ಮಂಗಳವಾರ, ಅಕ್ಟೋಬರ್ 26, 2021
23 °C
ಪ್ರತಿಭಟನಕಾರರು–ಸರ್ಕಾರದ ನಡುವೆ ಒಪ್ಪಂದ

ಲಖಿಂಪುರ–ಖೇರಿ ಹಿಂಸಾಚಾರ: ಮೃತರ ಪರಿವಾರಕ್ಕೆ ₹45 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಮತ್ತು ಸರ್ಕಾರದ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ನಾಲ್ವರು ರೈತರು ಸೇರಿ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ.

ಮೃತರ ಕುಟುಂಬಕ್ಕೆ ತಲಾ ₹45 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಒಪ್ಪಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ, ನಾಲ್ವರು ರೈತರ ಮೇಲೆ ಎಸ್‌ಯುವಿ ಹರಿಸಿದ ಆರೋಪ ಹೊತ್ತಿರುವ ಆಶಿಶ್‌ ಮಿಶ್ರಾ ವಿರುದ್ಧ ಕೊಲೆ ಪ್ರಕರಣದ ದಾಖಲಿಸಲಾಗಿದೆ. 

ಮೃತ ರೈತರ ಅಂತ್ಯ ಸಂಸ್ಕಾರಕ್ಕೆ ರೈತ ನಾಯಕರು ಒಪ್ಪಿದ್ದಾರೆ, ಜತೆಗೆ ಅವರು ಪ್ರತಿಭಟನೆಯನ್ನೂ ಕೊನೆಗೊಳಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಅವರು ಲಖಿಂಪುರ–ಖೇರಿಯಲ್ಲಿ ಸೋಮವಾರ ಪ್ರಕಟಿಸಿದರು. 

ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್‌ ಟಿಕಾಯತ್‌ ಜತೆಗೆ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಅವರ ಅರ್ಹತೆಗೆ ಅನುಸಾರವಾದ ಉದ್ಯೋಗ ನೀಡಲಾಗುವುದು ಮತ್ತು ಆರೋಪಿಗಳನ್ನು ಎಂಟು ದಿನಗಳ ಒಳಗೆ ಬಂಧಿಸಲಾಗುವುದು ಎಂದು ಅವರು ಹೇಳಿದರು. 

ಹಿಂಸಾಚಾರ ನಡೆದ ತಿಕೋನಿಯ ಪಟ್ಟಣದಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ. ಜಿಲ್ಲೆಯ ಬೇರೆ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಭಾನುವಾರದ ಘಟನೆಗೆ ಸಂಬಂಧಿಸಿ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪ್ರಶಾಂತ್‌ ಕುಮಾರ್‌ ಮಾಹಿತಿ ನೀಡಿದರು. 

ಸಚಿವ ಅಜಯ್‌ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರಿಗೆ ಕಪ್ಪು ಬಾವುಟ ‍ಪ್ರದರ್ಶಿಸಿ ಅವರನ್ನು ತಡೆಯಲು ನೂರಾರು ರೈತರು ಭಾನುವಾರ ಯತ್ನಿಸಿದ್ದರು. ಈ ಗುಂಪಿನ ಮೇಲೆ ಮಿಶ್ರಾ
ಅವರಿಗೆ ಸಂಬಂಧಿಸಿದ ಎಸ್‌ಯುವಿ ಹರಿದು ನಾಲ್ವರು ರೈತರು ಮೃತಪಟ್ಟರು. ನಂತರ ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ರೈತರ ಮೇಲೆ ಹರಿದ ಕಾರನ್ನು ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಚಾಲನೆ ಮಾಡಿದ್ದರು ಎಂದು ರೈತರು ಆರೋಪಿಸಿದ್ದಾರೆ. 

ಕಾಯ್ದೆಗಳೇ ಇಲ್ಲ, ಪ್ರತಿಭಟನೆ ಏಕೆ: ‘ಸುಪ್ರೀಂ’ ಪ್ರಶ್ನೆ

ನವದೆಹಲಿ: ಕಾಯ್ದೆಯೊಂದರ ಸಿಂಧುತ್ವವನ್ನು ಸಾಂವಿಧಾನಿಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಬಳಿಕ ಅದೇ ಕಾಯ್ದೆಯ ವಿರುದ್ಧ ಜನರು ಅಥವಾ ಸಂಘಟನೆಗಳು ಪ್ರತಿ ಭಟನೆ ನಡೆಸಬಹುದೇ ಎಂಬುದನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ. 

ಜಂತರ್‌ ಮಂತರ್‌ನಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ‘ಸತ್ಯಾಗ್ರಹ’ಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ರೈತ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಿಚಾರಣೆ ನಡೆಸಿತು. ಕಾಯ್ದೆಗಳಿಗೆ ಈಗಾಗಲೇ ತಡೆ ನೀಡಲಾಗಿದೆ. ಹಾಗಿದ್ದೂ ಪ್ರತಿಭಟನೆ ನಡೆಸುತ್ತಿರುವುದು ಏಕೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಸಿ.ಟಿ. ರವಿಕುಮಾರ್‌ ಅವರ ಪೀಠವು ಪ್ರಶ್ನಿಸಿತು.

‘ನೀವು ಪ್ರತಿಭಟನೆ ಮುಂದುವರಿಸಲು ಬಯಸಿದ್ದೀರಿ. ಯಾವುದರ ವಿರುದ್ಧ ಪ್ರತಿಭಟನೆ? ಕಾಯ್ದೆ ಈಗ ಜಾರಿಯಲ್ಲಿ ಇಲ್ಲ. ಈ ನ್ಯಾಯಾಲಯವೇ ಕಾಯ್ದೆಗಳಿಗೆ ತಡೆ ಕೊಟ್ಟಿದೆ. ಕಾಯ್ದೆಗಳನ್ನು ಜಾರಿಗೆ ತರುವುದಿಲ್ಲ ಎಂದು ಸರ್ಕಾರ ಭರವಸೆ ಕೊಟ್ಟಿದೆ. ಮತ್ತೆ ಪ್ರತಿಭಟನೆ ಯಾವುದಕ್ಕಾಗಿ’ ಎಂದು ಕೋರ್ಟ್‌ ಪ್ರಶ್ನಿಸಿದೆ. 

ಪ್ರಿಯಾಂಕಾ ಸೇರಿ ಹಲವರ ಬಂಧನ

ಲಖಿಂಪುರ–ಖೇರಿ ಘಟನೆಯು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ವಿವಿಧ ಪಕ್ಷಗಳ ನಾಯಕರು ಸ್ಥಳದತ್ತ ಧಾವಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಎಸ್‌.ಸಿ. ಮಿಶ್ರಾ ಮತ್ತು ಇತರರು ಲಖಿಂಪುರ–ಖೇರಿಗೆ ಹೋಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆಯಲಾಗಿದೆ ಅಥವಾ ಬಂಧಿಸಲಾಗಿದೆ. ಕೆಲವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. 

ಪ್ರಿಯಾಂಕಾ ಮತ್ತು ಕಾಂಗ್ರೆಸ್‌ ಸಂಸದ ದೀಪೇಂದರ್‌ ಹೂಡಾ ಅವರನ್ನು ಸೀತಾಪುರ ಸಮೀಪದ ಹರ್‌ಗಾಂವ್‌ ಎಂಬಲ್ಲಿ ಭಾನುವಾರ ರಾತ್ರಿಯೇ ಬಂಧಿಸಲಾಗಿದೆ. ಅವರನ್ನು ಪಿಎಸಿ ಅತಿಥಿಗೃಹದಲ್ಲಿ ಇರಿಸಲಾಗಿದೆ.

ಭದ್ರತಾ ಸಿಬ್ಬಂದಿಯು ತಮ್ಮನ್ನು ತಳ್ಳಿದ್ದಾರೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ. 

ಪ್ರಿಯಾಂಕಾ ಅವರು ಅತಿಥಿಗೃಹದಲ್ಲಿ ಸತ್ಯಾಗ್ರಹ ಆರಂಭಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರು ಪ್ರಿಯಾಂಕಾ ಬಂಧನ ಖಂಡಿಸಿ ಅತಿಥಿ ಗೃಹದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಅತಿಥಿ ಗೃಹದ ನೆಲವನ್ನು ‍ಪ್ರಿಯಾಂಕಾ ಅವರು ಗುಡಿಸುತ್ತಿರುವ 42 ಸೆಕೆಂಡ್‌ನ ವಿಡಿಯೊವನ್ನು ಉತ್ತರ ಪ್ರದೇಶ ಕಾಂಗ್ರೆಸ್‌ ವಕ್ತಾರ ವಿಕಾಸ್‌ ಶ್ರೀವಾಸ್ತವ ಅವರು ಬಿಡುಗಡೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು