ಭಾನುವಾರ, ಅಕ್ಟೋಬರ್ 24, 2021
23 °C

ಪಂಜಾಬ್‌: ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದ ಅಂಬಿಕಾ ಸೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಅಂಬಿಕಾ ಸೋನಿ

ನವದೆಹಲಿ: ಅನುಭವಿ ರಾಜಕಾರಣಿ ಅಂಬಿಕಾ ಸೋನಿ (78) ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಇರುವುದಾಗಿ ವರದಿಯಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ಮುಖ್ಯಮಂತ್ರಿ ಹೊಣೆಹೊರಲು ಅಂಬಿಕಾ ಸೋನಿ ನಿರಾಕರಿಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಈಗ ಸೋನಿಯಾ ಗಾಂಧಿ ಅವರ ಅಂಗಳದಲ್ಲಿದೆ. ತಡರಾತ್ರಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿರುವ ಅಂಬಿಕಾ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಲು ನಿರಾಕರಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಪಂಜಾಬ್ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಲಾಗಿದೆ. ಅಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯ ಸಂಬಂಧ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

1969ರಲ್ಲಿ ಅಂಬಿಕಾ ಸೋನಿ ಅವರನ್ನು ಇಂದಿರಾ ಗಾಂಧಿ ಕಾಂಗ್ರೆಸ್‌ ಪಕ್ಷಕ್ಕೆ ಕರೆತಂದಿದ್ದರು. ಅಂಬಿಕಾ ತಂದೆ ದೇಶ ವಿಭಜನೆಯ ಸಮಯದಲ್ಲಿ ಅಮೃತಸರದ ಜಿಲ್ಲಾಧಿಕಾರಿಯಾಗಿದ್ದವರು ಹಾಗೂ ನೆಹರೂ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು.

ಇದನ್ನೂ ಓದಿ– 'ನಾನು ಅಪಮಾನಿತನಾಗಿದ್ದೇನೆ': ರಾಜೀನಾಮೆ ಬಳಿಕ ಅಮರೀಂದರ್ ಸಿಂಗ್ ಪ್ರತಿಕ್ರಿಯೆ

ಪಂಜಾಬ್‌ನ ಹೋಶಿಯಾರ್‌ಪುರ್‌ ಜಿಲ್ಲೆಯವರಾದ ಅಂಬಿಕಾ ಸೋನಿ, ಹಲವು ಬಾರಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅವರು ಸಂಜಯ್‌ ಗಾಂಧಿ ಅವರೊಂದಿಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಆನಂದ್‌ಪುರ್‌ ಸಾಹಿಬ್‌ನಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.

ಶನಿವಾರ ಸಂಜೆ ಅಮರಿಂದರ್ ಸಿಂಗ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದರು. ಪಂಜಾಬ್‌ ವಿಧಾನಸಭೆಗೆ ನಾಲ್ಕೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

'ಅಧಿಕಾರದ ಸಂಬಂಧ ಪಕ್ಷವು ಮೂರು ಬಾರಿ ಶಾಸಕಾಂಗ ಸಭೆ ಕರೆದಿದೆ. ನನ್ನ ಮೇಲಿನ ಅಪನಂಬಿಕೆಯಿಂದಲೇ ಹೀಗೆ ಮಾಡಲಾಗಿದೆ. ನನಗೆ ಅವಮಾನವಾಗಿದೆ. ಹೀಗಾಗಿ ರಾಜೀನಾಮೆ ನೀಡಿದೆ' ಎಂದು ಅಮರಿಂದರ್ ಸಿಂಗ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು