ಮುಕ್ತ ತನಿಖೆಗಾಗಿ ಪರಮ್ ಬೀರ್ ಸಿಂಗ್ ವರ್ಗಾವಣೆ: ಮಹಾರಾಷ್ಟ್ರ ಗೃಹ ಸಚಿವ

ಮುಂಬೈ: ಮುಕ್ತ ಹಾಗೂ ನ್ಯಾಯಯುತ ತನಿಖೆಗಾಗಿ ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾಯಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ದಳದಿಂದ ಬಂಧನವಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ತನಿಖೆಯು ಪಾರದರ್ಶಕವಾಗಿ ನಡೆಯಬೇಕೆನ್ನುವ ದೃಷ್ಟಿಯಿಂದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾಯಿಸಿರುವುದಾಗಿ ಅನಿಲ್ ದೇಶ್ಮುಕ್ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮುಂಬೈನಲ್ಲಿ ಗುರುವಾರ ಮಾತನಾಡಿರುವ ಅವರು, 'ಇದು ರೂಢಿಗತ ಆಡಳಿತಾತ್ಮಕ ವರ್ಗಾವಣೆ ಅಲ್ಲ. ಸಚಿನ್ ವಾಜೆ ಪ್ರಕರಣದಲ್ಲಿ ಮುಕ್ತ ಹಾಗೂ ನ್ಯಾಯಯುತ ತನಿಖೆ ನಡೆಯಬೇಕಿದೆ. ಆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಪರಮ್ ಬೀರ್ ಸಿಂಗ್ ಅವರನ್ನು ವರ್ಗಾಯಿಸಲಾಯಿತು' ಎಂದು ದೇಶ್ಮುಖ್ ಹೇಳಿದ್ದಾರೆ.
'ಈ ಪ್ರಕರಣದ ತನಿಖೆಯನ್ನು ಎನ್ಐಎ ಮತ್ತು ಎಟಿಎಸ್ ಸಂಸ್ಥೆಗಳು ನಡೆಸುತ್ತಿವೆ. ಈ ಎರಡೂ ಸಂಸ್ಥೆಗಳು ವೃತ್ತಿಪರ ತನಿಖೆಯನ್ನು ಕೈಗೊಳ್ಳಲಿವೆ. ಸಚಿನ್ ವಾಜೆಯಂತಹ ಕಿರಿಯ ಅಧಿಕಾರಿಯೊಬ್ಬರು ತಪ್ಪು ಮಾಡಿದ್ದಾರೆ. ಅಂತಹ ತಪ್ಪುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
'ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣ ನಡೆದಾಗ ಸಿಂಗ್ ಅವರು ಮುಂಬೈ ಪೊಲೀಸ್ ಆಯುಕ್ತರಾಗಿದ್ದರು. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ' ಎಂದು ದೇಶ್ಮುಖ್ ಸ್ಪಷ್ಟಪಡಿಸಿದ್ದಾರೆ.
ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆ (49) ಅವರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಶನಿವಾರ ಬಂಧಿಸಿದ್ದರು.
ವಾಜೆ ಅವರು ಮುಂಬೈ ನಗರ ಪೊಲೀಸ್ ಕ್ರೈಮ್ ಬ್ರ್ಯಾಂಚ್ನ ಕ್ರೈಮ್ ಇಂಟೆಲಿಜೆನ್ಸ್ ಯೂನಿಟ್(ಸಿಐಉ) ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇವನ್ನೂ ಓದಿ...
ಸಚಿನ್ ವಾಜೆ ಬಂಧನ ಪ್ರಕರಣ: ಉದ್ಧವ್ ಠಾಕ್ರೆ ಭೇಟಿಯಾದ ಮುಂಬೈ ಪೊಲೀಸ್ ಆಯುಕ್ತ
ಸಚಿನ್ ವಾಜೆ ಬಂಧನ ಆಗಿದ್ದೇಕೆ! ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಅಂಬಾನಿ ಮನೆ ಬಳಿ ಸ್ಫೋಟಕ: ಎನ್ಐಎನಿಂದ ಸಚಿನ್ ವಾಜೆ ಕಾರಿನ ಹಳೆಯ ಮಾಲೀಕನ ತನಿಖೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.