ಭಾನುವಾರ, ಜುಲೈ 3, 2022
24 °C

ಕೃಷಿ ಕಾಯ್ದೆಗಳಿಗೆ ವಿರೋಧ: ರೈತ ಪ್ರತಿಭಟನೆಗೆ ಮಹಿಳಾ ದಿನದ ಬೆಡಗು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಭೋಪಾಲ್‌: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ವಿಶಿಷ್ಟವಾಗಿರಲಿದೆ. ಮಹಿಳಾ ದಿನದ ಅಂಗವಾಗಿ ಅಂದು ವೇದಿಕೆ ನಿರ್ವಹಣೆ, ಆಹಾರ ಪೂರೈಕೆ ಮತ್ತು ಭದ್ರತೆಯ ಎಲ್ಲ ಹೊಣೆಯನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಸಾವಿರಾರು ಮಹಿಳಾ ರೈತರು, ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ದೇಶದ ಕೃಷಿ ಕ್ಷೇತ್ರಕ್ಕೆ ಮಹಿಳೆಯರು ನೀಡಿರುವ ಗಣನೀಯ ಕೊಡುಗೆಯನ್ನು ಗಮನದಲ್ಲಿ ಇರಿಸಿಕೊಂಡು ಮಹಿಳಾ ದಿನವನ್ನು ವಿಶಿಷ್ಟವಾಗಿ ಆಚರಿಸುವ ಯೋಜನೆಯನ್ನು ರೈತ ಸಂಘಟನೆಗಳು ರೂಪಿಸಿವೆ. ಮುಖ್ಯವಾಗಿ ಪಂಜಾಬ್‌ ಮತ್ತು ಹರಿಯಾಣದ ಸಾವಿರಾರು ಮಹಿಳೆಯರು ದೆಹಲಿಯ ಗಡಿಗಳಲ್ಲಿ ಸೋಮವಾರ ಜಮಾವಣೆಗೊಳ್ಳಲಿದ್ದಾರೆ. ಅವರು ತಮ್ಮ ಹಕ್ಕುಗಳ ಬಗ್ಗೆ, ಹೋರಾಟಗಳ ಬಗ್ಗೆ ಮತ್ತು ಚಳವಳಿಯ ಮಹತ್ವದ ಬಗ್ಗೆ  ಮಾತನಾಡಲಿದ್ದಾರೆ. 

ವೇದಿಕೆ ಕಾರ್ಯಕ್ರಮದ ನಿರ್ವಹಣೆ ಜತೆಗೆ ಭಾಷಣಕಾರರು ಕೂಡ ಮಹಿಳೆಯರೇ ಇರಲಿದ್ದಾರೆ. ಸಿಂಘು ಗಡಿಯಲ್ಲಿ ಸಣ್ಣದೊಂದು ರ್‍ಯಾಲಿ ಕೂಡ ನಡೆಯಲಿದೆ ಎಂದು ರೈತ ನಾಯಕಿ ಕವಿತಾ ಕುರುಗಂಟಿ ಹೇಳಿದ್ದಾರೆ. 

‘ಮಹಿಳೆಯರು ಕೃಷಿಕ ಸಮುದಾಯದ ಬಹುದೊಡ್ಡ ಭಾಗ. ಆದರೆ, ಅವರಿಗೆ ಮಾನ್ಯತೆ ಇಲ್ಲ. ವಾಸ್ತವದಲ್ಲಿ ಕೃಷಿಯ ಕೆಲಸಗಳನ್ನು ಪುರುಷರಿಗಿಂತ ಹೆಚ್ಚು ಮಹಿಳೆಯರೇ ಮಾಡುತ್ತಾರೆ. ಸೋಮವಾರದ ಕಾರ್ಯಕ್ರಮದಲ್ಲಿ 10ರಿಂದ 15 ಸಾವಿರ ಮಹಿಳೆಯರು ಭಾಗಿಯಾಗುವ ನಿರೀಕ್ಷೆ ಇದೆ’ ಎಂದು ರೈತ ಮುಖಂಡ ಕುಲ್ವಂತ್‌ ಸಿಂಗ್‌ ಸಂಧು ತಿಳಿಸಿದ್ದಾರೆ. 

ಮಹಿಳಾ ದಿನದಂದು ಪಂಜಾಬ್‌ ಮತ್ತು ಹರಿಯಾಣದ ವಿವಿಧೆಡೆ ನಡೆಯಲಿರುವ ಪ್ರತಿಭಟನೆಗಳಲ್ಲಿಯೂ ಮಹಿಳೆಯರು ಭಾಗವಹಿಸಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಮಧ್ಯ ಪ್ರದೇಶದಲ್ಲಿ ರ್‍ಯಾಲಿ: ರೈತರ ಪ್ರತಿಭಟನೆಗೆ ಬೆಂಬಲ ಕ್ರೋಡೀಕರಣದ ಭಾಗವಾಗಿ ಮಧ್ಯ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್ ಸಿಂಗ್‌ ಟಿಕಾಯತ್‌ ಅವರು ಮಧ್ಯ ಪ್ರದೇಶದಲ್ಲಿ ಮೂರು ‍ರ್‍ಯಾಲಿ ನಡೆಸಲಿದ್ದಾರೆ. ಮೊದಲನೇ ರ್‍ಯಾಲಿ ಸೋಮವಾರ ಶಿವಪುರದಲ್ಲಿ ನಡೆಯಲಿದೆ. ಇದೇ 14ರಂದು (ಭಾನುವಾರ) ರೇವಾ ಮತ್ತು 15ರಂದು (ಸೋಮವಾರ) ಜಬಲ್ಪುರದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಿಕೆಯುನ ಮಧ್ಯ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ್‌ ಯಾದವ್‌ ತಿಳಿಸಿದ್ದಾರೆ. 

ಟಿಕಾಯತ್‌ ಅವರು ಮಧ್ಯ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪ್ರವಾಸ ನಡೆಸಿ, ರೈತರ ಜತೆಗೆ ಸಂವಾದ ಕೈಗೊಳ್ಳಲಿದ್ದಾರೆ. ಕೇಂದ್ರದ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದಾರೆ ಎಂದು ಯಾದವ್‌ ಹೇಳಿದ್ದಾರೆ.

ಟಿಕಾಯತ್‌ ವಿರುದ್ಧ ಬಂಧನ ವಾರಂಟ್‌
ಮಧ್ಯ ಪ್ರದೇಶದ ಅನೂಪ್‌ಪುರ ಜಿಲ್ಲೆಯಲ್ಲಿ 2012ರಲ್ಲಿ ನಡೆದ ಕೊಲೆ ಯತ್ನ ಮತ್ತು ಗಲಭೆ ಪ್ರಕರಣದಲ್ಲಿ ಟಿಕಾಯತ್‌ ವಿರುದ್ಧದ ಬಂಧನ ವಾರಂಟ್‌ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈತಹರಿ ಪ್ರದೇಶದಲ್ಲಿ ವಿದ್ಯುತ್‌ ಘಟಕದ ಸ್ಥಾಪನೆಯ ವಿರುದ್ಧ ಬಿಕೆಯು ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆ ಹಿಂಸೆಗೆ ತಿರುಗಿ ಪೊಲೀಸರು ಸೇರಿ ಹಲವರು ಗಾಯಗೊಂಡಿದ್ದರು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಟಿಕಾಯತ್‌ ಸೇರಿ ನೂರಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧನಕ್ಕೆ ಒಳಗಾಗಿದ್ದ ಟಿಕಾಯತ್‌ ಅವರು 2012ರಲ್ಲಿ ಜಾಮೀನಿನಲ್ಲಿ ಬಿಡುಗಡೆ ಆಗಿದ್ದರು. ಆದರೆ, ನಂತರ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ 2016ರಲ್ಲಿಯೇ ಅವರ ವಿರುದ್ಧ ಬಂಧನ ವಾರಂಟ್‌ ಹೊರಡಿಸಲಾಗಿತ್ತು. ಈಗ ಅವರು ಮಧ್ಯ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅನೂಪ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಮಂಗಿಲಾಲ್‌ ಸೋಲಂಕಿ ಹೇಳಿದ್ದಾರೆ. 

ಮತ್ತೊಬ್ಬ ರೈತ ಆತ್ಮಹತ್ಯೆ
ಹರಿಯಾಣದ ಹಿಸಾರ್‌ ಜಿಲ್ಲೆಯ ರೈತ ರಾಜಬೀರ್‌ (49) ಟಿಕ್ರಿ ಗಡಿಯಿಂದ ಏಳು ಕಿ.ಮೀ. ದೂರದ ಸ್ಥಳವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದ ಅವರು ಮರಣಪತ್ರವನ್ನೂ ಬರೆದಿಟ್ಟಿದ್ದಾರೆ. 

ಕೇಂದ್ರದ ಮೂರು ಕೃಷಿ ಕಾಯ್ದೆಗಳೇ ತಮ್ಮ ಆತ್ಮಹತ್ಯೆಗೆ ಕಾರಣ. ಈ ಕಾಯ್ದೆಗಳನ್ನು ರದ್ದುಪಡಿಸಿ ತಮ್ಮ ಕೊನೆಯಾಸೆಯನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. ಹರಿಯಾಣದ ಇನ್ನೊಬ್ಬ ರೈತ ಟಿಕ್ರಿ ಗಡಿಯಲ್ಲಿ ಇತ್ತೀಚೆಗೆ ವಿಷ ಕುಡಿದಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ಕಳೆದ ಡಿಸೆಂಬರ್‌ನಲ್ಲಿ ಪಂಜಾಬ್‌ನ ವಕೀಲರೊಬ್ಬರು ಟಿಕ್ರಿ ಗಡಿಯಿಂದ ಕೆಲ ಕಿಲೋಮೀಟರ್ ದೂರದಲ್ಲಿ ಮತ್ತು ಸಿಖ್‌ ಧರ್ಮಬೋಧಕ ಸಂತ ರಾಮ ಸಿಂಗ್‌ ಅವರು ಸಿಂಘು ಗಡಿ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು