ಬುಧವಾರ, ಜುಲೈ 6, 2022
22 °C
ಕ್ರಿಮಿನಲ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ

ಸಂಸದರು, ಶಾಸಕರ ವಿರುದ್ಧದ 4,984 ಪ್ರಕರಣ ವಿಚಾರಣೆಗೆ ಬಾಕಿ: ‘ಸುಪ್ರೀಂ’ಗೆ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಜಿ/ ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಪೈಕಿ ವಿಚಾರಣೆಗೆ ಬಾಕಿ ಉಳಿಯುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್‌ ಹಾಗೂ ವಿಧಾನಸಭೆಗಳಿಗೆ ಆಯ್ಕೆಯಾಗುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ನ್ಯಾಯಾಲಯಕ್ಕೆ ನೆರವಾಗಲು ನೇಮಕವಾಗಿರುವ ಹಿರಿಯ ವಕೀಲ (ಅಮಿಕಸ್‌ ಕ್ಯೂರಿ) ವಿಜಯ್ ಹನ್ಸಾರಿಯಾ ಅವರು ಸಿದ್ಧಪಡಿಸಿರುವ ವರದಿಯಲ್ಲಿ ಈ ವಿಷಯ ಕುರಿತು ವಿವರಿಸಲಾಗಿದೆ. ಹನ್ಸಾರಿಯಾ ಪರವಾಗಿ ವಕೀಲೆ ಸ್ನೇಹಾ ಕಲಿಟಾ ಅವರು ಸುಪ್ರೀಂಕೋರ್ಟ್‌ಗೆ ಈ ವರದಿಯನ್ನು ಸಲ್ಲಿಸಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಅಪರಾಧ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್‌ಗಳನ್ನು ಸ್ಥಾಪಿಸುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿ, ವರದಿಯನ್ನು ಸಲ್ಲಿಸಲಾಗಿದೆ.

2021ರ ಡಿಸೆಂಬರ್‌ 1ರಂತೆ, ಮಾಜಿ ಹಾಗೂ ಹಾಲಿ ಸಂಸದರು/ಶಾಸಕರ ವಿರುದ್ದ ದಾಖಲಾಗಿರುವ 4,984 ಪ್ರಕರಣಗಳ ವಿಚಾರಣೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

2018ರ ಡಿಸೆಂಬರ್‌ನಿಂದ 4,122 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದವು. ಈಗ 862 ಪ್ರಕರಣಗಳು ಹೆಚ್ಚಿವೆ ಎಂದೂ ವಿವರಿಸಲಾಗಿದೆ.

‘ಸುಪ್ರೀಂಕೋರ್ಟ್‌ನಿಂದ ಮೇಲಿಂದ ಮೇಲೆ ನಿರ್ದೇಶನಗಳನ್ನು ನೀಡಲಾಗುತ್ತಿದೆ. ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ 4,984 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ. ಈ ಪೈಕಿ 1,899 ಪ್ರಕರಣಗಳು ಐದು ವರ್ಷಗಳಿಗಿಂತಲೂ ಹಳೆಯವು’ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿದೆ.

 

ಅಮಿಕಸ್‌ ಕ್ಯೂರಿ ಮಾಡಿರುವ ಸಲಹೆಗಳು

* ಮಾಜಿ/ಹಾಲಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನಷ್ಟೇ ಈ ಉದ್ದೇಶಕ್ಕೆ ಸ್ಥಾಪಿಸಲಾಗಿರುವ ಕೋರ್ಟ್‌ಗಳು ನಡೆಸಬೇಕು

* ಐದು ವರ್ಷಗಳಿಗಿಂತ ಹೆಚ್ಚುಕಾಲ ವಿಚಾರಣೆ ಬಾಕಿ ಉಳಿದಿರುವ ಪ್ರಕರಣಗಳ ಮಾಹಿತಿಯನ್ನು ನ್ಯಾಯಾಲಯಗಳು ಸಂಬಂಧಪಟ್ಟ ಹೈಕೋರ್ಟ್‌ಗೆ ಸಲ್ಲಿಸಬೇಕು

* ವಿಚಾರಣೆಗೆ ವಿಳಂಬವಾಗಲು ಕಾರಣಗಳು ಏನು ಹಾಗೂ ಪರಿಹಾರಾತ್ಮಕ ಕ್ರಮಗಳ ಕುರಿತು ಸಲಹೆಗಳನ್ನೂ ನೀಡಬೇಕು

* ವರ್ಚುವಲ್ ವಿಧಾನದ ಮೂಲಕ ಪ್ರಕರಣಗಳ ವಿಚಾರಣೆಗೆ ಬೇಕಾದ ಮೂಲಸೌಕರ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕು

* ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಎನ್‌ಐಎಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತ ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು 

* ಸಾಕ್ಷಿಗಳಿಗೆ ರಕ್ಷಣೆ ಒದಗಿಸುವ ಸಂಬಂಧ ಸೂಕ್ತ ಆದೇಶ ಹೊರಡಿಸಲು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು