ಬುಧವಾರ, ನವೆಂಬರ್ 25, 2020
18 °C

ಮಹಾರಾಷ್ಟ್ರ ಮಳೆ: ಹಾನಿಯಾಗಿರುವ ಪ್ರದೇಶಗಳಿಗೆ ₹10,000 ಕೋಟಿ ಪರಿಹಾರ ಪ್ಯಾಕೇಜ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಉಸ್ಮಾನಾಬಾದ್‌ ಪ್ರದೇಶದಲ್ಲಿ ಮಳೆಯಿಂದ ಆಗಿರುವ ಹಾನಿಯ ಪರಿಶೀಲನೆ ನಡೆಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಮಳೆಯಿಂದ ನಲುಗಿರುವ ಪ್ರದೇಶಗಳಿಗೆ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ₹10,000 ಕೋಟಿ ಪರಿಹಾರ ಪ್ಯಾಕೇಜ್‌ ಘೋಷಿಸಿದೆ. ದೀಪಾವಳಿಗೂ ಮುನ್ನವೇ ಪರಿಹಾರ ಮೊತ್ತ ವಿತರಣೆಯಾಗಲಿದೆ ಎಂದು ಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಮುಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಬೆಳೆ ನಷ್ಟ, ಜೀವಹಾನಿ ಹಾಗೂ ಮನೆ, ಕಟ್ಟಡಗಳು, ರಸ್ತೆಗಳಿಗೆ ಆಗಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಇತ್ತೀಚೆಗಷ್ಟೇ ಪರಿಶೀಲನೆ ನಡೆಸಿದ್ದರು. ಅದರ ಬೆನ್ನಲ್ಲೇ ₹10,000 ಕೋಟಿ ಪರಿಹಾರ ಪ್ಯಾಕೇಜ್‌ ಘೋಷಣೆಯಾಗಿದೆ. ಮಹಾರಾಷ್ಟ್ರದ ಪಶ್ಚಿಮ ಮತ್ತು ಮಧ್ಯ ಭಾಗದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ.

ಸೋಲಾಪುರ್‌, ಸಾಂಗ್ಲಿ, ಕೋಲ್ಹಾಪುರ್‌, ಸತಾರಾ, ಉಸ್ಮಾನಾಬಾದ್‌, ಬೀಡ್‌, ಔರಂಗಬಾದ್‌ ಹಾಗೂ ಲಾತುರ್‌ನಲ್ಲಿ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಬಿರುಸಾದ ಮಳೆಯು ಸೋಯಾ ಬೀನ್‌, ಹತ್ತಿ, ಕಬ್ಬು, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ.

ಮಳೆಯಿಂದ ಹಾನಿಯಾಗಿರುವ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡುವಂತೆ ಸರ್ಕಾರ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದೆ. ಕಳೆದ ವಾರ ಮಳೆಯಿಂದಾಗಿ ಕನಿಷ್ಠ 29 ಮಂದಿ ಸಾವಿಗೀಡಾಗಿದ್ದಾರೆ. ಜೂನ್‌ನಲ್ಲಿ ನಿಸರ್ಗ ಚಂಡಮಾರುತದಿಂದ ಕೊಂಕಣ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು ಹಾಗೂ ವಿದರ್ಭದಲ್ಲಿ ಆಗಸ್ಟ್‌ನಲ್ಲಿ ಸುರಿದ ಮಳೆಗೆ 1.80 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಕೊಚ್ಚಿ ಹೋಗಿತ್ತು. ರಾಜ್ಯವು ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು