ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ವರ್ಷದ ಬಳಿಕ ರಿಯಾ ಚಕ್ರವರ್ತಿ ಬ್ಯಾಂಕ್‌ ಖಾತೆ ಬಳಕೆಗೆ ಮುಕ್ತ

Last Updated 10 ನವೆಂಬರ್ 2021, 11:44 IST
ಅಕ್ಷರ ಗಾತ್ರ

ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ಬ್ಯಾಂಕ್‌ ಖಾತೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾ ಜಾಮೀನಿನ ಮೇಲೆ ಹೊರಗಿದ್ದಾರೆ.

ಡ್ರಗ್ಸ್‌ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಅವರ ತಮ್ಮ ಶೋವಿಕ್‌ ಚಕ್ರವರ್ತಿ, ಡ್ರಗ್‌ ಪೆಡ್ಲರ್‌ಗಳು ಸೇರಿದಂತೆ ಇತರೆ 24 ಜನರನ್ನು ಎನ್‌ಸಿಬಿ ಕಳೆದ ವರ್ಷ ಬಂಧಿಸಿತ್ತು. ಪ್ರಸ್ತುತ ರಿಯಾ ಮತ್ತು ಶೋವಿಕ್‌ ಜಾಮೀನಿನ ಮೇಲೆ ಹೊರಗಿದ್ದಾರೆ. ರಿಯಾ ಅವರಿಂದ ವಶ ಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಸುಮಾರು ಒಂದು ವರ್ಷದ ಬಳಿಕ ಹಿಂದಿರುಗಿಸಲಾಗಿದೆ.

ಬ್ಯಾಂಕ್‌ ಖಾತೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವಂತೆ ರಿಯಾ ಮನವಿ ಸಲ್ಲಿಸಿದ್ದರು. ಸಕಾರಣವಿಲ್ಲದೆ ಎನ್‌ಸಿಬಿ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿದೆ ಹಾಗೂ ಕ್ರಮವು ಪೂರ್ವಾಗ್ರಹ ಪೀಡಿತವಾಗಿದೆ ಎಂದಿರುವ ರಿಯಾ, ತೆರಿಗೆ ಪಾವತಿಸಲು, ಜೀವನ ನಿರ್ವಹಣೆ ಹಾಗೂ ತಮ್ಮನನ್ನು ನೋಡಿಕೊಳ್ಳಲು ಬ್ಯಾಂಕ್‌ ಖಾತೆಗಳು ಸಕ್ರಿಯಗೊಳ್ಳುವುದು ಅವಶ್ಯವಾಗಿದೆ ಎಂದಿದ್ದರು.

2020ರ ಜೂನ್‌ 14ರಂದು ಮುಂಬೈನ ಅಪಾರ್ಟ್‌ಮೆಂಟ್‌ನಲ್ಲಿ ನಟ ಸುಶಾಂತ್‌ ಮೃತಪಟ್ಟಿರುವುದು ಪತ್ತೆಯಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಗಳ ಮೇಲೆ ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ಸುಶಾಂತ್‌ ಅವರ ಕುಟುಂಬವು ರಿಯಾ ವಿರುದ್ಧ ಆರೋಪ ಮಾಡಿದೆ.

ಸುಶಾಂತ್‌ ಅವರ ತಂದೆ ಕೆ.ಕೆ.ಸಿಂಗ್‌ ಅವರು ಪಟನಾದ ಪೊಲೀಸ್‌ ಠಾಣೆಯಲ್ಲಿ ರಿಯಾ, ಅವರ ಪಾಲಕರು ಹಾಗೂ ಶೋವಿಕ್‌ ವಿರುದ್ಧ ದೂರು ದಾಖಲಿಸಿದ್ದರು. ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ 2020ರ ಆಗಸ್ಟ್‌ನಲ್ಲಿ ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಎನ್‌ಸಿಬಿ ಭಿನ್ನ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.

ಪ್ರಕರಣದ ಇತ್ಯರ್ಥಕ್ಕೆ ಹೆಚ್ಚು ಸಮಯ ಬೇಕಾಗಬಹುದು, ಆವರೆಗೂ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸುವುದು ಅನಾವಶ್ಯಕ ಕ್ರಮವಾಗಿದೆ ಎಂದು ರಿಯಾ ಪರ ವಕೀಲರು ಕೋರ್ಟ್‌ನಲ್ಲಿ ವಾದ ಮಂಡಿಸಿದರು. ಎನ್‌ಸಿಬಿ ಪರ ವಾದ ಮಾಡಿದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್‌ ಸರ್‌ಪಾಂಡೆ, ಪ್ರಕರಣದ ಸಂಬಂಧ ಹಣಕಾಸು ತನಿಖೆಯೂ ನಡೆಯುತ್ತಿದೆ. ಈ ಸಮಯದಲ್ಲಿ ಬ್ಯಾಂಕ್‌ ಖಾತೆಗಳ ಬಳಕೆ ಮುಕ್ತಗೊಳಿಸಿದರೆ, ಅದರಿಂದ ತನಿಖೆಯ ಮೇಲೆ ಪರಿಣಾಮ ಆಗಬಹುದು ಎಂದರು.

ಆದರೆ, ಎನ್‌ಸಿಬಿಯ ತನಿಖಾಧಿಕಾರಿಯು ಬ್ಯಾಂಕ್‌ ಖಾತೆಗಳ ಮೇಲಿನ ನಿರ್ಬಂಧ ತೆರವುಗೊಳಿಸುವ ಕುರಿತು ನಿರ್ಧಾರವನ್ನು ಕೋರ್ಟ್‌ ವಿವೇಚನೆಗೆ ಬಿಟ್ಟಿದ್ದರು. ಅದನ್ನು ಪ್ರಸ್ತಾಪಿಸಿರುವ ಕೋರ್ಟ್‌, 'ಅರ್ಜಿದಾರರ ಬ್ಯಾಂಕ್‌ ಖಾತೆ ಹಾಗೂ ಎಫ್‌ಡಿಗಳ ನಿರ್ಬಂಧ ತೆರವುಗೊಳಿಸಿರುವುದರ ಕುರಿತು ಬಲವಾದ ವಿರೋಧ ಇಲ್ಲದಿರುವುದು ಅಧಿಕಾರಿಯ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ' ಎಂದು ಕೋರ್ಟ್‌ ಹೇಳಿದೆ. ಬ್ಯಾಂಕ್‌ ಖಾತೆಗಳ ತೆರವಿಗೆ ಪ್ರತ್ಯೇಕ ಅಫಿಡವಿಟ್‌ ಮತ್ತು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ಪಡೆಯಲು ಒಂದು ಲಕ್ಷ ರೂಪಾಯಿ ಮೌಲ್ಯದ ಬಾಂಡ್‌ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ.

ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ರಿಯಾ ಅವರ ಫೋನ್‌ ಮತ್ತು ಲ್ಯಾಪ್‌ಟಾಪ್‌ ಪರಿಶೀಲನೆಗೆ ಒಳಪಡಿಸಲಾಗಿದೆ. ಅವುಗಳನ್ನು ಎನ್‌ಸಿಬಿಗೆ ಮರಳಿಸಲಾಗಿದ್ದು, ಆ ವಸ್ತುಗಳನ್ನು ಹಿಂಪಡೆಯುವಂತೆ ಪ್ರಕರಣದ ತನಿಖಾಧಿಕಾರಿಯು ರಿಯಾ ಅವರಿಗೆ ತಿಳಿಸಿದ್ದಾರೆ ಎಂದು ಎನ್‌ಸಿಬಿ ಪರ ವಕೀಲರು ಕೋರ್ಟ್‌ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT