ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ ಖಂಡಿಸಿ ನಾಳೆ ಬಿಜೆಪಿಯಿಂದ ದೇಶದಾದ್ಯಂತ ಧರಣಿ

Last Updated 4 ಮೇ 2021, 3:25 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಹಲವೆಡೆ ಚುನಾವಣಾ ಫಲಿತಾಂಶದ ದಿನ ನಡೆದಿರುವ ಹಿಂಸಾಚಾರವನ್ನು ಖಂಡಿಸಿ ಬಿಜೆಪಿಯು ದೇಶದಾದ್ಯಂತ ಮೇ 5ರಂದು ಧರಣಿ ನಡೆಸಲಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು (ಮಂಗಳವಾರ) ಬಂಗಾಳಕ್ಕೆ ಭೇಟಿ ನೀಡಲಿದ್ದು ಎರಡು ದಿನ ಅಲ್ಲಿದ್ದು ಪರಿಸ್ಥಿತಿ ಅವಲೋಕಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

‘ಟಿಎಂಸಿ ಕಾರ್ಯಕರ್ತರು ನಡೆಸಿರುವ ಹಿಂಸಾಚಾರ ಖಂಡಿಸಿ ಧರಣಿ ನಡೆಸಲಿದ್ದೇವೆ. ಪ್ರತಿಭಟನೆಯು ಕೋವಿಡ್–19 ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ನಡೆಯಲಿದೆ’ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

‘ಫಲಿತಾಂಶದ ಬಳಿಕ ನಡೆದ ಟಿಎಂಸಿ ಪ್ರಚೋದಿತ ಹಿಂಸಾಚಾರದಲ್ಲಿ ಬಿಜೆಪಿಯ ಕೆಲವು ಕಾರ್ಯಕರ್ತರ ಹತ್ಯೆಯಾಗಿದೆ. ಅನೇಕ ಕಾರ್ಯಕರ್ತರ ಮನೆಗಳು, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ನಡ್ಡಾ ಅವರು ಎರಡು ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ. ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ, ದಾಳಿಯ ಪರಿಸ್ಥಿತಿ ಅವಲೋಕಿಸಲಿದ್ದಾರೆ’ ಎಂದು ಬಿಜೆಪಿಯ ರಾಜ್ಯ ಘಟಕದ ಸಂವಹನ ವಿಭಾಗದ ಮುಖ್ಯಸ್ಥ ಅನಿಲ್ ಬಾಲುನಿ ತಿಳಿಸಿದ್ದಾರೆ.

ಹಿಂಸಾಚಾರಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಂದಿಗ್ರಾಮದ ಸೋಲೂ ಕಾರಣ ಎಂದು ಬಿಜೆಪಿ ಹೇಳಿದೆ.

‘ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂಕ ಪ್ರೇಕ್ಷಕರಾಗಿ ಉಳಿದಿದ್ದಾರೆ. ಅವರು ಹಿಂಸಾಚಾರವನ್ನು ಖಂಡಿಸಿಲ್ಲ ಹಾಗೂ ಹಿಂಸಾಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿಯೂ ಇಲ್ಲ’ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಘಟನೆಗೆ ಸಂಬಂಧಿಸಿ ರಾಜ್ಯಪಾಲ ಜಗದೀಪ್‌ ಧನಖಡ್‌ ಅವರು ಮಮತಾ ಬ್ಯಾನರ್ಜಿ ಜತೆಗೂ ಮಾತುಕತೆ ನಡೆಸಿದ್ದಾರೆ. ಬಳಿಕ ಟ್ವೀಟ್ ಮಾಡಿದ್ದ ಅವರು, ‘ಮತದಾನೋತ್ತರ ಹಿಂಸಾಚಾರ, ಬೆಂಕಿಹಚ್ಚುವಿಕೆ, ಲೂಟಿ ಮತ್ತು ಹತ್ಯೆಗಳು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ಹಿಂಸಾಚಾರದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ, ಮನೆಗಳನ್ನು ಸುಟ್ಟುಹಾಕಿರುವುದು ದುರದೃಷ್ಟಕರ’ ಎಂದು ಉಲ್ಲೇಖಿಸಿದ್ದರು.

ರಾಜ್ಯಪಾಲರು ಡಿಜಿಪಿ ಅವರನ್ನು ಸೋಮವಾರ ಬಳಿಗೆ ಕರೆಸಿಕೊಂಡು ತುರ್ತು ಕ್ರಮಗಳ ಬಗ್ಗೆಯೂ ಚರ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT