ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಕಾಂಗ್ರೆಸ್: ಮುನಿದಿರುವ ಸಿಧು; ಮಾತುಕತೆಗೆ ಆಹ್ವಾನಿಸಿದ ಸಿಎಂ ಚರಣ್‌ಜಿತ್

Last Updated 29 ಸೆಪ್ಟೆಂಬರ್ 2021, 10:35 IST
ಅಕ್ಷರ ಗಾತ್ರ

ಚಂಡೀಗಡ: 'ನವಜೋತ್‌ ಸಿಂಗ್‌ ಸಿಧು ಜೊತೆಗೆ ಮಾತನಾಡಿದ್ದು, ಚರ್ಚೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಂತೆ ಆಹ್ವಾನಿಸಿದ್ದೇನೆ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಬುಧವಾರ ಹೇಳಿದ್ದಾರೆ. ಸಿಧು ಮಂಗಳವಾರ ಪಂಜಾಬ್‌ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕಾಂಗ್ರೆಸ್‌ ವರಿಷ್ಠರು ಸಿಧು ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. 'ನಾನು ಅವರೊಂದಿಗೆ (ಸಿಧು) ಫೋನ್‌ ಮೂಲಕ ಮಾತನಾಡಿದ್ದೇನೆ ಹಾಗೂ ಕುಳಿತು ಮಾತುಕತೆ ನಡೆಸೋಣ ಎಂದಿರುವೆ' ಎಂಬುದಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದ್ದಾರೆ.

ಇಂದು ಸಿಧು ವಿಡಿಯೊ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ನೂತನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಂಪುಟದಲ್ಲಿ ಕೆಲವು ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಐಪಿಎಸ್‌ ಅಧಿಕಾರಿ ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋತಾ ಅವರಿಗೆ ಹೆಚ್ಚುವರಿಯಾಗಿ ಪಂಜಾಬ್‌ನ ಪೊಲೀಸ್‌ ಮಹಾನಿರ್ದೇಶಕ ಹೊಣೆ ನೀಡಿರುವುದು ಹಾಗೂ ಎಪಿಎಸ್‌ ಡಿಯೋಲ್‌ ಅವರನ್ನು ರಾಜ್ಯದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ನೇಮಕ ಮಾಡಿರುವ ಬಗ್ಗೆ ಸಿಧು ಕೆರಳಿದ್ದಾರೆ.

ಸಿಧು ನಡೆಯು ಸರ್ಕಾರವನ್ನು ಬೆದರಿಸುವುದಕ್ಕಾಗಿ ಎಂಬ ವಾದವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌, 'ಪಕ್ಷವೇ ಅಂತಿಮವಾದುದು. ಸರ್ಕಾರವು ಪಕ್ಷದ ಅಗತ್ಯಗಳನ್ನು ಪರಿಗಣಿಸುತ್ತದೆ. ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಅವರನ್ನು ಆಹ್ವಾನಿಸಿರುವೆ. ಯಾವುದೇ ತಪ್ಪಾಗಿದೆ ಎಂದು ನಿಮಗೆ (ಸಿಧು) ಅನಿಸಿದರೆ, ಅದನ್ನು ಗೊತ್ತು ಮಾಡಬಹುದು, ಈ ಹಿಂದೆಯೂ ಮಾಡಿರುವಂತೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ವರ್ಷ ಪಂಜಾಬ್‌ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ನಲ್ಲಿ ಎದುರಾಗಿರುವ ಬಿಕ್ಕಟ್ಟು ನಾಯಕತ್ವದ ಕೊರತೆಯನ್ನೂ ಎತ್ತಿ ತೋರಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ, 'ಪಂಜಾಬ್‌ನ ಸಂಸದನಾಗಿ, ಪಂಜಾಬ್‌ನಲ್ಲಿ ನಡೆಯುತ್ತಿರುವ ಘಟನೆಗಳು ಸಂಕಟ ತಂದಿವೆ. ರಾಜ್ಯದಲ್ಲಿ ಅತ್ಯಂತ ಶ್ರಮದಿಂದ ಶಾಂತಿ ನೆಲೆಸುವಂತೆ ಮಾಡಲಾಗಿದೆ. 25,000 ಜನರು, ಹೆಚ್ಚಿನ ಕಾಂಗ್ರೆಸ್ಸಿಗರು ಪಂಜಾಬ್‌ನಲ್ಲಿ ಶಾಂತಿಗೋಸ್ಕರ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ತೀವ್ರವಾದಿತ್ವ ಮತ್ತು ಉಗ್ರವಾದಿತ್ವದ ವಿರುದ್ಧ 1980ರಿಂದ 1995ರಿಂದ ಹೋರಾಟ ನಡೆಸಲಾಗಿದೆ' ಎಂದಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT