ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ, ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

Last Updated 25 ಫೆಬ್ರುವರಿ 2021, 10:50 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗೆ ಓವರ್‌–ದಿ–ಟಾಪ್‌ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸರಣಿ ಚಿತ್ರಗಳಲ್ಲಿನ ದೃಶ್ಯಗಳ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವುಗಳಲ್ಲಿ ಪ್ರಸ್ತಾಪಿಸಲಾಗುತ್ತಿರುವ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿದ್ದು, ಒಟಿಟಿ ಕಂಟೆಂಟ್‌ ನಿಯಂತ್ರಣಕ್ಕೆ ನಿರ್ದಿಷ್ಟ ಕಾಯ್ದೆಗಳು ಇಲ್ಲ. ಇದೀಗ ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್ ಮತ್ತು ಪ್ರಕಾಶ್‌ ಜಾವಡೇಕರ್‌ ಒಟಿಟಿ, ಸಾಮಾಜಿಕ ಮಾಧ್ಯಮಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಬಗ್ಗೆ ಹಲವು ರೀತಿಯ ಕಳವಳ ವ್ಯಕ್ತವಾಗಿದೆ ಎಂದು ಸಚಿವ ರವಿಶಂಕರ್ ಪ್ರಸಾದ್‌ ಹೇಳಿದ್ದಾರೆ.

ಮಾರ್ಗಸೂಚಿ ಪ್ರಕಟಣೆಯ ಪ್ರಮುಖಾಂಶಗಳು:

* ಹೊಸ ನಿಯಮಗಳ ಅಡಿಯಲ್ಲಿ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಸೂಚಿಸಲಾದ ಆಕ್ಷೇಪಾರ್ಹ ವಿಷಯಗಳನ್ನು ಕೂಡಲೇ ತೆಗೆದು ಹಾಕಬೇಕು. ಕಾನೂನು ಬದ್ಧವಾದ ಅಥವಾ ಸರ್ಕಾರದ ಆದೇಶವಾದ 36 ಗಂಟೆಗಳೊಳಗೆ ಸೂಕ್ತ ಕ್ರಮ ಜಾರಿಯಾಗಬೇಕು. ಅದಕ್ಕಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುವಂತಿಲ್ಲ. ದೂರುಗಳನ್ನು ಶೀಘ್ರದಲ್ಲೇ ಪರಿಗಣಿಸಬೇಕಾಗುತ್ತದೆ.

* ಬಳಕೆದಾರರ ಘನತೆಗೆ ಸಂಬಂಧಿಸಿದ ದೂರುಗಳು ಬಂದರೆ, ಅದರಲ್ಲೂ ಮಹಿಳೆಯರಿಂದ ಬರುವ ದೂರಿನಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ, ಮಹಿಳೆಯ ಅಂಗಾಂಗಳನ್ನು ಪ್ರದರ್ಶಿಸಿರುವುದು ಅಥವಾ ಅಶ್ಲೀಲವಾಗಿ ಬಳಸುವುದು ಅಥವಾ ಕೆಟ್ಟದಾಗಿ ಚಿತ್ರಿಸಿರುವುದು ಸೇರಿದಂತೆ ಇತರೆ ಆಕ್ಷೇಪಗಳಿದ್ದರೆ, ಅಂಥ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು 24 ಗಂಟೆಯೊಳಗೆ ತೆಗೆದುಹಾಕಬೇಕು. ಮಹಿಳೆಯರ ಘನತೆಯನ್ನು ಗೌರವಿಸುವ ಸಲುವಾಗಿ ಈ ನಿಯಮವನ್ನು ರೂಪಿಸಲಾಗಿದೆ ಎಂದು ರವಿಶಂಕರ್ ಪ್ರಸಾದ್‌ ಹೇಳಿದರು.

* ಕೋರ್ಟ್‌ ಆದೇಶವಿದ್ದರೆ, ಸಾಮಾಜಿಕ ಮಾಧ್ಯಮಗಳು ಸಂದೇಶ ಅಥವಾ ಟ್ವೀಟ್‌ನ ಮೂಲವನ್ನು ಬಹಿರಂಗ ಪಡಿಸಬೇಕಾಗುತ್ತದೆ.

* ಕಾನೂನು, ನಿಯಮಗಳ ಪಾಲನೆ ಗಮನಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅಧಿಕಾರಿಯನ್ನು ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ಭಾರತದಲ್ಲಿ ಇರಬೇಕು. ಜಾರಿ ನಿರ್ದೇಶನ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್‌ ಸಂಪರ್ಕ ವ್ಯಕ್ತಿ ಇರಬೇಕು.

* ಸಾಮಾಜಿಕ ಮಾಧ್ಯಮಗಳು ಕುಂದು–ಕೊರತೆ/ ದೂರುಗಳನ್ನು ಗಮನಿಸುವ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು, ಅವರು 24 ಗಂಟೆಗಳಲ್ಲಿ ದೂರು ದಾಖಲಿಸಿಕೊಳ್ಳಬೇಕು. ಸಮಸ್ಯೆಗಳನ್ನು ಪರಿಹರಿಸಲು ಅವರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ.

* ಮೂರು ತಿಂಗಳ ಒಳಗಾಗಿ ಕಾನೂನುಗಳು ಅನುಷ್ಠಾನಗೊಳ್ಳಲಿವೆ.

* ಒಟಿಟಿ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಮಾತನಾಡಿದ ಸಚಿವ ಪ್ರಕಾಶ್‌ ಜಾವಡೇಕರ್‌, 'ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸುಪ್ರೀಂ ಕೋರ್ಟ್‌ ಅಥವಾ ಹೈ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಅಥವಾ ಇದೇ ವರ್ಗದ ಉನ್ನತ ವ್ಯಕ್ತಿಯ ನೇತೃತ್ವದಲ್ಲಿ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು' ಎಂದರು.

* ಪ್ರಸಾರವಾಗುವ ಕಂಟೆಂಟ್‌ಗಳನ್ನು ವಯಸ್ಸಿನ ಆಧಾರದ ಮೇಲೆ ಸ್ವಯಂ ವರ್ಗೀಕರಣಕ್ಕೆ ಒಳಪಡಿಸುವುದನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅನುಸರಿಸಬೇಕು.

* ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಮೂರು ಹಂತದ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ಒಟಿಟಿ ಹಾಗೂ ಡಿಜಿಟಲ್‌ ಸುದ್ದಿ ಮಾಧ್ಯಮಗಳು ಅವುಗಳ ವಿವರಗಳನ್ನು ಬಹಿರಂಗ ಪಡಿಸಬೇಕಾಗುತ್ತದೆ. ನೋಂದಣಿಯನ್ನು ನಾವು ಕಡ್ಡಾಯಗೊಳಿಸುತ್ತಿಲ್ಲ, ಮಾಹಿತಿಯನ್ನು ಕೇಳುತ್ತದ್ದೇವೆ ಎಂದು ಜಾವಡೇಕರ್‌ ಹೇಳಿದರು.

* ಒಟಿಟಿ ಹಾಗೂ ಡಿಜಿಟಲ್‌ ಪೋರ್ಟಲ್‌ಗಳು ಸಹ ದೂರುಗಳ ನಿರ್ವಹಣೆಗೆ ವ್ಯವಸ್ಥೆ ರೂಪಿಸಿಕೊಳ್ಳುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT