ತಿರುವ ಸೌಲಭ್ಯಗಳೇ ರೈತರು ಬೇರೆಡೆಗೆ ಪ್ರತಿಭಟನೆಗೆ ತೆರಳದಿರಲು ಕಾರಣ ಎನ್ನಲಾಗಿದೆ.

ಕೃಷಿ ಕಾಯ್ದೆಗಳಿಂದ ತಮ್ಮ ಜೀವನ ಹಾಳಾಗಬಹುದು ಎಂಬ ಭೀತಿಯಿಂದ ನವೆಂಬರ್ ಕೊನೆಯ ವೇಳೆಗೆ ದೆಹಲಿಯತ್ತ ಮೆರವಣಿಗೆ ತೆರಳಿದ ರೈತರ ಮೇಲೆ ಪೊಲೀಸರು ಅಶ್ರುವಾಯು, ಜಲ ಪಿರಂಗಿ ಪ್ರಯೋಗಿಸಿದ್ದರು. ಆದರೆ ಇದರಿಂದ ಅವರು ವಿಚಲಿತರಾಗಲಿಲ್ಲ.

ಈಗ ಹತ್ತಾರು ಸಾವಿರ ರೈತರು ದೆಹಲಿ ಪ್ರವೇಶಿಸುವ ಪ್ರದೇಶಗಳಲ್ಲಿ ಟೆಂಟ್‌ಗಳನ್ನು ಹಾಕಿ ಬೀಡುಬಿಟ್ಟಿದ್ದಾರೆ. ಕಂಬಳಿ ಹೊದ್ದು, ಚಳಿ ಕಾಯಿಸಲು ಬೆಂಕಿ ಹಾಕುತ್ತಾ ಬಿಸಿ ಬಿಸಿ ಸಮೋಸ ಸೇವಿಸುತ್ತಾ ಹಾಗೂ ಚಹಾ ಕುಡಿಯುತ್ತಾ ಪ್ರತಿಭಟನೆ ಮುಂದುವರಿಸಿದ್ದಾರೆ. ಟ್ರ್ಯಾಕ್ಟರ್‌ಗಳಲ್ಲಿ ಇರುವ ಸ್ಪೀಕರ್‌ಗಳಿಂದ ದೊಡ್ಡದಾಗಿ ಸಂಗೀತ ಹೊರಹೊಮ್ಮುತ್ತಿರುತ್ತದೆ. ದೆಹಲಿ ಪ್ರವೇಶಿಸುವ ಪ್ರದೇಶಗಳಲ್ಲಿ ಈ ದೃಶ್ಯ ಈಗ ಸಾಮಾನ್ಯವಾಗಿಬಿಟ್ಟಿದೆ.

ಸನ್ನಿ ಅಹ್ಲುವಾಲಿಯಾ ಎಂಬ ದಂತವೈದ್ಯರು ಎರಡು ಡೆಂಟಲ್ ಚೇರ್ ಮತ್ತು ಎಕ್ಸ್ ರೇ ಯಂತ್ರದೊಂದಿಗೆ ತಾವಿರುವಲ್ಲಿಂದ 250 ಕಿಲೋ ಮೀಟರ್ ದೂರದ ದೆಹಲಿ ಗಡಿ ತಲುಪಿದ್ದು ರೈತರ ನೆರವಿಗೆ ಮುಂದಾಗಿದ್ದಾರೆ.

‘ನಾವು ವೈದ್ಯರಾಗಿರಬಹುದು. ಆದರೆ ನಾವು ರೈತರ ಮಕ್ಕಳು’ ಎಂದು ಒಬ್ಬ ರೈತನ ಹಲ್ಲುಗಳಿಗೆ ಚಿಕಿತ್ಸೆ ನೀಡುತ್ತಾ ಅಹ್ಲುವಾಲಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿನವೊಂದಕ್ಕೆ 100 ರೈತರಿಗೆ ಉಚಿತವಾಗಿ ದಂತ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಸರ್ಕಾರವು ರೈತರ ಬೇಡಿಕೆಗಳನ್ನು ಸ್ವೀಕರಿಸಲು ಸಿದ್ಧವಿಲ್ಲ ಎಂಬುದು ದುರದೃಷ್ಟಕರ ವಿಚಾರ. ರೈತರೇ ಇಷ್ಟಪಡದ ಮೇಲೆ ಆ ಕಾನೂನುಗಳು ಹೇಗೆ ಒಳ್ಳೆಯವಾಗಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ರೈತರ ಪ್ರತಿಭಟನೆ ನಡೆಯುತ್ತಿರುವ ಮುಖ್ಯ ಟೆಂಟ್ ಬಳಿ ಟೂತ್ ಪೇಸ್ಟ್‌ನಿಂದ ತೊಡಗಿ ಉಚಿತ ಔಷಧದವರೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಮುದಾಯ ಅಡುಗೆ ಕೇಂದ್ರಗಳನ್ನು ತೆರೆಯಲಾಗಿದೆ.

ಒಂದು ಟೆಂಟ್‌ನಲ್ಲಿ ರೈತರ ಪಾದವನ್ನು ಮಸಾಜ್ ಮಾಡಲೆಂದು ಸುಮಾರು 20 ಯಂತ್ರಗಳನ್ನು ಎರಡು ಸಾಲುಗಳಲ್ಲಿ ಇರಿಸಲಾಗಿದೆ.

ಪ್ರತಿಭಟನಾಕಾರರಲ್ಲಿ ಅನೇಕರು ವಯಸ್ಕರಾಗಿರುವುದರಿಂದ ಮೊಣಕಾಲು ಮತ್ತು ಪಾದಗಳ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಪಾದಗಳ ಮಸಾಜ್ ಮಾಡಬೇಕಾಗಿ ಬರುತ್ತದೆ ಎಂದು ಸ್ವಯಂಸೇವಕ ಭೂಪಿಂದರ್ ಸಿಂಗ್ ತಿಳಿಸಿದ್ದಾರೆ.

ಈ ಯಂತ್ರಗಳಿಂದ ಹೆಚ್ಚು ಜನರಿಗೆ ಸೇವೆ ಸಲ್ಲಿಸಬಹುದು ಎಂದು ಇವುಗಳನ್ನು ತಂದಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಸ್ವಯಂಸೇವಕರ ಈ ಸೇವೆಯ ಬಗ್ಗೆ ಪ್ರತಿಭಟನಾ ನಿರತ ರೈತ ಹರ್ಬನ್ಸ್‌ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಾಜಿಯಾಬಾದ್‌ನ ದೆಹಲಿ – ಉತ್ತರ ಪ್ರದೇಶ ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ರೈತರು ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆ ಒಗೆದು ಒಣಗಿ ಹಾಕಿರುವ ದೃಶ್ಯ

50 ಮಂದಿ ಸ್ವಯಂಸೇವಕರ ತಂಡವು ಪ್ರತಿಭಟನೆಯ ಸ್ಥಳವನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಐಟಿ ಸೆಲ್ ಕೂಡ ಇದೆ!: ಪ್ರತಿಭಟನಾನಿರತರ ಸಂದೇಶವನ್ನು ಭಾರತದಾದ್ಯಂತ ಮತ್ತು ವಿದೇಶಗಳಿಗೆ ರವಾನಿಸಲು ಕೆನಡಾ ಮತ್ತು ಬ್ರಿಟನ್‌ನಿಂದಲೂ ಸಹಕಾರ ದೊರೆಯುತ್ತಿದೆ. 36 ಸದಸ್ಯರ ಐಟಿ ಸೆಲ್ ಕಾರ್ಯಾಚರಿಸುತ್ತಿದೆ.

ಪ್ರತಿಭಟನಾ ಸ್ಥಳಗಳಿಗೆ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸಲು ರೈತರೇ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಟ್ಯಾಟೂ, ಕರಪತ್ರಗಳು, ಘೋಷಣೆಗಳು ಇತ್ಯಾದಿಗಳನ್ನು ಸಿದ್ಧಪಡಿಸಲು ವ್ಯವಸ್ಥೆಯಿದೆ.

ರಾತ್ರಿಯಾಗುತ್ತಿದ್ದಂತೆ ಚಳಿಯ ತೀವ್ರತೆ ಹೆಚ್ಚಾಗುತ್ತದೆ. ಪ್ರತಿಭಟನಾ ನಿರತರು ಟ್ರ್ಯಾಕ್ಟರ್ ಟ್ರಾಲಿಗಳು ಮತ್ತು ಹತ್ತಿಯ ಹಾಸಿಗೆಗಳ ಮೇಲೆ ಮಲಗುತ್ತಾರೆ.

ನಾವು ಒಳಗಡೆ ಮಲಗಿದರೆ ಯುವಕರು, ಮಕ್ಕಳು ತೆರೆದ ಬಯಲಿನಲ್ಲಿ ಹೊದ್ದುಕೊಂಡು ಮಲಗುತ್ತಾರೆ ಎಂದಿದ್ದಾರೆ ಪ್ರತಿಭಟನಾ ನಿರತ ರೈತ ಕಾಶ್ಮೀರ್ ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT