ತೆಲಂಗಾಣ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗಾಗಿ ಲಸಿಕೆ ಅಭಿಯಾನ

ಹೈದರಾಬಾದ್: ವಿದ್ಯಾಭ್ಯಾಸದ ಸಲುವಾಗಿ ವಿದೇಶಗಳಿಗೆ ತೆರಳಲಿರುವ ವಿದ್ಯಾರ್ಥಿಗಳಿಗಾಗಿ ತೆಲಂಗಾಣ ಸರ್ಕಾರವು ವಿಶೇಷ ಲಸಿಕಾ ಅಭಿಯಾನವನ್ನು ಶನಿವಾರ ಆರಂಭಿಸಿದೆ.
ಮುಂದಿನ ಎರಡು ತಿಂಗಳುಗಳಲ್ಲಿ ವಿದೇಶಗಳಿಗೆ ಹೊರಡಲಿರುವ ವಿದ್ಯಾರ್ಥಿಗಳಿಗೆ ಈ ವಿಶೇಷ ಅಭಿಯಾನವನ್ನು ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳು ಲಸಿಕೆ ಪಡೆದುಕೊಳ್ಳಲು ಬರುವಾಗ, ತಮ್ಮ ಪಾಸ್‌ಪೋರ್ಟ್, ವಿದ್ಯಾರ್ಥಿ ವೀಸಾ ಮತ್ತು ಆಯಾ ವಿಶ್ವವಿದ್ಯಾಲಯ ನೀಡಿದ ಅಧಿಕೃತ ದಾಖಲಾತಿ ಪತ್ರಗಳನ್ನು ತರಬೇಕು ಎಂದು ತಿಳಿಸಲಾಗಿದೆ.
ʼವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗಾಗಿ ತೆಲಂಗಾಣ ಸರ್ಕಾರ ಈ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದೆ. ಎರಡು ದಿನಗಳ ಹಿಂದೆ ತೆರೆಯಲಾಗಿರುವ ವಿಶೇಷ ವೆಬ್‌ಸೈಟ್ ಮೂಲಕ ಅರ್ಹ ವಿದ್ಯಾರ್ಥಿಗಳು ಸ್ವತಃ ನೋಂದಣಿ ಮಾಡಿಕೊಳ್ಳಬಹುದುʼ ಎಂದು ಸಂಸ್ಥೆಯ ನಿರ್ದೇಶಕ ಡಾ. ಶಂಕರ್ ತಿಳಿಸಿದ್ದಾರೆ. ಈವರೆಗೆ ಒಟ್ಟು 7,000 ವಿದ್ಯಾರ್ಥಿಗಳು ಲಸಿಕೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಕೆಲವು ರಾಷ್ಟ್ರಗಳಲ್ಲಿ ಕೋವಾಕ್ಸಿನ್ಗೆ ಅನುಮತಿ ಇಲ್ಲದ ಕಾರಣ, ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಫಲಾನುಭವಿ ವಿದ್ಯಾರ್ಥಿಗಳು ತಮ್ಮ ಎರಡನೇ ಡೋಸ್ ಅನ್ನು 10 ವಾರಗಳ ಬದಲು 4 ವಾರಗಳ ನಂತರವೇ ಹಾಕಿಸಿಕೊಳ್ಳಬಹುದು. ಎರಡನೇ ಡೋಸ್ ಪಡೆದ ಬಳಿಕ ಅವರಿಗೆ ಲಸಿಕೆ ಪ್ರಮಾಣಪತ್ರ ನೀಡಲಾಗುವುದುʼ ಎಂದಿದ್ದಾರೆ.
ತೆಲಂಗಾಣ ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ ರಾಜ್ಯದಲ್ಲಿ ಇದುವರೆಗೆ 64,17,283 ಡೋಸ್ ಲಸಿಕೆ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.